ಚಿಕ್ಕಮ್ಮನ ಕೈಯಲ್ಲಿದ್ದ 6 ತಿಂಗಳ ಮಗುವಿನ ಮೇಲೆ ಪಿಟ್​ಬುಲ್ ಅಟ್ಯಾಕ್

ಸೋನಿಪತ್‌ನಲ್ಲಿ 6 ತಿಂಗಳ ಮಗುವಿನ ಮೇಲೆ ಪಿಟ್‌ಬುಲ್ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ. ಚಿಕ್ಕಮ್ಮನ ಕೈಯಲ್ಲಿದ್ದ ಮಗುವನ್ನು ನಾಯಿ ಕಚ್ಚಿ ಕೆಳಕ್ಕೆ ಕೆಡವಿ ಎಳೆದೊಯ್ದ ವಿಡಿಯೋ ವೈರಲ್ ಆಗಿದೆ. ಮಗು ರೋಹ್ಟಕ್ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದೆ. ಈ ಘಟನೆ, ಪಿಟ್‌ಬುಲ್ ಸೇರಿದಂತೆ ಆಕ್ರಮಣಕಾರಿ ನಾಯಿ ತಳಿಗಳ ಮಾರಾಟ, ಸಂತಾನೋತ್ಪತ್ತಿ ಮತ್ತು ಸಾಕಣೆ ನಿಷೇಧಿಸುವ ಕಟ್ಟುನಿಟ್ಟಿನ ಕಾನೂನುಗಳ ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಚಿಕ್ಕಮ್ಮನ ಕೈಯಲ್ಲಿದ್ದ 6 ತಿಂಗಳ ಮಗುವಿನ ಮೇಲೆ ಪಿಟ್​ಬುಲ್ ಅಟ್ಯಾಕ್
ಸಾಂದರ್ಭಿಕ ಚಿತ್ರ
Image Credit source: A-Z Animals

Updated on: Sep 18, 2026 | 8:32 AM

ಸೋನಿಪತ್, ಸೆಪ್ಟೆಂಬರ್ 18: ಆರು ತಿಂಗಳ ಮಗುವಿನ ಮೇಲೆ ಪಿಟ್​ಬುಲ್ ನಾಯಿ ದಾಳಿ ಮಾಡಿರುವ ಘಟನೆ ಹರಿಯಾಣದ ಸೋನಿಪತ್​ನ ಸಿಕ್ಕಾ ಕಾಲೋನಿಯಲ್ಲಿ ನಡೆದಿದೆ. ಚಿಕ್ಕಮ್ಮನ ತೋಳಿನಲ್ಲಿದ್ದ ಮಗುವಿನ ಮೇಲೆ ನಾಯಿ ದಾಳಿ ನಡೆಸಿ, ಮಗುವನ್ನು ಕೆಳಕ್ಕೆ ಕೆಡವಿ ಕಚ್ಚಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಹಿಳೆಯೊಬ್ಬರು ಮಗುವನ್ನು ಎತ್ತಿಕೊಂಡು ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದಾಗ ಏಕಾಏಕಿ ನುಗ್ಗಿ ಬಂದ ಪಿಟ್ ಬುಲ್, ಇಬ್ಬರನ್ನೂ ಕೆಡವಿ ಮಗುವನ್ನು ಕಚ್ಚಿ ರಸ್ತೆಯುದ್ದಕ್ಕೂ ಎಳೆದೊಯ್ದಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಈ ಭೀಕರ ದೃಶ್ಯ ಸೆರೆಯಾಗಿದ್ದು, ರಕ್ತಸಿಕ್ತವಾಗಿ ಗಂಭೀರ ಗಾಯಗೊಂಡಿರುವ ಮಗುವನ್ನು ರೋಹ್ಟಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ.

