ಹುನ್ನೂರ ಬಸವ ಗುರುಕುಲದ ತತ್ವ ಪ್ರವಚನಕಾರ ಡಾ ಈಶ್ವರ ಮಂಟೂರ ನಿಧನ

ಗುರುಕುಲ ಯೋಗಾಶ್ರಮಕ್ಕೆ ಭೇಟಿ ನೀಡಿದ ಜಮಖಂಡಿ ಉಪವಿಭಾಗಾಧಿಕಾರಿ ಸಿದ್ದು ಹುಲ್ಲೊಳ್ಳಿ ಯೋಗಾಶ್ರಮದ ಭಕ್ತರು, ಗ್ರಾಮದ ಹಿರಿಯರ ಜೊತೆ ಅಂತ್ಯ ಸಂಸ್ಕಾರದ ವಿಧಿವಿಧಾನಗಳ ಕುರಿತು ಮಾತುಕತೆ ನಡೆಸಿದರು

ಹುನ್ನೂರ ಬಸವ ಗುರುಕುಲದ ತತ್ವ ಪ್ರವಚನಕಾರ ಡಾ ಈಶ್ವರ ಮಂಟೂರ ನಿಧನ
ಬಸವತತ್ವ ಪ್ರವಚನಕಾರ ಡಾ.ಈಶ್ವರ ಮಂಟೂರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 09, 2021 | 4:43 PM

ಬಾಗಲಕೋಟೆ: ಬಸವತತ್ವ ಪ್ರಚಾರಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದ ಶರಣ ಡಾ.ಈಶ್ವರ ಮಂಟೂರ (48) ಗುರುವಾರ ಶಿವೈಕ್ಯರಾಗಿದ್ದಾರೆ. ಗುರೂಜಿ ಕೈಲಾಸವಾಸಿಗಳಾದ ವಿಷಯ ತಿಳಿದ ನಂತರ ಹುನ್ನೂರ ಬಸವ ಜ್ಞಾನ ಗುರುಕುಲ ಯೋಗಾಶ್ರಮಕ್ಕೆ ಭೇಟಿ ನೀಡಿದ ಜಮಖಂಡಿ ಉಪವಿಭಾಗಾಧಿಕಾರಿ ಸಿದ್ದು ಹುಲ್ಲೊಳ್ಳಿ ಯೋಗಾಶ್ರಮದ ಭಕ್ತರು, ಗ್ರಾಮದ ಹಿರಿಯರ ಜೊತೆ ಅಂತ್ಯ ಸಂಸ್ಕಾರದ ವಿಧಿವಿಧಾನಗಳ ಕುರಿತು ಮಾತುಕತೆ ನಡೆಸಿದರು. ನಾಳೆ (ಡಿ 10) ಬೆಳಿಗ್ಗೆ 11 ಗಂಟೆಗೆ ಯೋಗಾಶ್ರಮದಲ್ಲಿ ಗುರುಜಿ ಅಂತ್ಯಸಂಸ್ಕಾರದ ವಿಧಿಗಳು ನೆರವೇರಲಿವೆ. ಸ್ವತಃ ಈಶ್ವರ ಮಂಟೂರ ಅವರೇ ಸಮಾಧಿ ಸ್ಥಳವನ್ನು ಗುರುತಿಸಿದ್ದರು. ಅಲ್ಲಿಯೇ ಅಂತ್ಯಸಂಸ್ಕಾರ ನಡೆಯಲಿದೆ.

ಗೃಹಸ್ಥಾಶ್ರಮಿಗಳಾಗಿಯೂ ಅಧ್ಯಾತ್ಮದ ಒಲವು ಬೆಳೆಸಿಕೊಂಡಿದ್ದ ಮಂಟೂರ ಅವರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿಸಿದ್ದಾರೆ. ತಮ್ಮ ವಾಕ್​ಚಾತುರ್ಯ ಮತ್ತು ಮನಮುಟ್ಟುವ ಕಥನ ಶೈಲಿಯಿಂದ ಅವರು ಜನಪ್ರಿಯರಾಗಿದ್ದರು. ಬುಧವಾರ ರಾತ್ರಿ ಗುರೂಜಿ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಅಸ್ವಸ್ಥರಾಗಿದ್ದ ಅವರು ಜಮಖಂಡಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆಗೆ ತೆರಳುವ ವೇಳೆ ಮೃತಪಟ್ಟರು. ಅವರಿಗೆ ಹೃದಯ ಸ್ತಂಭನ ಆಗಿರಬಹುದು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಬಸವ ಜ್ಞಾನ ಗುರುಕುಲ ಯೋಗಾಶ್ರಮದ ಅಧ್ಯಕ್ಷರೂ ಆಗಿದ್ದ ಡಾ.ಈಶ್ವರ ಮಂಟೂರು ಪಾರ್ಥಿವ ಶರೀರವನ್ನು ಆಶ್ರಮಕ್ಕೆ ಕೊಂಡೊಯ್ಯಲಾಯಿತು. ಜಮಖಂಡಿ ತಾಲ್ಲೂಕಿನ ಹುನ್ನೂರು-ಮಧುರಖಂಡಿ ಮಾರ್ಗದಲ್ಲಿ ಇರುವ ಆಶ್ರಮದಲ್ಲಿ ಗುರುಗಳ ಪಾರ್ಥಿವ ಶರೀರ ಕಂಡು ಸಂಬಂಧಿಕರು, ಆಶ್ರಮದ ಮಕ್ಕಳ ಕಣ್ಣೀರು ಹಾಕಿದರು.

