ರಷ್ಯಾ-ಉಕ್ರೇನ್ ಯುದ್ಧದಲ್ಲಿ ಭಾರತೀಯರ ಸಾವು, ನಾಪತ್ತೆ: ಬಾಧಿತ ಕುಟುಂಬಗಳ ನೆರವಿಗೆ ನೋಡಲ್ ಅಧಿಕಾರಿ ನೇಮಕಕ್ಕೆ ಸುಪ್ರೀಂ ಆದೇಶ

ಸುಪ್ರೀಂ ಕೋರ್ಟ್ ರಷ್ಯಾ-ಉಕ್ರೇನ್ ಯುದ್ಧದಲ್ಲಿ ಮೃತಪಟ್ಟ, ಗಾಯಗೊಂಡ ಅಥವಾ ನಾಪತ್ತೆಯಾದ ಭಾರತೀಯರ ಕುಟುಂಬಗಳಿಗೆ ನೆರವಾಗಲು ವಿದೇಶಾಂಗ ಸಚಿವಾಲಯದಲ್ಲಿ ನೋಡಲ್ ಅಧಿಕಾರಿ ನೇಮಿಸಲು ಆದೇಶಿಸಿದೆ. ಡಿಎನ್‌ಎ ಪರೀಕ್ಷೆ, ಸ್ಥಳೀಯ ಭಾಷೆಯಲ್ಲಿ ಮಾಹಿತಿ, ಉಚಿತ ಕಾನೂನು ನೆರವು, ಮತ್ತು ಮೃತದೇಹಗಳನ್ನು ತರುವಲ್ಲಿ ವಿಳಂಬ ಮಾಡದಂತೆ ಸೂಚಿಸಲಾಗಿದೆ. ರಷ್ಯಾದಲ್ಲಿ ಕೆಲಸದ ಆಮಿಷಕ್ಕೆ ಸಿಲುಕಿ ಬಲವಂತವಾಗಿ ಸೇನೆಗೆ ಸೇರಿಸಲ್ಪಟ್ಟ ಯುವಕರ ಪ್ರಕರಣಗಳನ್ನು ಇದು ಒಳಗೊಂಡಿದೆ.

ರಷ್ಯಾ-ಉಕ್ರೇನ್ ಯುದ್ಧದಲ್ಲಿ ಭಾರತೀಯರ ಸಾವು, ನಾಪತ್ತೆ: ಬಾಧಿತ ಕುಟುಂಬಗಳ ನೆರವಿಗೆ ನೋಡಲ್ ಅಧಿಕಾರಿ ನೇಮಕಕ್ಕೆ ಸುಪ್ರೀಂ ಆದೇಶ
ಸುಪ್ರೀಂಕೋರ್ಟ್​

Updated on: Jul 31, 2026 | 3:39 PM

ನವದೆಹಲಿ, ಜುಲೈ 31: ರಷ್ಯಾ-ಉಕ್ರೇನ್(Ukraine) ಯುದ್ಧದಲ್ಲಿ ಮೃತಪಟ್ಟ, ಗಂಭೀರವಾಗಿ ಗಾಯಗೊಂಡ ಹಾಗೂ ನಾಪತ್ತೆಯಾಗಿರುವ ಭಾರತೀಯ ನಾಗರಿಕರ ಕುಟುಂಬಗಳಿಗೆ ನೆರವಾಗಲು ವಿದೇಶಾಂಗ ಸಚಿವಾಲಯದಲ್ಲಿ (MEA) ತಕ್ಷಣವೇ ನೋಡಲ್ ಅಧಿಕಾರಿಯೊಬ್ಬರನ್ನು ನೇಮಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನ ಅವರನ್ನೊಳಗೊಂಡ ತ್ರಿಪೀಠವು ಈ ಕುರಿತು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿ ಈ ತೀರ್ಪು ನೀಡಿದೆ. ಸಂತ್ರಸ್ತ ಕುಟುಂಬಗಳಿಗೆ ಸಂಪೂರ್ಣ ಮಾಹಿತಿಗಳನ್ನು ಸ್ಥಳೀಯ ಪ್ರಾದೇಶಿಕ ಭಾಷೆಗಳಲ್ಲೇ ಒದಗಿಸಬೇಕು ಎಂದು ಪೀಠ ವಿದೇಶಾಂಗ ಸಚಿವಾಲಯಕ್ಕೆ ಸೂಚಿಸಿದೆ.