ಬಿಡಿಸಲು ಜನರ ಹರಸಾಹಸ: ಸ್ಥಳೀಯರು ಓಡಿಬಂದು ನಾಯಿಯನ್ನು ಹೊಡೆದು ಮಗುವನ್ನು ರಕ್ಷಿಸಲು ಯತ್ನಿಸಿದರೂ, ನಾಯಿ ಮಗುವನ್ನು ಬಿಡಲು ನಿರಾಕರಿಸಿ ಕಚ್ಚಿ ಹಿಡಿದಿತ್ತು. ಕೊನೆಗೆ ಪ್ರಯಾಸಪಟ್ಟು ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಲಾಯಿತು. ದಾಳಿಯಿಂದ ಮಗುವಿನ ತಲೆ, ಮುಖ ಹಾಗೂ ದೇಹದ ಭಾಗಗಳಿಗೆ ತೀವ್ರ ಗಾಯಗಳಾಗಿದ್ದು, ರೋಹ್ಟಕ್‌ನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (PGIMS) ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮತ್ತಷ್ಟು ಓದಿ: ಬೀದಿಗೆ ಬಂದ ಪೆಟ್ ಡಾಗ್ ಜಗಳ: ಲಿಫ್ಟ್ ಒಳಗೆ ಮಹಿಳೆಯರ ನಡುವೆ ಜಗಳ, ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ

ಘಟನೆಯಿಂದ ಬಡಾವಣೆಯ ನಿವಾಸಿಗಳು ತೀವ್ರ ಆತಂಕಗೊಂಡಿದ್ದು, ಸಾಕುನಾಯಿಗೆ ಯಾವುದೇ ಬೆಲ್ಟ್ ಅಥವಾ ಮುಖಗವಸು (Muzzle) ಹಾಕದೆ ಸಾರ್ವಜನಿಕ ಸ್ಥಳಕ್ಕೆ ಬಿಟ್ಟಿದ್ದ ಮಾಲೀಕನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಕಳೆದ ವರ್ಷ ದೆಹಲಿಯ ವಿನಯ್ ಎನ್‌ಕ್ಲೇವ್‌ನಲ್ಲಿ ಪಿಟ್ ಬುಲ್ ದಾಳಿಗೆ ಒಳಗಾಗಿದ್ದ ಆರು ವರ್ಷದ ಬಾಲಕನೊಬ್ಬ ತನ್ನ ಬಲ ಕಿವಿಯನ್ನೇ ಕಳೆದುಕೊಂಡಿದ್ದ. ಆ ಪ್ರಕರಣದಲ್ಲಿ ಪೊಲೀಸರು ನಾಯಿಯ ಮಾಲೀಕನ ವಿರುದ್ಧ ಕೊಲೆ ಯತ್ನ ಕೇಸ್ ದಾಖಲಿಸಿ ಬಂಧಿಸಿದ್ದರು.

ವಿಡಿಯೋ

ಉಗ್ರ ತಳಿಗಳ ನಿಷೇಧದ ನಿಯಮಗಳು: ಕೇಂದ್ರ ಪಶುಸಂಗೋಪನಾ ಇಲಾಖೆಯು ಪಿಟ್ ಬುಲ್, ರೊಟ್‌ವೀಲರ್, ಡೋಗೋ ಅರ್ಜೆಂಟಿನೊ ಸೇರಿದಂತೆ ೨೩ ಕ್ಕೂ ಹೆಚ್ಚು ಆಕ್ರಮಣಕಾರಿ ಶ್ವಾನ ತಳಿಗಳ ಆಮದು, ಸಂತಾನೋತ್ಪತ್ತಿ ಮತ್ತು ಮಾರಾಟವನ್ನು ನಿಷೇಧಿಸಲು ಮಾರ್ಗಸೂಚಿ ಹೊರಡಿಸಿತ್ತು.

ಕೆಲ ನಗರಗಳಲ್ಲಿ ಕಟ್ಟುನಿಟ್ಟಿನ ನಿರ್ಬಂಧ: ಗಾಜಿಯಾಬಾದ್, ಲಕ್ನೋ, ಚಂಡೀಗಢ ಹಾಗೂ ಗ್ರೇಟರ್ ನೋಯ್ಡಾದಂತಹ ಸ್ಥಳೀಯ ಪಾಲಿಕೆಗಳು ಈಗಾಗಲೇ ಪಿಟ್ ಬುಲ್ ಮತ್ತು ರೊಟ್‌ವೀಲರ್ ತಳಿಗಳನ್ನು ಮನೆಗಳಲ್ಲಿ ಸಾಕುವುದನ್ನು ಸಂಪೂರ್ಣವಾಗಿ ನಿಷೇಧಿಸಿವೆ. ಆದರೆ ಹಲವು ಕಡೆ ಕಟ್ಟುನಿಟ್ಟಿನ ಕಾನೂನು ಅನುಷ್ಠಾನವಿಲ್ಲದೆ ಇಂತಹ ಘಟನೆಗಳು ಮರುಕಳಿಸುತ್ತಿವೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us