Interview: ಜಮ್ಮು ಕಾಶ್ಮೀರದಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ ಮೋದಿ ಮಾಸ್ಟರ್​ ಪ್ಲಾನ್ ಜಿ20 ಸಭೆ; ಸಚಿವ ಕಿಶನ್ ರೆಡ್ಡಿ

ಕಾಶ್ಮೀರದಲ್ಲಿ ಜಿ20 ಸಭೆಯ ಯಶಸ್ಸಿನ ಕುರಿತು ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಈಶಾನ್ಯ ಪ್ರದೇಶ ಅಭಿವೃದ್ಧಿ ಸಚಿವ ಜಿ ಕಿಶನ್ ರೆಡ್ಡಿ ಅವರು ‘ಟಿವಿ9’ಗೆ ನೀಡಿದ ಸಂದರ್ಶನದಲ್ಲಿ ಮಕ್ತವಾಗಿ ಮಾತನಾಡಿದ್ದಾರೆ.

Interview: ಜಮ್ಮು ಕಾಶ್ಮೀರದಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ ಮೋದಿ ಮಾಸ್ಟರ್​ ಪ್ಲಾನ್ ಜಿ20 ಸಭೆ; ಸಚಿವ ಕಿಶನ್ ರೆಡ್ಡಿ
ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಈಶಾನ್ಯ ಪ್ರದೇಶ ಅಭಿವೃದ್ಧಿ ಸಚಿವ ಜಿ ಕಿಶನ್ ರೆಡ್ಡಿ
Follow us
Ganapathi Sharma
|

Updated on: May 29, 2023 | 8:00 PM

ಜಿ20 ಅಧ್ಯಕ್ಷ ಸ್ಥಾನ ಹೊಂದಿರುವ ಭಾರತ ದೇಶದಾದ್ಯಂತ ಸರಣಿ ಸಭೆಗಳನ್ನು ನಡೆಸುತ್ತಿದೆ. ಬಹಳ ಮಹತ್ವದ ಕ್ರಮವೊಂದರಲ್ಲಿ, ಕಾಶ್ಮೀರದಲ್ಲಿ (Kashmir) ಜಿ20 ಸಭೆ (G 20) ಆಯೋಜಿಸಿ ಯಶಸ್ಸನ್ನೂ ಸಾಧಿಸಿದೆ. ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಂದಿನಿಂದಲೂ ಜಮ್ಮು ಮತ್ತು ಕಾಶ್ಮೀರದ (Jammu and Kashmir) ಬಗ್ಗೆ ವಿಶೇಷ ಕಾಳಜಿ ವಹಿಸಿದೆ. 370ನೇ ವಿಧಿ ರದ್ದತಿ, ಭಯೋತ್ಪಾದನೆ ನಿರ್ಮೂಲನೆಗೆ ಕ್ರಮ, ತೀವ್ರವಾದದ ನಿಯಂತ್ರಣದ ಜತೆಗೆ ಮೂಲಸೌಕರ್ಯ, ಪ್ರವಾಸೋದ್ಯಮ ಅಭಿವೃದ್ಧಿಗೆ ಹಲವು ಕ್ರಮಗಳನ್ನು ಕೈಗೊಂಡಿದೆ. ಇದೀಗ ಜಿ20 ಸಭೆಯನ್ನೂ ನಡೆಸುವ ಮೂಲಕ ಆ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಕ್ರಮ ಕೈಗೊಂಡಿದೆ. ಕಾಶ್ಮೀರದಲ್ಲಿ ಜಿ20 ಸಭೆಯ ಯಶಸ್ಸಿನ ಕುರಿತು ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಈಶಾನ್ಯ ಪ್ರದೇಶ ಅಭಿವೃದ್ಧಿ ಸಚಿವ ಜಿ ಕಿಶನ್ ರೆಡ್ಡಿ (G Kishan Reddy) ಅವರು ‘ಟಿವಿ9’ಗೆ ನೀಡಿದ ಸಂದರ್ಶನದಲ್ಲಿ ಮಕ್ತವಾಗಿ ಮಾತನಾಡಿದ್ದಾರೆ.

ಕಾಶ್ಮೀರದಲ್ಲಿ ಜಿ20 ಸಭೆ ಆಯೋಜಿಸಿರುವುದು ಎಷ್ಟರ ಮಟ್ಟಿಗೆ ಐತಿಹಾಸಿಕ, ಮಹತ್ವಪೂರ್ಣವಾಗಿದೆ?

