ರೂಪ ಬದಲಿಸಿಕೊಂಡು ಭಾರತದಲ್ಲಿ ದಾಳಿಗೆ ಉಗ್ರರ ಸಂಚು, ಪೊಲೀಸರ ಕಣ್ಣಿಗೆ ಮಣ್ಣೆರೆಚಲು ಕಾಸ್ಮೆಟಿಕ್ ಮೇಕ್ ಓವರ್

ಭಾರತೀಯ ಭದ್ರತಾ ಪಡೆಗಳು ಮತ್ತು ತನಿಖಾ ಸಂಸ್ಥೆಗಳ ಕಣ್ಣಿಗೆ ಮಣ್ಣೆರಚಲು ಭಯೋತ್ಪಾದಕರು ಅತ್ಯಂತ ಹೈಟೆಕ್ ಮತ್ತು ವಿಲಕ್ಷಣ ರಣತಂತ್ರಕ್ಕೆ ಮೊರೆಹೋಗಿದ್ದಾರೆ. ತನಿಖಾಧಿಕಾರಿಗಳ ಕಣ್ತಪ್ಪಿಸಲು ಮತ್ತು ಬಯೋಮೆಟ್ರಿಕ್ ಮುಖ ಗುರುತಿಸುವಿಕೆ ವ್ಯವಸ್ಥೆಗಳನ್ನು ವಿಫಲಗೊಳಿಸಲು ಉಗ್ರರು ಸೌಂದರ್ಯ ವರ್ಧಕ ಚಿಕಿತ್ಸೆಗಳು ಹಾಗೂ ಪ್ಲಾಸ್ಟಿಕ್ ಸರ್ಜರಿಗಳನ್ನು ಮಾಡಿಸಿಕೊಳ್ಳುತ್ತಿರುವ ಆಘಾತಕಾರಿ ಸತ್ಯ ಈಗ ದೆಹಲಿ ಪೊಲೀಸರ ವಿಶೇಷ ಘಟಕದ ತನಿಖೆಯಿಂದ ಬಯಲಾಗಿದೆ.

ರೂಪ ಬದಲಿಸಿಕೊಂಡು ಭಾರತದಲ್ಲಿ ದಾಳಿಗೆ ಉಗ್ರರ ಸಂಚು, ಪೊಲೀಸರ ಕಣ್ಣಿಗೆ ಮಣ್ಣೆರೆಚಲು ಕಾಸ್ಮೆಟಿಕ್ ಮೇಕ್ ಓವರ್
ಸಾಜಿದ್ ಮಿರ್
Image Credit source: Times Of India

Updated on: May 20, 2026 | 10:23 AM

ನವದೆಹಲಿ, ಮೇ 20: ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಮತ್ತು ಸ್ಲೀಪರ್ ಸೆಲ್ ಸ್ಥಾಪಿಸಲು ಪಾಕಿಸ್ತಾನದಿಂದ ನುಸುಳಿ ಬಂದಿದ್ದ ಲಷ್ಕರ್-ಎ-ತೊಯ್ಬಾ (LeT) ಉಗ್ರನೊಬ್ಬನ ಕರಾಳ ಮಿಷನ್ ಕೊನೆಗೂ ವಿಫಲಗೊಂಡಿದೆ. ಆದರೆ, ಆತನ ಮಿಷನ್ ವಿಫಲವಾಗಲು ಕಾರಣ ಭಾರತೀಯ ಸೇನೆಯಲ್ಲ, ಬದಲಿಗೆ ಆತನಿಗೆ ಕಾಡುತ್ತಿದ್ದ ಕೂದಲು ಉದುರುವಿಕೆ ಸಮಸ್ಯೆ ಮತ್ತು ಸುಂದರವಾಗಿ ಕಾಣಬೇಕೆಂಬ ಗೀಳು.

ಮಿಷನ್ ಬಿಟ್ಟು ಕೂದಲು ಕಸಿಗೆ ಮುಂದಾದ ಉಗ್ರ ಉಸ್ಮಾನ್ ಜಟ್
ಭಾರತದಲ್ಲಿ ಭೀಕರ ವಿಧ್ವಂಸಕ ಕೃತ್ಯಕ್ಕೆ ಸ್ಲೀಪರ್ ಸೆಲ್ ಸ್ಥಾಪಿಸುವ ದೊಡ್ಡ ಜವಾಬ್ದಾರಿಯೊಂದಿಗೆ ಪಾಕಿಸ್ತಾನದಿಂದ ಭಾರತಕ್ಕೆ ಲಷ್ಕರ್ ಉಗ್ರ ಉಸ್ಮಾನ್ ಜಟ್ ಅಲಿಯಾಸ್ ಚೈನೀಸ್ ಯಶಸ್ವಿಯಾಗಿ ನುಸುಳಿದ್ದ. ಭಾರತದ ದೈನಂದಿನ ಶಾಂತಿಯುತ ಜೀವನವನ್ನು ಕಂಡ ತಕ್ಷಣ ಆತನ ಉತ್ಸಾಹ ಕುಸಿದುಹೋಗಿತ್ತು. ಇದೇ ಸಮಯದಲ್ಲಿ ಆತನಿಗೆ ತನ್ನ ತಲೆಯ ಕೂದಲು ಉದುರುತ್ತಿರುವುದು ದೊಡ್ಡ ಚಿಂತೆಯಾಗಿ ಕಾಡಲಾರಂಭಿಸಿತು.

