ಸೀರೆ ಎಳೆದ್ರು, ಮೈ-ಕೈ ಮುಟ್ಟಿದ್ರು, ಟಿಸಿಎಸ್ ಐಟಿ ಸಂಸ್ಥೆಯಲ್ಲಿ ನವವಿವಾಹಿತೆಯ ನರಕಯಾತನೆ

ಟಿಸಿಎಸ್ ಐಟಿ ಸಂಸ್ಥೆಯಲ್ಲಿ ನವವಿವಾಹಿತೆಯೊಬ್ಬರಿಗೆ ಲೈಂಗಿಕ ಕಿರುಕುಳ, ಮಾನಸಿಕ ಹಿಂಸೆ ಮತ್ತು ಬಲವಂತದ ಮತಾಂತರಕ್ಕೆ ಪ್ರಯತ್ನ ನಡೆದಿದೆ. ಸಹೋದ್ಯೋಗಿಗಳಿಂದ ಸೀರೆ ಎಳೆಯುವುದು, ಮೈ ಮುಟ್ಟುವಂತಹ ಘಟನೆಗಳು ನಡೆದಿವೆ. ಈ ಪ್ರಕರಣವನ್ನು ಮಹಾರಾಷ್ಟ್ರ ಸಿಎಂ 'ಕಾರ್ಪೊರೇಟ್ ಜಿಹಾದ್' ಎಂದು ಕರೆದಿದ್ದು, ತನಿಖೆಗೆ ಆದೇಶಿಸಿದ್ದಾರೆ. ಐಟಿ ವಲಯದಲ್ಲಿ ಮಹಿಳಾ ಸುರಕ್ಷತೆ ಮತ್ತು ನೈತಿಕತೆಯ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.

ಸೀರೆ ಎಳೆದ್ರು, ಮೈ-ಕೈ ಮುಟ್ಟಿದ್ರು, ಟಿಸಿಎಸ್ ಐಟಿ ಸಂಸ್ಥೆಯಲ್ಲಿ ನವವಿವಾಹಿತೆಯ ನರಕಯಾತನೆ
ಟಿಸಿಎಸ್
Image Credit source: People Matters

Updated on: Apr 21, 2026 | 9:07 AM

ಮುಂಬೈ, ಏಪ್ರಿಲ್ 21: ಅದು ಜೂನ್ ತಿಂಗಳು ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಆ ಯುವತಿ, ಭಾರತದ ಅತಿದೊಡ್ಡ ಐಟಿ ಸಂಸ್ಥೆಗಳಲ್ಲಿ ಒಂದಾದ ಟಿಸಿಎಸ್‌(TCS)ನ ನಾಸಿಕ್ ಘಟಕಕ್ಕೆ ಅಸೋಸಿಯೇಟ್ ಆಗಿ ಆಯ್ಕೆಯಾದಾಗ ಆಕೆಯ ಕಣ್ಣುಗಳಲ್ಲಿ ನೂರಾರು ಕನಸುಗಳಿದ್ದವು. ಆದರೆ, ಕೆಲಸಕ್ಕೆ ಸೇರಿದ ಕೆಲವೇ ದಿನಗಳಲ್ಲಿ ಆ ಪವಿತ್ರ ಆವರಣವು ಆಕೆಗೆ ಹಿಂಸೆಯ ತಾಣವಾಗಿ ಬದಲಾಗುತ್ತದೆ ಎಂದು ಆಕೆ ಊಹಿಸಿರಲಿಲ್ಲ.

ತರಬೇತಿಯ ಹೆಸರಲ್ಲಿ ವೈಯಕ್ತಿಕ ಜೀವನಕ್ಕೆ ಲಗ್ಗೆ
ತರಬೇತಿ ಆರಂಭವಾದ ಮೊದಲ ದಿನಗಳಿಂದಲೇ ಆಕೆಗೆ ಕಿರುಕುಳ ಶುರುವಾಗಿತ್ತು. ಸಾಲ ಶಾಖೆಯ ತಂಡದ ನಾಯಕಿ ರಜಾ ಮೆನನ್ ಎಂಬುವವರು ತರಬೇತಿಗೂ ಕೆಲಸಕ್ಕೂ ಸಂಬಂಧವಿಲ್ಲದ ವೈಯಕ್ತಿಕ ಪ್ರಶ್ನೆಗಳಿಂದ ಆಕೆಯನ್ನು ಪೀಡಿಸುತ್ತಿದ್ದರು. “ಗಂಡ ದೂರ ಇದ್ದಾರೆ, ಹೇಗೆ ಮ್ಯಾನೇಜ್ ಮಾಡ್ತೀಯಾ? ಹನಿಮೂನ್‌ಗೆ ಎಲ್ಲಿಗೆ ಹೋಗಿದ್ರಿ? ಅಲ್ಲಿ ಏನು ಮಾಡಿದ್ರಿ?” ಎಂಬ ಅಶ್ಲೀಲ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸುತ್ತಿದ್ದರು. ಇವೆಲ್ಲವನ್ನೂ ಆಕೆಯ ತರಬೇತಿ ನಾಯಕ ಶಾರುಖ್ ಖುರೇಷಿ ಪ್ರೋತ್ಸಾಹಿಸುತ್ತಿದ್ದ ಎನ್ನುವುದು ಆಕೆಯ ದೂರು.

ಅಷ್ಟಕ್ಕೇ ನಿಲ್ಲದ ರಜಾ ಮೆನನ್, ಆಕೆಗೆ ಪ್ಲೇಯರ್ ಎಂಬ ಅಡ್ಡಹೆಸರು ಇಟ್ಟು ಕಚೇರಿಯಲ್ಲಿ ಎಲ್ಲರೆದುರು ಮೂದಲಿಸುತ್ತಿದ್ದಳು. ಗಂಡನ ಜೊತೆ ಹೊಂದಾಣಿಕೆ ಆಗದಿದ್ದರೆ ಹೇಳು, ನಾವೇ ಯಾರನ್ನಾದರೂ ಹುಡುಕಿಕೊಡುತ್ತೇವೆ ಎಂದೆಲ್ಲಾ ಕೆಟ್ಟದಾಗಿ ಮಾತನಾಡುತ್ತಿದ್ದರು.

ಗೌರವಕ್ಕೆ ಧಕ್ಕೆ: ಸೀರೆ ಎಳೆದ ಘಟನೆ
ಈ ವರ್ಷದ ಗುಡಿ ಪಾಡ್ವಾ ಹಬ್ಬದ ದಿನ ಆಕೆ ಸೀರೆ ಧರಿಸಿ ಬಂದಾಗ ನಡೆದ ಘಟನೆ ಅತ್ಯಂತ ಘೋರವಾದದ್ದು. ಕಚೇರಿಯ ಲಾಬಿಯಲ್ಲಿ ನಡೆಯುತ್ತಿದ್ದಾಗ ಆಕೆಯ ಸೀರೆಯ ಪಲ್ಲುವನ್ನು ರಜಾ ಎಳೆದಿದ್ದರು. ಆಕೆ ಬೆಚ್ಚಿಬಿದ್ದು ತಿರುಗಿ ನೋಡಿದಾಗ ಅಸಭ್ಯವಾಗಿ ನೋಡಿ ನಕ್ಕಿದ್ದ ಅಲ್ಲಿದ್ದ  ಆ ವ್ಯಕ್ತಿಯ ನೋಟ ಆಕೆಯನ್ನು ಇಂದಿಗೂ ಕಾಡುತ್ತಿದೆ.

ಮತ್ತಷ್ಟು ಓದಿ: ಟಿಸಿಎಸ್ ಕಚೇರಿಯಲ್ಲಿ ಮಹಿಳಾ ಪೊಲೀಸರ ಅಂಡರ್​ಕವರ್ ಆಪರೇಷನ್; ಸಿಕ್ಕಿಬಿದ್ದ ಕಾಮಾಂಧರು

ತರಬೇತಿ ಮುಗಿದ ನಂತರ ಆಸಿಫ್ ಅನ್ಸಾರಿ ಎಂಬ ಸಹೋದ್ಯೋಗಿಯಿಂದ ಆಕೆಗೆ ಮತ್ತಷ್ಟು ಕಾಟ ಶುರುವಾಯಿತು. ಆಕೆ ಕುಳಿತಲ್ಲೇ ಬಂದು ಕುಳಿತುಕೊಳ್ಳುವುದು, ಉದ್ದೇಶಪೂರ್ವಕವಾಗಿ ಮೈ ಮುಟ್ಟುವುದು, ತೊಡೆ ಹಾಗೂ ಭುಜದ ಮೇಲೆ ಕೈ ಹಾಕುವುದು ನಿರಂತರವಾಯಿತು.ಒಮ್ಮೆ ಸಾರ್ವಜನಿಕವಾಗಿಯೇ ಆಕೆಯನ್ನು ಬಿಗಿಯಾಗಿ ಅಪ್ಪಿಕೊಂಡಿದ್ದ. ಭಯಗೊಂಡ ಆಕೆ ಅಲ್ಲಿಂದ ಓಡಿ ಹೋಗಿದ್ದಳು.

ಪೊಲೀಸ್ ಕಾರ್ಯಾಚರಣೆ ಮತ್ತು ‘ಕಾರ್ಪೊರೇಟ್ ಜಿಹಾದ್’
ಈ ಪ್ರಕರಣವು ಕೇವಲ ಒಬ್ಬ ಮಹಿಳೆಯದ್ದಲ್ಲ. ಸುಮಾರು ಆರು ಮಹಿಳೆಯರು ಇಂತಹದ್ದೇ ಕಿರುಕುಳ ಮತ್ತು ಬಲವಂತದ ಮತಾಂತರದ ಆರೋಪಗಳನ್ನು ಹೊರಿಸಿದ್ದಾರೆ. ನಾಸಿಕ್ ಪೊಲೀಸರು ಈವರೆಗೆ 9 ಎಫ್‌ಐಆರ್ ದಾಖಲಿಸಿಕೊಂಡು, ಎಂಟು ಜನರನ್ನು ಬಂಧಿಸಿದ್ದಾರೆ. ಮಹಾರಾಷ್ಟ್ರದ ಸಿಎಂ ದೇವೇಂದ್ರ ಫಡ್ನವೀಸ್ ಅವರು ಈ ಘಟನೆಯನ್ನು “ಕಾರ್ಪೊರೇಟ್ ಜಿಹಾದ್” ಎಂದು ಕರೆದಿದ್ದು, ಗಂಭೀರ ತನಿಖೆಗೆ ಆದೇಶಿಸಿದ್ದಾರೆ.

ಕಂಪನಿಯ ನಿಲುವು ಮತ್ತು ಕುಟುಂಬದ ಪ್ರತಿರೋಧ
ಟಿಸಿಎಸ್ ಸಂಸ್ಥೆಯು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರುಕುಳ ನೀಡಿದ ಉದ್ಯೋಗಿಗಳನ್ನು ಅಮಾನತುಗೊಳಿಸಿದೆ ಮತ್ತು ತನಿಖೆಗೆ ಮೇಲ್ವಿಚಾರಣಾ ಸಮಿತಿಯನ್ನು ರಚಿಸಿದೆ. ಆದರೆ, ಬಂಧಿತ ರಜಾ ಮೆಮನ್ ಕುಟುಂಬವು ಇದು ಕಚೇರಿ ರಾಜಕೀಯದ ಭಾಗವಾಗಿ ನಡೆದ ಪಿತೂರಿ ಎಂದು ಆರೋಪಿಸಿದೆ.

ಕೆಲಸ ಕಳೆದುಕೊಳ್ಳುವ ಭಯ ಮತ್ತು ಸಂಪ್ರದಾಯಸ್ಥ ಕುಟುಂಬದ ಹಿನ್ನೆಲೆಯಿಂದಾಗಿ ಇಷ್ಟು ದಿನ ಮೌನವಾಗಿದ್ದ ಆ ಮಹಿಳೆ, ಇಂದು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಾರೆ. ಈ ಕಥೆಯು ಕಾರ್ಪೊರೇಟ್ ವಲಯದಲ್ಲಿ ಮಹಿಳೆಯರ ಸುರಕ್ಷತೆ ಮತ್ತು ನೈತಿಕತೆಯ ಪ್ರಶ್ನೆಯನ್ನು ಬಲವಾಗಿ ಮುಂದಿಟ್ಟಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us