Chandrababu Naidu: ನಾನು ಮತ್ತೆ ಮುಖ್ಯಮಂತ್ರಿಯಾಗಿಯೇ ಬರುತ್ತೇನೆ: ಸವಾಲು ಹಾಕಿ ವಿಧಾನಸಭೆಯಿಂದ ಹೊರನಡೆದ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು

TV9 Digital Desk

| Edited By: Ghanashyam D M | ಡಿ.ಎಂ.ಘನಶ್ಯಾಮ

Updated on:Nov 19, 2021 | 6:15 PM

ಸದನದಲ್ಲಿ ಆಡಳಿತ ಪಕ್ಷದ ಸದಸ್ಯರು ಅಷ್ಟೆಲ್ಲಾ ಮಾತನಾಡುತ್ತಿದ್ದರೂ ಸ್ಪೀಕರ್ ಚಕಾರವೆತ್ತದೆ ಮೂಕಪ್ರೇಕ್ಷಕರಂತೆ ಕುಳಿತಿದ್ದರು. ಸದನದಲ್ಲಿ ಮಾತನಾಡಲು ನನಗೆ ಅವಕಾಶ ನೀಡಲಿಲ್ಲ ಎಂದು ಚಂದ್ರಬಾಬು ನಾಯ್ಡು ಆಕ್ಷೇಪಿಸಿದರು.

Chandrababu Naidu: ನಾನು ಮತ್ತೆ ಮುಖ್ಯಮಂತ್ರಿಯಾಗಿಯೇ ಬರುತ್ತೇನೆ: ಸವಾಲು ಹಾಕಿ ವಿಧಾನಸಭೆಯಿಂದ ಹೊರನಡೆದ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು
ಹೈದರಾಬಾದ್​ನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಬಿಕ್ಕಿಬಿಕ್ಕಿ ಅತ್ತ ಚಂದ್ರಬಾಬು ನಾಯ್ಡು

ಹೈದರಾಬಾದ್​: ಆಂಧ್ರ ಪ್ರದೇಶ ವಿಧಾನಸಭೆಯಲ್ಲಿ ಶುಕ್ರವಾರ ಹಲವು ನಾಟಕೀಯ ಬೆಳವಣಿಗೆಗಳು ನಡೆದವು. ಆಡಳಿತಾರೂಢ ವೈಎಸ್​ಆರ್​ ಕಾಂಗ್ರೆಸ್​ ಪಕ್ಷ (YSRCP) ಶಾಸಕರು ತಮ್ಮ ಪತ್ನಿಯ ಬಗ್ಗೆ ಮಾಡಿದ ಕೀಳುಮಟ್ಟದ ಆರೋಪಗಳಿಂದ ಮನನೊಂದ ಮಾಜಿ ಮುಖ್ಯಮಂತ್ರಿ ಎನ್​.ಚಂದ್ರಬಾಬು ನಾಯ್ಡು ಈ ಬಾರಿಯ ಅವಧಿ ಮುಗಿಯುವವರೆಗೆ ಮತ್ತೆ ವಿಧಾನಸಭೆ ಪ್ರವೇಶಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು. ಮತ್ತೆ ಮುಖ್ಯಮಂತ್ರಿಯಾಗಿಯೇ ಸದನ ಪ್ರವೇಶಿಸುತ್ತೇನೆ ಎಂದು ಹೇಳಿದರು. ಸದನದಿಂದ ಹೊರನಡೆಯುವ ಮೊದಲು ಉಕ್ಕಿ ಬರುತ್ತಿದ್ದ ಕಣ್ಣೀರನ್ನು ತಡೆಯಲು ಯತ್ನಿಸಿದರು. ಆಂಧ್ರ ಪ್ರದೇಶ ವಿಧಾನಸಭೆಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ಎರಡನೇ ದಿನ ನಡೆದ ಚರ್ಚೆಯಲ್ಲಿ ನಾಯ್ಡು ಅವರ ಪತ್ನಿಯ ಬಗ್ಗೆ ಆಡಳಿತಾರೂಢ ಸದಸ್ಯರು ಅವಹೇಳನಕಾರಿಯಾಗಿ ಮಾತನಾಡಿದ್ದು ನಾಯ್ಡು ಅವರನ್ನು ಕೆರಳಿಸಿತ್ತು.

