AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಳುತ್ತಿದ್ದ ಕಂದನಿಗೆ ಹಾಲುಣಿಸಿದ ತಾಯಿ; ಎದ್ದು ನೋಡುವಾಗ ಮಗು ಸಾವು!

ತಮಿಳುನಾಡಿನಲ್ಲಿ ದುರಂತ ಘಟನೆಯೊಂದು ನಡೆದಿದೆ. ಅಮ್ಮನ ಎದೆಹಾಲು ಕುಡಿದ ನಂತರ ಮಗು ಸಾವನ್ನಪ್ಪಿದೆ. ಡಿಸೆಂಬರ್ 7ರಂದು ಬೆಳಿಗ್ಗೆ 4 ಗಂಟೆಗೆ ಮಗು ಒಂದೇಸಮನೆ ಅಳುತ್ತಿತ್ತು. ಆ ಮಗುವಿನ ತಾಯಿ ನಿದ್ರೆಯಿಂದ ಎಚ್ಚರಗೊಂಡು ಮಗುವಿಗೆ ಹಾಲು ಕುಡಿಸಿದಳು. ನಂತರ, ಅವರಿಬ್ಬರೂ ನಿದ್ರೆ ಮಾಡಿದರು. ಆದರೆ ಬೆಳಿಗ್ಗೆ ಆಕೆಗೆ ಎಚ್ಚರವಾದಾಗ ಮಗು ಮೃತಪಟ್ಟಿತ್ತು.

ಅಳುತ್ತಿದ್ದ ಕಂದನಿಗೆ ಹಾಲುಣಿಸಿದ ತಾಯಿ; ಎದ್ದು ನೋಡುವಾಗ ಮಗು ಸಾವು!
Breastfeeding Baby
ಸುಷ್ಮಾ ಚಕ್ರೆ
|

Updated on: Dec 09, 2025 | 3:23 PM

Share

ಚೆನ್ನೈ, ಡಿಸೆಂಬರ್ 9: ತಮಿಳುನಾಡಿನ ತಿರುಪುರ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮಗುವೊಂದು ಬೆಳಗಿನ ಜಾವ ಎದೆಹಾಲು ಕುಡಿದು ಮಲಗಿದ ಬಳಿಕ ಸಾವನ್ನಪ್ಪಿದೆ. ಇತ್ತೀಚೆಗೆ, ವಿಶೇಷವಾಗಿ ಹಾಲುಣಿಸುವ (Breastfeeding) ಸಮಯದಲ್ಲಿ ಶಿಶುಗಳ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ತಿರುಪುರ ಜಿಲ್ಲೆಯ ಶ್ರೀನಿ ಎಂಬ 1 ತಿಂಗಳ ಗಂಡು ಮಗುವಿಗೆ ತಾಯಿ ಹಾಲುಣಿಸಿದ ನಂತರ ಸಾವನ್ನಪ್ಪಿದೆ.

21 ವರ್ಷದ ಅನಿಲ್ ತಿರುಪುರ ಜಿಲ್ಲೆಯ ಪಲ್ಲಡಂ ಪ್ರದೇಶದವರು. ಅವರ 20 ವರ್ಷದ ಪತ್ನಿ ಪೂಜಾ ಅವರಿಗೆ ಶ್ರೀನಿ ಎಂಬ 1 ತಿಂಗಳ ಗಂಡು ಮಗುವಿದೆ. ಕಳೆದ ಕೆಲವು ದಿನಗಳಿಂದ, ಪೂಜಾ ತೀವ್ರ ತಲೆನೋವು ಮತ್ತು ಕಾಲು ನೋವನ್ನು ಅನುಭವಿಸುತ್ತಿದ್ದರು. ಇದರಿಂದಾಗಿ, ಅವರು ಚಿಕಿತ್ಸೆಗಾಗಿ ಪಲ್ಲಡಂ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಕೊಯಮತ್ತೂರು ಸರ್ಕಾರಿ ಆಸ್ಪತ್ರೆಗೆ ಹೋಗುವಂತೆ ವೈದ್ಯರು ಸೂಚಿಸಿದರು.

ಇದನ್ನೂ ಓದಿ: ಎದೆಹಾಲು ಕುಡಿಸುವುದರಿಂದ ತಾಯಂದಿರ ಆರೋಗ್ಯಕ್ಕೂ ಇದೆ ಉಪಯೋಗ!

