ಕೋವಿಡ್ ಮಾರ್ಗಸೂಚಿ ಉಲ್ಲಂಘನೆ: ತಬ್ಲಿಘಿ ಜಮಾತ್​ನಲ್ಲಿ ಪಾಲ್ಗೊಂಡಿದ್ದ 36 ವಿದೇಶಿಯರು ಆರೋಪ ಮುಕ್ತ

ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದ ತಬ್ಲಿಘಿ ಜಮಾತ್​​ನಲ್ಲಿ ಪಾಲ್ಗೊಳ್ಳುವ ಮೂಲಕ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ್ದಾರೆ ಎಂದು ಆರೋಪ ಹೊತ್ತಿದ್ದ 36 ವಿದೇಶಿಯರನ್ನು ದೆಹಲಿ ನ್ಯಾಯಾಲಯ ಆರೋಪಮುಕ್ತಗೊಳಿಸಿದೆ.

ಕೋವಿಡ್ ಮಾರ್ಗಸೂಚಿ ಉಲ್ಲಂಘನೆ: ತಬ್ಲಿಘಿ ಜಮಾತ್​ನಲ್ಲಿ ಪಾಲ್ಗೊಂಡಿದ್ದ 36 ವಿದೇಶಿಯರು ಆರೋಪ ಮುಕ್ತ
ಸಾಂಕೇತಿಕ ಚಿತ್ರ
ರಶ್ಮಿ ಕಲ್ಲಕಟ್ಟ Edited By:

Updated on: Dec 15, 2020 | 8:06 PM

ನವದೆಹಲಿ: ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದ ತಬ್ಲಿಘಿ ಜಮಾತ್​​ನಲ್ಲಿ ಪಾಲ್ಗೊಳ್ಳುವ ಮೂಲಕ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ್ದಾರೆ ಎಂದು ಆರೋಪ ಹೊತ್ತಿದ್ದ 36 ವಿದೇಶಿಯರನ್ನು ದೆಹಲಿ ನ್ಯಾಯಾಲಯ ಆರೋಪಮುಕ್ತಗೊಳಿಸಿದೆ.

ನಿಜಾಮುದ್ದೀನ್ ಪ್ರದೇಶ ಕೋವಿಡ್ ಹಾಟ್​ಸ್ಪಾಟ್ ಆಗುವ ಮೂಲಕ ಜಮಾತ್ ಮಾರ್ಚ್ ತಿಂಗಳಲ್ಲಿ ಸುದ್ದಿಯಾಗಿತ್ತು. ಜಮಾತ್​ನಲ್ಲಿ ಹಲವಾರು ಮಂದಿ ವಿದೇಶಿಯರು ಭಾಗಿಯಾಗಿದ್ದರು. ಜಮಾತ್​​ನಲ್ಲಿ ಭಾಗಿಯಾಗುವ ಮೂಲಕ ಇವರು ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದಾರೆ. ವೀಸಾ ನಿಯಮ ಉಲ್ಲಂಘನೆ ಮಾಡಿ ಮಿಷನರಿ ಕಾರ್ಯಗಳಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ದೆಹಲಿ ಪೊಲೀಸರು 955 ಮಂದಿ ವಿರುದ್ಧ ಆರೋಪಪಟ್ಟಿ ದಾಖಲಿಸಿದ್ದರು.

ಈ ಪೈಕಿ ಬಹುತೇಕ ತಬ್ಲಿಘಿ ಜಮಾತ್ ಸದಸ್ಯರು ಅನುಮತಿ ಪಡೆದು ಅವರವರ ದೇಶಗಳಿಗೆ ತೆರಳಿದ್ದರು. 44 ಮಂದಿ ದೆಹಲಿಯಲ್ಲಿ ವಿಚಾರಣೆ ಎದುರಿಸಲು ನಿರ್ಧರಿಸಿದ್ದರು. ಇವರಲ್ಲಿ ಎಂಟು ಮಂದಿಯನ್ನು ಬಿಡುಗಡೆ ಮಾಡಿದ್ದ ನ್ಯಾಯಾಲಯವು ಇವರ ವಿರುದ್ಧ ಯಾವುದೇ ಪ್ರಮುಖ ಸಾಕ್ಷ್ಯಗಳಿಲ್ಲ ಎಂದು ಹೇಳಿತ್ತು.

ಮಂಗಳವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ವಿದೇಶಿಯರ ಕಾಯ್ದೆಯ ಸೆಕ್ಷನ್ 14 ಮತ್ತು ಭಾರತೀಯ ದಂಡ ಸಂಹಿತೆ ಸೆಕ್ಷನ್ 270 ಮತ್ತು 271ರ ಅಡಿಯಲ್ಲಿ ಇವರನ್ನು ಬಿಡುಗಡೆ ಮಾಡಿತ್ತು. ಆದಾಗ್ಯೂ ಇವರ ಮೇಲೆ ಸಾಂಕ್ರಾಮಿಕ ರೋಗ ಕಾಯ್ದೆ, ವಿಪತ್ತು ನಿರ್ವಹಣೆ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ ಅಡಿಯಲ್ಲಿ ದೋಷಾರೋಪ ಇತ್ತು.

36 ವಿದೇಶಿಯರನ್ನು ಆರೋಪ ಮುಕ್ತಗೊಳಿಸಿ ಆದೇಶ ನೀಡಿದ ಚೀಫ್ ಮೆಟ್ರೊಪಾಲಿನ್ ಮೆಜಿಸ್ಟ್ರೇಟ್ ಗುರ್ ಮೋಹಿನಾ ಕೌರ್, ಸಂಪೂರ್ಣ ಚಾರ್ಜ್‌ಶೀಟ್ ಮತ್ತು ಅದಕ್ಕೆ ಲಗತ್ತಿಸಲಾದ ದಾಖಲೆಗಳು ಸಂಬಂಧಿತ ಅವಧಿಯಲ್ಲಿ ಇವರು ಮರ್ಕಜ್​ನಲ್ಲಿ ಭಾಗವಹಿಸಿರುವುದಾಗಿ ತೋರಿಸುವುದಿಲ್ಲ. ಆರೋಪದಲ್ಲಿ ಹೇಳಿದಂತೆ ಇವರು ತಬ್ಲೀಗಿ ಕೆಲಸದಲ್ಲಿ ಭಾಗಿಯಾಗಿದ್ದಾರೆ ಎಂದು ತೋರಿಸಲು ಯಾವುದೇ ದಾಖಲೆಗಳಿಲ್ಲ ಎಂದು ಹೇಳಿದ್ದಾರೆ.

ರಿಜಿಸ್ಟರ್​ಗಳ ಪ್ರತಿಯನ್ನು ವಶಪಡಿಸಿಕೊಳ್ಳುವುದಾಗಲೀ, ರೆಕಾರ್ಡ್​ನಲ್ಲಿರಿಸುವುದಾಗಲೀ ಮಾಡಿಲ್ಲ. ಮರ್ಕಜ್​ನಿಂದ ಆಸ್ಪತ್ರೆಗೆ ಅಥವಾ ಕ್ವಾರಂಟೈನ್ ಕೇಂದ್ರಕ್ಕೆ ಕಳಿಸಿದ ಪಟ್ಟಿಯಲ್ಲಿ ಈ ಮಾಹಿತಿ ಇಲ್ಲ ಅಥವಾ ಮರ್ಕಜ್​ನಲ್ಲಿ ಭಾಗಿಯಾದವರ ಪಟ್ಟಿಯೂ ಇಲ್ಲ. ಆರೋಪಗಳ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ ಎಂದು ನ್ಯಾಯಾಲಯ ಹೇಳಿದೆ.

ಪ್ರವಾಸಿ ವೀಸಾ ಕಾಯ್ದೆ ಉಲ್ಲಂಘನೆ, ಐವರು ವಿದೇಶಿ ತಬ್ಲಿಘಿಗಳಿಗೆ ಶಿಕ್ಷೆ

 

Published On - 8:06 pm, Tue, 15 December 20

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us