ಜಾತಿ ನಿರ್ಮೂಲನೆ ಮೂಲಕ ಮಾದರಿಯಾಗುವ ಗ್ರಾಮಕ್ಕೆ 10 ಲಕ್ಷ ಬಹುಮಾನ ಘೋಷಿಸಿದ ತಮಿಳುನಾಡು ಸರ್ಕಾರ
ಅಂತ್ಯಕ್ರಿಯೆ ವೇಳೆ ಜಾತಿ ಆಧಾರದಲ್ಲಿ ನಡೆಯುತ್ತಿರುವ ತಾರತಮ್ಯ ತಡೆಗಟ್ಟಲು ಈ ಬಹುಮಾನ ಘೋಷಿಸಲಾಗಿದೆ.
ಚೆನ್ನೈ: ಜಾತಿ ನಿರ್ಮೂಲನೆ ಮೂಲಕ ಮಾದರಿಯಾಗುವ ಗ್ರಾಮಕ್ಕೆ ₹ 10 ಲಕ್ಷ ಬಹುಮಾನ ನೀಡಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಘೋಷಿಸಿದ್ದಾರೆ. ಅಂತ್ಯಕ್ರಿಯೆ ವೇಳೆ ಜಾತಿ ಆಧಾರದಲ್ಲಿ ನಡೆಯುತ್ತಿರುವ ತಾರತಮ್ಯ ತಡೆಗಟ್ಟಲು ಈ ಬಹುಮಾನ ಘೋಷಿಸಲಾಗಿದೆ. ಸರ್ವಜನಾಂಗಕ್ಕೂ ಒಂದೇ ಸ್ಮಶಾನ ಸ್ಥಾಪನೆಯಾಗಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.
ಶಾಲಾಬ್ಯಾಗ್ ಮೇಲಿನ ಚಿತ್ರ ತೆಗೆಯುವುದು ಬೇಡ ಎಂದ ಸ್ಟಾಲಿನ್
ವಿರೋಧ ಪಕ್ಷಗಳೆಡೆಗೆ ಅಪರೂಪದ ಔದಾರ್ಯ ತೋರಿದ ಉದಾಹರಣೆಯೊಂದಕ್ಕೆ ತಮಿಳುನಾಡು ಸಾಕ್ಷಿಯಾಗಿದೆ. ಮಕ್ಕಳಿಗೆ ಉಚಿತವಾಗಿ ವಿತರಿಸಲು ಸಿದ್ಧವಾಗಿರುವ 65 ಲಕ್ಷ ಶಾಲಾ ಬ್ಯಾಗ್ಗಳ ಮೇಲೆ ಎಐಡಿಎಂಕೆ ನಾಯಕಿ ಜೆ.ಜಯಲಲಿತಾ ಮತ್ತು ಹಿಂದಿನ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರು ಭಾವಚಿತ್ರಗಳು ಮುದ್ರಣವಾಗಿತ್ತು. ಬ್ಯಾಗ್ಗಳ ಮೇಲೆ ಚಿತ್ರ ತೆಗೆಯುವುದು ಬೇಡ ಎಂದು ಇದೀಗ ಮುಖ್ಯಮಂತ್ರಿ ಸ್ಟಾಲಿನ್ ಹೇಳಿದ್ದಾರೆ. ಈ ನಿರ್ಧಾರಕ್ಕೆ ರಾಜಕೀಯ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಮುಖ್ಯಮಂತ್ರಿಯ ಈ ಕ್ರಮದಿಂದ ತಮಿಳುನಾಡು ಬೊಕ್ಕಸಕ್ಕೆ ₹ 14 ಕೋಟಿ ಉಳಿತಾಯಾಗಿದೆ. ಭಾವಚಿತ್ರಗಳನ್ನು ಬದಲಿಸಬೇಕು ಎಂದು ತೀರ್ಮಾನಿಸಿದಿದ್ದರೆ ಇಷ್ಟು ದೊಡ್ಡ ಮೊತ್ತದ ಹಣ ವ್ಯರ್ಥವಾಗುತ್ತಿತ್ತು.
