ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ (National Aeronautics and Space Administration – NASA) ಅತಿದೊಡ್ಡ ಹಾಗೂ ಅತ್ಯಾಧುನಿಕ ವಾಹನ ‘ಪರ್ಸೆವೆರೆನ್ಸ್ ರೋವರ್’ (Perseverance Rover) ಮಂಗಳ ಗ್ರಹವನ್ನು ಸ್ಪರ್ಶಿಸಿದಾಗ ಆ ವಿವರವನ್ನು ಮೊದಲು ಖಚಿತಪಡಿಸಿದ್ದು ಭಾರತೀಯ ಮೂಲದ ವಿಜ್ಞಾನಿ ಡಾ. ಸ್ವಾತಿ ಮೋಹನ್. ಏಳು ತಿಂಗಳ ಬಾಹ್ಯಾಕಾಶ ಯಾನದ ಬಳಿಕ, ಗುರುವಾರ ಮಂಗಳನಲ್ಲಿಗೆ ನೌಕೆ ಕಾಲಿರಿಸಿದಾಗ ‘ರೋವರ್ ಮಂಗಳ ಗ್ರಹಕ್ಕೆ ತಲುಪಿದೆ. ಪ್ರಾಚೀನ ಜೀವಗಳ ಕುರುಹನ್ನು ಹುಡುಕಲು ತಯಾರಾಗಿದೆ’ ಎಂದು ವಿವರಣೆ ನೀಡಿದ್ದರು ಅವರು.
ಅತಿ ಕಠಿಣ ಎನಿಸಿಕೊಂಡಿರುವ ಮಂಗಳಯಾನವನ್ನು ಯಶಸ್ವಿಯಾಗಿಸಿದ ನಾಸಾ ವಿಜ್ಞಾನಿಗಳ ತಂಡದಲ್ಲಿದ್ದ ಭಾರತೀಯ ಮೂಲದ ಸದಸ್ಯೆ ಇವರು. ರೋವರ್ನ ಆ್ಯಟಿಟ್ಯೂಡ್ ಕಂಟ್ರೋಲ್ ಹಾಗೂ ಲ್ಯಾಂಡಿಂಗ್ ಸಿಸ್ಟಮ್ನ ಅಭಿವೃದ್ಧಿಯಲ್ಲಿ ಮುಂಚೂಣಿಯ ಪಾತ್ರ ವಹಿಸಿ, ನೌಕೆ ಮಂಗಳ ಗ್ರಹ ಸ್ಪರ್ಶಿಸುತ್ತಿದ್ದಂತೆ ಅದರ ವಿವರಣೆಯನ್ನು ನೀಡಿದರು.
ಕಾರ್ನೆಲ್ ಯುನಿವರ್ಸಿಟಿಯಲ್ಲಿ ಪದವಿ ಪಡೆದ ಡಾ. ಸ್ವಾತಿ, ಪರ್ಸೆವೆರೆನ್ಸ್ ಮಾರ್ಸ್ ಮಿಷನ್ನಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ನಾಸಾದ ಇತರ ಯೋಜನೆಗಳಲ್ಲಿಯೂ ಸ್ವಾತಿ ಪಾಲ್ಗೊಂಡಿದ್ದರು. ಶನಿ ಗ್ರಹಕ್ಕೆ ಬಾಹ್ಯಾಕಾಶ ಯಾನ ಕೈಗೊಂಡ ನಾಸಾದ ಕ್ಯಾಸ್ಸಿನಿ ಮಿಷನ್ ತಂಡದಲ್ಲೂ ಅವರು ಕಾರ್ಯನಿರ್ವಹಿಸಿದ್ದರು.
