ಭಾರತದ ವಿರುದ್ಧ ತಪ್ಪು ಮಾಹಿತಿ ಹರಡುವ 16 ಯೂಟ್ಯೂಬ್ ಚಾನೆಲ್‌ಗಳಿಗೆ ಕೇಂದ್ರ ನಿರ್ಬಂಧ
'ಭಾರತದ ರಾಷ್ಟ್ರೀಯ ಭದ್ರತೆ, ವಿದೇಶಿ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ತಪ್ಪು ಮಾಹಿತಿಯನ್ನು ಹರಡಿದ್ದಕ್ಕಾಗಿ' 16 ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ಬಂಧಿಸಿದೆ. ನಿರ್ಬಂಧಿಸಲಾದ 16 ಚಾನಲ್‌ಗಳಲ್ಲಿ 6 ಪಾಕಿಸ್ತಾನದಲ್ಲಿ ಮತ್ತು ಉಳಿದವು ಭಾರತದಲ್ಲಿವೆ ಎಂದು ಸರ್ಕಾರ ಹೇಳಿದೆ.
ಭಾರತದ ವಿರುದ್ಧ ತಪ್ಪು ಮಾಹಿತಿ ಹರಡುವ 16 ಯೂಟ್ಯೂಬ್ ಚಾನೆಲ್‌ಗಳನ್ನು (YouTube Channel) ಕೇಂದ್ರ ಸರ್ಕಾರ ನಿರ್ಬಂಧಿಸಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು (Information and broadcasting ministry)’ಭಾರತದ ರಾಷ್ಟ್ರೀಯ ಭದ್ರತೆ, ವಿದೇಶಿ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ತಪ್ಪು ಮಾಹಿತಿಯನ್ನು ಹರಡಿದ್ದಕ್ಕಾಗಿ’ 16 ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ಬಂಧಿಸಿದೆ. ನಿರ್ಬಂಧಿಸಲಾದ 16 ಚಾನಲ್‌ಗಳಲ್ಲಿ 6 ಪಾಕಿಸ್ತಾನದಲ್ಲಿ(Pakistan) ಮತ್ತು ಉಳಿದವು ಭಾರತದಲ್ಲಿವೆ ಎಂದು ಸರ್ಕಾರ ಹೇಳಿದೆ. ಈ ಯೂಟ್ಯೂಬ್ ಚಾನೆಲ್‌ಗಳು ಭಾರತದಲ್ಲಿ ಆತಂಕವನ್ನುಂಟು ಮಾಡಲು, ಕೋಮು ಸೌಹಾರ್ದತೆಯನ್ನು ಪ್ರಚೋದಿಸಲು ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ಕದಡಲು ಸುಳ್ಳು, ಪರಿಶೀಲಿಸದ ಮಾಹಿತಿಯನ್ನು ಹರಡುತ್ತಿವೆ. ನಿರ್ಬಂಧಿಸಲಾದ ಯೂಟ್ಯೂಬ್ ಆಧಾರಿತ ಸುದ್ದಿ ಚಾನೆಲ್‌ಗಳು 68 ಕೋಟಿಗೂ ಹೆಚ್ಚು ವೀಕ್ಷಕರನ್ನು ಹೊಂದಿದ್ದವು” ಎಂದು ಸರ್ಕಾರ ಮಾಹಿತಿ ನೀಡಿದೆ. ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ಬಂಧಿಸಲು ಕೇಂದ್ರವು ನಿರ್ಧರಿಸಿದ್ದು ಇದೇ ಮೊದಲಲ್ಲ, ಈ ತಿಂಗಳ ಆರಂಭದಲ್ಲಿ, ‘ಭಾರತದ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ತಪ್ಪು ಮಾಹಿತಿಯನ್ನು ಹರಡುವುದಕ್ಕಾಗಿ ಸರ್ಕಾರವು 22 ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ಬಂಧಿಸಿದೆ. ನಿರ್ಬಂಧಿಸಲಾದ 22 ಚಾನೆಲ್‌ಗಳಲ್ಲಿ ನಾಲ್ಕು ಪಾಕಿಸ್ತಾನದಲ್ಲಿ ಮತ್ತು ಉಳಿದವು ಭಾರತದಲ್ಲಿವೆ ಎಂದು ಸರ್ಕಾರ ಹೇಳಿದೆ, ಕಳೆದ ವರ್ಷ ಫೆಬ್ರವರಿಯಲ್ಲಿ ಐಟಿ ನಿಯಮಗಳ ಅಧಿಸೂಚನೆಯ ನಂತರ ಭಾರತ ಮೂಲದ ಯೂಟ್ಯೂಬ್ ಖಾತೆಗಳ ವಿರುದ್ಧ ಕ್ರಮ ಕೈಗೊಂಡಿರುವುದು ಇದೇ ಮೊದಲು.
ಭಾರತೀಯ ಸಶಸ್ತ್ರ ಪಡೆಗಳು, ಜಮ್ಮು ಮತ್ತು ಕಾಶ್ಮೀರ ಮುಂತಾದ ವಿವಿಧ ವಿಷಯಗಳ ಕುರಿತು ನಕಲಿ ಸುದ್ದಿಗಳನ್ನು ಪೋಸ್ಟ್ ಮಾಡಲು ಬಹು ಯೂಟ್ಯೂಬ್ ಚಾನೆಲ್‌ಗಳನ್ನು ಬಳಸಲಾಗಿದೆ. ನಿರ್ಬಂಧಿಸಲು ಆದೇಶಿಸಿದ ವಿಷಯವು ಸಂಘಟಿತ ರೀತಿಯಲ್ಲಿ ಪಾಕಿಸ್ತಾನದಿಂದ ಕಾರ್ಯನಿರ್ವಹಿಸುವ ಬಹು ಸಾಮಾಜಿಕ ಮಾಧ್ಯಮ ಖಾತೆಗಳಿಂದ ಪೋಸ್ಟ್ ಮಾಡಿದ ಕೆಲವು ಭಾರತ ವಿರೋಧಿ ವಿಷಯವನ್ನು ಒಳಗೊಂಡಿದೆ ಎಂದು ಸರ್ಕಾರ ಹೇಳಿದೆ.