ಅದರಂತೆ, ಪೂಜಾ ನವೆಂಬರ್ 28ರಂದು ಕೊಯಮತ್ತೂರು ಸರ್ಕಾರಿ ಆಸ್ಪತ್ರೆಗೆ ಹೋಗಿ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇನ್ನೂ ಆಸ್ಪತ್ರೆಯಲ್ಲಿದ್ದ ಅವರ ಮಗು ಡಿಸೆಂಬರ್ 7ರಂದು ಬೆಳಿಗ್ಗೆ 4 ಗಂಟೆಗೆ ಜೋರಾಗಿ ಅಳುತ್ತಿತ್ತು. ಪೂಜಾ ನಿದ್ರೆಯಿಂದ ಎಚ್ಚರಗೊಂಡು ಮಗುವಿಗೆ ಹಾಲುಣಿಸಿದರು. ನಂತರ, ಅವರು ಮತ್ತು ಮಗು ಇಬ್ಬರೂ ಮತ್ತೆ ನಿದ್ರೆಗೆ ಜಾರಿದರು.

ಬೆಳಿಗ್ಗೆ ಎದ್ದಾಗ ಪೂಜಾ ಮಗು ಅಲುಗಾಡದೆ ಮಲಗಿರುವುದನ್ನು ಗಮನಿಸಿ ಆತಂಕಗೊಂಡು ತಕ್ಷಣ ತನ್ನ ಗಂಡ ಅನಿಲ್‌ಗೆ ಮಾಹಿತಿ ನೀಡಿದರು. ಮಗುವನ್ನು ಪರೀಕ್ಷಿಸಿದ ವೈದ್ಯರು ಮಗು ಈಗಾಗಲೇ ಮೃತಪಟ್ಟಿದೆ ಎಂದು ಹೇಳಿದರು. ಇದನ್ನು ಕೇಳಿ ಪೂಜಾ ಮತ್ತು ಅನಿಲ್ ಆಘಾತಕ್ಕೊಳಗಾದರು. ಈ ಬಗ್ಗೆ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಮಗುವಿನ ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಇದನ್ನೂ ಓದಿ: ನವಜಾತ ಶಿಶುವಿಗೆ ಎದೆಹಾಲು ಉಣಿಸಿ ರಕ್ಷಿಸಿದ ಮಹಿಳಾ ಪೊಲೀಸ್ ಅಧಿಕಾರಿ, ಶ್ಲಾಘಿಸಿದ ಹೈಕೋರ್ಟ್

ಹಾಲು ಕುಡಿದ ತಕ್ಷಣ ಮಗುವನ್ನು ನಿದ್ರೆ ಮಾಡಿಸಿದ್ದರಿಂದ ನಿದ್ರೆಯಲ್ಲಿ ಉಸಿರುಗಟ್ಟಿ ಸಾವನ್ನಪ್ಪಿರಬಹುದು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಅಥವಾ ನಿದ್ರೆಯಲ್ಲೇ ಹಾಲು ಕುಡಿಸುವಾಗ ಉಸಿರುಗಟ್ಟಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಆದ್ದರಿಂದ, ಮಗುವಿನ ಸಾವಿಗೆ ನಿಖರವಾದ ಕಾರಣ ಶವಪರೀಕ್ಷೆಯ ನಂತರವೇ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯಾವಾಗಲೂ 6 ತಿಂಗಳೊಳಗಿನ ಶಿಶುಗಳಿಗೆ ಹಾಲುಣಿಸುವಾಗ ಹೆಚ್ಚಿನ ಕಾಳಜಿ ಅಗತ್ಯ. ಶಿಶುಗಳಿಗೆ ಹಾಲು ಕುಡಿಯುವಾಗ ಉಸಿರುಗಟ್ಟುವ ಸಾಧ್ಯತೆ ಹೆಚ್ಚು. ಆದ್ದರಿಂದ, ಮಗು ಚೆನ್ನಾಗಿ ಹಾಲು ಕುಡಿಯುತ್ತಿದೆಯೇ ಅಥವಾ ಹಾಲು ಕುಡಿಯುವಾಗ ತೊಂದರೆ ಅನುಭವಿಸುತ್ತಿದೆಯೇ ಎಂದು ತಾಯಂದಿರುವ ನೋಡುತ್ತಲೇ ಇರಬೇಕು. ಹಾಲುಣಿಸಿದ ನಂತರ ಮಗುವನ್ನು ಕನಿಷ್ಠ 5 ರಿಂದ 10 ನಿಮಿಷಗಳ ಕಾಲ ನಿಮ್ಮ ಭುಜ ಅಥವಾ ತೋಳಿನ ಮೇಲೆ ಹಿಡಿದುಕೊಳ್ಳಬೇಕು. ಬೆನ್ನನ್ನು ನಿಧಾನವಾಗಿ ತಟ್ಟುತ್ತಾ ಆ ಮಗು ತೇಗುವಂತೆ ನೋಡಿಕೊಳ್ಳಬೇಕೆಂದು ವೈದ್ಯರು ಹೇಳುತ್ತಲೇ ಇರುತ್ತಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