ಚೆನ್ನೈ: ಭಾರತದೆಲ್ಲೆಡೆ ಕೊರೊನಾ ಎರಡನೇ ಅಲೆಯಲ್ಲಿ ಅತ್ಯಧಿಕ ಪ್ರಮಾಣದ ಕೊವಿಡ್ ಪ್ರಕರಣಗಳು ದಾಖಲಾಗಿತ್ತು. ಇದೇ ವೇಳೆಗೆ ದೇಶದಲ್ಲಿ ಕೊರೊನಾ ವಿರುದ್ಧದ ಲಸಿಕಾ ಅಭಿಯಾನ ಕೂಡ ಚುರುಕಾಗಿತ್ತು. ಕೊರೊನಾ ಸೋಂಕು ನಿಯಂತ್ರಣದಲ್ಲಿ ಲಸಿಕೆಯ ಪಾತ್ರ ಮಹತ್ವದ್ದು ಎಂದು ತಿಳಿಸಲಾಗಿತ್ತು. ಆದರೂ ಕೆಲವೆಡೆ ಜನರು ಲಸಿಕೆ ಪಡೆದುಕೊಳ್ಳಲು ಮುಂದಾಗಿರಲಿಲ್ಲ. ಅಂತಹ ಜನರನ್ನು ಲಸಿಕೆ ಪಡೆಯುವಂತೆ, ಲಸಿಕಾ ಕೇಂದ್ರದತ್ತ ಆಕರ್ಷಿಸಲು ವಿನೂತನ ಪ್ರಯತ್ನವೊಂದನ್ನು ಇಲ್ಲಿ ಕೈಗೊಳ್ಳಲಾಗಿದೆ. ಅದೇನು ಹೊಸ ಹೆಜ್ಜೆ ಎಂದು ಇಲ್ಲಿದೆ ಮಾಹಿತಿ.
ಲಸಿಕೆ ಹಾಕಿಸಿ, ಸೀರೆ, ಬಿರಿಯಾನಿ, ಚಿನ್ನದ ನಾಣ್ಯ ತೆಗೆದುಕೊಂಡು ಹೋಗಿ ಎಂಬ ಆಕರ್ಷಕ ಆಫರ್ನ್ನು ಜನರಿಗೆ ನೀಡಲಾಗಿದೆ. ಈ ವಿಶಿಷ್ಟ ಲಸಿಕಾ ಅಭಿಯಾನ ಆಗಿರುವುದು ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯ ಕೋವಲಂ ಎಂಬ ಗ್ರಾಮದಲ್ಲಿ. ಇಲ್ಲಿನ ಮೂರು ಎಂಬ ಸರಕಾರೇತರ ಸಂಸ್ಥೆಗಳು (ಎನ್ಜಿಒ) ಲಸಿಕೆ ವಿತರಣೆಗೆ ವಿನೂತನ ಅಭಿಯಾನ ಆರಂಭಿಸಿದೆ.
ಕೊರೊನಾ ಲಸಿಕೆ ಹಾಕಿಸಿಕೊಂಡವರಿಗೆ ಸೀರೆ, ಫ್ರಿಡ್ಜ್, ವಾಷಿಂಗ್ ಮಷಿನ್, ಚಿನ್ನದ ನಾಣ್ಯ ನೀಡುವುದಾಗಿ ಘೋಷಿಸಿಕೊಂಡಿದೆ. ಈ ವಿಭಿನ್ನ ಪ್ರಯತ್ನದಿಂದ ಗ್ರಾಮದಲ್ಲಿ ಪ್ರತಿನಿತ್ಯ ನೂರಾರು ಮಂದಿ ಲಸಿಕೆಗೆ ನೋಂದಣಿ ಮಾಡಿಸಿಕೊಂಡು, ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಹೀಗೆ ಲಸಿಕೆ ಹಾಕಿಸಿಕೊಂಡ ಜನರಿಗೆಲ್ಲಾ ಎನ್ಜಿಒ ಮೂಲಕ ಬಿರಿಯಾನಿ ನೀಡಿ, ಹೆಣ್ಣು ಮಕ್ಕಳಿಗೆ ಸೀರೆ ಹಾಗೂ ಗಂಡು ಮಕ್ಕಳಿಗೆ ಮೊಬೈಲ್ ಫೋನ್ ರೀಚಾರ್ಜ್ ಮಾಡಿಸಿಕೊಡುತ್ತಿದ್ಧಾರೆ.