“ಉಕ್ರೇನ್‌ನಲ್ಲಿ ನಡೆಯುತ್ತಿರುವ ಪರಿಸ್ಥಿತಿಗೆ ಸಂಬಂಧಿಸಿದಂತೆ ಈ ಭಾರತೀಯ ಮೂಲದ ಯೂಟ್ಯೂಬ್ ಚಾನೆಲ್‌ಗಳು ಪ್ರಕಟಿಸಿದ ಗಮನಾರ್ಹ ಪ್ರಮಾಣದ ಸುಳ್ಳು ವಿಷಯವನ್ನು ಗಮನಿಸಲಾಗಿದೆ ಮತ್ತು ಇತರ ದೇಶಗಳೊಂದಿಗೆ ಭಾರತದ ವಿದೇಶಿ ಸಂಬಂಧಗಳಿಗೆ ಧಕ್ಕೆ ತರುವ ಗುರಿಯನ್ನು ಹೊಂದಿದೆ” ಎಂದು ಸರ್ಕಾರ ಹೇಳಿದೆ.
ಈ ತಿಂಗಳ ಆರಂಭದಲ್ಲಿ ನಕಲಿ ಸುದ್ದಿಗಳನ್ನು ಹರಡುವ 22 ಯೂಟ್ಯೂಬ್ ಆಧಾರಿತ ಸುದ್ದಿ ಚಾನೆಲ್‌ಗಳು ಮತ್ತು ಹಲವಾರು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸರ್ಕಾರ ನಿರ್ಬಂಧಿಸಿತ್ತು. ನಿರ್ಬಂಧಿಸಲಾದ ಯೂಟ್ಯೂಬ್ ಚಾನೆಲ್‌ಗಳಲ್ಲಿ 18 ಭಾರತೀಯ ಮತ್ತು ನಾಲ್ಕು ಪಾಕಿಸ್ತಾನ ಮೂಲದ ಚಾನೆಲ್‌ಗಳು ಸೇರಿವೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪ್ರಕಾರ ಪಾಕಿಸ್ತಾನ ಮೂಲದ ನಾಲ್ಕು ಯೂಟ್ಯೂಬ್ ಸುದ್ದಿ ವಾಹಿನಿಗಳು ವೀಕ್ಷಕರನ್ನು ದಾರಿತಪ್ಪಿಸಲು ಟಿವಿ ಸುದ್ದಿ ವಾಹಿನಿಗಳ ಲೋಗೋಗಳು ಮತ್ತು ಸುಳ್ಳು ಥಂಬ್‌ನೇಲ್‌ಗಳನ್ನು ಬಳಸಿಕೊಂಡಿವೆ. ಅಲ್ಲದೆ, ಸರ್ಕಾರವು ಮೂರು ಟ್ವಿಟರ್ ಹ್ಯಾಂಡಲ್‌ಗಳು, ಒಂದು ಫೇಸ್‌ಬುಕ್ ಖಾತೆ ಮತ್ತು ಒಂದು ಸುದ್ದಿ ವೆಬ್‌ಸೈಟ್ ಅನ್ನು ಸಹ ನಿರ್ಬಂಧಿಸಿದೆ. ನಿರ್ಬಂಧಿತ ಯೂಟ್ಯೂಬ್ ಚಾನೆಲ್‌ಗಳು 260 ಕೋಟಿಗೂ ಹೆಚ್ಚು ವೀಕ್ಷಕರನ್ನು ಹೊಂದಿದ್ದು ಇವು ನಕಲಿ ಸುದ್ದಿಗಳನ್ನು ಹರಡಲು ಬಳಸಲಾಗುತ್ತಿತ್ತು. ರಾಷ್ಟ್ರೀಯ ಭದ್ರತೆ, ಭಾರತದ ವಿದೇಶಿ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಯ ದೃಷ್ಟಿಕೋನದಿಂದ ಸೂಕ್ಷ್ಮ ವಿಷಯಗಳ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ತಪ್ಪು ಮಾಹಿತಿಗಳನ್ನು ಇವು ಹರಡಿವೆ ಎಂದು ಮಾಹಿತಿ ಮತ್ತು ಪ್ರಸಾರಾಂಗ ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಳೆದ ವರ್ಷ ಫೆಬ್ರವರಿಯಲ್ಲಿ ಐಟಿ ನಿಯಮಗಳು, 2021 ರ ಅಧಿಸೂಚನೆಯ ನಂತರ ಭಾರತೀಯ ಯೂಟ್ಯೂಬ್ ಆಧಾರಿತ ಸುದ್ದಿ ಪ್ರಕಟಿಸುವವರ ವಿರುದ್ಧ ಇದೇ ಮೊದಲ ಬಾರಿಗೆ ಕ್ರಮ ತೆಗೆದುಕೊಳ್ಳಲಾಗಿದೆ.
Published On - 5:52 pm, Mon, 25 April 22