‘ಮೋದಿಯ ಜೊತೆಗಿರು ಎಂದಿದ್ದರು ಪ್ರಣಬ್ ಮುಖರ್ಜಿ’; ಬಿಜೆಪಿ ಸೇರಲು ಕಾಂಗ್ರೆಸ್ ನಾಯಕನೇ ಕಾರಣವೆಂದ ಸುವೇಂದು ಅಧಿಕಾರಿ

ತಾವು 2020ರಲ್ಲಿ ಟಿಎಂಸಿ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾಗಲು ದಿವಂಗತ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಸಲಹೆಯೇ ಕಾರಣ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಬಹಿರಂಗಪಡಿಸಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ತಮ್ಮ ರಾಜಕೀಯ ಪಯಣದ ಪ್ರಮುಖ ತಿರುವಿನ ಕುರಿತು ಮಾತನಾಡಿದ ಸುವೇಂದು ಅಧಿಕಾರಿ, ತೃಣಮೂಲ ಕಾಂಗ್ರೆಸ್‌ನಲ್ಲಿ ತಾವು ಎದುರಿಸುತ್ತಿದ್ದ ಬಿಕ್ಕಟ್ಟು ಮತ್ತು ಅಸಮಾಧಾನದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಪ್ರಣಬ್ ಮುಖರ್ಜಿ ಅವರು ನೀಡಿದ ಸಲಹೆಯೇ ತಮ್ಮ ನಿರ್ಧಾರಕ್ಕೆ ಪ್ರೇರಣೆಯಾಯಿತು ಎಂದು ಸ್ಮರಿಸಿಕೊಂಡಿದ್ದಾರೆ.

ಮೋದಿಯ ಜೊತೆಗಿರು ಎಂದಿದ್ದರು ಪ್ರಣಬ್ ಮುಖರ್ಜಿ; ಬಿಜೆಪಿ ಸೇರಲು ಕಾಂಗ್ರೆಸ್ ನಾಯಕನೇ ಕಾರಣವೆಂದ ಸುವೇಂದು ಅಧಿಕಾರಿ
ಸುವೇಂದು ಅಧಿಕಾರಿ
Image Credit source: PTI

Updated on: Nov 25, 2026 | 4:23 PM

ಕೊಲ್ಕತ್ತಾ, ನವೆಂಬರ್ 25: ಭಾರತದ ಮಾಜಿ ರಾಷ್ಟ್ರಪತಿ  ಹಾಗೂ ಕಾಂಗ್ರೆಸ್ ನಾಯಕ ಪ್ರಣಬ್ ಮುಖರ್ಜಿ ಅವರೇ ತನಗೆ ಟಿಎಂಸಿ ತೊರೆದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೈಜೋಡಿಸುವಂತೆ ಸಲಹೆ ನೀಡಿದ್ದರು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಹೇಳಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ದಿವಂಗತ ಕಾಂಗ್ರೆಸ್ ಹಿರಿಯ ನಾಯಕರೊಂದಿಗೆ ನಡೆಸಿದ್ದ ಸಂಭಾಷಣೆಯನ್ನು ಅವರು ಸ್ಮರಿಸಿಕೊಂಡಿದ್ದಾರೆ. ಅಂದಿನ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಪ್ತರಾಗಿದ್ದ ಸುವೇಂದು ಅಧಿಕಾರಿ, ಪ್ರಣಬ್ ಮುಖರ್ಜಿ ನಿಧನರಾದ ಕೆಲವು ತಿಂಗಳ ನಂತರ, ಅಂದರೆ 2020ರಲ್ಲಿ ಟಿಎಂಸಿ ತೊರೆದು ಬಿಜೆಪಿ ಸೇರಿದ್ದರು.