ಹಿಂದೆ ಅಧಿಕಾರದಲ್ಲಿದ್ದ ನಾಯಕರು ಘೋಷಿಸಿದ್ದ ಸಾರ್ವಜನಿಕ ಯೋಜನೆಗಳಲ್ಲಿ ಇರುವ ಭಾವಚಿತ್ರಗಳನ್ನು ಹೊಸದಾಗಿ ಅಧಿಕಾರಕ್ಕೆ ಬಂದವರು ತೆರವುಗೊಳಿಸುವುದು ದೇಶದಲ್ಲಿ ಸಾಮಾನ್ಯ ವಿದ್ಯಮಾನ ಎನಿಸಿದೆ. ಈ ಹಿನ್ನೆಲೆಯಲ್ಲಿಯೇ ಸ್ಟಾಲಿನ್ ಅವರ ಈ ಕ್ರಮ ಮಹತ್ವ ಪಡೆದಿದೆ.
ಕಳೆದ ಮೇ ತಿಂಗಳಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಡಿಎಂಕೆ ನಾಯಕ ಶಾಲಾ ಬ್ಯಾಗ್ಗಳ ಮೇಲಿನ ಭಾವಚಿತ್ರಗಳನ್ನು ಬದಲಿಸದಂತೆ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಅವರಿಗೆ ಸೂಚನೆ ನೀಡಿದ್ದರು. ಭಾವಚಿತ್ರ ಬದಲಿಸಲು ಬಳಸಬೇಕು ಎಂದುಕೊಂಡಿದ್ದ ಹಣವನ್ನು ವಿದ್ಯಾರ್ಥಿಗಳ ಅಭ್ಯುದಯಕ್ಕೆ ಬಳಸಲು ವಿನಿಯೋಗಿಸಿ ಎಂದು ಹೇಳಿದ್ದರು.
ಭಾವಚಿತ್ರಗಳ ಬಗ್ಗೆ ಪಕ್ಷದ ಕಾರ್ಯಕರ್ತರಿಂದ ಸಾಕಷ್ಟು ದೂರುಗಳು ಕೇಳಿಬಂದಿದ್ದವು. ಈ ಕುರಿತು ಮುಖ್ಯಮಂತ್ರಿಯ ಗಮನ ಸೆಳೆದಿದ್ದೆ. ಆಗ ಅವರು, ‘ನೀವು ಸಚಿವರಂತೆ ಮಾತನಾಡಬೇಕು, ಪಕ್ಷದ ಕಾರ್ಯಕರ್ತರಂತೆ ಅಲ್ಲ. ನಾನು ರಾಜಕಾರಣದ ಬಗ್ಗೆ ಮಾತನಾಡುವುದಿದ್ದರೆ ಅರಿವಾಲಯಂ (ಡಿಎಂಕೆ ಪ್ರಧಾನ ಕಚೇರಿ) ಹೋಗುತ್ತಿದ್ದೆ’ ಎಂದು ಮುಖ್ಯಮಂತ್ರಿ ಹೇಳಿದ್ದಾಗಿ ಪೊಯ್ಯಮೊಳಿ ಗುರುವಾರ ತಮಿಳುನಾಡು ವಿಧಾನಸಭೆಯಲ್ಲಿ ಹೇಳಿದ್ದರು.
ಸ್ಟಾಲಿನ್ ನಿರ್ಧಾರವನ್ನು ಪಕ್ಷದ ಉನ್ನತ ನಾಯಕತ್ವವೂ ಶ್ಲಾಘಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಡಿಎಂಕೆ ರಾಜ್ಯಸಭಾ ಸದಸ್ಯ ತಿರುಚ್ಚಿ ಶಿವ, ‘ಇದು ಸ್ಟಾಲಿನ್ ಅವರ ಔದಾರ್ಯವನ್ನು ತೋರುತ್ತದೆ. ಅವರದು ಕೀಳು ಮನಸ್ಥಿತಿ ಅಲ್ಲ’ ಎಂದು ಹೇಳಿದ್ದರು.