ಭಾರತದ ಮಟ್ಟಿಗೆ ಜಿ20 ದೇಶಗಳಲ್ಲಿ ಮಹತ್ವದ ಸ್ಥಾನ ಇದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರೂ ಪ್ರಮುಖ ಕಾರಣ. ಈ ಮೊದಲೆಲ್ಲ ಯಾವುದೇ ದೇಶದಲ್ಲಿ ಜಿ20 ಸಭೆ ನಡೆದರೂ ಆಯಾ ರಾಷ್ಟ್ರದ ರಾಜಧಾನಿಯಲ್ಲೇ ನಡೆಯುತ್ತಿತ್ತು. ಇದೇ ಮೊದಲ ಬಾರಿಗೆ ಮೋದಿ ಅವರು ಒಂದು ದೃಷ್ಟಿಕೋನ ಇಟ್ಟುಕೊಂಡು ದೇಶದ ವಿವಿಧೆಡೆಗಳಲ್ಲಿ ಸಭೆಗಳನ್ನು ಆಯೋಜಿಸುವಂತೆ ನಿರ್ದೇಶನ ನೀಡಿದರು. 56 ನಗರಗಳಲ್ಲಿ 250ಕ್ಕೂ ಹೆಚ್ಚು ಸಭೆಗಳು ಈಗಾಗಲೇ ನಡೆದಿವೆ. 46 ಸೆಕ್ಟರ್​​ಗಳಲ್ಲಿ ಈ ಸಭೆಗಳು ನಡೆದಿವೆ. ಇದರಿಂದ ಪ್ರವಾಸೋದ್ಯಮಕ್ಕೆ ಬಹಳ ಪ್ರಯೋಜನವಾಗಿದೆ. ಅಜೆಂಡಾಗಳ ಚರ್ಚೆಯ ಜತೆ ಜತೆಗೇ ಪ್ರವಾಸೋದ್ಯಮಕ್ಕೆ ಉತ್ತೇಜನ, ಸ್ಥಳೀಯ ಸಂಸ್ಕೃತಿ, ಸಾಹಿತ್ಯ, ಆಹಾರ-ವಿಹಾರದ ಪರಿಚಯ ಜಿ20 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳಿಗೆ ಆಗುವಂತಾಯಿತು. ದೇಶದಲ್ಲಿ ಸಾವಿರಾರು ಸ್ಮಾರಕಗಳಿವೆ.

‘ಅತಿಥಿ ದೇವೋ ಭವ’ ಎಂಬ ನಮ್ಮ ಸಂಸ್ಕೃತಿಗೆ ಪೂರಕವಾಗಿ ದೇಶದ ವಿವಿಧ ಕಡೆಗಳಲ್ಲಿ ಜಿ20 ಸದಸ್ಯ ರಾಷ್ಟ್ರಗಳ ಗಣ್ಯರನ್ನು ಸತ್ಕರಿಸಲಾಯಿತು. ಆದರದಿಂದ ಬರಮಾಡಿಕೊಂಡು ಉಪಚರಿಸಲಾಯಿತು. ವಿವಿಧೆಡೆಗಳಲ್ಲಿ ಸಭೆಗಳನ್ನು ಆಯೋಜಿಸಿದ್ದರಿಂದ ವಿದೇಶಗಳ ಗಣ್ಯರಿಗೆ ಭಾರತವು ಎಷ್ಟು ಐತಿಹಾಸಿಕ ದೇಶ ಎಂಬುದನ್ನು ಮನವರಿಕೆ ಮಾಡಿಕೊಟ್ಟಂತಾಯಿತು. ತಮ್ಮ ದೇಶಗಳಿಗೆ ಹಿಂತಿರುಗುವ ಅವರು ಅಲ್ಲಿ ಭಾರತದ ವೈವಿಧ್ಯತೆಯನ್ನು, ಹೂಡಿಕೆ ಸಾಧ್ಯತೆಗಳನ್ನು ಮನವರಿಕೆ ಮಾಡಿಕೊಡುವುದರಿಂದ ಅದು ಹೂಡಿಕೆ ದೃಷ್ಟಿಯಿಂದ ಭಾರತಕ್ಕೆ ಉತ್ತಮವಾಗಿದೆ.

