ತಮಿಳುನಾಡಿನ ಕೂನೂರ್ನಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ಪತನದ ಪ್ರಕರಣವನ್ನು ಸುಪ್ರೀಂಕೋರ್ಟ್ ಹಿರಿಯ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ರಾಜ್ಯ ಸಭಾ ಸದಸ್ಯ ಸುಬ್ರಹ್ಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ. ಡಿ.8ರಂದು ಸೂಲೂರ್ನಿಂದ ವೆಲ್ಲಿಂಗ್ಟನ್ಗೆ ಹೊರಟಿದ್ದ ಸೇನಾ ವಿಮಾನ ಕೂನೂರ್ ಬಳಿ ಕಟ್ಟೇರಿ ಗ್ರಾಮದಲ್ಲಿ ಪತನಗೊಂಡಿತ್ತು. ಇದರಲ್ಲಿ ಪ್ರಯಾಣ ಮಾಡುತ್ತಿದ್ದ ಭಾರತೀಯ ಸೇನಾ ಸಿಡಿಎಸ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ಮತ್ತು ಇತರ 11 ಸೇನಾ ಅಧಿಕಾರಿಗಳು ಮೃತಪಟ್ಟಿದ್ದಾರೆ. ಸದ್ಯ ಎಲ್ಲರದ್ದೂ ಒಂದೇ ಪ್ರಶ್ನೆ, ಅಂಥ ವಿಐಪಿಗಳು ಪ್ರಯಾಣಿಸುವ ಹೆಲಿಕಾಪ್ಟರ್, ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾಗ್ಯೂ ಕೂಡ ಪತನವಾಗಿದ್ದು ಹೇಗೆ ಎಂಬುದು.
ಇದೀಗ ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಘಟನೆಯನ್ನು ಸರಿಯಾಗಿ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದೊಂದು ಶಾಕಿಂಗ್ ಘಟನೆ ಮತ್ತು ರಾಷ್ಟ್ರೀಯ ಭದ್ರತೆಗೆ ಎಚ್ಚರಿಕೆ ನೀಡುವಂಥ ಪ್ರಕರಣ ಎಂದಿದ್ದಾರೆ. ಹೆಲಿಕಾಪ್ಟರ್ ಪತನಕ್ಕೆ ಸಂಬಂಧಪಟ್ಟಂತೆ ಇನ್ನೂ ಕೂಡ ಅಂತಿಮ ವರದಿ ಬಂದಿಲ್ಲ. ಈಗ ಏನು ಹೇಳುವುದೂ ಕಷ್ಟವಾಗುತ್ತದೆ. ಆದರೆ ತಮಿಳುನಾಡಿನಂಥ ಸುರಕ್ಷಿತ ಸೇನಾ ವಲಯದಲ್ಲೂ ಕೂಡ ಸೇನಾ ವಿಮಾನವೊಂದು ಪತನಗೊಂಡಿದ್ದು ಅಚ್ಚರಿ ತಂದಿದೆ ಎಂದು ಅವರು ಹೇಳಿದ್ದಾರೆ. ಘಟನೆಗೆ ಸಂಬಂಧಪಟ್ಟಂತೆ ತುಂಬ ಗಂಭೀರವಾಗಿ ತನಿಖೆ ನಡೆಯಲೇಬೇಕು. ಅದರಲ್ಲೂ ಸುಪ್ರೀಂಕೋರ್ಟ್ ಹಿರಿಯ ನ್ಯಾಯವಾದಿಯ ನೇತೃತ್ವದಲ್ಲಿ ತನಿಖೆ ನಡೆಯಬೇಕು. ಅದನ್ನು ಸಾರ್ವಜನಿಕರ ಎದುರು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಸದ್ಯ ಎಲ್ಲರಿಗೂ ಬಹುದೊಡ್ಡ ಪ್ರಶ್ನೆ ಇದೇ ಆಗಿದೆ. ಭಾರತೀಯ ವಾಯುಸೇನೆಯಲ್ಲಿ ಅತ್ಯಂತ ಬಲಿಷ್ಠವಾದ ಹೆಲಿಕಾಪ್ಟರ್ ಎನಿಸಿಕೊಂಡಿದ್ದ ಎಂಐ-17ವಿ5 ಪತನವಾಗಿದ್ದು ಹೇಗೆ ಎಂಬುದು. ಈ ಹೆಲಿಕಾಪ್ಟರ್ನಲ್ಲಿದ್ದ 14 ಮಂದಿಯಲ್ಲಿ 13 ಸಿಬ್ಬಂದಿ ಮೃತಪಟ್ಟಿದ್ದಾರೆ. ಉಳಿದಿರುವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಹೆಲಿಕಾಪ್ಟರ್ನ ಬ್ಲ್ಯಾಕ್ ಬಾಕ್ಸ್ ಸಿಕ್ಕಿದ್ದು, ಅದರ ಮೂಲಕ ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಹುನ್ನೂರ ಬಸವ ಗುರುಕುಲದ ತತ್ವ ಪ್ರವಚನಕಾರ ಡಾ ಈಶ್ವರ ಮಂಟೂರ ನಿಧನ