ಸದನದಿಂದ ಹೊರ ನಡೆದ ನಂತರ ತೆಲುಗು ದೇಶಂ ಪಕ್ಷದ (ಟಿಡಿಪಿ) ಪ್ರಧಾನ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ನಾಯ್ಡು, ನನ್ನ ಹೆಂಡತಿ ಎಂದಿಗೂ ರಾಜಕೀಯದಲ್ಲಿ ಇರಲಿಲ್ಲ. ಬದುಕಿನ ಪ್ರತಿ ಹೆಜ್ಜೆಯಲ್ಲಿಯೂ ನನಗೆ ಪ್ರೋತ್ಸಾಹ ನೀಡಿದ್ದಳು. ನಾನು ಅಧಿಕಾರದಲ್ಲಿ ಇದ್ದರೂ-ಇಲ್ಲದಿದ್ದರೂ ಆಕೆ ನನ್ನ ಜೊತೆಗೆ ಹೆಜ್ಜೆಹಾಕಿದಳು. ಆದರೆ ಎಂದಿಗೂ ರಾಜಕೀಯ ವಿಚಾರಗಳಲ್ಲಿ ತಲೆಹಾಕಿರಲಿಲ್ಲ. ಆದರೂ ಇಂದು ಆಡಳಿತಪಕ್ಷದ ಸದಸ್ಯರು ಆಕೆಯ ಬಗ್ಗೆ ಕೆಟ್ಟದಾಗಿ ಮಾತನಾಡಿ, ಅವಮಾನ ಮಾಡಲು ಯತ್ನಿಸಿದರು. 40 ವರ್ಷಗಳ ರಾಜಕೀಯ ಜೀವನದಲ್ಲಿ ನಾನು ಎಂದಿಗೂ ಇಷ್ಟು ಹಿಂಸೆ ಅನುಭವಿಸಿರಲಿಲ್ಲ. ಜೀವನದಲ್ಲಿ ಹಲವು ಏರಿಳಿತಗಳನ್ನು ಕಂಡೆ. ಅಧಿಕಾರದಲ್ಲಿದ್ದಾಗ, ವಿರೋಧ ಪಕ್ಷದಲ್ಲಿದ್ದಾಗ ಸದನದಲ್ಲಿಯೂ ಎಷ್ಟೋ ಕಾವೇರಿದ ವಾಗ್ವಾದಗಳಲ್ಲಿ ಪಾಲ್ಗೊಂಡಿದ್ದೆ. ಆದರೆ ವಿರೋಧಪಕ್ಷವನ್ನು ಹೀಗೆ ಅವಮಾನ ಮಾಡುವುದು ಮಾತ್ರ ಹಿಂದೆಂದೂ ನಡೆದಿರಲಿಲ್ಲ ಎಂದು ಹೇಳಿದರು.

ಆಂಧ್ರ ವಿಧಾನಸಭೆಯನ್ನು ಮಹಾಭಾರತದ ಕೌರವ ಸಭೆಗೆ ಹೋಲಿಸಿದ ನಾಯ್ಡು, ಕೌರವರು ದ್ರೌಪದಿಯ ವಸ್ತ್ರಾಪಹರಣ ಮಾಡುವ ಮೂಲಕ ಪಾಂಡವರಿಗೆ ಅವಮಾನ ಮಾಡಲು ಯತ್ನಿಸಿದ್ದರು. ಸದನದಲ್ಲಿ ಆಡಳಿತ ಪಕ್ಷದ ಸದಸ್ಯರು ಅಷ್ಟೆಲ್ಲಾ ಮಾತನಾಡುತ್ತಿದ್ದರೂ ಸ್ಪೀಕರ್ ಚಕಾರವೆತ್ತದೆ ಮೂಕಪ್ರೇಕ್ಷಕರಂತೆ ಕುಳಿತಿದ್ದರು. ಸದನದಲ್ಲಿ ಮಾತನಾಡಲು ನನಗೆ ಅವಕಾಶ ನೀಡಲಿಲ್ಲ. ಉಳಿದ ಅವಧಿಯಲ್ಲಿ ನಾನು ವಿಧಾನಸಭೆ ಪ್ರವೇಶಿಸದಿರುವ ನಿರ್ಧಾರದ ಬಗ್ಗೆ ಹೇಳಿಕೆ ನೀಡಬೇಕು ಎಂದುಕೊಂಡಿದ್ದೆ. ಆದರೆ ಅವಕಾಶವೇ ಸಿಗಲಿಲ್ಲ. ನನ್ನ ಹಕ್ಕುಗಳಿಗಾಗಿ ನಾನು ಹೋರಾಡಬೇಕಿದೆ ಎಂದು ನಾಯ್ಡು ಗದ್ದದಿತರಾಗಿ ನುಡಿದರು.

