AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲಂಗಾಣ: ಹೃದಯಾಘಾತದಿಂದ ರಸ್ತೆಯಲ್ಲಿ ಕುಸಿದುಬಿದ್ದ ವ್ಯಕ್ತಿಯನ್ನು ರಕ್ಷಿಸಿದ ಟ್ರಾಫಿಕ್ ಪೊಲೀಸ್

ವ್ಯಕ್ತಿಯ ಜೀವವನ್ನು ಉಳಿಸಿದ್ದಕ್ಕಾಗಿ ಪೊಲೀಸ್ ಅಧಿಕಾರಿಗೆ ಧನ್ಯವಾದ ಅರ್ಪಿಸಿದ ಆರೋಗ್ಯ ಸಚಿವರು, ಇಂತಹ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ರಾಜ್ಯ ಸರ್ಕಾರವು ಮುಂಚೂಣಿಯಲ್ಲಿರುವ ಆರೋಗ್ಯ ನೌಕರರು ಮತ್ತು ಕಾರ್ಯಕರ್ತರಿಗೆ ಸಿಪಿಆರ್‌ನಲ್ಲಿ ತರಬೇತಿ ನೀಡಲಿದೆ ಎಂದು ಹೇಳಿದರು.

ತೆಲಂಗಾಣ: ಹೃದಯಾಘಾತದಿಂದ ರಸ್ತೆಯಲ್ಲಿ ಕುಸಿದುಬಿದ್ದ ವ್ಯಕ್ತಿಯನ್ನು ರಕ್ಷಿಸಿದ ಟ್ರಾಫಿಕ್ ಪೊಲೀಸ್
CPR ನೀಡುತ್ತಿರುವ ಟ್ರಾಫಿಕ್ ಪೊಲೀಸ್
Follow us
ರಶ್ಮಿ ಕಲ್ಲಕಟ್ಟ
|

Updated on: Feb 24, 2023 | 6:27 PM

ಹೈದರಾಬಾದ್: ಟ್ರಾಫಿಕ್ ಪೊಲೀಸ್ ಅಧಿಕಾರಿಯ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಹೃದಯಾಘಾತದಿಂದ (Heart Attack) ರಸ್ತೆಯಲ್ಲಿ ಕುಸಿದುಬಿದ್ದ ವ್ಯಕ್ತಿಯೊಬ್ಬರ ಪ್ರಾಣ ಉಳಿಸಿದೆ. ತೆಲಂಗಾಣದ(Telangana) ಹೈದರಾಬಾದ್‌ನಲ್ಲಿ (Hyderabad) ಈ ಘಟನೆ ನಡೆದಿದ್ದು, ಪೊಲೀಸ್ ಅಧಿಕಾರಿ ರಾಜಶೇಖರ್ ಅವರು ಸಿಪಿಆರ್ ಮಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಕಾರ್ಡಿಯೋಪಲ್ಮನರಿ ರಿಸಸಿಟೇಷನ್ (CPR) ಹೃದಯಾಘಾತದಂಥಾ ತುರ್ತು ಸಂದರ್ಭಗಳಲ್ಲಿ ಉಪಯುಕ್ತವಾದ ಜೀವ ಉಳಿಸುವ ತಂತ್ರವಾಗಿದೆ.

ತೆಲಂಗಾಣ ಆರೋಗ್ಯ ಸಚಿವ ಹರೀಶ್ ರಾವ್ ತಣ್ಣೀರು ಟ್ವೀಟ್ ಮಾಡಿರುವ ವಿಡಿಯೊದಲ್ಲಿ, ಪೊಲೀಸ್ ಅಧಿಕಾರಿ ರಸ್ತೆಯಲ್ಲಿ ಬಿದ್ದಿರುವ ವ್ಯಕ್ತಿಯ ಎದೆಯ ಮೇಲೆ ಬಲವಾಗಿ ಒತ್ತುತ್ತಿರುವುದು ಕಾಣಬಹುದು. ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸೈಬರಾಬಾದ್ ಪೊಲೀಸರು ತಿಳಿಸಿದ್ದಾರೆ.

ವ್ಯಕ್ತಿಯ ಜೀವವನ್ನು ಉಳಿಸಿದ್ದಕ್ಕಾಗಿ ಪೊಲೀಸ್ ಅಧಿಕಾರಿಗೆ ಧನ್ಯವಾದ ಅರ್ಪಿಸಿದ ಆರೋಗ್ಯ ಸಚಿವರು, ಇಂತಹ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ರಾಜ್ಯ ಸರ್ಕಾರವು ಮುಂಚೂಣಿಯಲ್ಲಿರುವ ಆರೋಗ್ಯ ನೌಕರರು ಮತ್ತು ಕಾರ್ಯಕರ್ತರಿಗೆ ಸಿಪಿಆರ್‌ನಲ್ಲಿ ತರಬೇತಿ ನೀಡಲಿದೆ ಎಂದು ಹೇಳಿದರು.

ರಾಜೇಂದ್ರನಗರ ಪೊಲೀಸ್ ಠಾಣೆಯ ಟ್ರಾಫಿಕ್ ಪೋಲೀಸ್ ರಾಜಶೇಖರ್ ಅವರು ತಕ್ಷಣವೇ ಸಿಪಿಆರ್ ಮಾಡುವ ಮೂಲಕ ಅಮೂಲ್ಯವಾದ ಜೀವವನ್ನು ಉಳಿಸುವಲ್ಲಿ ಶ್ಲಾಘನೀಯ ಕೆಲಸ ಮಾಡಿದ್ದು ಅದನ್ನು  ಪ್ರಶಂಸಿಸುತ್ತೇವೆ. ಇಂತಹ ಘಟನೆಗಳ ಹೆಚ್ಚುತ್ತಿರುವ ವರದಿಗಳನ್ನು ಗಮನದಲ್ಲಿಟ್ಟುಕೊಂಡು ತೆಲಂಗಾಣ ಸರ್ಕಾರವು ಮುಂದಿನ ವಾರ ಎಲ್ಲಾ ಮುಂಚೂಣಿ ನೌಕರರು ಮತ್ತು ಕಾರ್ಮಿಕರಿಗೆ ಸಿಪಿಆರ್ ತರಬೇತಿಯನ್ನು ನಡೆಸಲಿದೆ ಎಂದು ತಣ್ಣೀರು ಟ್ವೀಟ್ ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮ ಯುಗದಲ್ಲಿ ಜಿಮ್‌ಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಕಾರ್ಯಕ್ರಮಗಳಲ್ಲಿ ಹೃದಯಾಘಾತದಿಂದ ಜನರು ಕುಸಿದು ಬೀಳುವ ವಿಡಿಯೊಗಳು ಆಗಾಗ್ಗೆ ಹೊರಹೊಮ್ಮುತ್ತವೆ. ಇದು ವೈದ್ಯಕೀಯ ವೃತ್ತಿಪರರ ನಡುವೆ ಚರ್ಚೆಗೆ ಕಾರಣವಾಗಿದೆ ಮತ್ತು ಯುವ ವಯಸ್ಕರಲ್ಲಿಯೂ ಸಹ ಹೃದಯಾಘಾತವು ಹೆಚ್ಚು ಸಾಮಾನ್ಯವಾಗಿದೆಯೇ ಎಂದು ಸಾರ್ವಜನಿಕ ವೇದಿಕೆಗಳಲ್ಲಿ ಊಹಾಪೋಹಗಳಿಗೆ ಕಾರಣವಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