ಜಮ್ಮು-ಕಾಶ್ಮೀರದ ಬಗ್ಗೆ ಮೋದಿ ಸರ್ಕಾರ ಹೆಚ್ಚು ಆಸಕ್ತಿ ವಹಿಸಿದೆ. 370ನೇ ವಿಧಿ ರದ್ದತಿ, ಮೂಲಸೌಕರ್ಯ ವೃದ್ಧಿ ಸೇರಿದಂತೆ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಜಿ20 ಸಭೆಗೆ ಪೂರ್ವಸಿದ್ಧತೆಗಳು ಹೇಗಿದ್ದವು?

ಜಮ್ಮು ಮತ್ತು ಕಾಶ್ಮೀರವು ನಮ್ಮ ರಾಜನೀತಿಯಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಹಿಂದೆಲ್ಲ ಅಲ್ಲಿ ಕೇವಲ ಯುದ್ಧ, ಎನ್​ಕೌಂಟರ್, ಭಯೋತ್ಪಾದನೆ, ಪ್ರತಿಭಟನೆ, ಕರ್ಫ್ಯೂ ಇತ್ಯಾದಿ ವಿಚಾರಗಳೇ ಹೆಚ್ಚು ಸದ್ದು ಮಾಡುತ್ತಿದ್ದವು. ಸಾವಿರಾರು ಮಂದಿ ಸಂಕಷ್ಟಕ್ಕೆ ಸಿಲುಕಿದ್ದರು. ಜನರು ಕಷ್ಟದಲ್ಲಿ ಜೀವನ ಮಾಡಬೇಕಾಗಿತ್ತು. ದುಡಿಮೆ ಇರುತ್ತಿರಲಿಲ್ಲ, ಉದ್ಯೋಗ ದೊರೆಯುತ್ತಿರಲಿಲ್ಲ. ಗ್ರಾಮ ಪಂಚಾಯಿತಿ ಚುನಾವಣೆಯೂ ನಡೆಯುತ್ತಿರಲಿಲ್ಲ. ಆದರೆ, ಇಂದು ಎಲ್ಲವೂ ಸುವ್ಯವಸ್ಥಿತವಾಗಿದೆ. ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲಾಗಿದೆ. ಜನ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿದ್ದಾರೆ.

ಹಿಂದೆ ಮೂಲಸೌಕರ್ಯ ಯೋಜನೆಗಳೆಲ್ಲ ಕೇವಲ ದಾಖಲೆಗಷ್ಟೇ ಸೀಮಿತವಾಗಿತ್ತು. ಹಣವನ್ನು ಮಧ್ಯವರ್ತಿಗಳೇ ಕಬಳಿಸುತ್ತಿದ್ದರು. ವಾಸ್ತವದಲ್ಲಿ ಯಾವುದೇ ಅಭಿವೃದ್ಧಿ ಆಗುತ್ತಿರಲಿಲ್ಲ. ಆದರೆ ಇಂದು ಮೋದಿ ಸರ್ಕಾರ ಪ್ರತಿ ಗ್ರಾಮ ಪಂಚಾಯಿತಿಯ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುತ್ತಿದೆ.