ತಮ್ಮ ಗೌರವ ಮತ್ತು ಘನತೆ ಕಾಪಾಡಿಕೊಳ್ಳುವುದು ಹೇಗೆ ಎಂದು ಯೋಚಿಸುತ್ತಿದ್ದೇನೆ. ಕಳೆದ ಎರಡೂವರೆ ವರ್ಷಗಳಿಂದ ಸತತವಾಗಿ ಅವಮಾನಗಳನ್ನು ಎದುರಿಸುತ್ತಿದ್ದೇನೆ. ನನ್ನ ಘನತೆಗೆ ಕುಂದುಂಟಾಗಿದೆ. ಅಧಿವೇಷನದಲ್ಲಿ ಪಾಲ್ಗೊಳ್ಳುವುದರಲ್ಲಿ ಯಾವುದೇ ಅರ್ಥ ನನಗೆ ಕಾಣಿಸುತ್ತಿಲ್ಲ. ನಾನು ಜನರ ನಡುವೆ ಹೋಗಿ ನನ್ನ ಹೋರಾಟ ಮುಂದುವರಿಸುತ್ತೇನೆ. ಅವರ ಬೆಂಬಲ ಕೋರುತ್ತೇನೆ. ಜನಾಶೀರ್ವಾದ ಪಡೆದು, ಮುಖ್ಯಮಂತ್ರಿಯಾಗಿಯೇ ಸದನಕ್ಕೆ ಹಿಂದಿರುಗುತ್ತೇನೆ ಎಂದು ಸ್ಪಷ್ಟಪಡಿಸಿದರು.

ಅಧಿವೇಶನದಲ್ಲಿ ವಿರೋಧ ಪಕ್ಷಗಳ ಮೇಲೆ ಟೀಕೆ ಮಾಡಿದ ವೈಎಸ್​ಆರ್​ಪಿ ಶಾಸಕ ಅಂಬಟಿ ರಾಂಬಾಬು ಅವರ ಭಾಷಣಕ್ಕೆ ಟಿಡಿಪಿ ಶಾಸಕರು ಅಡ್ಡಿಯುಂಟು ಮಾಡಲು ಯತ್ನಿಸಿದರು. ಸ್ಪೀಕರ್ ಮುಂದಿನ ಸ್ಥಳಕ್ಕೆ ಬಂದ ಟಿಡಿಪಿ ಶಾಸಕರು, ಚಂದ್ರಬಾಬು ನಾಯ್ಡು ಪತ್ನಿಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ರಾಂಬಾಬು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ಸಚಿವರಾದ ಬಾಲಿನೇನಿ ಶ್ರೀನಿವಾಸ ರೆಡ್ಡಿ ಮತ್ತು ಕೊಡಲಿ ನಾನಿ ಸೇರಿದಂತೆ ಹಲವು ವೈಎಸ್​ಆರ್​ಪಿ ಶಾಸಕರು ಟಿಡಿಪಿ ಶಾಸಕರೊಂದಿಗೆ ಸಂಘರ್ಷಕ್ಕೆ ಇಳಿದರು.

ಇದನ್ನೂ ಓದಿ: ಆಂಧ್ರ ಪ್ರದೇಶದಲ್ಲಿ ಮಳೆ ಅನಾಹುತದಿಂದ ಮೂವರ ಸಾವು, ಕಡಪ ಜಿಲ್ಲೆಯಲ್ಲಿ 30 ಜನ ನಾಪತ್ತೆ ಇದನ್ನೂ ಓದಿ: ಚಂದ್ರಬಾಬು ನಾಯ್ಡು ಅಮರಾವತಿ ಕನಸಿಗೆ ಕೊಡಲಿ ಏಟು ಕೊಟ್ಟ ಸಿಎಂ ಜಗನ್‌ ರೆಡ್ಡಿ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada