ಎಥನಾಲ್ ಮಿಶ್ರಣ ಇಲ್ಲದಿದ್ದರೆ ಪೆಟ್ರೋಲ್ ಬೆಲೆ ಈ ಹೊತ್ತಿಗೆ 125 ರೂಗೆ ಏರಿರುತ್ತಿತ್ತು: ಕೇಂದ್ರ ಸರ್ಕಾರ
Petrol Would've Cost Rs 125 per Litre In Delhi Without Ethanol Blending, says Govt: ತೈಲ ಬಿಕ್ಕಟ್ಟಿನಲ್ಲಿ ಭಾರತದಲ್ಲಿ ಪೆಟ್ರೋಲ್ ಬೆಲೆ ತೀರಾ ಹೆಚ್ಚಳ ಆಗುವುದು ಎಥನಾಲ್ನಿಂದ ತಪ್ಪಿದೆ ಎಂದು ಸರ್ಕಾರ ಹೇಳಿದೆ. ಎಥನಾಲ್ ಬೆರಸದೇ ಇದ್ದಿದ್ದರೆ ಪೆಟ್ರೋಲ್ ಬೆಲೆ 125 ರೂಗೆ ಹೋಗುತ್ತಿತ್ತು. ಎಥನಾಲ್ ಮಿಶ್ರಿತ ಪೆಟ್ರೋಲ್ ಆದ್ದರಿಂದ ಬೆಲೆ ನಿಯಂತ್ರಣದಲ್ಲಿರಲು ಸಾಧ್ಯವಾಗಿದೆ ಎಂದು ಸರ್ಕಾರ ವಾದಿಸಿದೆ.

ನವದೆಹಲಿ, ಆಗಸ್ಟ್ 1: ಪೆಟ್ರೋಲ್ಗೆ ಎಥನಾಲ್ ಬೆರೆಸುವ ಸರ್ಕಾರದ ನಿರ್ಧಾರವನ್ನು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಹಾಗು ಇತರರು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಎಥನಾಲ್ ಮಿಶ್ರಣ (Ethanol Blending) ಇಲ್ಲದೇ ಇದ್ದಿದ್ದರೆ ಪೆಟ್ರೋಲ್ ದುಬಾರಿಯಾಗಿ ಹೋಗುತ್ತಿತ್ತು ಎಂದು ಪೆಟ್ರೋಲಿಯಂ ಸಚಿವಾಲಯ ಹೇಳಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರಲ್‌ಗೆ 135 ಡಾಲರ್ ತಲುಪಿದಾಗ, ಶುದ್ಧ ಪೆಟ್ರೋಲ್ ಬೆಲೆ ದೆಹಲಿಯಲ್ಲಿ ಲೀಟರ್‌ಗೆ ₹125 ದಾಟುತ್ತಿತ್ತು. ಆದರೆ ದೇಶೀಯವಾಗಿ ಪೂರೈಕೆಯಾಗುವ ಎಥನಾಲ್ ಅನ್ನು 20% ಪ್ರಮಾಣದಲ್ಲಿ (E20) ಮಿಶ್ರಣ ಮಾಡಿದ್ದರಿಂದ ಗ್ರಾಹಕರಿಗೆ ಪ್ರತಿ ಲೀಟರ್‌ಗೆ ಸುಮಾರು ₹30 ರಷ್ಟು ಉಳಿತಾಯವಾಯಿತು ಎಂದು ಸಚಿವಾಲಯವು ವಾದಿಸಿದೆ.
