ಮುಂಬೈ: 2004ರ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಗಳಿಸಿದ ಬಳಿಕ ಮನಮೋಹನ್ ಸಿಂಗ್ (Manmohan Singh) ಅವರನ್ನು ಪ್ರಧಾನಮಂತ್ರಿಯಾಗಿ ಮಾಡುವ ಬದಲು ಸೋನಿಯಾ ಗಾಂಧಿ (Sonia Gandhi) ಅವರೇ ಪ್ರಧಾನಿಯಾಗಬೇಕಿತ್ತು ಅಥವಾ ಶರದ್ ಪವಾರ್ (Sharad Pawar) ಅವರನ್ನು ಪ್ರಧಾನಿಯನ್ನಾಗಿ ಮಾಡಬೇಕಿತ್ತು ಎಂದು ಕೇಂದ್ರ ಸಚಿವ ರಾಮದಾಸ್ ಅಥಾವಳೆ (Ramdas Athawale) ಹೇಳಿದ್ದಾರೆ. ಸೋನಿಯಾ ಗಾಂಧಿ ವಿದೇಶೀಯರು ಎಂಬ ಚರ್ಚೆಯೆಲ್ಲ ಹುರುಳಿಲ್ಲದ್ದು. ಏಕೆಂದರೆ ಆಕೆ ಈಗಾಗಲೇ ಭಾರತೀಯ ಪ್ರಜೆಯಾಗಿದ್ದಾರೆ ಹಾಗೂ ಲೋಕಸಭಾ ಸದಸ್ಯೆಯಾಗಿದ್ದಾರೆ. ಹೀಗಾಗಿ, ಪ್ರಧಾನಿಯಾಗುವ ಎಲ್ಲ ಹಕ್ಕು, ಅರ್ಹತೆಯೂ ಸೋನಿಯಾಗಾಂಧಿ ಅವರಿಗೆ ಇದೆ ಎಂದು ಅವರು ಹೇಳಿದ್ದಾರೆ.
2004ರಲ್ಲಿ ಯುಪಿಎ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ ಸೋನಿಯಾ ಗಾಂಧಿ ತಾವೇ ಪ್ರಧಾನಮಂತ್ರಿಯಾಗಬೇಕಿತ್ತು. ಆದರೆ, ಆಗ ಅವರು ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯನ್ನಾಗಿ ಮಾಡಿದರು. ಭಾರತದ ಕಮಲಾ ಹ್ಯಾರೀಸ್ ಅಮೆರಿಕದ ಉಪಾಧ್ಯಕ್ಷೆಯಾದರೆ ನಾವು ಚಪ್ಪಾಳೆ ತಟ್ಟುತ್ತೇವೆ. ಭಾರತದ ಕಮಲಾ ಅಮೆರಿಕದ ಉಪಾಧ್ಯಕ್ಷೆಯಾಗಬಹುದು ಎಂದಾದರೆ ಇಟಲಿಯ ಸೋನಿಯಾ ಗಾಂಧಿ ಭಾರತದ ಪ್ರಧಾನ ಮಂತ್ರಿಯಾದರೆ ತಪ್ಪೇನು? ಸೋನಿಯಾ ಗಾಂಧಿ ಭಾರತದ ಪ್ರಜೆಯಾಗಿದ್ದು, ಸಂಸದರೂ ಆಗಿದ್ದಾರೆ. ಇನ್ನೂ ಆಕೆ ಹುಟ್ಟಿದ ದೇಶದೊಂದಿಗೆ ಅವರನ್ನು ತಳುಕು ಹಾಕುವುದು ಎಷ್ಟರ ಮಟ್ಟಿಗೆ ಸರಿ? ಎಂದು ಸುದ್ದಿಗೋಷ್ಠಿಯಲ್ಲಿ ರಾಮದಾಸ್ ಅಥಾವಳೆ ಪ್ರಶ್ನಿಸಿದ್ದಾರೆ.
ಒಂದುವೇಳೆ ಸೋನಿಯಾ ಗಾಂಧಿಗೆ ಪ್ರಧಾನಿಯಾಗಲು ಇಷ್ಟವಿಲ್ಲದಿದ್ದರೆ ತಮ್ಮ ಬದಲಾಗಿ ಎನ್ಸಿಪಿ ಅಧ್ಯಕ್ಷರಾದ ಶರದ್ ಪವಾರ್ ಅವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಬಹುದಿತ್ತು. ಮನಮೋಹನ್ ಸಿಂಗ್ ಬದಲು ಶರದ್ ಪವಾರ್ ಪ್ರಧಾನಿಯಾಗಬಹುದಿತ್ತು. ಅವರು ಕೂಡ ಪ್ರಧಾನಿಯಾಗಲು ಬಹಳ ಸೂಕ್ತವಾದ ವ್ಯಕ್ತಿಯಾಗಿದ್ದರು. ಆದರೆ, ಸೋನಿಯಾ ಗಾಂಧಿ ಆಗ ತಪ್ಪು ನಿರ್ಧಾರ ತೆಗೆದುಕೊಂಡರು. 2004ರಲ್ಲಿ ಶರದ್ ಪವಾರ್ ಅವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಿದ್ದರೆ ಈಗ ಕಾಂಗ್ರೆಸ್ ಪಕ್ಷ ಇನ್ನಷ್ಟು ಸದೃಢವಾಗಿರುತ್ತಿತ್ತು. ಅವರು ಕಾಂಗ್ರೆಸ್ ಪಕ್ಷವನ್ನು ತೊರೆಯುತ್ತಲೂ ಇರಲಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಇಂತಹ ಗತಿ ಬರುತ್ತಿರಲಿಲ್ಲ ಎಂದು ಕೇಂದ್ರ ಸಚಿವ ಅಥಾವಳೆ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಆಸ್ಕರ್ ಫರ್ನಾಂಡಿಸ್ ನಿಧನಕ್ಕೆ ಪ್ರಧಾನಿ ಮೋದಿ, ಸೋನಿಯಾ ಗಾಂಧಿ, ದೇವೇಗೌಡ ಸೇರಿ ಗಣ್ಯರಿಂದ ಸಂತಾಪ
(Sonia Gandhi should have become PM or nominated Sharad Pawar not Manmohan Singh says Union Minister Ramdas Athawale)
Published On - 2:15 pm, Mon, 27 September 21