ಹೀಗೆ ಕೊರೊನಾ ಲಸಿಕೆ ಪ್ರಕ್ರಿಯೆ ಸಂಪೂರ್ಣ ಮುಕ್ತಾಯವಾದ ಬಳಿಕ ಲಕ್ಕಿಡಿಪ್ ಡ್ರಾ ಮಾಡುವ ಮೂಲಕ ವಾಷಿಂಗ್ ಮಷಿನ್ ಸೇರಿದಂತೆ 10 ಜನ ವಿಜೇತರಿಗೆ ಚಿನ್ನದ ನಾಣ್ಯ ನೀಡುವುದಾಗಿ ಸಂಸ್ಥೆಗಳು ಘೋಷಣೆ ಮಾಡಿದೆ. ಹೀಗಾದರು ಜನರು ಭಯ, ಆಲಸ್ಯ ಬಿಟ್ಟು ಲಸಿಕೆ ಹಾಕಿಸಿಕೊಳ್ಳಲು ಬೇಗನೇ ಮುಂದಾಗುತ್ತಾರೆ ಎಂಬ ನಿರೀಕ್ಷೆಯಿಂದ ಸಂಸ್ಥೆ ಈ ಯೋಜನೆಗೆ ಕೈಹಾಕಿದೆ.
ಅಂದಹಾಗೆ ಈ ಪ್ರಯತ್ನಕ್ಕೆ ಮೂರು ಎನ್ಜಿಒಗಳು ಜೊತೆಯಾಗಿವೆ. ಎಸ್ಟಿಎಸ್ ಫೌಂಡೇಷನ್, ಸಿಎನ್ ರಾಮದಾಸ್ ಚಾಂಪಿಯನ್ಸ್ ಡೆವೆಲಪ್ಮೆಂಟ್ ಟ್ರಸ್ಟ್, ಡಾನ್ ಬಾಸ್ಕೋ ಸ್ಕೂಲ್ ಅಲುಮ್ನಿ ಗ್ರೂಪ್- 1992 ಈ ಮೂರು ತಂಡಗಳು ಸೇರಿ ಈ ಪ್ರಯತ್ನ ಮಾಡುತ್ತಿವೆ. ಈ ಲಸಿಕೆ ಅಭಿಯಾನಕ್ಕೂ ಮೊದಲು ಲಸಿಕೆ ಪಡೆಯಲು ಬರುತ್ತಿದ್ದ ಗ್ರಾಮಸ್ಥರ ಸಂಖ್ಯೆ ಬಹಳ ಕಡಿಮೆ ಇತ್ತು. ಈಗ ಅಧಿಕವಾಗಿದೆ ಎಂದು ತಿಳಿದುಬಂದಿದೆ.
ಕೋವಲಂ ಗ್ರಾಮವನ್ನು ಶೇ. 100ರಷ್ಟು ಲಸಿಕೆ ಪಡೆದುಕೊಂಡ ತಮಿಳುನಾಡಿನ ಮೊದಲ ಗ್ರಾಮವಾಗಿ ಮಾಡುವ ಆಸೆಯನ್ನು ಈ ತಂಡದವರು ಹೊಂದಿದ್ದಾರೆ. ಅದಕ್ಕಾಗಿ ಟಿವಿ ನಟ- ನಟಿಯರಿಂದ ಲಸಿಕೆ ಬಗ್ಗೆ ಜಾಗೃತಿ ವಿಡಿಯೋ ತುಣುಕುಗಳನ್ನು ಕೂಡ ಕೇಳಿ ಪಡೆದುಕೊಂಡಿದ್ಧಾರೆ. ಸ್ಥಳೀಯ ವಾಟ್ಸಾಪ್ ಗುಂಪುಗಳಲ್ಲಿ ಅದನ್ನು ಹಂಚಿಕೊಂಡು ಜಾಗೃತಿ ಮೂಡಿಸುತ್ತಿದ್ಧಾರೆ.
ಈ ಅಭಿಯಾನವನ್ನು ತಮಿಳುನಾಡಿನ ಇತರ ಹತ್ತು ಕಡೆಗಳಲ್ಲಿಯೂ ನಡೆಸಬೇಕು ಎಂಬುದು ಈ ತಂಡದ ಉದ್ದೇಶವಾಗಿದೆ. ಸುಮಾರು 50 ಸಾವಿರದಷ್ಟು ಜನರು ಲಸಿಕೆ ಪಡೆಯುವಂತೆ ಪ್ರೋತ್ಸಾಹಿಸುವುದು ತಮ್ಮ ಉದ್ದೇಶ ಎಂದು ಅವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Corona Vaccine: ಕೊವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಕೊರೊನಾದ ವಿರುದ್ಧ ಪರಿಣಾಮಕಾರಿಯೇ?
Corona Vaccine: ವಿದೇಶದಲ್ಲಿ ಉದ್ಯೋಗ, ವ್ಯಾಸಂಗ ಮಾಡುವವರಿಗೆ ಲಸಿಕೆ; ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಚಾಲನೆ
Published On - 10:32 pm, Mon, 31 May 21