AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಎಪಿಎ ಅಡಿಯಲ್ಲಿ ನ್ಯೂಸ್‌ಕ್ಲಿಕ್ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ ಬಂಧನ ಸರಿಯಲ್ಲ: ತಕ್ಷಣ ಬಿಡುಗಡೆಗೆ ಸುಪ್ರೀಂ ಆದೇಶ

"ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರಲು" ಮತ್ತು ದೇಶದ ವಿರುದ್ಧ ಅವಿಶ್ವಾಸ ಮೂಡಿಸುವ ಸಲುವಾಗಿ ಚೀನಾದಿಂದ ಹಣವನ್ನು ತೆಗೆದುಕೊಂಡ ಆರೋಪದ ಮೇಲೆ ಕಳೆದ ವರ್ಷ ಅಕ್ಟೋಬರ್ 3 ರಂದು ನ್ಯೂಸ್‌ಕ್ಲಿಕ್ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ ಮತ್ತು ಮಾನವ ಸಂಪನ್ಮೂಲ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ದೆಹಲಿ ಪೊಲೀಸರ ವಿಶೇಷ ಸೆಲ್ ಬಂಧಿಸಿತ್ತು.

ಯುಎಪಿಎ ಅಡಿಯಲ್ಲಿ ನ್ಯೂಸ್‌ಕ್ಲಿಕ್ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ ಬಂಧನ ಸರಿಯಲ್ಲ: ತಕ್ಷಣ ಬಿಡುಗಡೆಗೆ ಸುಪ್ರೀಂ ಆದೇಶ
ಪ್ರಬೀರ್ ಪುರಕಾಯಸ್ಥ
ರಶ್ಮಿ ಕಲ್ಲಕಟ್ಟ
|

Updated on: May 15, 2024 | 12:52 PM

Share

ದೆಹಲಿ ಮೇ 15: ಯುಎಪಿಎ (UAPA) ಅಡಿಯಲ್ಲಿ ಬಂಧಿತರಾಗಿರುವ ನ್ಯೂಸ್‌ಕ್ಲಿಕ್ (NewsClick) ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ (Prabir Purakayastha) ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ (Supreme Court) ಬುಧವಾರ ಆದೇಶಿಸಿದೆ. ಪುರಕಾಯಸ್ಥನ ಬಂಧನ ಮತ್ತು ನಂತರದ ರಿಮಾಂಡ್ ಸರಿಯಾದ ಕ್ರಮವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ವಿಚಾರಣಾ ನ್ಯಾಯಾಲಯ ಕಸ್ಟಡಿ ಅರ್ಜಿಯನ್ನು ನಿರ್ಧರಿಸುವ ಮೊದಲು ರಿಮಾಂಡ್ ಅರ್ಜಿ ಮತ್ತು ಬಂಧನದ ಆಧಾರವನ್ನು ಅವರಿಗೆ ಅಥವಾ ಅವರ ವಕೀಲರಿಗೆ ಒದಗಿಸದ ಕಾರಣ ನ್ಯಾಯಮೂರ್ತಿ ಬಿಆರ್ ಗವಿ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರ ಪೀಠವು ತೀರ್ಮಾನಕ್ಕೆ ಬಂದಿತು. ಆದಾಗ್ಯೂ, ದೆಹಲಿ ಪೊಲೀಸರು ಈ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಸಿರುವುದರಿಂದ, ವಿಚಾರಣಾ ನ್ಯಾಯಾಲಯವು ನಿಗದಿಪಡಿಸುವ ಷರತ್ತುಗಳ ಮೇಲೆ ಪ್ರಬೀರ್ ಪುರಕಾಯಸ್ಥ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ನಿರ್ದೇಶಿಸಿದೆ.

“ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರಲು” ಮತ್ತು ದೇಶದ ವಿರುದ್ಧ ಅವಿಶ್ವಾಸ ಮೂಡಿಸುವ ಸಲುವಾಗಿ ಚೀನಾದಿಂದ ಹಣವನ್ನು ತೆಗೆದುಕೊಂಡ ಆರೋಪದ ಮೇಲೆ ಕಳೆದ ವರ್ಷ ಅಕ್ಟೋಬರ್ 3 ರಂದು ನ್ಯೂಸ್‌ಕ್ಲಿಕ್ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ ಮತ್ತು ಮಾನವ ಸಂಪನ್ಮೂಲ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ದೆಹಲಿ ಪೊಲೀಸರ ವಿಶೇಷ ಸೆಲ್ ಬಂಧಿಸಿತ್ತು. ಎಫ್‌ಐಆರ್‌ನ ಪ್ರಕಾರ, ಸುದ್ದಿ ತಾಣವನ್ನು ನಡೆಸಲು ದೊಡ್ಡ ಪ್ರಮಾಣದ ಹಣ ಚೀನಾದಿಂದ ಬಂದಿದೆ.

