ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಮಳೆಗೆ ಭೂಕುಸಿತ; ರಸ್ತೆಗಳು ಜಲಾವೃತ, ಹೆದ್ದಾರಿ ಬಂದ್

|

Updated on: Jun 22, 2022 | 5:36 PM

ರಾಂಬನ್ ಜಿಲ್ಲೆಯಲ್ಲಿ ಭಾರಿ ಭೂಕುಸಿತ ವರದಿಯಾಗಿದ್ದು, ಸುಮಾರು 3,000 ವಾಹನಗಳು ಅಲ್ಲಿ ಸಿಲುಕಿಕೊಂಡಿವೆ ಎಂದು ಸಂಚಾರ ಇಲಾಖೆ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ ಕಾಶ್ಮೀರದ ಎತ್ತರದ ಪ್ರದೇಶಗಳಿಂದ ಅಸಾಮಾನ್ಯ ಹಿಮಪಾತವೂ ವರದಿಯಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಮಳೆಗೆ  ಭೂಕುಸಿತ; ರಸ್ತೆಗಳು ಜಲಾವೃತ, ಹೆದ್ದಾರಿ ಬಂದ್
ಜಮ್ಮುನಲ್ಲಿ ಮಳೆ
Follow us on

ಜಮ್ಮು ಮತ್ತು ಕಾಶ್ಮೀರದ (Jammu And Kashmir) ಹಲವಾರು ಪ್ರದೇಶಗಳಲ್ಲಿ ಮಂಗಳವಾರದಿಂದ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು ಭೂಕುಸಿತದಿಂದಾಗಿ (landslides) ಜಮ್ಮು-ಶ್ರೀನಗರ ಹೆದ್ದಾರಿಯ ಹಲವಾರು ಭಾಗಗಳನ್ನು ಪ್ರವೇಶಿಸಲಾಗುತ್ತಿಲ್ಲ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ರಾಂಬನ್ ಜಿಲ್ಲೆಯಲ್ಲಿ ಭಾರಿ ಭೂಕುಸಿತ ವರದಿಯಾಗಿದ್ದು, ಸುಮಾರು 3,000 ವಾಹನಗಳು ಅಲ್ಲಿ ಸಿಲುಕಿಕೊಂಡಿವೆ ಎಂದು ಸಂಚಾರ ಇಲಾಖೆ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ ಕಾಶ್ಮೀರದ ಎತ್ತರದ ಪ್ರದೇಶಗಳಿಂದ ಅಸಾಮಾನ್ಯ ಹಿಮಪಾತವೂ ವರದಿಯಾಗಿದೆ. ಬುಧವಾರ ಉಧಮ್‌ಪುರದಲ್ಲಿ (Udhampur) 122 ವರ್ಷಗಳಲ್ಲೇ ಅತಿ ಹೆಚ್ಚು ಮಳೆ ಸುರಿದಿದ್ದು, 119.4ಮಿಮೀ ಮಳೆ ದಾಖಲಾಗಿದೆ. ಬಟೋಟೆಯಲ್ಲಿ ಜೂನ್ 25, 2015 ರಂದು 121ಮಿಮೀ ಮಳೆಯಾಗಿದ್ದು ಈ ಸಾರ್ವಕಾಲಿಕ ದಾಖಲೆಯನ್ನು ಉಧಮ್‌ಪುರದ ಮಳೆ ಸರಿಗಟ್ಟಿದೆ. ಬುಧವಾರ ಬನಿಹಾಲ್ 100 ಮಿಮೀ ಮತ್ತು ಅನಂತನಾಗ್ 75 ಮಿಮೀ ಮಳೆಯಾಗಿದೆ. ಕೇಂದ್ರಾಡಳಿತ ಪ್ರದೇಶದ ಇತರ ಸ್ಥಳಗಳಲ್ಲಿ ಖಾಜಿಗುಂಡ್ (75 ಮಿಮೀ), ಶ್ರೀನಗರ ವಿಮಾನ ನಿಲ್ದಾಣ (62.4 ಮಿಮೀ), ಜಮ್ಮು ನಗರ (45 ಮಿಮೀ) ಮತ್ತು ಭದರ್ವಾಹ್ (42 ಮಿಮೀ) ಸೇರಿವೆ. ಈ ವಾರದ ಆರಂಭದಿಂದಲೂ ಜಮ್ಮು ಮತ್ತು ಕಾಶ್ಮೀರವು ಪ್ರಬಲವಾದ ಪಾಶ್ಚಿಮಾತ್ಯ ಗೊಂದಲದ ಪ್ರಭಾವಕ್ಕೆ ಒಳಗಾಗಿದೆ. ಇದು ಗುರುವಾರದ ಆರಂಭದವರೆಗೆ ವ್ಯಾಪಕ ಮಳೆಗೆ ಕಾರಣವಾಗುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಧಿಕಾರಿಗಳು ಇತ್ತೀಚಿನ ಮುನ್ಸೂಚನೆಯಲ್ಲಿ ತಿಳಿಸಿದ್ದಾರೆ.


ಕೇಂದ್ರಾಡಳಿತ ಪ್ರದೇಶದ ಹಲವು ಸ್ಥಳಗಳು ಗರಿಷ್ಠ ತಾಪಮಾನದಲ್ಲಿ 12-15 ಡಿಗ್ರಿಗಳಷ್ಟು ತೀವ್ರ ಕುಸಿತವನ್ನು ವರದಿ ಮಾಡಿದೆ. ಜಮ್ಮು ನಗರದಲ್ಲಿ 24 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಶ್ರೀನಗರ ವಿಮಾನ ನಿಲ್ದಾಣದಲ್ಲಿ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ಇತ್ತು.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 5:35 pm, Wed, 22 June 22