ಕೂದಲು ಉದುರುವಿಕೆಯಿಂದ ತನ್ನ ವೈಯಕ್ತಿಕ ಆತ್ಮವಿಶ್ವಾಸ ಮತ್ತು ಸ್ವಾಭಿಮಾನಕ್ಕೆ ತೀವ್ರ ಹಾನಿಯಾಗಿದೆ ಎಂದು ಒಪ್ಪಿಕೊಂಡ ಆತ, ತನಗೆ ಒಪ್ಪಿಸಿದ್ದ ದೇಶದ್ರೋಹದ ಮಹಾ ಮಿಷನ್ ಅನ್ನೇ ಬದಿಗಿಟ್ಟು, ಕೂದಲು ಕಸಿ (Hair Transplantation) ಚಿಕಿತ್ಸೆಗಾಗಿ ಶ್ರೀನಗರದ ವೈದ್ಯಕೀಯ ಚಿಕಿತ್ಸಾಲಯಕ್ಕೆ ದಾಖಲಾಗಿದ್ದ. ಅಲ್ಲಿಯೇ ಈತನನ್ನು ಪೊಲೀಸರು ಸೆರೆಹಿಡಿದಿದ್ದಾರೆ.

ದಂತ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಮತ್ತೊಬ್ಬ ಉಗ್ರ
ಬಾಂಗ್ಲಾದೇಶದಲ್ಲಿ ಲಷ್ಕರ್ ಸೆಲ್ ಸ್ಥಾಪಿಸುತ್ತಿದ್ದ ಶಬ್ಬೀರ್ ಅಹ್ಮದ್ ಲೋನ್ ಎಂಬಾತನನ್ನು ಮಾರ್ಚ್‌ನಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದರು. ಈತ ಎಐ (AI) ಶೃಂಗಸಭೆಗೆ ಮುಂಚಿತವಾಗಿ ದೆಹಲಿಯಲ್ಲಿ ಪ್ರಚೋದನಕಾರಿ ಪೋಸ್ಟರ್‌ಗಳನ್ನು ಅಂಟಿಸಲು ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಿಂದ ಸದಸ್ಯರನ್ನು ನೇಮಕ ಮಾಡಿಕೊಂಡಿದ್ದ. ತನಿಖೆಯ ವೇಳೆ ಈತ ತನಿಖಾ ಸಂಸ್ಥೆಗಳ ಕಣ್ತಪ್ಪಿಸಲು ಗುರುಗ್ರಾಮದಲ್ಲಿ ಖಾಸಗಿ ಚಿಕಿತ್ಸಾಲಯದಲ್ಲಿ ದಂತ ಶಸ್ತ್ರಚಿಕಿತ್ಸೆಯನ್ನು (Dental Surgery) ಮಾಡಿಸಿಕೊಂಡಿದ್ದ ಎಂಬ ವಿವರಗಳು ಪೊಲೀಸರು ಶೀಘ್ರದಲ್ಲೇ ಸಲ್ಲಿಸಲಿರುವ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಇದು ಕೇವಲ ಸೌಂದರ್ಯದ ಗೀಳಲ್ಲ, ಎಐ ಕಣ್ಣು ತಪ್ಪಿಸುವ ರಣತಂತ್ರ
ಭಯೋತ್ಪಾದಕರು ಈ ರೀತಿ ಮೇಕ್ ಓವರ್ ಮಾಡಿಕೊಳ್ಳುತ್ತಿರುವುದರ ಹಿಂದೆ ಕೇವಲ ಸೌಂದರ್ಯದ ಹಪಾಹಪಿ ಮಾತ್ರವಿಲ್ಲ, ಬದಲಿಗೆ ಜಾಗತಿಕ ವಿಮಾನ ನಿಲ್ದಾಣಗಳು ಮತ್ತು ಸಾರಿಗೆ ಕೇಂದ್ರಗಳಲ್ಲಿ ನಿಯೋಜಿಸಲಾದ ಕೃತಕ ಬುದ್ಧಿಮತ್ತೆ (AI) ಆಧಾರಿತ ಬಯೋಮೆಟ್ರಿಕ್ ಮುಖ ಗುರುತಿಸುವಿಕೆ ಸಾಫ್ಟ್‌ವೇರ್ ಅನ್ನು ವಿಫಲಗೊಳಿಸುವ ಉದ್ದೇಶಪೂರ್ವಕ ಪ್ರಯತ್ನವೂ ಅಡಗಿದೆ ಎಂದು ಹಿರಿಯ ತನಿಖಾಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.

ಈ ಆಧುನಿಕ ಎಐ ಅಲ್ಗಾರಿದಮ್‌ಗಳು ಕೇವಲ ಫೋಟೋವನ್ನು ನೋಡುವುದಿಲ್ಲ, ಅವು ವ್ಯಕ್ತಿಯ ಕಣ್ಣುಗಳು, ಮೂಗಿನ ಸೇತುವೆ, ದವಡೆಯ ರೇಖೆ ಮತ್ತು ಹಣೆಯ ಗಡಿಯ ನಡುವಿನ ನಿಖರವಾದ, ಸ್ಥಿರ ಅಂತರವನ್ನು ನಕ್ಷೆ ಮಾಡುತ್ತವೆ.

26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಸಾಜಿದ್ ಮಿರ್​ನ ಹಾದಿಯನ್ನೇ ಈ ಉಗ್ರರು ಹಿಡಿದಿದ್ದಾರೆ. ವರ್ಷಗಳ ಹಿಂದೆ ಸಾಜಿದ್ ಮಿರ್ ಮತ್ತು ಕಾರ್ಲೋಸ್ ದಿ ಜಾಕಲ್ ಇಬ್ಬರೂ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆಗಳಿಗೆ (Plastic Surgery) ಒಳಗಾಗುವ ಮೂಲಕ ತಮ್ಮ ಗುರುತನ್ನೇ ಸಂಪೂರ್ಣವಾಗಿ ಬದಲಾಯಿಸಿಕೊಂಡಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us