ಪಕ್ಷೇತರ ಅಭ್ಯರ್ಥಿಯಾಗಿ ನ 23ಕ್ಕೆ ನಾಮಪತ್ರ ಸಲ್ಲಿಸಲು ವಾಟಾಳ್ ನಾಗರಾಜ್ ನಿರ್ಧಾರ
ಕಾಂಗ್ರೆಸ್ ಪಕ್ಷದವರು ನನಗೆ ಬೆಂಬಲ ಕೊಟ್ಟರೆ ನಿಮಗೆ-ನನಗೆ ಇಬ್ಬರಿಗೂ ಅನುಕೂಲ ಆಗಲಿದೆ ಎಂದು ಹೇಳಿದರು.
ಮೈಸೂರು: ಕರ್ನಾಟಕ ವಿಧಾನಪರಿಷತ್ನ ಪಕ್ಷೇತರ ಅಭ್ಯರ್ಥಿಯಾಗಿ ನ 23ರಂದು ನಾಮಪತ್ರ ಸಲ್ಲಿಸುವುದಾಗಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು. ವಿಧಾನಪರಿಷತ್ ಸದಸ್ಯ ಸ್ಥಾನವು ಚಿನ್ನ, ಬೆಳ್ಳಿ ವ್ಯಾಪಾರಿಗಳಿಗಲ್ಲ. ರಿಯಲ್ ಎಸ್ಟೇಟ್ ಮಾಡುವವರಿಗಲ್ಲ ಪರಿಷತ್ ಸ್ಥಾನ ಎಂದು ಹೇಳಿದ ಅವರು, ಸಹಕಾರ ನೀಡುವಂತೆ ಕಾಂಗ್ರೆಸ್ನವರನ್ನು ಕೇಳಿದ್ದೇನೆ ಎಂದು ಮಾಹಿತಿ ನೀಡಿದರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಬುದ್ಧ ರಾಜಕಾರಿಣಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನನಗೆ ಬೇಕಾದವರು. ಅವರ ಸಹಕಾರ ಸಿಗಬಹುದು ಎಂಬ ನಿರೀಕ್ಷೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ವಿಧಾನಪರಿಷತ್ನ 25 ಸ್ಥಾನಗಳಿಗೆ ಡಿ.10ರಂದು ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಪಕ್ಷದವರು ನನಗೆ ಬೆಂಬಲ ಕೊಟ್ಟರೆ ನಿಮಗೆ-ನನಗೆ ಇಬ್ಬರಿಗೂ ಅನುಕೂಲ ಆಗಲಿದೆ. ಈ ಮಾತನ್ನ ವಿಶ್ವಾಸಕ್ಕೆ ತೆಗೆದುಕೊಂಡು ಸಹಕಾರ ಕೊಡಿ ಎಂದು ಮನವಿ ಮಾಡಿದರು.
ಮಳೆಹಾನಿಯ ಬಗ್ಗೆ ಉನ್ನತ ಮಟ್ಟದ ಪರಿಶೀಲನೆ ಆಗಬೇಕು. ಮಳೆಯಿಂದ ರಾಜ್ಯದಲ್ಲಿ ₹ 5,000 ಕೋಟಿ ನಷ್ಟವಾಗಿದೆ. ಸಂಕಷ್ಟಕ್ಕೆ ಸಿಲುಕಿದವರ ರಕ್ಷಣೆಗೆ ಸರ್ಕಾರ ಧಾವಿಸಬೇಕು. ಜನರು ಸತ್ತಿದ್ದಾರೆ, ಸೇತುವೆಗಳು ಮುಳುಗಿವೆ. ರೈತರಿಗೆ, ಹೂ ಬೆಳೆಗಾರರಿಗೆ ಸಾಕಷ್ಟು ಸಮಸ್ಯೆ ಆಗಿದೆ. ಇದನ್ನ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಮುಂಬರುವ ಪರಿಷತ್ ಚುನಾವಣೆಯಲ್ಲಿ ಮೈಸೂರು-ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ತಿಳಿಸಿದರು. ಚುನಾವಣೆ ಎಂದರೆ ಕಡುಬು ತಿಂದ ಹಾಗೆ ಅಲ್ಲ. ಚುನಾವಣೆಗೆ ನಿಂತ ಎಲ್ಲರಿಗೂ ನೀವು ಮತ ಹಾಕಿ. ಒಂದೇ ಒಂದು ಮತ ಹಾಕಿ ಎಂದರೆ ಅದನ್ನು ಮಾಡಬೇಡಿ ಎಂದು ಒತ್ತಾಯಿಸಿದರು.
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ ಆಯ್ಕೆಯಾಗಲು ನಡೆಯುವ ಚುನಾವಣೆಯಲ್ಲಿ ನಾನು ಕಣಕ್ಕಿಳಿಯುತ್ತೇನೆ. ಈ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳೇ ಮತದಾರರಾಗಿರುತ್ತಾರೆ. ಎರಡು ಮತ ಚಲಾವಣೆಗೆ ಅವಕಾಶವಿದೆ. ನನಗೊಂದು ಮತ ಕೊಡಿ ಉಳಿದೊಂದು ಮತವನ್ನು ಬೇರೆ ಯಾರಿಗೆ ಬೇಕಾದರೂ ಚಲಾಯಿಸಿ. ನನ್ನಂಥವನು ಸದನದಲ್ಲಿ ಇರಬೇಕು ಎಂದು ಹೇಳಿದರು.
ಇದನ್ನೂ ಓದಿ: ಹಿಂದಿ ಭಾಷೆ ವಿರುದ್ಧ ಕರಾಳ ದಿನ; ನವೆಂಬರ್ 21ರಿಂದ ಚಳುವಳಿ ನಡೆಸಲು ವಾಟಾಳ್ ಕರೆ ಇದನ್ನೂ ಓದಿ: ನನ್ನಂಥವನು ವಿಧಾನಸೌಧಕ್ಕೆ ಹೋಗಬೇಕು ಹೀಗಾಗಿ ಚುನಾವಣೆಗೆ ನಿಲ್ತೀನಿ: ವಾಟಾಳ್ ನಾಗರಾಜ್ ಘೋಷಣೆ