ಸುಪ್ರೀಂ – ಹೈಕೋರ್ಟ್ ನ್ಯಾಯಮೂರ್ತಿಗಳು ತಮ್ಮ ಆಸ್ತಿ ವಿವರವನ್ನು ಕಡ್ಡಾಯವಾಗಿ ಘೋಷಿಸಬೇಕು: ಸಂಸದೀಯ ಸಮಿತಿ ಶಿಫಾರಸು
ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳು ತಮ್ಮ ಆಸ್ತಿ ವಿವರವನ್ನು ವಾರ್ಷಿಕ ಆಧಾರದ ಮೇಲೆ ಘೋಷಿಸುವುದು ಕಡ್ಡಾಯ ಎಂದು ಸಂಸದೀಯ ಸಮಿತಿ ಉಭಯ ಸದನಕ್ಕೆ ಶಿಫಾರಸು ಮಾಡಿದೆ.
ದೆಹಲಿ, ಆ.9: ಇನ್ನು ಮುಂದೆ ಸುಪ್ರೀಂ ಕೋರ್ಟ್ (Supreme Court) ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳು ತಮ್ಮ ಆಸ್ತಿ ವಿವರವನ್ನು ವಾರ್ಷಿಕ ಆಧಾರದ ಮೇಲೆ ಘೋಷಿಸುವುದನ್ನು ಕಡ್ಡಾಯಗೊಳಿಸಬೇಕು ಎಂಬ ಶಾಸನವನ್ನು ತರಲು ಸಂಸದೀಯ ಸಮಿತಿ ಉಭಯ ಸದನಕ್ಕೆ ಶಿಫಾರಸು ಮಾಡಿದೆ. ಇದರ ಜತೆಗೆ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಕಾನೂನು ಮತ್ತು ನ್ಯಾಯ, ನೇಮಕಾತಿಗೆ ಸಂಬಂಧಿಸಿದ ವರದಿಯನ್ನು ಕೂಡ ನೀಡಲಾಗಿದೆ. ಸಾಂವಿಧಾನಿಕ ಹುದ್ದೆಯಲ್ಲಿರುವವರು ಮತ್ತು ಸರ್ಕಾರಿ ನೌಕರರು ತಮ್ಮ ಆಸ್ತಿ ಮತ್ತು ಆದಾಯ ವಾರ್ಷಿಕ ವರದಿಯನ್ನು ಸಲ್ಲಿಸಬೇಕು ಎಂಬ ನಿಯಮದ ಬಗ್ಗೆ ಸದನಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ.
ಇನ್ನು ಈ ವರದಿಯನ್ನು ಬಿಜೆಪಿ ರಾಜ್ಯಸಭಾ ಸದಸ್ಯ ಸುಶೀಲ್ ಕುಮಾರ್ ಮೋದಿ ಅವರ ಅಧ್ಯಕ್ಷತೆಯ ಸ್ಥಾಯಿ ಸಮಿತಿಯು ಸಲ್ಲಿಸಿದೆ. ಸಂಸದರು ಅಥವಾ ಶಾಸಕರಾಗಿ ಚುನಾವಣೆಗೆ ನಿಂತಿರುವವರ ಆಸ್ತಿಯನ್ನು ತಿಳಿದುಕೊಳ್ಳುವ ಹಕ್ಕು ಸಾರ್ವಜನಿಕರಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಹಾಗೆ ಇನ್ನು ಮುಂದೆ ಸಾರ್ವಜನಿಕ ಹುದ್ದೆಯಲ್ಲಿ ಮತ್ತು ಸಂವಿಧಾನಿಕ ಹುದ್ದೆಯಲ್ಲಿರುವವರು ಕೂಡ ತಮ್ಮ ಆಸ್ತಿಯ ವಾರ್ಷಿಕ ರಿಟರ್ನ್ಸ್ನ್ನು ಕಡ್ಡಾಯವಾಗಿ ಒದಗಿಸಬೇಕು ಎಂದು ಹೇಳಿದೆ. ಸರ್ಕಾರಿ ಮತ್ತು ಸಂವಿಧಾನಿಕ ಹುದ್ದೆಯಲ್ಲಿರುವವರ ಆಸ್ತಿ ವಿವರಗಳನ್ನು ಸಾರ್ವಜನಿಕರಿಗೆ ತಿಳಿಕೊಳ್ಳುವುದು ಮತ್ತು ಈ ವರದಿಯನ್ನು ಸಾರ್ವಜನಿಕ ಡೊಮೇನ್‌ಗೆ ಅಪ್‌ಲೋಡ್ ಮಾಡುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಆಸ್ತಿ ವಿವರ ಸಲ್ಲಿಸುವಂತೆ ಕರ್ನಾಟಕದ 224 ಶಾಸಕರಿಗೂ ಡೆಡ್ಲೈನ್ ನೀಡಿದ ಲೋಕಾಯುಕ್ತ ನ್ಯಾಯಮೂರ್ತಿ
ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ನ್ಯಾಯಾಧೀಶರು ತಮ್ಮ ಆಸ್ತಿ ವಿವರಗಳನ್ನು ವಾರ್ಷಿಕ ಆಧಾರದ ಮೇಲೆ ಸೂಕ್ತ ಪ್ರಾಧಿಕಾರಕ್ಕೆ ಸಲ್ಲಿಸುವುದನ್ನು ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರವು ಸೂಕ್ತ ಕಾನೂನನ್ನು ತರಲು ಸಮಿತಿ ಶಿಫಾರಸು ಮಾಡಿದೆ. ಉನ್ನತ ನ್ಯಾಯಾಂಗದ ನ್ಯಾಯಾಧೀಶರು ಆಸ್ತಿಗಳ ಘೋಷಣೆಯು ಸಾರ್ವಜನಿಕ ವ್ಯವಸ್ಥೆಯಲ್ಲಿ ಹೆಚ್ಚಿನ ನಂಬಿಕೆ ಮತ್ತು ವಿಶ್ವಾಸಾರ್ಹತೆಯನ್ನು ತರುತ್ತದೆ ಎಂದು ಹೇಳಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:26 am, Wed, 9 August 23