ವಾಂಗ್ಚುಕ್
ನವದೆಹಲಿ, ಜುಲೈ 18: ಕಳೆದ 20 ದಿನಗಳಿಂದ ದೆಹಲಿಯ ಜಂತರ್ ಮಂತರ್ನಲ್ಲಿ ನಿರಂತರ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ (59)(
Sonam Wangchuk) ಅವರನ್ನು ದೆಹಲಿ ಪೊಲೀಸರು ಶನಿವಾರ ಬಲವಂತವಾಗಿ ಸಫ್ದರ್ಜಂಗ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ, ವಾಂಗ್‌ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಅವರು ಆಸ್ಪತ್ರೆ ಆಡಳಿತ ಮಂಡಳಿಗೆ ಸಾರ್ವಜನಿಕವಾಗಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡುವ ಮೂಲಕ ಈ ಹೋರಾಟಕ್ಕೆ ಹೊಸ ತಿರುವು ನೀಡಿದ್ದಾರೆ.
ನನ್ನ ಪತಿ ಚೆನ್ನಾಗಿದ್ದರು, ಅವರನ್ನು ಕರೆತರುವ ಅಗತ್ಯವಿರಲಿಲ್ಲ
ತಮ್ಮ ಪತಿಯ ಆರೋಗ್ಯದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಗೀತಾಂಜಲಿ, “ನಾನು ಈಗ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲೇ ಇದ್ದೇನೆ. ಕಳೆದ 20 ದಿನಗಳಿಂದ ನನ್ನ ಪತಿಯ ಆರೋಗ್ಯವನ್ನು ನೋಡಿಕೊಳ್ಳುತ್ತಿರುವ ನಮ್ಮ ವೈದ್ಯರು ಮತ್ತು ಕುಟುಂಬದ ಲಿಖಿತ ಒಪ್ಪಿಗೆಯಿಲ್ಲದೆ ಆಸ್ಪತ್ರೆಯವರು ಅವರಿಗೆ ಮಾತ್ರೆ ಅಥವಾ ಡ್ರಿಪ್ಸ್ ಹಾಕಬಾರದು.
ನನ್ನ ಗಮನಕ್ಕೆ ತರದೆ ಯಾವುದೇ ಔಷಧಿ ಕೊಡುವಂತಿಲ್ಲ, ಸಂವಿಧಾನದ ಆರ್ಟಿಕಲ್ 32 ರ ಅಡಿಯಲ್ಲಿ ನನ್ನ ಪತಿಯ ಆರೋಗ್ಯದ ಹಕ್ಕನ್ನು ರಕ್ಷಿಸಲು ನನಗೆ ಅಧಿಕಾರವಿದೆ ಎಂದು ಬರೆದುಕೊಂಡಿದ್ದಾರೆ.
ನಿನ್ನೆ ರಾತ್ರಿಯವರೆಗೂ ನನ್ನ ಪತಿ ಆರೋಗ್ಯವಾಗಿಯೇ ಇದ್ದರು. ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಕರೆತರುವ ಯಾವುದೇ ತುರ್ತು ಅಗತ್ಯವಿರಲಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶೇ. 20 ರಷ್ಟು ತೂಕ ಇಳಿಕೆ: ಹೋರಾಟಗಾರನ ಗಟ್ಟಿ ಮನಸ್ಸು
ಜೂನ್ 28 ರಿಂದ ಲಡಾಖ್‌ಗೆ ವಿಶೇಷ ಸಾಂವಿಧಾನಿಕ ಸ್ಥಾನಮಾನ (6ನೇ ವೇಳಾಪಟ್ಟಿ) ಕೋರಿ ಸೋನಮ್ ವಾಂಗ್ಚುಕ್ ಅವರು ಅನ್ನಾಹಾರ ತ್ಯಜಿಸಿ ಕಠಿಣ ಉಪವಾಸ ನಡೆಸುತ್ತಿದ್ದಾರೆ. ಆಸ್ಪತ್ರೆಗೆ ಸೇರುವ ಮುನ್ನಾ ದಿನ ಮಾತನಾಡಿದ್ದ ವಾಂಗ್ಚುಕ್, “ನಿರಂತರ ಉಪವಾಸದಿಂದಾಗಿ ನನ್ನ ದೇಹದ ತೂಕ ಶೇಕಡಾ 20 ರಷ್ಟು ಕಡಿಮೆಯಾಗಿದೆ. ನನ್ನ ದೇಹ ಕೃಶವಾಗುತ್ತಿದ್ದರೂ, ಲಡಾಖ್‌ನ ಮಣ್ಣು ಮತ್ತು ಪರಿಸರ ರಕ್ಷಣೆಗಾಗಿ ನನ್ನ ಜೀವ ಹೋದರೂ ಉಪವಾಸ ಸತ್ಯಾಗ್ರಹವನ್ನು ಕೈಬಿಡುವುದಿಲ್ಲ” ಎಂದು ದೃಢವಾಗಿ ಹೇಳಿದ್ದರು.
