Stubble Burning: ಏನಿದು ಸ್ಟಬಲ್ ಬರ್ನಿಂಗ್; ಇದಕ್ಕೂ ದೆಹಲಿ ವಾಯುಮಾಲಿನ್ಯಕ್ಕೂ ಏನು ನಂಟು? ಇಲ್ಲಿದೆ ವಿವರ
ಸ್ಟಬಲ್ ಬರ್ನಿಂಗ್ ಅಂದರೆ ಕೃಷಿ ತ್ಯಾಜ್ಯ ಸುಡುವಿಕೆ. ಈ ಪ್ರಕ್ರಿಯೆ ಹೇಗಿರುತ್ತದೆ? ದೆಹಲಿಯ ವಾಯುಗುಣಮಟ್ಟದ ಮೇಲೆ ಅದು ಹೇಗೆ ಪರಿಣಾಮ ಬೀರುತ್ತದೆ? ಪರಿಸರದ ಮೇಲೆ ಅದರಿಂದಾಗುವ ಇತರ ಹಾನಿಗಳೇನು? ಇಲ್ಲಿದೆ ಮಾಹಿತಿ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ (Air Pollution) ಹೆಚ್ಚಳವಾಗಿರುವುದು ಮತ್ತೆ ಸುದ್ದಿಯಲ್ಲಿದೆ. ವಾಯುಮಾಲಿನ್ಯ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ದೆಹಲಿಯ ಪ್ರಾಥಮಿಕ ಶಾಲೆಗಳಿಗೆ ಇಂದಿನಿಂದ (ನವೆಂಬರ್ 5) ರಜೆ ಘೋಷಿಸಲಾಗಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಚಳಿಗಾಲ (Winter Season) ಆರಂಭವಾಗುತ್ತಿದ್ದಂತೆಯೇ ದೆಹಲಿ ವಾಯು ಮಾಲಿನ್ಯದ ಬಗ್ಗೆ ಚರ್ಚೆ ಆರಂಭವಾಗುತ್ತದೆ. ಇದಕ್ಕೆ ಬದಲಾಗುವ ವಾತಾವರಣ ಒಂದು ಕಾರಣವಾದರೆ, ಅದಕ್ಕಿಂತಲೂ ಮುಖ್ಯವಾಗಿ ಹರಿಯಾಣ, ಪಂಜಾಬ್, ಪಶ್ಚಿಮ ಉತ್ತರ ಪ್ರದೇಶಗಳಲ್ಲಿ ಮಾಡುವ ಸ್ಟಬಲ್ ಬರ್ನಿಂಗ್. ಅಂದರೆ. ಕೃಷಿ ತ್ಯಾಜ್ಯ ಸುಡುವಿಕೆ. ಸ್ಟಬಲ್ ಬರ್ನಿಂಗ್ ಪ್ರಕ್ರಿಯೆ ಹೇಗಿರುತ್ತದೆ? ದೆಹಲಿಯ ವಾಯುಗುಣಮಟ್ಟದ ಮೇಲೆ ಅದು ಹೇಗೆ ಪರಿಣಾಮ ಬೀರುತ್ತದೆ? ಪರಿಸರದ ಮೇಲೆ ಅದರಿಂದಾಗುವ ಇತರ ಹಾನಿಗಳೇನು? ಇಲ್ಲಿದೆ ಮಾಹಿತಿ.
Stubble Burning ಅಥವಾ ಕೃಷಿ ತ್ಯಾಜ್ಯ ಸುಡುವಿಕೆ
ಪಂಜಾಬ್, ಹರಿಯಾಣ, ಪಶ್ಚಿಮ ಉತ್ತರ ಪ್ರದೇಶಗಳ ರೈತರು ಮುಂಗಾರು ಅವಧಿಯಲ್ಲಿ ಬೆಳೆದ ಭತ್ತದ ಕೊಯ್ಲಿನ ನಂತರ, ಸಾಮಾನ್ಯವಾಗಿ ಸೆಪ್ಟೆಂಬರ್ ಕೊನೆಯಲ್ಲಿ ಹಾಗೂ ನವೆಂಬರ್ ಮೊದಲ ವಾರಗಳಲ್ಲಿ ಗೋಧಿ ಬೆಳೆ ಬೆಳೆಯಲು ಹೊಲವನ್ನು ಅನುವು ಮಾಡಲು ಆರಂಭಿಸುತ್ತಾರೆ. ಈ ವೇಳೆ ಭತ್ತದ ಕೃಷಿಯ ತ್ಯಾಜ್ಯ, ಕಳೆ ಅಥವಾ ಬೈಹುಲ್ಲನ್ನು ಹೊಲಗಳಲ್ಲಿ ಬೆಂಕಿ ಹಾಕಿ ಸುಡುತ್ತಾರೆ. ಈ ಕೃಷಿ ತ್ಯಾಜ್ಯ ಸುಡುವಿಕೆ ಅಥವಾ ಬೈಹುಲ್ಲಿನ ಸುಡುವಿಕೆ ಪ್ರಕ್ರಿಯೆಯನ್ನೇ ಸ್ಟಬಲ್ ಬರ್ನಿಂಗ್ ಎಂದು ಕರೆಯಲಾಗುತ್ತದೆ.