ಇದನ್ನೂ ಓದಿ: ಬಜರಂಗದಳದವರು ಏನು ಟೆರರಿಸ್ಟ್​ಗಳಾ? ಕೇಂದ್ರ ಸಚಿವ ಕಿಶನ್ ರೆಡ್ಡಿ ಪ್ರಶ್ನೆ

ರೈಲ್ವೆ ಹಳಿಗಳನ್ನು ನಿರ್ಮಿಸಲಾಗುತ್ತಿದೆ. ವಿಶ್ವದ ಅತಿದೊಡ್ಡ ರೈಲ್ವೆ ಪಿಲ್ಲರ್ ಜಮ್ಮು-ಕಾಶ್ಮೀರದಲ್ಲಿ ನಿರ್ಮಾಣವಾಗುತ್ತಿದೆ. ಸುರಂಗ ಮಾರ್ಗಗಳ ನಿರ್ಮಾಣವೂ ಆಗುತ್ತಿದೆ. ಮೋದಿ ಸರ್ಕಾರ ಜಮ್ಮು-ಕಾಶ್ಮೀರದ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಗಮನಹರಿಸುತ್ತಿರುವುದಕ್ಕೆ ಇದು ಸಾಕ್ಷಿ. ಪುಲ್ವಾಮಾದಿಂದ ಶ್ರೀನಗರದ ವರೆಗೆ 15 ಕಿಲೋ ಮೀಟರ್ ವ್ಯಾಪ್ತಿಯ ಸುರಂಗ ಮಾರ್ಗ 5000 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ಯೋಜನೆ 40 ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಈಗ ಕಾಮಗಾರಿ ಆರಂಭವಾಗಿದೆ. ವೇಗವಾಗಿ ಸಾಗುತ್ತಿದೆ. ಶೇ 50ರಷ್ಟು ಕಾಮಗಾರಿ ಮುಗಿದಿದೆ. 2026ಕ್ಕೆ ಯೋಜನೆ ಪೂರ್ಣಗೊಳ್ಳಲಿದೆ ಎಂಬ ಬಗ್ಗೆ ವಿಶ್ವಾಸವಿದೆ.

ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿಹೊಂದುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಆದಾಯ ಅಲ್ಲಿನ ಜಿಡಿಪಿಯ ಶೇ 7ರಷ್ಟು ಪ್ರವಾಸೋದ್ಯಮದಿಂದ ಬಂದಿದೆ. ಪ್ರವಾಸೋದ್ಯಮದಲ್ಲಿ ವಿಫುಲ ಅವಕಾಶವಿದೆ. ಚೀನಾ ಹೊರತುಪಡಿಸಿ ಎಲ್ಲ ಜಿ20 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಇಲ್ಲಿಗೆ ಬಂದಿದ್ದಾರೆ. ಜಿ20 ಸಭೆಗೆ ಬಂದ ಎಲ್ಲ ಪ್ರತಿನಿಧಿಗಳು ಅವರ ದೇಶಗಳಲ್ಲಿ ಶ್ರೀನಗರದ ಬಗ್ಗೆ, ಇಲ್ಲಿನ ಸೌಂದರ್ಯದ ಬಗ್ಗೆ ಪ್ರಚಾರ ಮಾಡಿಯೇ ಮಾಡುತ್ತಾರೆ.

ಮೋದಿ ಸರ್ಕಾರಕ್ಕೆ 9 ವರ್ಷಗಳಾಗಿವೆ. ಸರ್ಕಾರದಲ್ಲಿ ನೀವು ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದೀರಿ. ಭಾರತಕ್ಕೆ ಹೊಸ ಆಯಾಮ ಕಲ್ಪಿಸುವಲ್ಲಿ ಮೋದಿ ಸರ್ಕಾರದ ಕೊಡುಗೆಗಳೇನು?

ಕೇವಲ ಒಂದು ಕ್ಷೇತ್ರವಲ್ಲ, ಎಲ್ಲ ಕ್ಷೇತ್ರಗಳಲ್ಲಿಯೂ ಒಂದು ಬದಲಾವಣೆ, ನಿರ್ದಿಷ್ಟ ದೃಷ್ಟಿಕೋನದೊಂದಿಗೆ ಸರ್ಕಾರ ಹೆಜ್ಜೆಹಾಕುತ್ತಿದೆ. ಉದಾಹರಣೆಗೆ ಜಮ್ಮು ಮತ್ತು ಕಾಶ್ಮೀರವನ್ನೇ ತೆಗೆದುಕೊಳ್ಳಿ. ಮೋದಿ ಅವರು ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಅಲ್ಲಿನ ಪರಿಸ್ಥಿತಿ ಹೇಗಿತ್ತು? ಅದು ಬಿಡಿ, ಹೈದರಾಬಾದ್, ಮುಂಬೈಯಂತ ನಗರಗಳಲ್ಲಿ ಭಯೋತ್ಪಾದಕ ದಾಳಿಗಳು ನಡೆಯುತ್ತಿದ್ದವು. ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್​ಐ ಕುಮ್ಮಕ್ಕಿನಿಂದ ದಾಳಿಗಳು ನಡೆಯುತ್ತಿದ್ದವು. ಹಿಂದಿನ ಸರ್ಕಾರಗಳು ದಾಳಿಯನ್ನು ಖಂಡಿಸುತ್ತಿದ್ದವು. ನಂತರ ಭದ್ರತಾ ಪಡೆಗಳು ಪಥಸಂಚಲನ ನಡೆಸುತ್ತಿದ್ದವು. ಎರಡು ದಿನಗಳು ಕಳೆದ ಬಳಿಕ ಪರಿಸ್ಥಿತಿ ಮೊದಲಿನಂತೆಯೇ ಆಗುತ್ತಿತ್ತು.

