ಏನೇನೋ ತಪ್ಪಾಗಿ ತಿಳಿದು ಮಾತನಾಡಬಾರದು, ನಾವು ಪೆಗಾಸಸ್ ಸ್ಪೈವೇರ್ ಖರೀದಿ ಮಾಡಿಲ್ಲ: ಚಂದ್ರಬಾಬು ನಾಯ್ಡು ಪಕ್ಷದಿಂದ ದೀದಿಗೆ ತಿರುಗೇಟು
ಸದ್ಯ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪೆಗಾಸಸ್ ಸ್ಪೈವೇರ್ ಬಗ್ಗೆ ಮಾತನಾಡಿದ್ದಾರೆ. ಇಸ್ರೇಲಿ ಸ್ಪೈವೇರ್ ಪೆಗಾಸಸ್ ಖರೀದಿ ಮಾಡುವಂತೆ ನಮಗೂ ಆಫರ್ ಇತ್ತು. ಅವರು 25 ಕೋಟಿ ರೂಪಾಯಿ ಕೊಟ್ಟರೆ ಸ್ಪೈವೇರ್ ಕೊಡುವುದಾಗಿ ಹೇಳಿದ್ದರು ಎಂದಿದ್ದಾರೆ.
2021ರಿಂದಲೂ ಆಗಾಗ ಪೆಗಾಸಸ್ ಸ್ಪೈವೇರ್ ಎಂಬುದು ಭರ್ಜರಿ ಸುದ್ದಿ ಮಾಡುತ್ತಿದೆ. ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಂಧ್ರಪ್ರದೇಶದ ಹಿಂದಿನ ಟಿಡಿಪಿ (ತೆಲುಗು ದೇಸಂ ಪಾರ್ಟಿ) ಸರ್ಕಾರದ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದರು. ಅಂದರೆ ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಸರ್ಕಾರವಿದ್ದಾಗ ಅವರು ಪೆಗಾಸಸ್ ಸ್ಪೈವೇರ್ ಬಳಸಿದ್ದಾರೆ ಎಂದು ಹೇಳಿದ್ದರು. ದೀದಿ ಆರೋಪಕ್ಕೆ ಟಿಡಿಪಿ ಪ್ರಧಾನ ಕಾರ್ಯದರ್ಶಿ ನರಾ ಲೋಕೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಸರ್ಕಾರವಿದ್ದಾಗ ಪೆಗಾಸಸ್ ಸ್ಪೈವೇರ್ (Pegasus spyware) ಖರೀದಿ ಮಾಡಿದ್ದರು ಎಂಬ ಮಮತಾ ಬ್ಯಾನರ್ಜಿ ಆರೋಪದಲ್ಲಿ ಹುರುಳಿಲ್ಲ. ನಾವ್ಯಾವತ್ತೂ ಯಾವುದೇ ಸ್ಪೈವೇರ್ನ್ನೂ ಖರೀದಿ ಮಾಡಿಲ್ಲ. ಫೋನ್ ಕದ್ದಾಲಿಕೆಯಂಥ ಅಕ್ರಮವನ್ನು ನಡೆಸಿಲ್ಲ. ಮಮತಾ ಬ್ಯಾನರ್ಜಿ ನಿಜವಾಗಿಯೂ ಹಾಗೆ ಹೇಳಿದ್ದಾರಾ? ಎಲ್ಲಿ, ಯಾವ ಸಂದರ್ಭದಲ್ಲಿ ಇಂಥ ಹೇಳಿಕೆ ನೀಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಹಾಗೊಮ್ಮೆ ಮಾತನಾಡಿದ್ದೇ ಆದರೆ, ಅವರು ತಪ್ಪು ತಿಳುವಳಿಕೆಯಿಂದ ಇಂಥ ಮಾತುಗಳನ್ನಾಡಿದ್ದಾರೆ ಎಂದು ನರಾ ಲೋಕೇಶ್ ಹೇಳಿದ್ದಾರೆ.
