ದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯವು (Enforcement Directorate – ED) ಮತ್ತೆ ಸಮನ್ಸ್ ಜಾರಿ ಮಾಡಿದೆ. ಜೂನ್ 23ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸಲಾಗಿದೆ. ಕೊವಿಡ್-19ರಿಂದ ಇದೀಗ ತಾನೆ ಚೇತರಿಸಿಕೊಳ್ಳುತ್ತಿದ್ದೇನೆ. ವಿಚಾರಣೆಗೆ ಹಾಜರಾಗಲು ಮತ್ತಷ್ಟು ಸಮಯ ಬೇಕಿದೆ ಎಂದು ಸೋನಿಯಾ ಗಾಂಧಿ ಈ ಮೊದಲು ಕೋರಿದ್ದರು.
ಸೋನಿಯಾ ಗಾಂಧಿ ಅವರಲ್ಲಿ ಕಳೆದ ಗುರುವಾರ ಕೊವಿಡ್ ಸೋಂಕು ಪತ್ತೆಯಾಗಿತ್ತು. ಅವರಿನ್ನೂ ಸೋಂಕಿನಿಂದ ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಂಡಿಲ್ಲ. ಅವರ ಇತ್ತೀಚಿನ ಕೊವಿಡ್ ವರದಿಯೂ ನೆಗೆಟಿವ್ ಬಂದಿರಲಿಲ್ಲ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೊದಲು ಜೂನ್ 8ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯವು ಸೋನಿಯಾ ಗಾಂಧಿ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ನ್ಯಾಷನಲ್ ಹೆರಾಲ್ಡ್ ದಿನಪತ್ರಿಕೆ-ಎಜೆಎಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ವಿಚಾರಣೆ ನಡೆಯುತ್ತಿದೆ. ಜೂನ್ 13ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಸೂಚಿಸಲಾಗಿದೆ.
ಜಾರಿ ನಿರ್ದೇಶನಾಲಯದ ವಿಚಾರಣೆಯನ್ನು ತಪ್ಪಿಸಿಕೊಳ್ಳುವ ಉದ್ದೇಶ ತಮಗಿಲ್ಲ ಎಂದು ಸೋನಿಯಾ ಸ್ಪಷ್ಟಪಡಿಸಿದ್ದಾರೆ. ಕೊವಿಡ್ನಿಂದ ಚೇತರಿಸಿಕೊಂಡ ನಂತರ ವಿಚಾರಣೆಗೆ ಅವರು ಹಾಜರಾಗಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ಕಾಂಗ್ರೆಸ್ ಪಕ್ಷವು ನಿರ್ವಹಿಸುತ್ತಿರುವ ‘ಯಂಗ್ ಇಂಡಿಯನ್’ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಹಣಕಾಸು ಅಕ್ರಮಗಳ ಬಗ್ಗೆ ಜಾರಿ ನಿರ್ದೇಶನಾಲಯವು ತನಿಖೆ ಆರಂಭಿಸಿದೆ. ಈ ಸಂಸ್ಥೆಯು ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ನಿರ್ವಹಿಸುತ್ತದೆ. ಈ ಪತ್ರಿಕೆಯನ್ನು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಸಂಸ್ಥೆಯು ಪ್ರಕಟಿಸುತ್ತದೆ. ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ಇದರ ಮಾಲೀಕತ್ವ ಹೊಂದಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (Prevention of Money Laundering Act – PMLA) ಅನ್ವಯ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಹೇಳಿಕೆ ದಾಖಲಿಸಲು ಇಡಿ ನಿರ್ಧರಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:04 pm, Fri, 10 June 22