ಮಂಗಳವಾರ ಕೊಲ್ಕತ್ತಾದಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಸುವೇಂದು ಅಧಿಕಾರಿ ಈ ಮಹತ್ವದ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಪ್ರಣಬ್ ಮುಖರ್ಜಿ ಅವರನ್ನು ತಮ್ಮ “ಗುರು, ಮಾರ್ಗದರ್ಶಿ” ಎಂದು ಬಣ್ಣಿಸಿದ ಸುವೇಂದು ಅಧಿಕಾರಿ, ಅವರು ಭಾರತದ ರಾಷ್ಟ್ರಪತಿಯಾದ ನಂತರ ಈ ಸಂಭಾಷಣೆ ನಡೆದಿತ್ತು ಎಂದು ತಿಳಿಸಿದ್ದಾರೆ. “ನನ್ನ ಮೂಲ ಸಲಹೆಗಾರರು ದಿವಂಗತ ಪ್ರಣಬ್ ಮುಖರ್ಜಿ. ಅವರು ರಾಷ್ಟ್ರಪತಿಯಾದ ನಂತರ ನಾನು ರೈಸಿನಾ ಹಿಲ್ಸ್‌ಗೆ (ರಾಷ್ಟ್ರಪತಿ ಭವನ) ಹೋಗಿದ್ದೆ. ಆಗ ಪ್ರಣಬ್ ಮುಖರ್ಜಿಯವರು ನನಗೆ ಬಿಜೆಪಿ ಸೇರುವ ಸಲಹೆ ನೀಡಿದ್ದರು” ಎಂದಿದ್ದಾರೆ.

Loading...

ಇದನ್ನೂ ಓದಿ: ಪ್ರಧಾನಿಯಾಗಲು ಬಯಸಿದ್ದರಾ ಪ್ರಣಬ್ ಮುಖರ್ಜಿ?; ಸೋನಿಯಾ ಗಾಂಧಿ ಆತ್ಮಕತೆಯಲ್ಲಿ ಸ್ಫೋಟಕ ಸಂಗತಿ ಬಯಲು

“ನೀನು ಏನು ಮಾಡಲು ಬಯಸುತ್ತೀಯಾ ಎಂದು ಯೋಚಿಸು. ನೀನು ಕೇವಲ ಒಬ್ಬ ನೌಕರನಾಗಿ ಉಳಿಯಲು ಬಯಸಿದರೆ ಇಲ್ಲೇ ಇರು. ನೀನು ಸ್ವಂತವಾಗಿ ಮುಂದೆ ಸಾಗಲು ಬಯಸಿದರೆ ಮೋದಿಜೀ ಅವರೊಂದಿಗೆ ಇರು’ ಎಂದು ಪ್ರಣಬ್ ಮುಖರ್ಜಿ ಹೇಳಿದ್ದರು ಎಂದು ಸುವೇಂದು ಅಧಿಕಾರಿ ಹೇಳಿದ್ದಾರೆ. ಟಿಎಂಸಿಯ ಆಂತರಿಕ ಕಾರ್ಯವೈಖರಿಯ ಬಗ್ಗೆ ಪ್ರಣಬ್ ಮುಖರ್ಜಿ ಹೊಂದಿದ್ದ ಅಭಿಪ್ರಾಯವನ್ನೂ ಸ್ಮರಿಸಿದ ಸುವೇಂದು ಅಧಿಕಾರಿ, ಅದನ್ನು ಅತ್ತೆ-ಸೋದರಳಿಯನ ಜೋಡಿ ನಡೆಸುತ್ತಿರುವ ಪಕ್ಷ ಎಂದು ಪ್ರಣಬ್ ಟೀಕಿಸಿದ್ದರು ಎಂದಿದ್ದಾರೆ.

ತೃಣಮೂಲ ಕಾಂಗ್ರೆಸ್ ತೊರೆಯುವ ತಮ್ಮ ನಿರ್ಧಾರವನ್ನು ವಿವರಿಸಿದ ಸುವೇಂದು ಅಧಿಕಾರಿ, “ನಾನೂ ಟಿಎಂಸಿಯಲ್ಲೇ ಇದ್ದೆ. ಆದರೆ ನನಗೆ ನೌಕರನಾಗಿ ಉಳಿಯಲು ಇಷ್ಟವಿರಲಿಲ್ಲ, ಹಾಗಾಗಿ ನಾನು ಪಕ್ಷ ಬಿಟ್ಟೆ” ಎಂದು ಹೇಳಿದ್ದಾರೆ.

