ಸುಳ್ಳಾಯಿತೇ ಆಮಿರ್ ಖಾನ್ ಹೇಳಿಕೆ? ಸೋನಮ್ ವಾಂಗ್ಚುಕ್ ಭೇಟಿಯಾಗಿದ್ದ ಹಳೆಯ ವಿಡಿಯೋ ವೈರಲ್
‘3 ಈಡಿಯಟ್ಸ್’ ಸಿನಿಮಾದಲ್ಲಿನ ಪಾತ್ರಕ್ಕೆ ಸೋನಮ್ ವಾಂಗ್ಚುಕ್ ಸ್ಫೂರ್ತಿಯಾಗಿರಲಿಲ್ಲ ಎಂದು ಆಮಿರ್ ಖಾನ್ ಹೇಳಿದ್ದಾರೆ. ಆದರೆ ಹಳೆಯ ವಿಡಿಯೋ ವೈರಲ್ ಆಗಿದ್ದು, ಆಮಿರ್ ಖಾನ್ ಹೇಳಿಕೆಯಲ್ಲಿ ವೈರುಧ್ಯ ಕಾಣಿಸುತ್ತಿದೆ. ವಿಡಿಯೋ ವೈರಲ್ ಆದ ಬಳಿಕ ಆಮಿರ್ ಖಾನ್ ಮಾತಿನ ಮೇಲೆ ಅಭಿಮಾನಿಗಳಿಗೆ ಅನುಮಾನ ಮೂಡಿದೆ.

ಮುಖ್ಯಾಂಶಗಳು
- ‘3 ಈಡಿಯಟ್ಸ್’ ಸಿನಿಮಾ ಮಾಡುವಾಗ ಸೋನಮ್ ವಾಂಗ್ಚುಕ್ ಪರಿಚಯವಿರಲಿಲ್ಲ ಎಂದಿದ್ದ ಆಮಿರ್ ಖಾನ್.
- ಚಿತ್ರದ ಪಾತ್ರಕ್ಕೂ ಸೋನಮ್‌ಗೂ ಸಂಬಂಧವಿದೆ ಎಂಬುದು ತಪ್ಪು ಕಲ್ಪನೆ ಎಂದಿರುವ ಬಾಲಿವುಡ್ ಸ್ಟಾರ್ ನಟ.
- ಆದರೆ ಈ ಹೇಳಿಕೆಯ ಬೆನ್ನಲ್ಲೇ, ಅವರಿಬ್ಬರು 2008ರಲ್ಲೇ ಭೇಟಿಯಾಗಿದ್ದ ವಿಡಿಯೋ ಈಗ ವೈರಲ್ ಆಗುತ್ತಿದೆ.
ಬಾಲಿವುಡ್‌ನ ಬ್ಲಾಕ್‌ಬಸ್ಟರ್ ‘3 ಈಡಿಯಟ್ಸ್’ (3 Idiots) ಚಿತ್ರದ ಪ್ರಮುಖ ಪಾತ್ರ ಫುನ್ಸುಖ್ ವಾಂಗ್ಡು ಸೃಷ್ಟಿಗೆ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರೇ ಸ್ಫೂರ್ತಿ ಎಂಬುದು ಜಗಜ್ಜಾಹಿರಾದ ವಿಷಯ. ಆದರೆ ಇತ್ತೀಚೆಗೆ ಲಂಡನ್‌ನ ಬ್ರಿಟಿಷ್ ಫಿಲ್ಮ್ ಇನ್‌ಸ್ಟಿಟ್ಯೂಟ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ನಟ ಆಮಿರ್ ಖಾನ್ (Aamir Khan), ‘3 ಇಡಿಯಟ್ಸ್ ಸಿನಿಮಾ ಮಾಡುವಾಗ ನಮಗೆ ಸೋನಮ್ ವಾಂಗ್ಚುಕ್ ಯಾರೆಂದೇ ಗೊತ್ತಿರಲಿಲ್ಲ’ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಈ ಹೇಳಿಕೆ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಆಮಿರ್ ಖಾನ್ ಮತ್ತು ಸೋನಮ್ ವಾಂಗ್ಚುಕ್ (Sonam Wangchuk) 2008ರಲ್ಲೇ ಭೇಟಿಯಾಗಿದ್ದ ಹಳೆಯ ವಿಡಿಯೋವೊಂದು ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದು, ಆಮಿರ್ ಸುಳ್ಳು ಹೇಳಿದ್ದಾರಾ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.