ಜಮ್ಮು ಮತ್ತು ಕಾಶ್ಮೀರದಲ್ಲಿ ಎಕೆ47, ಎನ್​ಕೌಂಟರ್, ಭಯೋತ್ಪಾದನೆ, ಪ್ರತಿಭಟನೆ, ಕರ್ಫ್ಯೂ ಸದಾ ಸುದ್ದಿಯಾಗುತ್ತಿದ್ದ ವಿಚಾರಗಳು. ಆದರೆ ಈಗ ಹಾಗಿಲ್ಲ. ಜಮ್ಮು ಮತ್ತು ಕಾಶ್ಮೀರದ ಜನ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ಕೇಂದ್ರಾಡಳಿತ ಪ್ರದೇಶವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಜನರಿಗೂ ಇತರೆಲ್ಲ ರಾಜ್ಯಗಳ ಜನರಂತೆಯೇ ಜೀವಿಸುವುದು ಸಾಧ್ಯವಾಗಿದೆ.

2014ರ ಚುನಾವಣೆ ವೇಳೆ ಭಾರತವು 2 ವಿಷಯಗಳನ್ನು ಮುಖ್ಯವಾಗಿಟ್ಟುಕೊಂಡಿತ್ತು. ಒಂದು ಭ್ರಷ್ಟಾಚಾರ ಮತ್ತು ಸುಸ್ಥಿರ ಸರ್ಕಾರದ ವಿಷಯ. 10 ವರ್ಷಗಳ ಅಧಿಕಾರಾವಧಿಯಲ್ಲಿ ಯುಪಿಎ ಸರ್ಕಾರದ 12 ಲಕ್ಷ ಕೋಟಿ ರೂ. ಹಗರಣ ನಡೆಸಿತ್ತು. ಅದರಲ್ಲಿ ಕಲ್ಲಿದ್ದಲು ಹಗರಂ, 2ಜಿ ಹಗರಣ, ಹೆಲಿಕಾಪ್ಟರ್ ಹಗರಣ, ಕಾಮನ್​ವೆಲ್ತ್ ಹಗರಣ ಸೇರಿದ್ದವು. ಈಗ ಬಿಜೆಪಿ ಸರ್ಕಾರದ ವಿರುದ್ಧ ಅಂಥ ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲ. ಒಂದೇ ಒಂದು ಭ್ರಷ್ಟಾಚಾರದ ಆರೋಪ ಮಾಡಲು ಪ್ರತಿಪಕ್ಷಗಳಿಗಾಗಲೀ ಮಾಧ್ಯಮಗಳಿಗಾಗಲೀ ಸಾಧ್ಯವಾಗಿಲ್ಲ. ಸುಸ್ಥಿರ ಸರ್ಕಾರದ ವಿಚಾರದಲ್ಲಿಯೂ ಜನರು ಇಟ್ಟ ಭರವಸೆಯನ್ನು ಹುಸಿಗೊಳಿಸಿಲ್ಲ. ಸ್ಥಿರ, ಸಮರ್ಥ ನಾಯಕತ್ವದ ಸರ್ಕಾರ ನೀಡಿದ್ದೇವೆ. ಹಿಂದಿನ ಯುಪಿಎ ಸರ್ಕಾರದಂತೆ ರಿಮೋಟ್ ಕಂಟ್ರೋಲ್ ಸರ್ಕಾರ ನಮ್ಮದಲ್ಲ. ಭಾರತ ಮಾತ್ರವಲ್ಲ, ಇಡೀ ವಿಶ್ವದಲ್ಲೇ ಸಮರ್ಥ ನೇತೃತ್ವ, ನಾಯಕತ್ವ ಭಾರತದ್ದಾಗಿದೆ.