ರಷ್ಯಾದಲ್ಲಿ ಮೃತಪಟ್ಟ ಯೋಧರು,ನಾಗರಿಕರ ಗುರುತು ಪತ್ತೆಹಚ್ಚಲು ಕುಟುಂಬಸ್ಥರ ಡಿಎನ್‌ಎ ಪರೀಕ್ಷೆಗೆ ವ್ಯವಸ್ಥೆ ಮಾಡಬೇಕು. ಮೃತದೇಹಗಳನ್ನು ಭಾರತಕ್ಕೆ ತರಲು ಅಥವಾ ಅಂತಿಮ ವಿಧಿವಿಧಾನ ನೆರವೇರಿಸಲು ಹಣಕಾಸಿನ ಪರಿಹಾರದ ಪ್ರಕ್ರಿಯೆಯ ನೆಪದಲ್ಲಿ ವಿಳಂಬ ಮಾಡಬಾರದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಮತ್ತಷ್ಟು ಓದಿ: ಪಾಕ್​ನ ಬ್ರಾಡ್ ಪೀಕ್‌ನಲ್ಲಿ ಹಿಮಪಾತ: ಓಮನ್‌ನ ಪ್ರಸಿದ್ಧ ಪರ್ವತಾರೋಹಿ ನಾಧಿರಾ ಸೇರಿ ಇಬ್ಬರು ಸಾವು, ನಿರ್ಮಲ್ ಪುರ್ಜಾ ನಾಪತ್ತೆ

ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಗಳು ರಷ್ಯಾದಿಂದ ಪರಿಹಾರ ಪಡೆಯಲು ಹಾಗೂ ದಾಖಲೆಗಳನ್ನು ಸಲ್ಲಿಸಲು ಸಂತ್ರಸ್ತ ಕುಟುಂಬಗಳಿಗೆ ಉಚಿತ ಕಾನೂನು ನೆರವು ನೀಡಬೇಕು. ರಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಮುಖಾಂತರವೇ ನಷ್ಟ ಪರಿಹಾರದ ಹಕ್ಕುಗಳನ್ನು ಸಲ್ಲಿಸಲು ಅನುಕೂಲವಾಗುವಂತೆ ‘ಏಕೀಕೃತ ಮಾರ್ಗದರ್ಶಿ ಡಾಕೆಟ್’ಒಂದನ್ನು ಸಿದ್ಧಪಡಿಸಲು ಸಚಿವಾಲಯಕ್ಕೆ ಕೋರ್ಟ್ ತಿಳಿಸಿದೆ.

ರಷ್ಯಾ ಆಡಳಿತ ಮತ್ತು ಸೇನೆಯಿಂದ ಬರುವ ರಷ್ಯನ್ ಭಾಷೆಯ ಅಧಿಕೃತ ದಾಖಲೆಗಳನ್ನು ಹಿಂದಿ ಹಾಗೂ ಆಯಾ ರಾಜ್ಯಗಳ ಸ್ಥಳೀಯ ಭಾಷೆಗಳಿಗೆ ಭಾಷಾಂತರಿಸಿ ಕುಟುಂಬಗಳಿಗೆ ತಲುಪಿಸುವ ಜವಾಬ್ದಾರಿಯನ್ನೂ ಎಂಇಎಗೆ ವಹಿಸಲಾಗಿದೆ. 2024 ಮತ್ತು 2025 ರ ಅವಧಿಯಲ್ಲಿ ಭಾರತದ ಹಲವಾರು ಯುವಕರಿಗೆ ರಷ್ಯಾದಲ್ಲಿ ಭದ್ರತಾ ಸಿಬ್ಬಂದಿ, ನಿರ್ಮಾಣ ಹಾಗೂ ಸೇವಾ ವಲಯಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಕರೆದೊಯ್ಯಲಾಗಿತ್ತು. ರಷ್ಯಾ ತಲುಪಿದ ತಕ್ಷಣ ಖಾಸಗಿ ಏಜೆಂಟ್‌ಗಳು ಯುವಕರ ಪಾಸ್‌ಪೋರ್ಟ್‌ಗಳನ್ನು ಮುಟ್ಟುಗೋಲು ಹಾಕಿಕೊಂಡು, ಅವರನ್ನು ಬಲವಂತವಾಗಿ ರಷ್ಯಾ ಸೇನೆಗೆ ಸೇರ್ಪಡೆಗೊಳಿಸಿ ಯುದ್ಧಭೂಮಿಯಲ್ಲಿ ಬಿಟ್ಟಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಪ್ರವಾಸ ಕೈಗೊಂಡಿದ್ದ ವೇಳೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಈ ವಿಚಾರವಾಗಿ ಚರ್ಚಿಸಿ, ರಷ್ಯಾ ಸೇನೆಯಲ್ಲಿದ್ದ ಭಾರತೀಯರನ್ನು ಬಿಡುಗಡೆಗೊಳಿಸಲು ಮನವಿ ಮಾಡಿದ್ದರು. ಅನೇಕರನ್ನು ಮರಳಿ ಕರೆತರಲಾಗಿದೆಯಾದರೂ, ಇನ್ನೂ ಹಲವರು ನಾಪತ್ತೆಯಾಗಿದ್ದಾರೆ ಹಾಗೂ ಕೆಲವರು ಯುದ್ಧದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:38 pm, Fri, 31 July 26

Loading...
Unable to load recommendations.
Follow Us