2012ರಿಂದ 2017ರವರೆಗೆ ಭಾರತದ 13ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ ಪ್ರಣಬ್ ಮುಖರ್ಜಿ, ಸಾಂವಿಧಾನಿಕ ಹುದ್ದೆಗೆ ಆಯ್ಕೆಯಾಗುವ ಮೊದಲು ಕಾಂಗ್ರೆಸ್‌ನ ಅತ್ಯಂತ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದರು. ಅವರು ಆಗಸ್ಟ್ 2020ರಲ್ಲಿ ನಿಧನರಾದರು. ಬೇರೆ ಕಾಂಗ್ರೆಸ್ ನಾಯಕರಿಗಿಂತ ವಿಭಿನ್ನವಾಗಿದ್ದ ಪ್ರಣಬ್ ಮುಖರ್ಜಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಜೊತೆ ಆತ್ಮೀಯ ಸಂಬಂಧ ಹೊಂದಿದ್ದರು. ಇದು ವಿಶೇಷವಾಗಿ ಅವರ ರಾಜಕೀಯ ಜೀವನದ ಅಂತಿಮ ದಿನಗಳಲ್ಲಿ ಕಾಂಗ್ರೆಸ್‌ನ ಕೆಲವರ ಟೀಕೆಗೆ ಗುರಿಯಾಗುವಂತೆ ಮಾಡಿತ್ತು.

ಇದನ್ನೂ ಓದಿ: ರಾಷ್ಟ್ರೀಯ ಭದ್ರತೆಗೆ ಆದ್ಯತೆ; ಕೊಲ್ಕತ್ತಾ ವಿಮಾನ ನಿಲ್ದಾಣದ ಮಸೀದಿಗೆ ಪ್ರವೇಶ ನಿಷೇಧಕ್ಕೆ ಸಿಎಂ ಸುವೇಂದು ಅಧಿಕಾರಿ ಸಮರ್ಥನೆ

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಇತ್ತೀಚೆಗೆ ಪ್ರಣಬ್ ಮುಖರ್ಜಿ ಅವರ ಕುರಿತು ವಿವಾದವನ್ನು ಹುಟ್ಟುಹಾಕಿತ್ತು. ಪ್ರಣಬ್ ಮುಖರ್ಜಿ ಅವರು ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದರು ಎಂದು ಸೋನಿಯಾ ಗಾಂಧಿ ಬರೆದಿದ್ದಕ್ಕೆ ಪ್ರಣಬ್ ಪುತ್ರಿ ಶರ್ಮಿಷ್ಠಾ ಮುಖರ್ಜಿ ತಿರುಗೇಟು ನೀಡಿದ್ದರು. ಇದಕ್ಕೆ ‘ಎಕ್ಸ್’ನಲ್ಲಿ ಪೋಸ್ಟ್ ಮೂಲಕ ಪ್ರಶ್ನಿಸಿದ್ದ ಶರ್ಮಿಷ್ಠಾ, “ಇದರಲ್ಲಿ ಆಘಾತ ಪಡುವಂತಹದ್ದು ಏನಿದೆ? ವಂಶಪಾರಂಪರ್ಯದ ಹಕ್ಕುಗಳಿಗಿಂತ ಕಠಿಣ ಪರಿಶ್ರಮದ ಮೂಲಕ ಪ್ರಣಬ್ ಮುಖರ್ಜಿ ತಮ್ಮ ಸ್ಥಾನಗಳನ್ನು ಗಳಿಸಿದ್ದರು” ಎಂದು ಹೇಳಿದ್ದರು.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:15 pm, Wed, 25 November 26

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us