ಇದನ್ನೂ ಓದಿ: ತೆಲಂಗಾಣದಿಂದ ಹೆಚ್ಚುವರಿ 6.80 ಲಕ್ಷ ಮೆಟ್ರಿಕ್ ಟನ್ ಪ್ಯಾರಾ ಬಾಯಿಲ್ಡ್ ಅಕ್ಕಿ ಖರೀದಿಗೆ ಕೇಂದ್ರ ಸಮ್ಮತಿ; ಕಿಶನ್ ರೆಡ್ಡಿ

ಅಂತಾರಾಷ್ಟ್ರೀಯ ಮಟ್ಟದ ಸಭೆಗಳ ಸಂದರ್ಭ ಫೋಟೊ ತೆಗೆಯುವಾಗ ನಮ್ಮ ಪ್ರಧಾನಿ ಎಲ್ಲಿದ್ದಾರೆ, ಯಾವ ಸಾಲಿನಲ್ಲಿದ್ದಾರೆ ಎಂಬುದನ್ನು ಯುಪಿಎ ಸರ್ಕಾರದ ಅವಧಿಯಲ್ಲಿ ಹುಡುಕಬೇಕಾಗಿರುತ್ತಿತ್ತು. ಈಗ ನಮ್ಮ ಪ್ರಧಾನಿ ಮೊದಲ ಸಾಲಿನಲ್ಲಿರುತ್ತಾರೆ.

ದೇಶದ ಆಂತರಿಕ ವಿಚಾರಗಳಲ್ಲಿಯೂ ಅಷ್ಟೆ. ಗ್ರಾಮೀಣ ಪ್ರದೇಶದ ಮಹಿಳೆಯರೂ ಬ್ಯಾಂಕ್ ಖಾತೆ ಹೊಂದುವಂತಾಗಿದೆ. ಸರ್ಕಾರ ಯೋಜನೆಗಳ ಪ್ರಯೋಜನ ಪಡೆಯುವಂತಾಗಿದೆ. ಒಟ್ಟಂದದಲ್ಲಿ ಅತ್ಯುತ್ತಮ ಆಡಳಿತವನ್ನು ಮೋದಿ ಸರ್ಕಾರ ನೀಡಿದೆ.

ಕೊರೊನಾವೈರಸ್ ಸಾಂಕ್ರಾಮಿಕ ಹರಡಲು ಆರಂಭವಾದಾಗಲೂ ಬೇರೆ ಬೇರೆ ದೇಶಗಳ ಮಾಧ್ಯಮಗಳು ಏನೇನೋ ಬರೆದವು. ವಿಶ್ವದಲ್ಲೇ ಹೆಚ್ಚು ಜನಸಂಖ್ಯೆ ಭಾರತದಲ್ಲಿದೆ. 50 ಸಾವಿರಕ್ಕೂ ಹೆಚ್ಚು ಜನ ಮರಣ ಹೊಂದಬಹುದು. ಅಲ್ಲಿ ಆಸ್ಪತ್ರೆಗಳು, ವೈದ್ಯರ ಕೊರತೆ ಇದೆ. ಜನ ಹೇಳಿದ್ದನ್ನು ಕೇಳುವುದಿಲ್ಲ. ಬೇಕಾದಷ್ಟು ಔಷಧ ಇಲ್ಲ. ಮಾಸ್ಕ್ ಧರಿಸುವುದಿಲ್ಲ ಎಂದೆಲ್ಲ ಏನೇನೋ ಹೇಳಿದರು. ಆದರೆ, ಪ್ರಧಾನಿ ಮೋದಿಯವರು ಜನತಾ ಕರ್ಫ್ಯೂಗೆ ಕರೆ ನೀಡಿದರು. ಜಾತಿ, ಮತ, ಧರ್ಮ, ರಾಜ್ಯದ ಗಡಿ, ಪಕ್ಷ ಬೇಧವಿಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ಪ್ರಧಾನಿಯವರ ಕರೆಗೆ ಓಗೊಟ್ಟರು. ಪರಿಣಾಮವಾಗಿ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಜಯ ನಮ್ಮದಾಯಿತು. ವಿಶ್ವದಲ್ಲೇ ಅತ್ಯುತ್ತಮ ಲಸಿಕೆ ಅಭಿವೃದ್ಧಿಪಡಿಸಿದ ಹೆಗ್ಗಳಿಕೆಯೂ ಭಾರತದ್ದಾಯಿತು. ಅನೇಕ ದೇಶಗಳಿಗೆ ಲಸಿಕೆ ನೀಡುವ ಉದಾರತೆಯನ್ನು ನಮ್ಮ ದೇಶ ತೋರಿತು. ಅಭಿವೃದ್ಧಿಹೊಂದಿದ ದೇಶಗಳೂ ಕೂಡ ನಮ್ಮ ದೇಶದಿಂದ ಲಸಿಕೆ ಖರೀದಿಸಿದವು. ಯಾವ ಆಯಾಮದಿಂದ ನೋಡಿದರೂ ಭಾರತ ಮುಂಚೂಣಿಯಲ್ಲಿದೆ. ಅದು ಮೂಲಸೌಕರ್ಯ ಕ್ಷೇತ್ರ ಇರಬಹುದು, ಪ್ರವಾಸೋದ್ಯಮ ಇರಬಹುದು ಅಥವಾ ಇನ್ನಾವುದೇ ಕ್ಷೇತ್ರ ಇರಬಹುದು. ಕೃಷಿ ಕ್ಷೇತ್ರದಲ್ಲಿಯೂ ಭಾರತ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ. ರೈತರ ಏಳಿಗೆಗಾಗಿ ಕೇಂದ್ರ ಸರ್ಕಾರ ಅನೇಕ ಉಪಕ್ರಮಗಳನ್ನು ಕೈಗೊಂಡಿದೆ. 18000 ಕೋಟಿ ರೂ. ರೈತರಿಗಾಗಿ ವಿನಿಯೋಗಿಸಲಾಗುತ್ತಿದೆ. ರಸಗೊಬ್ಬರ, ವಿದ್ಯುತ್ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಸುಸ್ಥಿರ ಸರ್ಕಾರದೊಂದಿಗೆ ಸುಸ್ಥಿರ ಅಭಿವೃದ್ಧಿಯನ್ನು ಮೋದಿ ಸರ್ಕಾರ ನೀಡುತ್ತಿದೆ.