ಕೋರ್ಟ್ ಆದೇಶದಂತೆ ಕ್ರಮ ಎಂದ ಪೊಲೀಸರು
ಇನ್ನೊಂದೆಡೆ ಈ ಕುರಿತು ಸ್ಪಷ್ಟನೆ ನೀಡಿರುವ ದೆಹಲಿ ಪೊಲೀಸರು, “ದೆಹಲಿ ಹೈಕೋರ್ಟ್ ನೀಡಿರುವ ನಿರ್ದೇಶನಗಳು ಮತ್ತು ಹಿರಿಯ ತಜ್ಞ ವೈದ್ಯರ ತುರ್ತು ಸಲಹೆಯ ಮೇರೆಗೇ ವಾಂಗ್‌ಚುಕ್ ಅವರಿಗೆ ಅಗತ್ಯ ವೈದ್ಯಕೀಯ ಆರೈಕೆ ನೀಡಲು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪೊಲೀಸರು ಜಂತರ್ ಮಂತರ್‌ನಿಂದ ಅವರನ್ನು ಕರೆದೊಯ್ಯುವಾಗ ಪ್ರತಿಭಟನಾಕಾರರು ತಡೆಯೊಡ್ಡಿ ಗದ್ದಲ ಸೃಷ್ಟಿಸಲು ಯತ್ನಿಸಿದರು. ಆದರೆ ಪೊಲೀಸರು ಸಂಯಮದಿಂದ ಪರಿಸ್ಥಿತಿ ನಿಭಾಯಿಸಿದ್ದಾರೆ” ಎಂದು ತಿಳಿಸಿದ್ದಾರೆ.
ಸೋನಮ್ ವಾಂಗ್ಚುಕ್ ಹೋರಾಟವೇಕೆ?
ಸೋನಮ್ ವಾಂಗ್ಚುಕ್ ಅವರು ಕಳೆದ ಕೆಲವು ವರ್ಷಗಳಿಂದ ಲಡಾಖ್‌ನ ಹಿಮನದಿಗಳು ಕರಗುತ್ತಿರುವುದರ ವಿರುದ್ಧ ಜಾಗತಿಕ ಆಂದೋಲನ ನಡೆಸುತ್ತಿದ್ದಾರೆ. ಲಡಾಖ್‌ನ ಸೂಕ್ಷ್ಮ ಪರಿಸರವನ್ನು ಕಾರ್ಪೊರೇಟ್ ಕಂಪನಿಗಳ ಗಣಿಗಾರಿಕೆಯಿಂದ ಮುಕ್ತಗೊಳಿಸಲು ಮತ್ತು ಅಲ್ಲಿನ ಸ್ಥಳೀಯ ಬುಡಕಟ್ಟು ಜನರಿಗೆ ಸಂವಿಧಾನದ 6ನೇ ವೇಳಾಪಟ್ಟಿಯಡಿ ಸ್ವಾಯತ್ತತೆ ನೀಡಬೇಕೆಂದು ಆಗ್ರಹಿಸಿ ಅವರು ದೆಹಲಿಯ ಚಳಿಯಲ್ಲಿ ಸುದೀರ್ಘ ಪಾದಯಾತ್ರೆ ನಡೆಸಿ ಜಂತರ್ ಮಂತರ್ ತಲುಪಿದ್ದರು. ಸದ್ಯ ಆಸ್ಪತ್ರೆಯ ಕೋಣೆಯಲ್ಲೇ ಈ ಪರಿಸರ ಯೋಧನ ಹೋರಾಟ ಮುಂದುವರೆದಿದೆ.ನೀಟ್ ಪರೀಕ್ಷೆಯ ಅಕ್ರಮದ ವಿರುದ್ಧವೂ ಧ್ವನಿ ಎತ್ತಿದ್ದಾರೆ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಬೇಕೆಂಬುದು ಕೂಡ ಅವರ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದೆ.