ನೇಮಕಾತಿಗಾಗಿ ಇಂಗ್ಲಿಷ್ ಮತ್ತು ಹಿಂದಿಯಲ್ಲೇ ಪರೀಕ್ಷೆ, ಇದರಲ್ಲಿ ಏನೇನೂ ಬದಲಾವಣೆ ಇಲ್ಲ ಎಂದ ಸಿಆರ್‌ಪಿಎಫ್
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದು, ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಪರೀಕ್ಷೆಗಳನ್ನು ನಡೆಸಲು ಸಿಆರ್‌ಪಿಎಫ್ ಹೊರಡಿಸಿದ ಅಧಿಸೂಚನೆಯನ್ನು ತಿದ್ದುಪಡಿ ಮಾಡಬೇಕು ಎಂದು ಒತ್ತಾಯಿಸಿದ್ದರು.
ತಮಿಳುನಾಡು (Tamil nadu) ಮತ್ತು ತೆಲಂಗಾಣ (Telangana) ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ನೇಮಕಾತಿಯಲ್ಲಿ ಭಾಷಾ ಸಮಸ್ಯೆಯನ್ನು ಪ್ರಸ್ತಾಪಿಸಿದ ಮೂರು ದಿನಗಳ ನಂತರ, ಅದನ್ನು ಬದಲಾಯಿಸುವ ಯಾವುದೇ ಯೋಜನೆ ಇಲ್ಲ ಎಂದು ಅರೆಸೇನಾ ಪಡೆ ಹೇಳಿದೆ. ಪರೀಕ್ಷೆಗಳು ಯಾವಾಗಲೂ ಇಂಗ್ಲಿಷ್ (English) ಮತ್ತು ಹಿಂದಿಯಲ್ಲಿ ನಡೆಯುತ್ತಿದ್ದು, ಈ ವರ್ಷ ಯಾವುದೇ ಹೊಸ ಸ್ವರೂಪವನ್ನು ಪರಿಚಯಿಸಲಾಗಿಲ್ಲ ಎಂದು ಸಿಆರ್‌ಪಿಎಫ್ ಅಧಿಕಾರಿಗಳು ತಿಳಿಸಿರುವುದಾಗಿ ನ್ಯೂಸ್ 18 ವರದಿ ಮಾಡಿದೆ. ಏನೂ ಬದಲಾಗಿಲ್ಲ ಪರೀಕ್ಷೆ ಎಂದಿನಂತೆ ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ನಡೆಯುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದು, ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಪರೀಕ್ಷೆಗಳನ್ನು ನಡೆಸಲು ಸಿಆರ್‌ಪಿಎಫ್ ಹೊರಡಿಸಿದ ಅಧಿಸೂಚನೆಯನ್ನು ತಿದ್ದುಪಡಿ ಮಾಡಬೇಕು ಎಂದು ಒತ್ತಾಯಿಸಿದರು. ಕಂಪ್ಯೂಟರ್ ಪರೀಕ್ಷೆಯಲ್ಲಿ ತಮಿಳನ್ನು ಸೇರಿಸದಿರುವುದನ್ನು ಅವರು ತಮಿಳುನಾಡಿನಂತಹ ಹಿಂದಿ ಮಾತನಾಡದ ರಾಜ್ಯಗಳ ಆಕಾಂಕ್ಷಿಗಳತ್ತ ತೋರುವ ತಾರತಮ್ಯ ಇದು ಎಂದು ಸ್ಟಾಲಿನ್ ಹೇಳಿದ್ದಾರೆ.
ತೆಲಂಗಾಣ ಐಟಿ ಸಚಿವ ಕೆಟಿಆರ್ ಅವರು ನೇಮಕಾತಿ ಅಧಿಸೂಚನೆಯನ್ನು ಟ್ವೀಟ್ ಮಾಡಿದ್ದು, ಆರ್‌ಪಿಎಫ್ ರಾಷ್ಟ್ರೀಯ ನೇಮಕಾತಿ ಅಧಿಸೂಚನೆಯನ್ನು ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಇತರ ಅಧಿಕೃತ ಭಾಷೆಗಳನ್ನು ಸೇರಿಸಲು ಗೃಹ ಸಚಿವ ಅಮಿತ್ ಶಾ ಅವರಲ್ಲಿ ವಿನಂತಿಸುತ್ತಿದ್ದೇನೆ. ಈ ಸ್ಪರ್ಧಾತ್ಮಕ ಪರೀಕ್ಷೆಗಳು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ನಡೆಯುತ್ತಿವೆ, ಇದು ಇಂಗ್ಲಿಷ್ ಮಾಧ್ಯಮದಲ್ಲಿ ಅಧ್ಯಯನ ಮಾಡದ ಅಥವಾ ಹಿಂದಿ ಮಾತನಾಡುವ ರಾಜ್ಯಗಳಲ್ಲದ ವಿದ್ಯಾರ್ಥಿಗಳಿಗೆ ಕಷ್ಟ. ರಾಷ್ಟ್ರೀಯ ನೇಮಕಾತಿ ಸಂಸ್ಥೆಯು ಬಹು ಪರೀಕ್ಷೆಗಳನ್ನು ಬದಲಿಸಲು ಮತ್ತು 12 ಭಾರತೀಯ ಭಾಷೆಗಳಲ್ಲಿ ನಡೆಸಲು ಸಾಮಾನ್ಯ ಅರ್ಹತಾ ಪರೀಕ್ಷೆಯನ್ನು (NRA-CET) ಸುಗಮಗೊಳಿಸಲು ನಿರ್ಧರಿಸಿದೆ. ಆದಾಗ್ಯೂ, ಕೆಳಗಿನ ಅಧಿಸೂಚನೆಯನ್ನು ಒಳಗೊಂಡಂತೆ ಅದನ್ನು ಸರಿಯಾಗಿ ಕಾರ್ಯಗತಗೊಳಿಸಲಾಗಿಲ್ಲ ಎಂದು ಅವರು ಹೇಳಿದ್ದಾರೆ.
CRPF ಹೇಳುತ್ತಿರುವುದೇನು?
CRPF CT/GD ನೇಮಕಾತಿಯನ್ನು ಎಸ್ಎಸ್ ಸಿ ಮತ್ತು ಕಾನ್‌ಸ್ಟೆಬಲ್ (ಟೆಕ್ ಮತ್ತು ಟ್ರೇಡ್ಸ್‌ಮೆನ್) ಹುದ್ದೆಗೆ ನೇರ ನೇಮಕಾತಿ ನಡೆಸುತ್ತದೆ. ದ್ವಿಭಾಷಾ ಹುದ್ದೆಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ನಡೆಸಲಾಗುತ್ತದೆ. ಸಿಆರ್‌ಪಿಎಫ್ ಪ್ರಾದೇಶಿಕ ಭಾಷೆಗಳಲ್ಲಿ ನೇರ ನೇಮಕಾತಿಗಾಗಿ ಲಿಖಿತ ಪರೀಕ್ಷೆಯನ್ನು ಎಂದಿಗೂ ನಡೆಸಲಿಲ್ಲ. 9212 ಟೆಕ್ ಮತ್ತು ಟ್ರೇಡ್ಸ್‌ಮೆನ್ ಹುದ್ದೆಗಳಿಗೆ ನಿಯಮಿತ ಮಾದರಿಯಲ್ಲಿ ನೇಮಕಾತಿ ನಡೆಸಲು ಜಾಹೀರಾತನ್ನು ಬಿಡುಗಡೆ ಮಾಡಲಾಗಿದೆ ಆ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಭಾಷಾ ಸಮಸ್ಯೆಯಿಂದ ಅಭ್ಯರ್ಥಿಗಳ ಭಾಗವಹಿಸುವಿಕೆಗೆ ಸಂಬಂಧಿಸಿದಂತೆ ಇಲಾಖೆಯು ಯಾವುದೇ ಸಮಸ್ಯೆ ಎದುರಿಸಲಿಲ್ಲ. CT/GD ಯ ಹಿಂದಿನ ನೇಮಕಾತಿಗಳಲ್ಲಿ, CBT