ಕವಿ, ಚಿಂತಕ, ಪ್ರಚಾರಕ ಡಾ.ಈಶ್ವರ ಮಂಟೂರ ಅವರು ಬಸವ ತತ್ವ ಪ್ರಚಾರಕರಾಗಿ, ಕವಿಯಾಗಿ, ಚಿಂತಕರಾಗಿ, ಅನುಭಾವಿ ಪ್ರವಚನಕಾರರಾಗಿ, ಸಾಹಿತಿಗಳಾಗಿ ಜನಪ್ರಿಯಾಗಿದ್ದರು. ‘ಪ್ರಜಾವಾಣಿ’ ದಿನಪತ್ರಿಕೆಯಲ್ಲಿ ‘ವಚನಾಮೃತ’ ಅಂಕಣ ಬರೆಯುತ್ತಿದ್ದರು. ಹುನ್ನೂರಿನ ನೇಕಾರ ಕುಟುಂಬದಲ್ಲಿ ಮಾರ್ಚ್ 23, 1972ರಂದು ಜನಿಸಿದರು. ತಂದೆ ಶ್ರೀಶೈಲಪ್ಪ, ತಾಯಿ ಅನ್ನಪೂರ್ಣ. ‘ರಾಗರಶ್ಮಿ’ ಎಂಬ ಜಾನಪದ ಕಲಾವಿದರ ಬಳಗ ಕಟ್ಟಿಕೊಂಡು ಹಳ್ಳಿಗೆ ಸಂಚರಿಸುತ್ತಿದ್ದರು. ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾದ ಗಡಿಭಾಗ, ಬಹರೇನ್, ದುಬೈ ರಾಷ್ಟ್ರಗಳಲ್ಲೂ ವಚನ ಪ್ರವಚನ ಮಾಡಿದ್ದರು.

ಗೀತ ರಚನಕಾರರು ಆಗಿದ್ದ ಅವರ ಸಾಹಿತ್ಯವಿರುವ, ಬಸವಭಾವ ಗೀತೆಗಳು, ಬಸವಭಾವ ಪೂಜೆ, ವಚನವಂದನೆ, ತವರಿನ ತಾವರೆ ಸೇರಿದಂತೆ ಹತ್ತಾರು ಹಾಡಿನ ಸಂಗ್ರಹಗಳು ಜನಪ್ರಿಯಗೊಂಡಿದ್ದವು. ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ಮೂರು ದಿನ ಕಾಲ ಶರಣ ಸಂಸ್ಕತಿ ಉತ್ಸವ ಹಾಗೂ ಜಾನಪದ ಕಲಾಮಹೋತ್ಸವ ಆಯೋಜಿಸುತ್ತಿದ್ದರು.

ಡಾ.ಈಶ್ವರ ಮಂಟೂರ ನಿಧನಕ್ಕೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: ಅಂದು ಪಾಕ್​ ಸೇನಾ ಮುಖ್ಯಸ್ಥ ಬಜ್ವಾರನ್ನು ತಬ್ಬಿದ್ದ ನವಜೋತ್​ ಸಿಂಗ್ ಸಿಧು, ಇಂದು ಬಿಪಿನ್​ ರಾವತ್​ ನಿಧನಕ್ಕೆ ಸಂತಾಪ ಸೂಚಿಸಿಲ್ಲ-ಬಿಜೆಪಿ ಆಕ್ಷೇಪ ಇದನ್ನೂ ಓದಿ: ಮೂರು ಕೃಷಿ ಕಾಯ್ದೆಗಳನ್ನು ತೀವ್ರವಾಗಿ ಟೀಕಿಸುತ್ತಿದ್ದ ಶಿರೋಮಣಿ ಅಕಾಲಿ ದಳದ ನಾಯಕ ಮಂಜಿಂದರ್​ ಸಿಂಗ್​ ಸಿರ್ಸಾ ಬಿಜೆಪಿ ಸೇರ್ಪಡೆ