ಕರ್ನಾಟಕದಲ್ಲಿ ನೋಡಿ, ಪೂರ್ಣ ಬಹುಮತದ ಸರ್ಕಾರ ಬಂದರೂ ಮುಖ್ಯಮಂತ್ರಿ ಆಯ್ಕೆ ಮಾಡಲು ಎಷ್ಟು ದಿನ ತೆಗೆದುಕೊಂಡರು? ಅವರದ್ದೆಲ್ಲ ಒಂದು ಪರಿವಾರದ ಪಕ್ಷ. ಕೇವಲ ಒಂದು ಕುಟುಂಬದ ಹಿತಾಸಕ್ತಿಗಾಗಿ ಕಾರ್ಯನಿರ್ವಹಿಸುವ ಪಕ್ಷ. ಆದರೆ, ಮೋದಿ ನೇತೃತ್ವದ ಸರ್ಕಾರ ಹಾಗಲ್ಲ. ನಿಜಾರ್ಥದ ಸುಸ್ಥಿರ ಸರ್ಕಾರ, ಅಭಿವೃದ್ಧಿಯನ್ನು ನೀಡಿದೆ. ಇಂಥ ಸಂದರ್ಭದಲ್ಲಿ ಸಣ್ಣ ಸಣ್ಣ ಪಕ್ಷಗಳು ಸೇರಿಕೊಂಡು ಮೋದಿ ವಿರುದ್ಧ ನಿಂತುಕೊಳ್ಳಲು ಯತ್ನಿಸುತ್ತಿವೆ. ಅವರೆಲ್ಲ ಅವರವರ ಕುಟುಂಬದವರು, ಸಂಬಂಧಿಗಳೊಂದಿಗೆ ಮೋದಿ ವಿರುದ್ಧ ಹೋರಾಡಲು ಯತ್ನಿಸುತ್ತಿದ್ದಾರೆ. ಆದರೆ ಅದು ಯಾವುದೂ ಮೋದಿ ಅವರಿಗೆ ಪರ್ಯಾಯವಾಗಲಾರದು. ಭಾರತ ಅಭಿವೃದ್ಧಿ ಪಥದಲ್ಲಿ ಬಹು ದೂರ ಸಾಗಿ ಆಗಿದೆ. ಜನ ಮುಂದಿನ ವರ್ಷದ ಲೋಕಸಭೆ ಚುನಾವಣೆಯಲ್ಲಿಯೂ ಇನ್ನೂ ಹೆಚ್ಚಿನ ಬಹುಮತದೊಂದಿಗೆ ಮೋದಿ ಸರ್ಕಾರವನ್ನು ಮತ್ತೆ ಆಶೀರ್ವದಿಸಲಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