ವಾಟ್ಸ್​ಆ್ಯಪ್​ನಿಂದ ವಲಸೆ: 50 ಕೋಟಿ ದಾಟಿದ ಟೆಲಿಗ್ರಾಮ್​ ಬಳಕೆದಾರರ ಸಂಖ್ಯೆ

ಕಳೆದ 72 ಗಂಟೆಯಲ್ಲಿ ಹೊಸದಾಗಿ 25 ಕೋಟಿ ಗ್ರಾಹಕರು ಟೆಲಿಗ್ರಾಮ್ ಬಳಕೆ ಆರಂಭಿಸಿದ್ದಾರೆ. ಕೆಲ ದತ್ತಾಂಶಗಳ ಪ್ರಕಾರ ಜನವರಿ 6ರಿಂದ 10ರ ನಡುವೆ ಭಾರತದಲ್ಲಿ 15ಲಕ್ಷ ಜನ ಟೆಲಿಗ್ರಾಮ್ ಡೌನ್​ಲೋಡ್ ಮಾಡಿರುವುದು ತಿಳಿದುಬಂದಿದೆ.

ವಾಟ್ಸ್​ಆ್ಯಪ್​ನಿಂದ ವಲಸೆ: 50 ಕೋಟಿ ದಾಟಿದ ಟೆಲಿಗ್ರಾಮ್​ ಬಳಕೆದಾರರ ಸಂಖ್ಯೆ
ವಾಟ್ಸ್​ಆ್ಯಪ್​ನಿಂದ ಟೆಲಿಗ್ರಾಮ್​ನತ್ತ ಮುಖ ಮಾಡಿದ ಬಳಕೆದಾರರು
Follow us
Skanda
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jan 13, 2021 | 5:47 PM

ವಾಟ್ಸ್​ಆ್ಯಪ್​ ತನ್ನ ಗೌಪ್ಯತಾ ನೀತಿಯನ್ನು ಬದಲಾಯಿಸುತ್ತಿರುವ ಬೆನ್ನಲ್ಲೇ ಟೆಲಿಗ್ರಾಮ್​ ಬಳಕೆದಾರರ ಸಂಖ್ಯೆ 50 ಕೋಟಿಯ ಗಡಿ ದಾಟಿದೆ. ಕಳೆದ ಕೆಲ ದಿನಗಳಲ್ಲಿ 25 ಕೋಟಿ ಹೊಸ ಗ್ರಾಹಕರನ್ನು ಸೆಳೆದಿರುವ ಟೆಲಿಗ್ರಾಮ್​ ಜನವರಿ ಮೊದಲ ವಾರದಲ್ಲಿ 50 ಕೋಟಿ ಸಕ್ರಿಯ ಬಳಕೆದಾರರನ್ನು ಹೊಂದಿರುವುದಾಗಿ ಹೇಳಿಕೆ ನೀಡಿದೆ.

ಭಾರತದಲ್ಲಿ ಎಷ್ಟು ಹೊಸ ಬಳಕೆದಾರರು ಲಭಿಸಿದ್ದಾರೆ ಎಂಬುದನ್ನು ಸಂಸ್ಥೆ ಸ್ಪಷ್ಟಪಡಿಸಿಲ್ಲವಾದರೂ, ಏಷ್ಯಾದಲ್ಲಿ ಶೇ 38, ಯುರೋಪಿನಲ್ಲಿ ಶೇ 27, ಲ್ಯಾಟಿನ್​ ಅಮೆರಿಕಾದಲ್ಲಿ ಶೇ 21, ಮಧ್ಯ ಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ದೇಶಗಳಲ್ಲಿ ಶೇ 8ರಷ್ಟು ನೂತನ ಬಳಕೆದಾರರು ಟೆಲಿಗ್ರಾಮ್​ನತ್ತ ಮುಖಮಾಡಿದ್ದಾರೆ ಎಂದು ವರದಿಯಾಗಿದೆ.

