ಹವಾಮಾನ ವೈಪರಿತ್ಯ: ಅಪಾಯದಲ್ಲಿ ಸಿಲುಕಿದ್ದ ಸ್ಪೈಸ್​ಜೆಟ್ ವಿಮಾನ ಸುರಕ್ಷಿತ ಲ್ಯಾಂಡಿಂಗ್, 188 ಪ್ರಯಾಣಿಕರು ಪಾರು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 02, 2022 | 9:16 AM

ಕೊನೆಗೂ ಪೈಲಟ್​ಗಳು ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡುವಲ್ಲಿ ಯಶಸ್ವಿಯಾಗಿದ್ದು, ಸಂಭಾವ್ಯ ದುರಂತವನ್ನು ತಪ್ಪಿಸಿದರು.

ಹವಾಮಾನ ವೈಪರಿತ್ಯ: ಅಪಾಯದಲ್ಲಿ ಸಿಲುಕಿದ್ದ ಸ್ಪೈಸ್​ಜೆಟ್ ವಿಮಾನ ಸುರಕ್ಷಿತ ಲ್ಯಾಂಡಿಂಗ್, 188 ಪ್ರಯಾಣಿಕರು ಪಾರು
ಸ್ಪೈಸ್ ಜೆಟ್ ವಿಮಾನ (ಪ್ರಾತಿನಿಧಿಕ ಚಿತ್ರ)
Follow us on

ಕೊಲ್ಕತ್ತಾ: ಮುಂಬೈನಿಂದ ದುರ್ಗಾಪುರಕ್ಕೆ ಹೊರಟಿದ್ದ ಸ್ಪೈಸ್ ಜೆಟ್ ವಿಮಾನ ದುರ್ಗಾಪುರದಲ್ಲಿ ಲ್ಯಾಂಡಿಂಗ್ ಆಗುವ ವೇಳೆ ತೀವ್ರ ಹವಾಮಾನ ವೈಪರಿತ್ಯಕ್ಕೆ ಸಿಲುಕಿ ಆತಂಕ ಮೂಡಿತ್ತು. ಕೊನೆಗೂ ಪೈಲಟ್​ಗಳು ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡುವಲ್ಲಿ ಯಶಸ್ವಿಯಾಗಿದ್ದು, ಸಂಭಾವ್ಯ ದುರಂತವನ್ನು ತಪ್ಪಿಸಿದರು. ತೀವ್ರ ಕುಲುಕಾಟದಿಂದ ಸುಮಾರು 40 ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ಪೈಕಿ 12 ಮಂದಿಗೆ ತೀವ್ರಗಾಯಗಳಾಗಿವೆ. ಸದ್ಯಕ್ಕೆ ಅವರ ಪರಿಸ್ಥಿತಿ ಸ್ಥಿರವಾಗಿದೆ ಎಂದು ಸ್ಪೈಸ್​ಜೆಟ್ ವಕ್ತಾರರು ತಿಳಿಸಿದ್ದಾರೆ.

ಬೋಯಿಂಗ್ 737-800 ಮಾದರಿಯ ವಿಮಾನದಲ್ಲಿ 188 ಪ್ರಯಾಣಿಕರಿದ್ದರು. ಲ್ಯಾಂಡಿಂಗ್ ವೇಳೆ ಪ್ರಬಲ ಸುಂಟರಗಾಳಿಗೆ ವಿಮಾನ ಸಿಲುಕಿತು. ಕ್ಯಾಬಿನ್​ ಬ್ಯಾಗೇಜ್​ನಲ್ಲಿದ್ದ ಸಾಮಾನುಗಳು ಕೆಳಗೆ ಉರುಳಿದವು. ಈ ವೇಳೆ ಹಲವು ಪ್ರಯಾಣಿಕರ ತಲೆಗೆ ಗಾಯವಾಯಿತು. ಪ್ರಯಾಣಿಕರು ಭಯಗೊಂಡು ಕಿರುಚಿದರು. ತೀವ್ರ ಕುಲುಕಾಟದಿಂದಾಗಿ ಹಲವರಿಗೆ ಗಾಯಗಳೂ ಆದವು. ವಿಮಾನ ಲ್ಯಾಂಡ್ ಆದ ತಕ್ಷಣ ಗಾಯಾಳು ಪ್ರಯಾಣಿಕರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸೂಕ್ತ ಚಿಕಿತ್ಸೆಯ ನಂತರ ಎಲ್ಲ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಘೋಷಿಸಿದರು.

ಘಟನೆ ಕುರಿತು ಪತ್ರಿಕಾ ಹೇಳಿಕೆ ಹೊರಡಿಸಿರುವ ಸ್ಪೈಸ್​ಜೆಟ್, ಮುಂಬೈನಿಂದ ದುರ್ಗಾಪುರಕ್ಕೆ ಬರುತ್ತಿದ್ದ ಸ್ಪೈಸ್​ಜೆಟ್​ ವಿಮಾನ ಎಸ್​ಜಿ-945 ಹಾರುತ್ತಿದ್ದ ಎತ್ತರ ಕಡಿಮೆ ಮಾಡಿಕೊಳ್ಳುವ ಅವಧಿಯಲ್ಲಿ ಹವಾಮಾನ ವೈಪರಿತ್ಯಕ್ಕೆ ಸಿಲುಕಿತು. ಕೆಲ ಪ್ರಯಾಣಿಕರಿಗೆ ಇದರಿಂದ ಗಾಯಗಳಾಗಿದ್ದು ದುರದೃಷ್ಟಕರ. ದುರ್ಗಾಪುರದಲ್ಲಿ ವಿಮಾನವು ಲ್ಯಾಂಡ್ ಆದ ತಕ್ಷಣ ಎಲ್ಲ ಗಾಯಾಳುಗಳಿಗೂ ಸೂಕ್ತ ಚಿಕಿತ್ಸೆ ಕೊಡಿಸಲಾಯಿತು ಎಂದು ಹೇಳಿದೆ.

ಮುಂಬೈನಿಂದ ನಿನ್ನೆ (ಮೇ 1) ಸಂಜೆ 5 ಗಂಟೆಗೆ ಟೇಕಾಫ್ ಆಗಿದ್ದ ವಿಮಾನವು ಎರಡು ತಾಸುಗಳ ಹಾರಾಟದ ನಂತರ ದುರ್ಗಾಪುರದ ಕಾಜಿ ನಜ್ರುಲ್ಲಾ ಇಸ್ಲಾಂ ವಿಮಾನ ನಿಲ್ದಾಣದ ಸಮೀಪಕ್ಕೆ ಬಂದಿತ್ತು. ಈ ವೇಳೆ ಹಾರಾಟದ ಎತ್ತರ ಕಡಿಮೆ ಮಾಡಿಕೊಳ್ಳುವ ಸಂದರ್ಭದಲ್ಲಿ ಹವಾಮಾನ ವೈಪರಿತ್ಯದಿಂದ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೊನೆಗೆ ಸಂಜೆ 7.15ಕ್ಕೆ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡುವಲ್ಲಿ ಪೈಲಟ್​ಗಳು ಯಶಸ್ವಿಯಾದರು.

ಇದನ್ನೂ ಓದಿ: Air India: ತಾಂತ್ರಿಕ ದೋಷದ ನಡುವೆಯೂ ಬೆಂಗಳೂರಿನಲ್ಲಿ ವಿಮಾನ ಲ್ಯಾಂಡಿಂಗ್; ಪೈಲಟ್​ನ ಸಮಯಪ್ರಜ್ಞೆಯಿಂದ 164 ಪ್ರಯಾಣಿಕರು ಪಾರು

ಇದನ್ನೂ ಓದಿ: ಬೆಂಗಳೂರು: ಲ್ಯಾಂಡಿಂಗ್ ವೇಳೆ ರನ್​ವೇನಲ್ಲಿ ಅಡ್ಡಬಂದ ನಾಯಿ; ಖಾಲಿ ಜಾಗಕ್ಕೆ ನುಗ್ಗಿ ಪಲ್ಟಿಯಾದ ಏರ್​ಕ್ರಾಫ್ಟ್​