ಮೊದಲಿನಿಂದಲೂ ಸ್ಟಾಲಿನ್ ಇತರ ಪಕ್ಷಗಳು ಮತ್ತು ಮಿತ್ರಪಕ್ಷಗಳೊಂದಿಗೆ ಮಿತ್ರಭಾವವನ್ನೇ ತೋರಿದ್ದಾರೆ. ಅವರ ಆಡಳಿತ ವೈಖರಿಯೂ ಅಣ್ಣಾದುರೈ ಮಾದರಿಯನ್ನೇ ಹೋಲುತ್ತದೆ. ಈ ಯೋಜನೆಯಲ್ಲಿ ಉಳಿಯುವ ₹ 13 ಲಕ್ಷವನ್ನು ಬೇರೆ ಯಾವುದಾದರೂ ಯೋಜನೆಯಲ್ಲಿ ಅರ್ಥಪೂರ್ಣವಾಗಿ ವ್ಯಯಿಸಬಹುದು ಎಂದು ಚಿಂತಿಸಿದ್ದರು. ಹೀಗಾಗಿ ಇದು ಅತ್ಯಂತ ಕಾರ್ಯಸಾಧುವಾದ ನಿರ್ಧಾರ. ಮುಂದಿನ ದಿನಗಳಲ್ಲಿ ಸ್ಟಾಲಿನ್ ಅವರಿಂದ ಇಂಥ ಮತ್ತಷ್ಟು ನಿರ್ಧಾರಗಳನ್ನು ಎದುರು ನೋಡಬಹುದು ಎಂದರು.
ಸ್ಟಾಲಿನ್ ಕ್ರಮವನ್ನು ವಿರೋಧ ಪಕ್ಷ ಎಐಎಡಿಎಂಕೆ ಸಹ ಶ್ಲಾಘಿಸಿದೆ. ಪಕ್ಷದ ನಾಯಕ ಜೆ.ಸಿ.ಡಿ.ಪ್ರಭಾಕರ್ ಸಹ ಶ್ಲಾಘಿಸಿದ್ದಾರೆ. ವಿರೋಧ ಪಕ್ಷಗಳ ಬಗ್ಗೆ ಡಿಎಂಕೆಯ ದೃಷ್ಟಿಕೋನ ಬದಲಾಗಿರುವುದನ್ನು ಇದು ಸೂಚಿಸುತ್ತದೆ. ಈ ಹಿಂದೆಯೂ ಸ್ಟಾಲಿನ್ ಹೀಗೆಯೇ ನಡೆದುಕೊಂಡಿದ್ದರು ಎಂದು ಅವರು ಹೇಳಿದರು. ಅಮ್ಮಾ ಕ್ಯಾಂಟೀನ್ ಮೇಲೆ ದಾಳಿ ನಡೆದು ಜಯಲಲಿತಾ ಹಾಗೂ ಪಳನಿಸ್ವಾಮಿ ಫೋಟೊಗಳನ್ನು ತೆಗೆದುಹಾಕಿದ್ದ ಕ್ರಮವನ್ನೂ ಸ್ಟಾಲಿನ್ ಒಪ್ಪಿರಲಿಲ್ಲ. ಅದನ್ನು ಮತ್ತೆ ಮೊದಲಿನಂತೆಯೇ ಸರಿಪಡಿಸಿದ್ದರು ಎಂದು ಪ್ರಭಾಕರ್ ನೆನಪಿಸಿಕೊಂಡರು.
(Tamilnadu government announces 10 lakh prize to eradicate caste system)
ಇದನ್ನೂ ಓದಿ: ಮೇಕೆದಾಟು ಡಿಪಿಆರ್ ಬಗ್ಗೆ ಪ್ರಸ್ತಾಪಿಸಲು ಮುಂದಾದ ಕರ್ನಾಟಕ; ಚರ್ಚೆ ಮಾಡಕೂಡದು ಎಂದು ಆಕ್ಷೇಪ ತೆಗೆದ ತಮಿಳುನಾಡು
ಇದನ್ನೂ ಓದಿ: 3 ಕೃಷಿ ಕಾಯ್ದೆಗಳ ವಿರುದ್ಧ ನಿರ್ಣಯ ಅಂಗೀಕಾರ ಮಾಡಿದ ತಮಿಳುನಾಡು ವಿಧಾನಸಭೆ; ಹೊರನಡೆದ ಬಿಜೆಪಿ, ಎಐಎಡಿಎಂಕೆ ಶಾಸಕರು