ಪೆಗಾಸಸ್ ಸ್ಪೈವೇರ್ 2021ರಲ್ಲಿ ದೊಡ್ಡಮಟ್ಟದ ವಿವಾದಕ್ಕೆ ಕಾರಣವಾಗಿತ್ತು. ಭಾರತದಲ್ಲಿ ಇಸ್ರೇಲಿ ಮೂಲದ ಪೆಗಾಸಸ್ ಬಳಸಿ, ರಾಜಕಾರಣಿಗಳು, ಪತ್ರಕರ್ತರು, ಮತ್ತಿತರ ಗಣ್ಯರೆಲ್ಲ ಸೇರಿ 300ಕ್ಕೂ ಹೆಚ್ಚು ಜನರ ಫೋನ್ ಟ್ಯಾಪ್ ಮಾಡಲಾಗಿದೆ ಎಂದು ದಿ ವೈರ್ ಪ್ರಕಟಿಸಿತ್ತು. ಹಾಗೇ ಬಹುಮುಖ್ಯವಾಗಿ ಯಾರೆಲ್ಲರ ಫೋನ್ ಟ್ಯಾಪ್ ಆಗಿದೆ ಎಂಬ ಹೆಸರುಗಳನ್ನೂ ಬಹಿರಂಗಪಡಿಸಲಾಗಿತ್ತು. ಅದರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಸೇರಿ ಅನೇಕರ ಹೆಸರುಗಳು ಇದ್ದವು. ಈ ಪೆಗಾಸಸ್ ಸ್ನೂಪಿಂಗ್ ಕುರಿತು ತನಿಖೆ ನಡೆಸಲು ಸುಪ್ರೀಂಕೋರ್ಟ್ನಿಂದ ಸಮಿತಿ ರಚಿಸಲಾಗಿದ್ದು, ತನಿಖೆ ನಡೆಯುತ್ತಲೂ ಇದೆ.
ಇದರ ಜತೆ ಕೆಲವೇ ದಿನಗಳ ಹಿಂದೆ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿ, ಧಾನಮಂತ್ರಿ ನರೇಂದ್ರ ಮೋದಿ ಇಸ್ರೇಲ್ಗೆ ಭೇಟಿ ಕೊಟ್ಟಿದ್ದರು. ಇದೇ ಭೇಟಿ ವೇಳೆ ಭಾರತ -ಇಸ್ರೇಲ್ ನಡುವೆ 2 ಬಿಲಿಯನ್ ಯುಎಸ್ ಡಾಲರ್ ಮೊತ್ತದ ರಕ್ಷಣಾ ಒಪ್ಪಂದ ನಡೆಯಿತು. ಅದಕ್ಕೆ ಎರಡೂ ದೇಶಗಳು ಸಹಿ ಹಾಕಿದವು. ಈ ಒಪ್ಪಂದದ ಒಂದು ಭಾಗವಾಗಿ ಪೆಗಾಸಸ್ ಸ್ಪೈವೇರ್ನ್ನು ಕೂಡ ಭಾರತದ ಕೇಂದ್ರ ಸರ್ಕಾರ ಇಸ್ರೇಲ್ನಿಂದ ಖರೀದಿ ಮಾಡಿದೆ ಎಂದು ವರದಿ ಮಾಡಿತ್ತು. ನ್ಯೂಯಾರ್ಕ್ ಟೈಮ್ಸ್ನ ಈ ವರದಿಯನ್ನು ಉಲ್ಲೇಖಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ ಸೇರಿ ಅನೇಕರು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಮಮತಾ ಬ್ಯಾನರ್ಜಿ ಹೇಳಿದ್ದೇನು?
ಸದ್ಯ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪೆಗಾಸಸ್ ಸ್ಪೈವೇರ್ ಬಗ್ಗೆ ಮಾತನಾಡಿದ್ದಾರೆ. ಇಸ್ರೇಲಿ ಸ್ಪೈವೇರ್ ಪೆಗಾಸಸ್ ಖರೀದಿ ಮಾಡುವಂತೆ ನಮಗೂ ಆಫರ್ ಇತ್ತು. ಅವರು 25 ಕೋಟಿ ರೂಪಾಯಿ ಕೊಟ್ಟರೆ ಸ್ಪೈವೇರ್ ಕೊಡುವುದಾಗಿ ಹೇಳಿದ್ದರು. ಆದರೆ ಹೀಗೆ ಅಕ್ರಮವಾಗಿ ಇನ್ನೊಬ್ಬರ ವೈಯಕ್ತಿಕ ವಿಚಾರಗಳನ್ನು ಕದಿಯುವುದು ಯಾವ ಕಾರಣಕ್ಕೂ ಸ್ವೀಕಾರಾರ್ಹವಲ್ಲ, ಒಪ್ಪಿತವೂ ಅಲ್ಲ. ಹಾಗಾಗಿ ನಾವು ಅದನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದೆವು. ಆದರೆ ಆಂಧ್ರಪ್ರದೇಶದಲ್ಲಿ ಹಿಂದಿನ ಸರ್ಕಾರವಿದ್ದಾಗ ಈ ಸ್ಪೈವೇರ್ ಬಳಕೆಯಾಗಿತ್ತು ಎಂದಿದ್ದರು.
ಇದನ್ನೂ ಓದಿ: ₹ 25 ಕೋಟಿಗೆ ಪೆಗಾಸಸ್ ಸ್ಪೈವೇರ್ ನೀಡಲು ಬಂದರು, ನಾನು ತಿರಸ್ಕರಿಸಿದೆ: ಮಮತಾ ಬ್ಯಾನರ್ಜಿ
Published On - 4:14 pm, Sat, 19 March 22