ವೈರಲ್ ಆಗಿರುವ ವಿಡಿಯೋ ಕ್ಲಿಪ್‌ನಲ್ಲಿ ಸೋನಮ್ ವಾಂಗ್ಚುಕ್ ಅವರು, ‘3 ಈಡಿಯಟ್ಸ್’ ಬಿಡುಗಡೆಯಾಗುವ ಒಂದು ವರ್ಷಕ್ಕೂ ಮುಂಚೆ ಅಂದರೆ 2008ರಲ್ಲಿ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆಮಿರ್ ಖಾನ್ ಅವರನ್ನು ಭೇಟಿಯಾಗಿದ್ದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಆ ಕಾರ್ಯಕ್ರಮದಲ್ಲಿ ಸೋನಮ್ ಪ್ರಶಸ್ತಿ ಸ್ವೀಕರಿಸುವಾಗ ಆಮಿರ್ ಖಾನ್ ಚಪ್ಪಾಳೆ ತಟ್ಟುತ್ತಿರುವ ದೃಶ್ಯಗಳೂ ವಿಡಿಯೋದಲ್ಲಿವೆ.
ಆಮಿರ್-ಸೋನಮ್ ಭೇಟಿಯ ಮಾತುಕಥೆ:
‘ಆ ಭೇಟಿಯ ಸಂದರ್ಭದಲ್ಲಿ ನಾನು ಅಮೀರ್ ಖಾನ್ ಅವರಿಗೆ ಸಿಯಾಚಿನ್ ಗಡಿ ಸಂಘರ್ಷದ ಕುರಿತು ಸಿನಿಮಾ ಮಾಡುವಂತೆ ಐಡಿಯಾ ನೀಡಿದ್ದೆ. ಎರಡು ದೇಶಗಳು ಪ್ರತಿದಿನ ಬರೋಬ್ಬರಿ 7 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿವೆ. ಇದರ ಬದಲು ಸಾಮಾನ್ಯ ಜನರು ಈ ಸಮಸ್ಯೆಯನ್ನು ಬಗೆಹರಿಸಿ, ಆ ಹಣವನ್ನು ಶಿಕ್ಷಣಕ್ಕೆ ಬಳಸುವಂತೆ ಸಿನಿಮಾದಲ್ಲಿ ತೋರಿಸಬಹುದಲ್ಲವೇ ಎಂದು ಕೇಳಿದ್ದೆ. ಆಮಿರ್ ಕೂಡ ನನ್ನ ಪ್ರೆಸೆಂಟೇಶನ್ ಅನ್ನು ಆಸಕ್ತಿಯಿಂದ ನೋಡಿದ್ದರು’ ಎಂದು ಸೋನಮ್ ಹೇಳಿದ್ದಾರೆ.
Aamir khan met Sonam wangchuk in 2008 at CNN IBN event (clip attached) https://t.co/dBC0tKv4rW pic.twitter.com/1egmiITpn8
— Shubh (@kadaipaneeeer) July 17, 2026
ತದನಂತರ ಸೋನಮ್ ವಾಂಗ್ಚುಕ್ ಅವರು ಹೆಚ್ಚಿನ ವ್ಯಾಸಂಗಕ್ಕಾಗಿ ಯುರೋಪ್‌ಗೆ ತೆರಳಿದ್ದರು. ಆದರೆ ಡಿಸೆಂಬರ್ 2009ರಲ್ಲಿ ‘3 ಈಡಿಯಟ್ಸ್’ ಬಿಡುಗಡೆಯಾದಾಗ, ಅವರ ಸ್ನೇಹಿತರು ಫೋನ್ ಮಾಡಿ ‘ನಿಮ್ಮ ಲಡಾಖ್ ಶಾಲೆ ಮತ್ತು ನಿಮ್ಮ ಜೀವನದ ಆಧಾರದ ಮೇಲೆಯೇ ಆಮಿರ್ ಖಾನ್ ಸಿನಿಮಾ ಮಾಡಿದ್ದಾರೆ’ ಎಂದು ತಿಳಿಸಿದಾಗ ಸೋನಮ್‌ಗೆ ಶಾಕ್ ಆಗಿತ್ತಂತೆ.
