ಮಕ್ಕಳನ್ನು ಪೋಷಕರು ಆನ್​ಲೈನ್ ಕಂಟೆಂಟ್ ರೀತಿ ಬಳಸುತ್ತಿದ್ದಾರೆ; ರಾಜ್ಯಸಭೆಯಲ್ಲಿ ಸುಧಾ ಮೂರ್ತಿ ಕಳವಳ

ರಾಜ್ಯಸಭಾ ಸದಸ್ಯೆಯಾಗಿರುವ ಸುಧಾ ಮೂರ್ತಿ ಪಾರ್ಲಿಮೆಂಟ್​​ನಲ್ಲಿ ಮಾಡುವ ಭಾಷಣಗಳು ಆಗಾಗ ಗಮನಸೆಳೆಯುತ್ತಲೇ ಇರುತ್ತವೆ. ಬಹಳ ಸಾಮಾಜಿಕ ಕಳಕಳಿಯ ಸಂಗತಿಗಳನ್ನು ಪ್ರಸ್ತಾಪಿಸಿ ಮಾತನಾಡುವ ಸುಧಾ ಮೂರ್ತಿ ಅವರು ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಕ್ಕಳನ್ನು ಅವರ ಪೋಷಕರು ಆನ್​ಲೈನ್ ಕಂಟೆಂಟ್ ಮಷಿನ್​​ಗಳಂತೆ ಬಳಸುತ್ತಿದ್ದಾರೆ ಎಂದು ಸುಧಾ ಮೂರ್ತಿ ಬೇಸರ ವ್ಯಕ್ತಪಡಿಸಿದ್ದಾರೆ.

ಮಕ್ಕಳನ್ನು ಪೋಷಕರು ಆನ್​ಲೈನ್ ಕಂಟೆಂಟ್ ರೀತಿ ಬಳಸುತ್ತಿದ್ದಾರೆ; ರಾಜ್ಯಸಭೆಯಲ್ಲಿ ಸುಧಾ ಮೂರ್ತಿ ಕಳವಳ
Sudha Murthy

Updated on: Dec 06, 2025 | 5:23 PM

ನವದೆಹಲಿ, ಡಿಸೆಂಬರ್ 6: ರಾಜ್ಯಸಭಾ ಅಧಿವೇಶನದಲ್ಲಿ ಮಾತನಾಡಿರುವ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ (Sudha Murthy), ಮಕ್ಕಳನ್ನು ಸಾಮಾಜಿಕ ಜಾಲತಾಣದಲ್ಲಿ ವಸ್ತುಗಳಂತೆ ಬಳಸುವ ಹಲವಾರು ರೀಲ್‌ಗಳು ಮತ್ತು ವೀಡಿಯೊಗಳನ್ನು ನೀವು ಇಂಟರ್ನೆಟ್‌ನಲ್ಲಿ ಕಾಣಬಹುದು. ಅನೇಕ ಜನರು ತಮ್ಮ ಮಕ್ಕಳ ಫೋಟೋಗಳು ಮತ್ತು ವೀಡಿಯೊಗಳನ್ನು ಜಾಹೀರಾತಿನ ಭಾಗದಂತೆ ಪೋಸ್ಟ್ ಮಾಡುತ್ತಾರೆ. ಇದು ಪೋಷಕರಿಗೆ ಆದಾಯವನ್ನು ನೀಡುತ್ತದೆ. ಆದರೆ, ಇದು ಅವರ ಬಾಲ್ಯವನ್ನು ಕಸಿದುಕೊಳ್ಳುತ್ತದೆ ಎಂದಿದ್ದಾರೆ.

ಸಂಸತ್ತಿನ ಮೇಲ್ಮನೆಯ ನಾಮನಿರ್ದೇಶಿತ ಸದಸ್ಯೆಯಾಗಿರುವ ಸುಧಾ ಮೂರ್ತಿ ಅವರು ಈ ಪ್ರವೃತ್ತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ರಾಷ್ಟ್ರದ ಭವಿಷ್ಯವನ್ನು ಸುರಕ್ಷಿತಗೊಳಿಸುವ ಸಲುವಾಗಿ ಮಕ್ಕಳನ್ನು ಇಂಟರ್ನೆಟ್ ಮಾಧ್ಯಮ ವಿಷಯವಾಗಿ ಬಳಸುವ ಮೂಲಕ ಲಾಭ ಗಳಿಸುವವರ ವಿರುದ್ಧ ನಿಯಮಗಳನ್ನು ಜಾರಿಗೆ ತರಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.


ಶೂನ್ಯ ವೇಳೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಸುಧಾ ಮೂರ್ತಿ, ಫ್ರಾನ್ಸ್‌ನಂತಹ ಅನೇಕ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮಕ್ಕಳನ್ನು ಚಿತ್ರಿಸುತ್ತಿರುವುದಕ್ಕೆ ಸಂಬಂಧಿಸಿದ ನಿಯಮಗಳನ್ನು ಉಲ್ಲೇಖಿಸಿದ್ದಾರೆ. “ಮಕ್ಕಳು ನಮ್ಮ ಭವಿಷ್ಯ. ನಾವು ನಮ್ಮ ಮಕ್ಕಳಲ್ಲಿ ಉತ್ತಮ ಮೂಲಭೂತ ಶಿಕ್ಷಣವನ್ನು ತುಂಬಬೇಕು. ಕ್ರೀಡೆ ಮತ್ತು ಇತರ ಚಟುವಟಿಕೆಗಳಲ್ಲಿ ಮಕ್ಕಳು ತಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳುವ ಅವಕಾಶವನ್ನು ನೀಡಬೇಕು” ಎಂದು ಸುಧಾ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಸಾಮಾಜಿಕ ಕಾರ್ಯದ ಮೂಲಕವೇ ಟೀಕಾಕಾರರಿಗೆ ಸುಧಾ ಮೂರ್ತಿ ಉತ್ತರ: ಹುಬ್ಬಳ್ಳಿಯಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ಶಾಲೆ ಅಭಿವೃದ್ಧಿ