2019 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಹಾಳುಮಾಡಲು ಪುರಕಾಯಸ್ಥ ಪೀಪಲ್ಸ್ ಅಲೈಯನ್ಸ್ ಫಾರ್ ಡೆಮಾಕ್ರಸಿ ಅಂಡ್ ಸೆಕ್ಯುಲರಿಸಂ ಎಂಬ ಗುಂಪಿನೊಂದಿಗೆ ಸಂಚು ರೂಪಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಎಫ್‌ಐಆರ್‌ನಲ್ಲಿ ಹೆಸರಿಸಲಾದ ಶಂಕಿತರು ಮತ್ತು ದತ್ತಾಂಶಗಳ ವಿಶ್ಲೇಷಣೆ ನಂತರ ಶಂಕಿತರ ಮೇಲೆ ಅಕ್ಟೋಬರ್ 3 ರಂದು ದೆಹಲಿಯ 88 ಮತ್ತು ಇತರ ರಾಜ್ಯಗಳ ಏಳು ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನ್ಯೂಸ್‌ಕ್ಲಿಕ್ ಕಚೇರಿಗಳು ಮತ್ತು ಪತ್ರಕರ್ತರ ನಿವಾಸಗಳಿಂದ ಸುಮಾರು 300 ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯಡಿಯಲ್ಲಿ, ತನಿಖಾ ಸಂಸ್ಥೆಯು ಸಂಗ್ರಹಿಸಿದ ಸಾಕ್ಷ್ಯವನ್ನು ಪರಿಶೀಲಿಸಿದ ನಂತರ ಆರೋಪಿಯನ್ನು ವಿಚಾರಣೆಗೆ ಒಳಪಡಿಸುವ ಬಗ್ಗೆ ಸ್ವತಂತ್ರ ಪ್ರಾಧಿಕಾರವು ಸಕ್ಷಮ ಪ್ರಾಧಿಕಾರಕ್ಕೆ (ಕೇಂದ್ರ ಅಥವಾ ರಾಜ್ಯ ಸರ್ಕಾರ) ಶಿಫಾರಸು ಮಾಡುತ್ತದೆ. ಮಂಜೂರಾತಿ ನೀಡಬೇಕೆ ಅಥವಾ ಬೇಡವೇ ಎಂಬುದನ್ನು ಸಕ್ಷಮ ಪ್ರಾಧಿಕಾರ ನಿರ್ಧರಿಸುತ್ತದೆ.

ದಿ ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಪ್ರಕಟವಾದ ತನಿಖೆಯ ನಂತರ ಈ ಪೋರ್ಟಲ್ ಜಾಗತಿಕ ನೆಟ್‌ವರ್ಕ್‌ನ ಭಾಗವಾಗಿದೆ, ಇದು ಚೀನಾದ ಪ್ರಚಾರಕ್ಕಾಗಿ ಹಣವನ್ನು ಪಡೆದಿದೆ ಎಂದು ಆರೋಪಿಸಿದ ನಂತರ ಈ ಬಂಧನ ನಡೆದಿತ್ತು. ಶಾಂಘೈ ಮೂಲದ ಉದ್ಯಮಿ ನೆವಿಲ್ಲೆ ರಾಯ್ ಸಿಂಘಮ್ ಅವರು ನ್ಯೂಸ್‌ಕ್ಲಿಕ್‌ಗೆ ಧನಸಹಾಯ ಮಾಡಿದ್ದು ಪ್ರಪಂಚದಾದ್ಯಂತದ ಇತರ ಔಟ್‌ಲೆಟ್‌ಗಳ ಜೊತೆಗೆ, ಚೀನಾದ ಸರ್ಕಾರದ ಪರವಾದ ವಿಷಯಗಳನ್ನು ಪ್ರಸಾರ ಮಾಡಿತ್ತು ಎಂದು ಆರೋಪಿಸಲಾಗಿತ್ತು.

ಇದನ್ನೂ ಓದಿ: ನಾನು ಹಿಂದೂ ಅಥವಾ ಮುಸ್ಲಿಂ ಬಗ್ಗೆ ಮಾತನಾಡಿಲ್ಲ: ವಿವಾದಕ್ಕೆ ತೆರೆ ಎಳೆದ ಪ್ರಧಾನಿ ಮೋದಿ

ಅಮಿತ್ ಚಕ್ರವರ್ತಿ ನಂತರ ಪ್ರಕರಣದಲ್ಲಿ ಅನುಮೋದಕರಾಗಿ ಬದಲಾಗಿದ್ದು, ಚಾರ್ಜ್ ಶೀಟ್‌ನಲ್ಲಿ “ಸಾಕ್ಷಿ” ಎಂದು ಹೆಸರಿಸಲಾಗಿದೆ. ಚಕ್ರವರ್ತಿ ಅವರನ್ನು ಬಿಡುಗಡೆ ಮಾಡುವಂತೆ ದೆಹಲಿ ಹೈಕೋರ್ಟ್ ಮೇ 6 ರಂದು ಆದೇಶ ನೀಡಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