ಶಾಲೆಗೆ ಬಂದಿದ್ದ ಚಿತ್ರತಂಡವನ್ನು ವಾಪಸ್ ಕಳುಹಿಸಲಾಗಿತ್ತು:
ಈ ಬಗ್ಗೆ ಅವರು ತಮ್ಮ ಶಾಲೆಯ ಸಿಬ್ಬಂದಿಯನ್ನು ವಿಚಾರಿಸಿದಾಗ ಆಘಾತಕಾರಿ ವಿಷಯವೊಂದು ಬೆಳಕಿಗೆ ಬಂದಿತ್ತು. ಅದೇನೆಂದರೆ, ‘3 ಈಡಿಯಟ್ಸ್’ ಚಿತ್ರತಂಡವು ಸೋನಮ್ ಅವರ ಶಾಲೆಗೆ ಶೂಟಿಂಗ್ ಮಾಡಲು ಬಂದಿತ್ತು. ಆದರೆ ಅವರು ತಮ್ಮ ಪ್ರಾಜೆಕ್ಟ್ ಬಗ್ಗೆ ಅತ್ಯಂತ ರಹಸ್ಯ ಕಾಯ್ದುಕೊಂಡಿದ್ದರು ಮತ್ತು ಶಾಲೆಯ ಆವರಣಕ್ಕೆ ಭಾರಿ ಪ್ರಮಾಣದ ಪ್ಲಾಸ್ಟಿಕ್ ವಸ್ತುಗಳನ್ನು ತರಲು ಯೋಜಿಸಿದ್ದರು. ಲಡಾಖ್‌ನ ಪರಿಸರ ಕಾಪಾಡುವ ನಿಟ್ಟಿನಲ್ಲಿ ಸೋನಮ್ ಅವರ ಶಾಲೆಯು ಚಿತ್ರೀಕರಣಕ್ಕೆ ಅನುಮತಿ ನಿರಾಕರಿಸಿತ್ತು. ಹೀಗಾಗಿ ಚಿತ್ರತಂಡವು ಹತ್ತಿರದ ಮತ್ತೊಂದು ಶಾಲೆಯಲ್ಲಿ ಕ್ಲೈಮ್ಯಾಕ್ಸ್ ದೃಶ್ಯಗಳನ್ನು ಶೂಟ್ ಮಾಡಿತ್ತು.
ಇದನ್ನೂ ಓದಿ: ಆಮಿರ್ ಖಾನ್‌ಗೆ ಕೊಲೆ ಬೆದರಿಕೆ; ಕೊಂದವರಿಗೆ 5 ಕೋಟಿ ರೂ. ಬಹುಮಾನ ಘೋಷಿಸಿದ ಅಯೋಧ್ಯೆ ಧಾರ್ಮಿಕ ಮುಖಂಡ
ಸೋನಮ್ ವಾಂಗ್ಚುಕ್ ಬಗ್ಗೆ ಆಮಿರ್ ಖಾನ್ ಹೇಳಿದ್ದೇನು?
ಲಡಾಖ್‌ನಲ್ಲಿ ಸೋನಮ್ ವಾಂಗ್ಚುಕ್ ನಡೆಸುತ್ತಿರುವ ಉಪವಾಸ ಸತ್ಯಾಗ್ರಹದ ಬಗ್ಗೆ ಲಂಡನ್ ಕಾರ್ಯಕ್ರಮದಲ್ಲಿ ಆಮಿರ್ ಖಾನ್ ಅವರಿಗೆ ಪ್ರಶ್ನಿಸಲಾಯಿತು. ಆಗ ಉತ್ತರಿಸಿದ್ದ ಅವರು, ‘3 ಈಡಿಯಟ್ಸ್ ಸಿನಿಮಾ ಮಾಡುವಾಗ ನಮಗೆ ಸೋನಮ್ ವಾಂಗ್ಚುಕ್ ಬಗ್ಗೆ ಗೊತ್ತಿರಲಿಲ್ಲ ಎಂಬುದು ಅಸಲಿ ಸತ್ಯ. ಇತ್ತೀಚೆಗೆ ಚತುರ್ (ನಟ ಓಮಿ ವೈದ್ಯ) ಕೂಡ ಈ ಬಗ್ಗೆ ವಿಡಿಯೋದಲ್ಲಿ ಮಾತನಾಡಿದ್ದಾನೆ. ಆದರೆ ಅದು ತಪ್ಪು ಕಲ್ಪನೆ. ನನಗಾಗಲಿ, ನಿರ್ದೇಶಕ ರಾಜಕುಮಾರ್ ಹಿರಾನಿಗಾಗಲಿ ಅಥವಾ ಚಿತ್ರಕಥೆಗಾರ ಅಭಿಜಾತ್‌ಗಾಗಲಿ ಆ ಸಮಯದಲ್ಲಿ ಸೋನಮ್ ಬಗ್ಗೆ ತಿಳಿದಿರಲಿಲ್ಲ. ಆದರೂ ಸೋನಮ್ ಅವರು ಮಾಡುತ್ತಿರುವ ಪರಿಸರ ಕಾಳಜಿಯ ಕೆಲಸ ಶ್ಲಾಘನೀಯ. ಅವರನ್ನು ಗೌರವಿಸಲು ಅವರು 3 ಈಡಿಯಟ್ಸ್ ಚಿತ್ರದ ಪಾತ್ರಕ್ಕೆ ಸ್ಫೂರ್ತಿಯಾಗಿರಬೇಕಾದ ಅಗತ್ಯವಿಲ್ಲ’ ಎಂದು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:54 pm, Fri, 17 July 26