ಅನ್ನು ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ನಡೆಸಲಾಗುತ್ತಿತ್ತು. ಇಲ್ಲಿ ತಮಿಳುನಾಡು, ತೆಲಂಗಾಣ, ಕರ್ನಾಟಕ ಮತ್ತು ಆಂಧ್ರಪ್ರದೇಶದಂತಹ ದಕ್ಷಿಣ ರಾಜ್ಯಗಳ ಅಭ್ಯರ್ಥಿಗಳ ಭಾಗವಹಿಸುವಿಕೆ ಸಾಮಾನ್ಯವಾಗಿ ಕಂಡುಬಂದಿದೆ. CT/GD 2018 ರ ನೇಮಕಾತಿ ಸಂದರ್ಭದಲ್ಲಿ ತಮಿಳುನಾಡಿನಿಂದ 819 ಹುದ್ದೆಗಳು, ಆಂಧ್ರಪ್ರದೇಶದಿಂದ 3460 ಹುದ್ದೆಗಳು, ತೆಲಂಗಾಣದಿಂದ 2349 ಖಾಲಿ ಹುದ್ದೆಗಳು ಕರ್ನಾಟಕ ರಾಜ್ಯಗಳಿಂದ 1586 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಅದೇ ರೀತಿ, ಸಿಟಿ/ಜಿಡಿ ಪರೀಕ್ಷೆ-2021ರ ನೇಮಕಾತಿ ಸಂದರ್ಭದಲ್ಲಿ ತಮಿಳುನಾಡಿನಿಂದ 816 ಹುದ್ದೆಗಳು, ಆಂಧ್ರಪ್ರದೇಶದಿಂದ 1,296 ಹುದ್ದೆಗಳು, ತೆಲಂಗಾಣದಿಂದ 574 ಹುದ್ದೆಗಳು ಮತ್ತು ಕರ್ನಾಟಕ ರಾಜ್ಯದಿಂದ 719 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದು ಸಿಆರ್‌ಪಿಎಫ್ ಹೇಳಿಕೆ ತಿಳಿಸಿದೆ.
ಹೊಸ ಪತ್ರ ವ್ಯವಹಾರ ನಡೆದಿಲ್ಲ
ದಕ್ಷಿಣ ರಾಜ್ಯದಿಂದ ಆಕ್ಷೇಪಣೆಗಳ ನಂತರ ಗೃಹ ವ್ಯವಹಾರಗಳ ಸಚಿವಾಲಯ (MHA) CRPF ಗೆ ಯಾವುದೇ ಹೊಸ ಪತ್ರ ಕಳುಹಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಆರ್ ಪಿಎಫ್ ಹೊರಡಿಸಿದ ನೇಮಕಾತಿ ಅಧಿಸೂಚನೆಯ ಪ್ರಕಾರ, 9,212 ಕಾನ್ಸ್‌ಟೇಬಲ್‌ಗಳನ್ನು ನೇಮಿಸಿಕೊಳ್ಳಬೇಕಿದ್ದು, ಅದರಲ್ಲಿ 579 ತಮಿಳುನಾಡಿನಿಂದ ಭರ್ತಿಯಾಗಬೇಕಿದೆ. ಸಾಮಾನ್ಯ ಹಿಂದಿ ಜ್ಞಾನ ಕೂಡ ನೇಮಕಾತಿಗಳ ಒಟ್ಟಾರೆ ಮೌಲ್ಯಮಾಪನದ ಭಾಗವಾಗಿದೆ. ಈ ನಿಯತಾಂಕಗಳು ಕಳೆದ ಕೆಲವು ವರ್ಷಗಳಿಂದ ಒಂದೇ ಆಗಿವೆ. ತಮಿಳುನಾಡು ಮತ್ತು ತೆಲಂಗಾಣ ಸೇರಿದಂತೆ ದಕ್ಷಿಣ ಭಾರತದ ಆಕಾಂಕ್ಷಿಗಳು ಕಳೆದ ಕೆಲವು ವರ್ಷಗಳಿಂದ ಸಬ್-ಇನ್‌ಸ್ಪೆಕ್ಟರ್ ಹಂತದವರೆಗೆ ನೇಮಕಗೊಂಡಿದ್ದಾರೆ ಎಂದು ಸಿಆರ್‌ಪಿಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