ಚೆನ್ನೈ: ತಮಿಳುನಾಡು ಸರ್ಕಾರ (Tamil Nadu Government) ನಡೆಸುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಮಿಳು ಭಾಷೆಯ ಪ್ರಶ್ನೆಪತ್ರಿಕೆಯನ್ನು ಕಡ್ಡಾಯಗೊಳಿಸಿ ತಮಿಳುನಾಡು ವಿಧಾನಸಭೆಯು ಇಂದು (ಶುಕ್ರವಾರ) ಕಾಯ್ದೆಗೆ ತಿದ್ದುಪಡಿ ಮಾಡಿದೆ. 2021ರ ಡಿಸೆಂಬರ್ 1ರಿಂದ ರಾಜ್ಯ ಸರ್ಕಾರಿ ಸೇವೆಗಳಿಗೆ ನೇಮಕಾತಿಗಾಗಿ ತಮಿಳು ಭಾಷೆಯ (Tamil Language) ಪೇಪರ್‌ನಲ್ಲಿ ತೇರ್ಗಡೆಯಾಗುವುದನ್ನು ಕಡ್ಡಾಯಗೊಳಿಸಲಾಗಿದೆ.
ಇದರ ಪ್ರಕಾರ, ಯಾವುದೇ ವ್ಯಕ್ತಿಯು ನೇರ ನೇಮಕಾತಿಯ ಮೂಲಕ ಯಾವುದೇ ಸೇವೆಗೆ ನೇಮಕಾತಿಗೆ ಅರ್ಹನಾಗಿರುವುದಿಲ್ಲ. ರಾಜ್ಯದ ಅಧಿಕೃತ ಭಾಷೆ ಅಂದರೆ ತಮಿಳು ಬಗ್ಗೆ ಸಾಕಷ್ಟು ಜ್ಞಾನ ಇರುವುದು ಅಗತ್ಯ ಎಂದು ಸೂಚಿಸಲಾಗಿದೆ. ತಮಿಳು ಭಾಷೆಯ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಮಾತ್ರ ಸರ್ಕಾರಿ ಸೇವೆ ಮತ್ತು ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಕೆಲಸ ಮಾಡಲು ಅರ್ಹರು ಎಂದು ತಮಿಳುನಾಡು ಸರ್ಕಾರ ಪ್ರಕಟಿಸಿದೆ. ಈ ತಿದ್ದುಪಡಿ ಮಸೂದೆಯನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.
ಇದನ್ನೂ ಓದಿ: ಸೇತುಸಮುದ್ರಂ ಯೋಜನೆಗೆ ಷರತ್ತುಗಳೊಂದಿಗೆ ಬೆಂಬಲ ನೀಡಿದ ಬಿಜೆಪಿ; ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ
2021ರ ಡಿಸೆಂಬರ್ 1ರ ಸರ್ಕಾರಿ ಆದೇಶದ ಪ್ರಕಾರ, ತಮಿಳುನಾಡು ಸರ್ಕಾರ ನಡೆಸುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ 10ನೇ ತರಗತಿಯ ಮಾನದಂಡಗಳಿಗೆ ಅನುಗುಣವಾಗಿ ತಮಿಳು ಭಾಷೆಯ ಪೇಪರ್ ಕಡ್ಡಾಯವಾಗಿದೆ. ಇದರಲ್ಲಿ ಕನಿಷ್ಠ ಶೇ. 40 ಅಂಕ ಪಡೆಯಬೇಕು. ಅರ್ಹತಾ ತಮಿಳು ಭಾಷೆಯ ಪತ್ರಿಕೆಯಲ್ಲಿ ಆಕಾಂಕ್ಷಿಗಳು ತೇರ್ಗಡೆಯಾಗದಿದ್ದರೆ ಒಟ್ಟಾರೆ ಪರೀಕ್ಷೆಯ ಯೋಜನೆಯ ಭಾಗವಾಗಿರುವ ಇತರ ವಿಷಯಗಳ ಪತ್ರಿಕೆಗಳನ್ನು ಮೌಲ್ಯಮಾಪನಕ್ಕೆ ತೆಗೆದುಕೊಳ್ಳಲಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ತಮಿಳು ಭಾಷೆಯ ಪೇಪರ್ ಕಡ್ಡಾಯವಾಗಿದ್ದು, ಅದರಲ್ಲಿ ಉತ್ತೀರ್ಣರಾದರೆ ಮಾತ್ರ ಸರ್ಕಾರಿ ಮತ್ತು ಪಿಎಸ್‌ಯು ಸೇವೆಗಳಿಗೆ ಪ್ರವೇಶಕ್ಕೆ ಅರ್ಹತೆ ಪಡೆಯಲಿದ್ದಾರೆ. ಈ ನಿಯಮವು ತಮಿಳುನಾಡು ಪಬ್ಲಿಕ್ ಸರ್ವಿಸ್ ಕಮಿಷನ್ ಸೇರಿದಂತೆ ಎಲ್ಲಾ ರಾಜ್ಯ ಸರ್ಕಾರದ ನೇಮಕಾತಿ ಏಜೆನ್ಸಿಗಳಿಗೆ ಅನ್ವಯವಾಗುತ್ತದೆ. ಈ ವಿಭಾಗವು ಅರ್ಜಿಯ ಸಮಯದಲ್ಲಿ ತಮಿಳಿನಲ್ಲಿ ಸಾಕಷ್ಟು ಜ್ಞಾನವನ್ನು ಹೊಂದಿರದ ಅಭ್ಯರ್ಥಿಗಳು ನೇಮಕಾತಿಗಾಗಿ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡುತ್ತದೆ.
ಇದನ್ನೂ ಓದಿ: ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಪುತ್ರ ಕ್ರೀಡಾ ಸಚಿವರಾಗಿ ಸಂಪುಟಕ್ಕೆ ಸೇರ್ಪಡೆ
ತಮಿಳುನಾಡಿನ ಎಲ್ಲಾ ರಾಜ್ಯ ಸರ್ಕಾರಿ ಇಲಾಖೆಗಳು ಮತ್ತು ರಾಜ್ಯ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಶೇ. 100ರಷ್ಟು ತಮಿಳು ಯುವಕರ ನೇಮಕಾತಿಯನ್ನು ಮಾಡಲು ಎಲ್ಲಾ ನೇಮಕಾತಿ ಏಜೆನ್ಸಿಗಳು ನಡೆಸುವ ನೇರ ನೇಮಕಾತಿಗಾಗಿ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಡ್ಡಾಯ ತಮಿಳು ಭಾಷಾ ಪತ್ರಿಕೆಯನ್ನು ಪರಿಚಯಿಸಲಾಗಿದೆ.