
ಚೆನ್ನೈ, ಸೆಪ್ಟೆಂಬರ್ 2: ತಮಿಳುನಾಡಿನಲ್ಲಿ ಇರುವ 52 ಪ್ರಮುಖ ದೇವಾಲಯಗಳ ಒಳಗೆ ಸ್ಮಾರ್ಟ್‌ಫೋನ್‌ಗಳನ್ನು ತೆಗೆದುಕೊಂಡು ಹೋಗುವುದು ಮತ್ತು ಬಳಸುವುದನ್ನು ಮುಖ್ಯಮಂತ್ರಿ ವಿಜಯ್ ನೇತೃತ್ವದ ಸರ್ಕಾರ ನಿಷೇಧಿಸಿದೆ. ಈ ಹೊಸ ನಿಯಮಗಳು ಮಂಗಳವಾರದಿಂದ ಜಾರಿಗೆ ಬಂದಿವೆ. ಸ್ಮಾರ್ಟ್‌ಫೋನ್ ತರುವ ಭಕ್ತರು ಅವುಗಳನ್ನು ನಿಗದಿತ ಕೌಂಟರ್‌ಗಳಲ್ಲಿ ಜಮಾ ಮಾಡಿ, ಪ್ರತಿ ಫೋನ್‌ಗೆ 5 ರೂಪಾಯಿ ಪಾವತಿಸಬೇಕಾಗುತ್ತದೆ. ಆದರೆ, ಕ್ಯಾಮೆರಾ ಇಲ್ಲದ ಮೊಬೈಲ್ ಫೋನ್‌ಗಳನ್ನು ದೇವಾಲಯದ ಒಳಗೆ ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗಿದೆ.
5 ರೂಪಾಯಿ ಠೇವಣಿ ಶುಲ್ಕ ಮತ್ತು ಟೋಕನ್:
ತಮಿಳುನಾಡಿನ ದೇವಸ್ಥಾನಕ್ಕೆ ಬರುವ ಭಕ್ತರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಪ್ರವೇಶ ದ್ವಾರದಲ್ಲಿರುವ ವಿಶೇಷ ಕೌಂಟರ್‌ಗಳಲ್ಲಿ ಜಮಾ ಮಾಡಬೇಕಾಗುತ್ತದೆ. ಪ್ರತಿ ಮೊಬೈಲ್‌ಗೆ 5 ರೂ. ಶುಲ್ಕ ವಿಧಿಸಲಾಗುತ್ತದೆ. ಫೋನ್ ಜಮಾ ಮಾಡಿದ ನಂತರ ಭಕ್ತರಿಗೆ ರಸೀದಿ ಅಥವಾ ಟೋಕನ್ ನೀಡಲಾಗುತ್ತಿದ್ದು, ದರ್ಶನದ ನಂತರ ಅದನ್ನು ತೋರಿಸಿ ತಮ್ಮ ಮೊಬೈಲ್ ಹಿಂಪಡೆಯಬಹುದು. ಕ್ಯಾಮೆರಾ ಆಪ್ಷನ್ ಇಲ್ಲದ ಕೀಪ್ಯಾಡ್ ಫೋನ್‌ಗಳನ್ನು ದೇವಸ್ಥಾನದೊಳಗೆ ತೆಗೆದುಕೊಂಡು ಹೋಗಬಹುದು.
ಇದನ್ನೂ ಓದಿ: ತಮಿಳುನಾಡು ಮೈತ್ರಿಕೂಟದಲ್ಲಿ ಪಿಎಂ ಗಾದಿ ಜಟಾಪಟಿ, ಸಿಎಂ ವಿಜಯ್ ಪರ ಟಿವಿಕೆ ಬ್ಯಾಟಿಂಗ್, ಕಾಂಗ್ರೆಸ್‌ನಿಂದ ರಾಜೀನಾಮೆ ಅಸ್ತ್ರ
ತಮಿಳುನಾಡು ಸರ್ಕಾರದ ನಿರ್ಧಾರಕ್ಕೆ ಕಾರಣ:
ದೇವಸ್ಥಾನದ ಆವರಣದಲ್ಲಿ ಭಕ್ತರು, ವಿಶೇಷವಾಗಿ ಯುವಕರು, ಸೆಲ್ಫಿ, ವಿಡಿಯೋ ಮತ್ತು ಸೋಷಿಯಲ್ ಮೀಡಿಯಾ ರೀಲ್ಸ್‌ಗಳನ್ನು ಮಾಡುವುದರಿಂದ ದೇವಸ್ಥಾನದ ಆಧ್ಯಾತ್ಮಿಕ ವಾತಾವರಣಕ್ಕೆ ಧಕ್ಕೆಯಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ದೇವಸ್ಥಾನಗಳಲ್ಲಿ ಸಂಗ್ರಹಿಸುವ ಈ 5 ರೂ. ಶುಲ್ಕವು ಸರ್ಕಾರದ ಆದಾಯಕ್ಕಲ್ಲ, ಬದಲಾಗಿ ಮೊಬೈಲ್ ರಕ್ಷಣೆಗಾಗಿ ಸಿಬ್ಬಂದಿ ನೇಮಕ, ಲಾಕರ್ ವ್ಯವಸ್ಥೆ ಮತ್ತು ಭದ್ರತಾ ಮೂಲಸೌಕರ್ಯದ ವೆಚ್ಚವನ್ನು ಸರಿದೂಗಿಸಲು ಬಳಸಲಾಗುತ್ತದೆ.