“ಇಂಟರ್ನೆಟ್ ಮಾಧ್ಯಮವು ಈಗ ಬಹಳ ಜನಪ್ರಿಯವಾಗಿದೆ. ಅದರಿಂದ ಅನೇಕ ಪ್ರಯೋಜನಗಳಿವೆ ಎಂಬುದು ನಿಜವಾದರೂ ಅದರಿಂದ ಹಲವು ನೆಗೆಟಿವ್ ಅಂಶಗಳೂ ಇವೆ ಎಂಬುದು ಕೂಡ ಅಷ್ಟೇ ಸತ್ಯ. ಇಂಟರ್ನೆಟ್ ಮಾಧ್ಯಮದಲ್ಲಿ ಫಾಲೋವರ್​​ಗಳನ್ನು ಹೆಚ್ಚಿಸುವ ಸ್ಪರ್ಧೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಸುಧಾ ಮೂರ್ತಿ, ಅನೇಕ ಪೋಷಕರು ತಮ್ಮ ಮುಗ್ಧ ಮಕ್ಕಳನ್ನು ಇಂಟರ್ನೆಟ್ ಮಾಧ್ಯಮದ ಪ್ಲಾಟ್​​ಫಾರ್ಮ್​ಗಳಲ್ಲಿ ವಸ್ತುಗಳಂತೆ, ಮನರಂಜನೆಯ ರೂಪದಲ್ಲಿ ಚಿತ್ರಿಸುತ್ತಾರೆ” ಎಂದು ಹೇಳಿದ್ದಾರೆ.

10,000, ಅರ್ಧ ಮಿಲಿಯನ್ ಅಥವಾ ಒಂದು ಮಿಲಿಯನ್ ಫಾಲೋವರ್​​ಗಳನ್ನು ಪಡೆಯಲು ಮಕ್ಕಳಿಗೆ ವಿವಿಧ ವೇಷಭೂಷಣಗಳು ಮತ್ತು ಉಡುಪುಗಳನ್ನು ಹಾಕಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗುತ್ತದೆ. ಇದು ಪೋಷಕರಿಗೆ ಆರ್ಥಿಕವಾಗಿ ಪ್ರಯೋಜನವನ್ನು ನೀಡುತ್ತದೆ. ಆದರೆ ಇದು ಮಗುವಿನ ಮನೋವಿಜ್ಞಾನದ ಮೇಲೆ ದೀರ್ಘಕಾಲೀನ ಪರಿಣಾಮಗಳನ್ನು ಬೀರುತ್ತದೆ ಎಂದು ಸುಧಾ ಮೂರ್ತಿ ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Sudha Murty: ರಾಜ್ಯಸಭಾ ಸಂಸದರಾಗಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸುಧಾ ಮೂರ್ತಿ

ಅಂತಹ ಪೋಷಕರ ಮೇಲೆ ನಿಯಮಗಳು ಮತ್ತು ನಿರ್ಬಂಧಗಳನ್ನು ವಿಧಿಸದಿದ್ದರೆ, ಅದು ಭವಿಷ್ಯದಲ್ಲಿ ನಮ್ಮ ದೇಶದ ಮಕ್ಕಳಿಗೆ ದೊಡ್ಡ ಸಮಸ್ಯೆಯನ್ನುಂಟುಮಾಡುತ್ತದೆ ಎಂದು ಸುಧಾ ಮೂರ್ತಿ ಎಚ್ಚರಿಸಿದ್ದಾರೆ. “ಪೋಷಕರ ಇಂತಹ ನಡವಳಿಕೆಗಳು ಮಕ್ಕಳು ತಮ್ಮ ಮುಗ್ಧತೆಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಇದು ಅವರ ಮನೋವಿಜ್ಞಾನದ ಮೇಲೆ ಪರಿಣಾಮ ಬೀರುತ್ತದೆ. ಅವರು ಸಾಮಾಜಿಕ ಚಟುವಟಿಕೆಗಳು, ಕ್ರೀಡೆಗಳಲ್ಲಿ ಹೇಗೆ ತೊಡಗಿಸಿಕೊಳ್ಳಬೇಕೆಂದು ಕಲಿಯಲು ಅಥವಾ ಉತ್ತಮ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ” ಎಂದು ಅವರು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮ ಚಾಕುವಿನಂತೆ. ಅದರಿಂದ ನೀವು ಹಣ್ಣನ್ನು ಕತ್ತರಿಸಬಹುದು ಅಥವಾ ವ್ಯಕ್ತಿಯನ್ನು ಕೂಡ ಕೊಲ್ಲಬಹುದು. ನಿಮ್ಮ ಆಯ್ಕೆ ಯಾವುದಾಗಿರಬೇಕೆಂಬುದು ನಿಮಗೆ ಬಿಟ್ಟಿದ್ದು. ಆದರೆ, ಮಕ್ಕಳ ಬಾಲ್ಯವನ್ನು ಬಲಿ ಕೊಡಬೇಡಿ ಎಂದು ಸುಧಾ ಮೂರ್ತಿ ಪೋಷಕರಿಗೆ ಮನವಿ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