ಮೈಲೇಜ್ ಮತ್ತು ಇಂಜಿನ್ ಮೇಲಾಗುವ ಪರಿಣಾಮ
ಎಥನಾಲ್ ಮಿಶ್ರಣದಿಂದ ವಾಹನದ ಇಂಜಿನ್ ಹಾಳಾಗುತ್ತದೆ ಅಥವಾ ಫ್ಯುಯೆಲ್ ಪಂಪ್ ಹಾನಿಗೊಳಗಾಗುತ್ತದೆ ಎಂಬ ವದಂತಿಗಳನ್ನು ಕೇಂದ್ರ ತೈಲ ಸಚಿವಾಲಯ ತಳ್ಳಿಹಾಕಿದೆ. ದೇಶದಲ್ಲಿ ಸುಮಾರು 20 ಕೋಟಿಗೂ ಹೆಚ್ಚು ದ್ವಿಚಕ್ರ ವಾಹನಗಳು ಮತ್ತು 3 ಕೋಟಿಗೂ ಹೆಚ್ಚು ಕಾರುಗಳು ಈ ಇಂಧನದಲ್ಲಿ ಸುರಕ್ಷಿತವಾಗಿ ಚಲಿಸುತ್ತಿವೆ.
ಇದನ್ನೂ ಓದಿ: ‘ನಿಂದನೆಯಿಂದ ಏನೂ ಪರಿಹಾರವಾಗಲ್ಲ’: ನೋಯ್ಡಾ ಮಹಿಳೆಯ ಹೇಳಿಕೆ ವಿವಾದದ ನಡುವೆ ತಡರಾತ್ರಿ ಮತ್ತೊಂದು ವಿಡಿಯೋ ಹಂಚಿಕೊಂಡ ಮೋದಿ
ಮೈಲೇಜ್ ವ್ಯತ್ಯಾಸ: E10 ಇಂಧನಕ್ಕಾಗಿ ವಿನ್ಯಾಸಗೊಳಿಸಲಾದ ಹಳೆಯ ವಾಹನಗಳಲ್ಲಿ (BS-III, BS-IV, BS-VI) E20 ಪೆಟ್ರೋಲ್ ಬಳಸಿದಾಗ ಮೈಲೇಜ್‌ನಲ್ಲಿ ಕೇವಲ 2% ರಿಂದ 6% ನಷ್ಟು ಸಣ್ಣ ಪ್ರಮಾಣದ ಇಳಿಕೆ ಕಂಡುಬರಬಹುದು ಎಂದು ARAI (ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ) ವರದಿ ಸ್ಪಷ್ಟಪಡಿಸಿದೆ.
ಸಚಿವ ನಿತಿನ್ ಗಡ್ಕರಿ ಮತ್ತು ಹರ್ದೀಪ್ ಸಿಂಗ್ ಪುರಿ ಅವರ ಸ್ಪಷ್ಟನೆ
ಸಚಿವ ನಿತಿನ್ ಗಡ್ಕರಿ ಅವರು ಲೋಕಸಭೆಯಲ್ಲಿ ಮಾತನಾಡಿ, E20 ಇಂಧನ ತರುವ ಮುನ್ನ ವಾಹನ ತಯಾರಕರು ಮತ್ತು ತಜ್ಞರೊಂದಿಗೆ ವೈಜ್ಞಾನಿಕವಾಗಿ ಚರ್ಚಿಸಿ, ಇಂಜಿನ್ ಬಾಳಿಕೆ ಹಾಗೂ ಕಾರ್ಯಕ್ಷಮತೆಯನ್ನು ಪರೀಕ್ಷಿಸಿದ ನಂತರವೇ ಈ ಯೋಜನೆ ಜಾರಿಗೊಳಿಸಲಾಗಿದೆ. E20 ಬಳಕೆಯಿಂದ ಯಾವುದೇ ವಾಹನಕ್ಕೆ ಹಾನಿಯಾದ ವರದಿಯಾಗಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: LPG Cylinder price: ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ ದರ ₹200ಕ್ಕೂ ಹೆಚ್ಚು ಇಳಿಕೆ
ಇದೇ ವೇಳೆ, ಬಡವರಿಗೆ ಹೋಗಬೇಕಿದ್ದ ಆಹಾರ ಧಾನ್ಯಗಳು ಎಥನಾಲ್ ಯೋಜನೆಗೆ ವರ್ಗವಾಗುತ್ತಿವೆ ಎನ್ನುವ ಆರೋಪವನ್ನು ಸಚಿವ ಹರ್ದೀಪ್ ಸಿಂಗ್ ಪುರಿ ತಳ್ಳಿಹಾಕಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