ಯಾವೆಲ್ಲ ಪ್ರಮುಖ ದೇವಸ್ಥಾನಗಳಲ್ಲಿ ನಿಷೇಧ?:
ಮಧುರೈ ಮೀನಾಕ್ಷಿ ಸುಂದರೇಶ್ವರರ್ ದೇವಾಲಯ, ತಂಜಾವೂರಿನ ಬೃಹದೀಶ್ವರ ದೇವಾಲಯ, ಕಾಂಚಿಪುರಂನ ಕಾಮಾಕ್ಷಿ ಅಮ್ಮನ್ ಮತ್ತು ವರದರಾಜ ಪೆರುಮಾಳ್ ದೇವಾಲಯ, ಶ್ರೀರಂಗಂ ರಂಗನಾಥಸ್ವಾಮಿ ದೇವಾಲಯ, ಪಳನಿ ದಂಡಾಯುಧಪಾಣಿ ದೇವಾಲಯ, ಮತ್ತು ರಾಮೇಶ್ವರಂನ ರಾಮನಾಥಸ್ವಾಮಿ ದೇವಾಲಯ ಸೇರಿದಂತೆ 52 ಪ್ರಸಿದ್ಧ ದೇವಾಲಯಗಳಲ್ಲಿ ಈ ನಿಯಮ ಜಾರಿಗೆ ಬಂದಿದೆ.
ಇದನ್ನೂ ಓದಿ: ಡಿಎಂಕೆ ಅಧಿಕಾರಾವಧಿಯಲ್ಲಿ ರೈತರು, ಶಿಕ್ಷಕರ ವಿರುದ್ಧ ದಾಖಲಾಗಿದ್ದ ಕೇಸ್ ಹಿಂಪಡೆಯಲು ಸಿಎಂ ವಿಜಯ್ ನಿರ್ಧಾರ
ವಿಐಪಿಗಳೂ ಫೋಟೋ ತೆಗೆಯುವಂತಿಲ್ಲ:
ದೇವಸ್ಥಾನದಲ್ಲಿ ದೇವರ ವಿಗ್ರಹಗಳು ಮತ್ತು ಪೂಜಾ ಕೈಂಕರ್ಯಗಳ ವಿಡಿಯೋ ಅಥವಾ ಫೋಟೋ ತೆಗೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ವಿಐಪಿಗಳು, ಸಾರ್ವಜನಿಕ ಗಣ್ಯರು ಅಥವಾ ಚಲನಚಿತ್ರ ತಾರೆಯರ ಫೋಟೋ ತೆಗೆಯುವುದಕ್ಕೂ ಯಾವುದೇ ರೀತಿಯ ಅನುಮತಿ ನೀಡಬಾರದು ಎಂದು ಸರ್ಕಾರ ಸೂಚಿಸಿದೆ. ಈ ಬಗ್ಗೆ ದೇವಾಲಯದ ಆವರಣ ಹಾಗೂ ಪಾರ್ಕಿಂಗ್ ಸ್ಥಳಗಳಲ್ಲಿ ಹಲವು ಭಾಷೆಗಳ ಮಾಹಿತಿ ಫಲಕಗಳನ್ನು ಹಾಕಲಾಗಿದ್ದು, ಸ್ಪೀಕರ್ಗಳ ಮೂಲಕವೂ ಭಕ್ತರಿಗೆ ಜಾಗೃತಿ ಮೂಡಿಸಲಾಗುತ್ತಿದೆ.
ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು ಡಿಸೆಂಬರ್ 2, 2022ರಂದು ನೀಡಿದ ಆದೇಶದಂತೆ ಈ ಕ್ರಮ ಕೈಗೊಳ್ಳಲಾಗಿದೆ. ತಿರುಚೆಂದೂರಿನ ಅರುಳ್ಮಿಗು ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಫೋನ್ ಬಳಕೆಗೆ ತಡೆ ಕೋರಿ ಸೀತಾರಾಮನ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ನಿರ್ದೇಶನ ನೀಡಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