ಡಾ. ಸ್ವಾತಿ ಮೋಹನ್ ಬಾಲ್ಯದಲ್ಲೇ ಭಾರತದಿಂದ ಆಮೆರಿಕಾಕ್ಕೆ ತೆರಳಿದ್ದರು. ಅಮೆರಿಕಾದ ಉತ್ತರ ವರ್ಜೀನಿಯಾ-ವಾಷಿಂಗ್ಟನ್ ಡಿಸಿಯಲ್ಲಿ ಅವರು ತಮ್ಮ ಬಾಲ್ಯದ ದಿನಗಳನ್ನು ಕಳೆದರು. ತಮ್ಮ 9ನೇ ವಯಸ್ಸಿನಲ್ಲಿ ನೋಡಿದ ಅಮೆರಿಕಾದ ಸೈನ್ಸ್ ಫಿಕ್ಷನ್ ಸರಣಿ ‘ಸ್ಟಾರ್ ಟ್ರೆಕ್’ ಮೂಲಕ ವಿಜ್ಞಾನ, ಬಾಹ್ಯಾಕಾಶದ ಬಗ್ಗೆ ಆಸಕ್ತಿ ಮೂಡಿಸಿಕೊಂಡರು. ತಮ್ಮ 16ನೇ ವಯಸ್ಸಿನವರೆಗೆ ಶಿಶುವೈದ್ಯೆ ಆಗಬೇಕು ಅಂದುಕೊಂಡಿದ್ದ ಸ್ವಾತಿ ಮೋಹನ್, ಬಳಿಕ ಇಂಜಿನಿಯರ್ ಆಗಿ ಬಾಹ್ಯಾಕಾಶ ವಿಷಯದಲ್ಲಿ ಕೆಲಸ ಮಾಡಬೇಕು ಎಂದು ಆಸಕ್ತಿ ತೋರಿದರು.
Touchdown confirmed. The #CountdownToMars is complete, but the mission is just beginning. pic.twitter.com/UvOyXQhhN9
— NASA (@NASA) February 18, 2021
ಪ್ರಸ್ತುತ ನಾಸಾದ ವಿಜ್ಞಾನಿಯಾಗಿರುವ ಸ್ವಾತಿ, ಮೆಕಾನಿಕಲ್ ಮತ್ತು ಏರೋಸ್ಪೇಸ್ ಇಂಜಿನಿಯರಿಂಗ್ನಲ್ಲಿ ಪದವಿ ಪಡೆದಿದ್ದಾರೆ. ಅಮೆರಿಕಾದ ಎಂಐಟಿ (Massachusetts Institute of Technology – MIT) ಸಂಸ್ಥೆಯಿಂದ ಏರೋನಾಟಿಕ್ಸ್/ಆಸ್ಟ್ರೋನಾಟಿಕ್ಸ್ ವಿಷಯದಲ್ಲಿ MS ಹಾಗೂ PhD ಪದವಿ ಪಡೆದಿದ್ದಾರೆ.
If you watched the Mars landing today, the voice you heard was @DrSwatiMohan. She immigrated to the US from India at age 1, was inspired by Star Trek at 9, then earned a B.S from Cornell in mechanical and aerospace engineering, and an M.S. and Ph.D from MIT in aeronautics. pic.twitter.com/mHZQmz3iPD
— Paul Rogers (@PaulRogersSJMN) February 18, 2021
ದಕ್ಷಿಣ ಕ್ಯಾಲಿಫೋರ್ನಿಯಾದ ಜೆಡ್ ಪ್ರೊಪಲ್ಷನ್ ಲ್ಯಾಬೊರೇಟರಿಯಲ್ಲಿ ಗುರುವಾರ ಸ್ಥಳೀಯ ಸಮಯ ಮಧ್ಯಾಹ್ನ 3.35ಕ್ಕೆ ನಾಸಾ ರೋವರ್ ಮಂಗಳ ಗ್ರಹದ ಮೇಲೆ ಕಾಲಿರಿಸಿದೆ. ಈ ನೌಕೆಯು ಮಂಗಳ ಗ್ರಹದಲ್ಲಿ ಜೀವಗಳ ಅಸ್ತಿತ್ವದ ಬಗ್ಗೆ ಅಧ್ಯಯನ ನಡೆಸಲಿದೆ.
ಇದನ್ನೂ ಓದಿ: Perseverance Rover: ಮಂಗಳದಲ್ಲಿ ಜೀವಗಳ ಅಸ್ತಿತ್ವದ ಬಗ್ಗೆ ಅಧ್ಯಯನ! ಮಂಗಳ ಗ್ರಹಕ್ಕೆ ಕಾಲಿರಿಸಿದ NASA ಬಾಹ್ಯಾಕಾಶ ನೌಕೆ
Published On - 3:17 pm, Fri, 19 February 21