ದೆಹಲಿಯಲ್ಲಿ ವಾಯುಮಾಲಿನ್ಯಕ್ಕೆ ಮುಖ್ಯ ಕಾರಣ
ಪಂಜಾಬ್, ಹರಿಯಾಣ, ಪಶ್ಚಿಮ ಉತ್ತರ ಪ್ರದೇಶಗಳ ಹೊಲಗಳಲ್ಲಿ ಕೃಷಿ ತ್ಯಾಜ್ಯ ಸುಡುವಿಕೆಯಿಂದ ಸೃಷ್ಟಿಯಾಗುವ ಭಾರಿ ಹೊಗೆ ಗಾಳಿಯ ಚಲನೆಗೆ ಅನುಗುಣವಾಗಿ ದೆಹಲಿಯತ್ತ ಸಾಗುತ್ತದೆ. ಪರಿಣಾಮವಾಗಿ ದೆಹಲಿಯಲ್ಲಿ ವಾಯುಮಾಲಿನ್ಯ ಪರಿಸ್ಥಿತಿ ಬಿಗಡಾಯಿಸುತ್ತದೆ. ದೆಹಲಿ ಮಾತ್ರವಲ್ಲದೆ, ಒಟ್ಟಾರೆ ಉತ್ತರ ಭಾರತದ ವಾಯುಮಾಲಿನ್ಯಕ್ಕೂ ಈ ಕೃಷಿ ತ್ಯಾಜ್ಯ ಸುಡುವಿಕೆ ಕಾರಣವಾಗುತ್ತದೆ ಎನ್ನುತ್ತಾರೆ ತಜ್ಞರು.
ನಿಷೇಧದ ಹೊರತಾಗಿಯೂ ಕೃಷಿ ತ್ಯಾಜ್ಯ ಸುಡುವಿಕೆ
ಕೃಷಿ ತ್ಯಾಜ್ಯಗಳನ್ನು ಹೊಲಗಳಲ್ಲಿ ಬೆಂಕಿ ಹಚ್ಚಿ ಸುಡುವುದಕ್ಕೆ ಸರ್ಕಾರ ನಿಷೇಧ ಹೇರಿದೆ. ವಾಯುಮಾಲಿನ್ಯ ತಡೆಗಟ್ಟುವ ಸಲುವಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಆದಾಗ್ಯೂ, ಕೃಷಿ ತ್ಯಾಜ್ಯ ನಿರ್ವಹಣೆಗೆ ಸಮರ್ಪಕವಾದ ಕ್ರಮ ಕೈಗೊಳ್ಳದೇ ಇರುವುದರಿಂದ ರೈತರು ಕೃಷಿ ತ್ಯಾಜ್ಯಗಳನ್ನು ಸುಡುವ ಪ್ರಕ್ರಿಯೆ ಮುಂದುವರಿಯುತ್ತಿದೆ. ವಾಯುಮಾಲಿನ್ಯ ಹೆಚ್ಚಳಕ್ಕೆ ಕಾರಣವಾಗುತ್ತಿದೆ.
ಇದನ್ನೂ ಓದಿ: Delhi Air Pollution: ಮಿತಿ ಮೀರಿದ ವಾಯು ಮಾಲಿನ್ಯ; ನಾಳೆಯಿಂದ ದೆಹಲಿಯ ಶಾಲೆಗಳಿಗೆ ರಜೆ ಘೋಷಣೆ
‘ವಾಯು ಕಾಯ್ದೆ 1981’, ‘1973ರ ಅಪರಾಧ ದಂಡ ಸಂಹಿತೆ’ ಹಾಗೂ ವಿವಿಧ ಕಾನೂನುಗಳ ಅಡಿಯಲ್ಲಿ ಕೃಷಿ ತ್ಯಾಜ್ಯ ಸುಡುವಿಕೆಗೆ ನಿಷೇಧ ಹೇರಲಾಗಿದೆ. ಇದನ್ನು ಉಲ್ಲಂಘಿಸುವ ರೈತರಿಗೆ ದಂಡ ವಿಧಿಸಲಾಗುತ್ತದೆ. ಕಾನೂನು ಪಾಲನೆ ನಿಗಾ ಇಡಲು ಗ್ರಾಮ ಮತ್ತು ಬ್ಲಾಕ್ ಮಟ್ಟದ ಆಡಳಿತ ಅಧಿಕಾರಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇಷ್ಟೆಲ್ಲ ಆದರೂ ತ್ಯಾಜ್ಯ ಸುಡುವಿಕೆ ಎಗ್ಗಿಲ್ಲದೆ ನಡೆಯುತ್ತಿವೆ ಎನ್ನುತ್ತವೆ ಮೂಲಗಳು.