ಕಳೆದ 72 ಗಂಟೆಯಲ್ಲಿ ಹೊಸದಾಗಿ 25 ಕೋಟಿ ಗ್ರಾಹಕರು ಟೆಲಿಗ್ರಾಮ್ ಬಳಕೆ ಆರಂಭಿಸಿದ್ದಾರೆ. ಕೆಲ ದತ್ತಾಂಶಗಳ ಪ್ರಕಾರ ಜನವರಿ 6ರಿಂದ 10ರ ನಡುವೆ ಭಾರತದಲ್ಲಿ 15 ಲಕ್ಷ ಜನ ಟೆಲಿಗ್ರಾಮ್ ಡೌನ್​ಲೋಡ್ ಮಾಡಿರುವುದು ತಿಳಿದುಬಂದಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಟೆಲಿಗ್ರಾಮ್​ ಸಿಇಒ ಮತ್ತು ಸಂಸ್ಥಾಪಕ ಪವೇಲ್​ ದುರೋವ್​, ಜಾಗತಿಕ ಮಟ್ಟದಲ್ಲಿ ಟೆಲಿಗ್ರಾಮ್​ ಬಳಕೆದಾರರ ಸಂಖ್ಯೆ ದೊಡ್ಡ ಮಟ್ಟದಲ್ಲಿ ಏರಿಕೆ ಕಂಡಿದೆ. ಉಚಿತ ಸೌಲಭ್ಯಕ್ಕಾಗಿ ಜನರು ತಮ್ಮ ವೈಯಕ್ತಿಕ ಮಾಹಿತಿಗಳನ್ನು ಬಹಿರಂಗಪಡಿಸಲು ಇಚ್ಛಿಸುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಗೌಪ್ಯತೆಯನ್ನು ಉಳಿಸಿಕೊಳ್ಳುವುದು ಬಳಕೆದಾರರ ಹಕ್ಕು. ಟೆಲಿಗ್ರಾಮ್​ ಅದನ್ನು ಗೌರವಿಸಲಿದೆ ಮತ್ತು ಗಂಭೀರವಾಗಿ ಪರಿಗಣಿಸಲಿದೆ ಎಂದು ಹೇಳಿದ್ದಾರೆ.

ಯಾವುದೇ ಕಾರಣಕ್ಕೂ ಜಾಹೀರಾತು ಅಥವಾ ಇನ್ಯಾವುದೇ ರೀತಿಯ ವಾಣಿಜ್ಯ ಉದ್ದೇಶಗಳಿಗಾಗಲೀ, ಲಾಭಕ್ಕಾಗಲೀ ನಾವು ನಮ್ಮ ಬಳಕೆದಾರರ ಮಾಹಿತಿಯನ್ನು ಹರಾಜಿಗಿಡುವುದಿಲ್ಲ. ಗ್ರಾಹಕರ ಸುರಕ್ಷತೆಯೇ ನಮ್ಮ ಆದ್ಯತೆ ಎನ್ನುವುದು ಸ್ಪಷ್ಟ. 2013ರ ಆಗಸ್ಟ್​ನಲ್ಲಿ ನಮ್ಮ ಸೇವೆ ಆರಂಭವಾಗಿದ್ದು, ಅಂದಿನಿಂದ ಇಂದಿನ ತನಕ ಒಂದೇ ಒಂದು ಬೈಟ್ ಡೇಟಾ ಕೂಡಾ ಸೋರಿಕೆಯಾಗದಂತೆ ಜಾಗ್ರತೆ ವಹಿಸಿದ್ದೇವೆ ಎಂದು ಹೇಳಿಕೊಳ್ಳಲು ಹೆಮ್ಮೆಯಿದೆ ಎಂದು ತಿಳಿಸಿದ್ದಾರೆ.

ವಿಶ್ವದಲ್ಲಿ ಭಾರತವು ಅತಿ ಹೆಚ್ಚು ಮೊಬೈಲ್​ ಡೇಟಾ ಬಳಸುವ ದೇಶವಾಗಿದ್ದು, 2019ರ ಅಧ್ಯಯನದ ಪ್ರಕಾರ ಭಾರತೀಯರು ತಿಂಗಳಿಗೆ ಸರಾಸರಿ 12ಜಿಬಿ ಡೇಟಾ ಬಳಸುತ್ತಿದ್ದಾರೆ. ಈ ಸರಾಸರಿ ಪ್ರಮಾಣವು 2025ರ ವೇಳೆಗೆ 25ಜಿಬಿ ಡೇಟಾಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಕೆಲ ವರದಿಗಳು ತಿಳಿಸಿವೆ.

ಭಾರತದಲ್ಲಿ ಕುಸಿದ ವಾಟ್ಸ್​ಆ್ಯಪ್​: ಶೇ.9,483 ರಷ್ಟು ಹೆಚ್ಚಿದ ಸಿಗ್ನಲ್ ಆ್ಯಪ್ ಬಳಕೆ

Published On - 5:47 pm, Wed, 13 January 21