ಪಂಜಾಬ್ನಲ್ಲಿ ಪ್ರಧಾನಮಂತ್ರಿ ಭದ್ರತೆಯಲ್ಲಿ ಲೋಪವುಂಟಾದ (PM Security Breach in Punjab) ಪ್ರಕರಣಕ್ಕೆ ಸಂಬಂಧಪಟ್ಟಂತೆ ಸದ್ಯ ನಡೆಯುತ್ತಿರುವ ಎಲ್ಲ ರೀತಿಯ ತನಿಖೆಯನ್ನೂ ತಕ್ಷಣವೇ ನಿಲ್ಲಿಸಿ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ (Supreme Court CJI N.V.Ramana) ಆದೇಶಿಸಿದ್ದಾರೆ. ಇಂದು ಸಿಜೆಐ ನೇತೃತ್ವದ ಪೀಠ ಅರ್ಜಿ ವಿಚಾರಣೆ ನಡೆಸಿತ್ತು. ನಂತರ ತೀರ್ಪು ಪ್ರಕಟಿಸಿದ ಎನ್.ವಿ.ರಮಣ, ಪಂಜಾಬ್ನಲ್ಲಾದ ಭದ್ರತಾ ಲೋಪದ ಬಗ್ಗೆ ತನಿಖೆ ನಡೆಸಲು ನಾವು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದ ನಾಲ್ವರ ಸಮಿತಿ ರಚಿಸುತ್ತಿದ್ದೇವೆ. ಈ ಸಮಿತಿಯಲ್ಲಿ ಚಂಡಿಗಢ್ ಡಿಜಿಪಿ, ರಾಷ್ಟ್ರೀಯ ತನಿಖಾ ದಳ (NIA)ದ ಐಜಿ, ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ ಮತ್ತು ಪಂಜಾಬ್ನ ಹೆಚ್ಚುವರಿ ಡಿಜಿ ಇರಲಿದ್ದಾರೆ. ಈ ನಾಲ್ವರ ಸಮಿತಿ ತನಿಖೆ ನಡೆಸಿ ನಮಗೆ ವರದಿ ಕೊಡಲಿದೆ ಎಂದು ತಿಳಿಸಿದ್ದಾರೆ.
ಇಂದು ಸುಪ್ರೀಂಕೋರ್ಟ್ ಲಾಯರ್ಸ್ ವೈಸ್ ಎಂಬ ಎನ್ಜಿಒ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಇಂದಿನ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದೆ. ಪಸ್ತುತ ಕೇಸ್ನ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ನಡೆಯುತ್ತಿರುವಾಗ, ಅದು ಹೇಗೆ ನೀವು ಪಂಜಾಬ್ ಸರ್ಕಾರದ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಕೊಟ್ಟಿರಿ ಎಂದು ಅಸಮಾಧಾನದಿಂದ ಪ್ರಶ್ನಿಸಿದೆ. ಪ್ರಧಾನಿ ಭದ್ರತೆ ಲೋಪಕ್ಕೆ ಸಂಬಂಧಪಟ್ಟಂತೆ ನೀವೇನು ಅಂದುಕೊಂಡಿದ್ದೀರೋ ಅದೇ ಅಭಿಪ್ರಾಯವನ್ನು ನ್ಯಾಯಾಲಯಕ್ಕೆ ಕೊಡಲು ಪ್ರಯತ್ನಿಸುತ್ತಿದ್ದೀರಿ. ನೀವು ಹೇಳಿದ್ದೇ ಅಂತಿಮ ಅಂದಮೇಲೆ ಕೋರ್ಟ್ಗ್ಯಾಕೆ ಬಂದಿರಿ ಎಂದು ನ್ಯಾಯಾಧೀಶರಾದ ಹಿಮಾ ಕೊಹ್ಲಿ ಖಾರವಾಗಿಯೇ ಕೇಂದ್ರಕ್ಕೆ ಪ್ರಶ್ನಿಸಿದ್ದಾರೆ. ಹಾಗೇ, ಪೀಠದಲ್ಲಿದ್ದ ಇನ್ನೊಬ್ಬ ನ್ಯಾಯಮೂರ್ತಿ ಸೂರ್ಯಕಾಂತ್, ನೀವು ಪಂಜಾಬ್ ಸರ್ಕಾರಕ್ಕೆ ಕಳಿಸಿದ ಶೋಕಾಸ್ ನೋಟಿಸ್ನಲ್ಲಿ ವ್ಯತಿರಿಕ್ತ ಅಂಶಗಳಿವೆ. ಅದರಲ್ಲಿ, ಲೋಪದ ಬಗ್ಗೆ ತನಿಖೆ ನಡೆಸಲು ನೀವು ತನಿಖಾ ಸಮಿತಿ ರಚಿಸುತ್ತಿರುವುದಾಗಿ ಒಂದೆಡೆ ಹೇಳುತ್ತೀರಿ, ಇನ್ನೊಂದೆಡೆ ಪಂಜಾಬ್ ಸರ್ಕಾರದ್ದೇ ತಪ್ಪು ಎನ್ನುತ್ತೀರಿ. ನೀವು ವಿಚಾರಣೆ ಯಾವಾಗ ನಡೆಸಿದಿರಿ? ತಪ್ಪಿತಸ್ಥರು ಯಾರು? ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಕೋರ್ಟ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸರ್ಕಾರ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪ್ರಧಾನಿಯವರು ಪಂಜಾಬ್ಗೆ ಭೇಟಿ ನೀಡಿದಾಗ ಉಂಟಾದ ಭದ್ರತಾ ಲೋಪಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸಮಿತಿಯೇ ಪರಿಶೀಲಿಸಿ ಕೋರ್ಟ್ಗೆ ವರದಿ ಸಲ್ಲಿಸಬಹುದು ಎಂದು ಹೇಳಿದರು. ಆದರೆ ಕೇಂದ್ರದ ತನಿಖೆ ಬಗ್ಗೆ ಪಂಜಾಬ್ ಸರ್ಕಾರವನ್ನು ಪ್ರತಿನಿಧಿಸಿದ ಅಡ್ವೋಕೇಟ್ ಜನರಲ್ಲಿ ಅನುಮಾನ ವ್ಯಕ್ತಪಡಿಸಿ, ಸ್ವತಂತ್ರ ತನಿಖೆ ನಡೆಯಬೇಕು ಎಂದು ಮನವಿ ಮಾಡಿದ್ದರು. ಒಟ್ಟಾರೆ ವಾದ-ಪ್ರತಿವಾದವನ್ನು ಆಲಿಸಿದ ಸಿಜೆಐ ಎನ್.ವಿ.ರಮಣ, ನಾವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಯಾರೂ ಅಂದುಕೊಳ್ಳಬೇಕಾಗಿಲ್ಲ. ಪ್ರಸ್ತುತ ಕೇಸ್ನ್ನು ಇನ್ನಷ್ಟು ಸಂಕೀರ್ಣಗೊಳಿಸುವುದಿಲ್ಲ. ನಾವು ನಾಲ್ಕು ಸದಸ್ಯರನ್ನು ಒಳಗೊಂಡ ಸಮಿತಿ ರಚಿಸುತ್ತೇವೆ. ಹೀಗಾಗಿ ಸದ್ಯ ನಡೆಸಲಾಗುತ್ತಿರುವ ಎಲ್ಲ ರೀತಿಯ ತನಿಖೆಗಳನ್ನೂ ಇಲ್ಲಿಗೇ ನಿಲ್ಲಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: ಪಂಜಾಬ್ನಲ್ಲಿ ಪ್ರಧಾನಿ ಮೋದಿ ಭದ್ರತೆ ಲೋಪ: ಇಂದು ಸಿಜೆಐ ಎನ್ವಿ ರಮಣ ನೇತೃತ್ವದ ಪೀಠದಿಂದ ಅರ್ಜಿ ವಿಚಾರಣೆ
Published On - 12:25 pm, Mon, 10 January 22