ಇತರ ಪರಿಣಾಮಗಳು
- ಕೃಷಿ ತ್ಯಾಜ್ಯ ಸುಡುವಿಕೆಯಿಂದ ಕಾರ್ಬನ್ ಮೋನೊಕ್ಸೈಡ್, ಮಿಥೇನ್ನಂಥ ವಿಷಕಾರಿ ಅನಿಲ ವಾತಾವರಣವನ್ನು ಸೇರಿಕೊಳ್ಳುತ್ತದೆ. ಇದು ಸುತ್ತಲಿನ ವಾತಾವರಣವನ್ನೂ ಕಲುಷಿತಗೊಳಿಸುವುದಲ್ಲದೆ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
- ನೆಲೆದ ಮೇಲೆ ಕೃಷಿ ತ್ಯಾಜ್ಯ, ಭತ್ತದ ಹೊಟ್ಟುಗಳ ಸುಡುವಿಕೆಯಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತದೆ. ಪೋಷಕಾಂಶಗಳು ನಾಶ ಹೊಂದುತ್ತವೆ ಎನ್ನಲಾಗಿದೆ.
- ತ್ಯಾಜ್ಯ ಸುಡುವಿಕೆ ವೇಳೆ ಉಂಟಾಗುವ ಬಿಸಿಯು ಭವಿಷ್ಯದಲ್ಲಿ ಮಣ್ಣಿನ ಕೊರೆತಕ್ಕೆ ಕಾರಣವಾಗಬಹುದು. ಮಣ್ಣಿನಲ್ಲಿರುವ ಉಪಯುಕ್ತ ಸೂಕ್ಷ್ಮಜೀವಿಗಳು ಮತ್ತು ತೇವಾಂಶ ನಷ್ಟ ಹೊಂದಲು ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ರಾಜಕೀಯ ಜಿದ್ದಾಜಿದ್ದಿಗೂ ಕಾರಣವಾಗುತ್ತಿರುವ ತ್ಯಾಜ್ಯ ಸುಡುವಿಕೆ
ಪಂಜಾಬ್ ಮತ್ತು ಹರಿಯಾಣಗಳಲ್ಲಿ ಕೃಷಿ ತ್ಯಾಜ್ಯ ಸುಡುವ ವಿಚಾರ ಅನೇಕ ಬಾರಿ ರಾಜಕೀಯ ಜಿದ್ದಾಜಿದ್ದಿಗೂ ಕಾರಣವಾಗಿದೆ. ಪಂಜಾಬ್ ಮತ್ತು ಹರಿಯಾಣದಲ್ಲಿ ಕೃಷಿ ತ್ಯಾಜ್ಯವನ್ನು ಸುಡುವುದೇ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗಲು ಕಾರಣ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ 2019ರಲ್ಲಿ ಪಂಜಾಬ್ನ ಅಂದಿನ ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದೀಗ ಪಂಜಾಬ್ನಲ್ಲಿ ಎಎಪಿ ಸರ್ಕಾರವೇ ಅಸ್ತಿತ್ವದಲ್ಲಿದೆ.
ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಭೂಪೇಂದರ್ ಯಾದವ್ ಪಂಜಾಬ್ನಲ್ಲಿ ರೈತರು ಬೆಳೆ ತ್ಯಾಜ್ಯ ಸುಡುವ ಬಗ್ಗೆ ಆಮ್ ಆದ್ಮಿ ಪಕ್ಷದ ವಿರುದ್ಧ ಇತ್ತೀಚೆಗೆ ವಾಗ್ದಾಳಿ ನಡೆಸಿದ್ದಾರೆ.
(ಮಾಹಿತಿ; ವಿವಿಧ ಮೂಲಗಳಿಂದ)
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:38 pm, Sat, 5 November 22