ದೆಹಲಿ: ಉಗ್ರಗಾಮಿಗಳ ಗುಂಡಿಗೆ ಜಮ್ಮು ಕಾಶ್ಮೀರದ ಪೊಲೀಸ್ ಸಿಬ್ಬಂದಿಯೊಬ್ಬರು ಭಾನುವಾರ ಹುತಾತ್ಮರಾಗಿದ್ದಾರೆ. ಶ್ರೀನಗರದ ಬಾಟ್ಮಲೂ ಪ್ರದೇಶದಲ್ಲಿ ಪೊಲೀಸ್ ಸಿಬ್ಬಂದಿಯನ್ನು ಭಯೋತ್ಪಾದಕರು ಬೆನ್ನಟ್ಟಿ ಕೊಂದಿದ್ದಾರೆ. ಜಮ್ಮು ಕಾಶ್ಮೀರ ಪೊಲೀಸ್ ಇಲಾಖೆಯ ಕಾನ್ಸ್ಟೆಬಲ್ ತೌಸೀಫ್ ಅಹಮದ್ ಅವರ ಮೇಲೆ ಅವರ ಮನೆಯ ಹತ್ತಿರವೇ ರಾತ್ರಿ 8 ಗಂಟೆಗೆ ಉಗ್ರರು ಗುಂಡು ಹಾರಿಸಿದ್ದಾರೆ ಎಂದು ಪಿಟಿಐ ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ವರದಿ ಮಾಡಿದೆ.
ತೀವ್ರವಾಗಿ ಗಾಯಗೊಂಡ ಕಾನ್ಸ್ಟೆಬಲ್ ತೌಸೀಫ್ ಅವರನ್ನು ತಕ್ಷಣವೇ ಎಸ್ಎಂಎಚ್ಎಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದರು. ಈ ಪ್ರದೇಶದಲ್ಲಿ ಸಂಪೂರ್ಣವಾಗಿ ನಿರ್ಬಂಧ ಆದೇಶ ಜಾರಿಗೊಳಿಸಲಾಗಿದ್ದು, ಭಯೋತ್ಪಾದಕನ್ನು ಪತ್ತೆಹಚ್ಚಲು ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಭದ್ರತಾ ಪಡೆ- ಉಗ್ರರ ನಡುವೆ ಗುಂಡಿನ ಚಕಮಕಿ
ಜಮ್ಮು ಕಾಶ್ಮೀರದ ಶ್ರೀನಗರದ ಆಸ್ಪತ್ರೆಯೊಂದರಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಕೆಲ ಕಾಲ ಗುಂಡಿನ ಚಕಮಕಿ ನಡೆಯಿತು. ನಂತರ ಭದ್ರತಾ ಸಿಬ್ಬಂದಿ ಆಸ್ಪತ್ರೆಯನ್ನು ಸುತ್ತುವರೆದಿದ್ದಾರೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಈ ಪ್ರದೇಶದಲ್ಲಿದ್ದ ನಾಗರಿಕರ ನಡುವೆ ನುಸುಳಿಕೊಂಡು ಭಯೋತ್ಪಾದಕರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದಲ್ಲಿರುವ ಆಸ್ಪತ್ರೆಯಲ್ಲೇ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಒಬ್ಬರು ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಭದ್ರತಾ ಪಡೆಗಳು ಸ್ಥಳಕ್ಕೆ ದೌಡಾಯಿಸಿವೆ. ಶ್ರೀನಗರ-ಬಾರಾಮುಲ್ಲಾ ಹೆದ್ದಾರಿಯಲ್ಲಿ ನಗರದ ಬೆಮಿನಾ ಪ್ರದೇಶದ ಎಸ್ಕೆಐಎಂಎಸ್ ಆಸ್ಪತ್ರೆ ಬಳಿ ಈ ಘಟನೆ ನಡೆದಿದೆ. ಬೆಮಿನಾದ SKIMS ಆಸ್ಪತ್ರೆಯಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಸ್ವಲ್ಪ ಸಮಯದ ಗುಂಡಿನ ಚಕಮಕಿ ನಡೆಯಿತು. ಆ ಆಸ್ಪತ್ರೆಯ ಸುತ್ತ ಸೇರಿದ್ದ ಜನಸಂದಣಿಯ ಲಾಭವನ್ನು ಪಡೆದುಕೊಂಡು ಭಯೋತ್ಪಾದಕರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಶ್ರೀನಗರ ಪೊಲೀಸರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಕರಾವಳಿ, ಮಲೆನಾಡಿನಲ್ಲಿ ಮತ್ತೆ ರಿಂಗಣಿಸಿದ ಸ್ಯಾಟಲೈಟ್ ಫೋನ್, ಕರುನಾಡಿಗೆ ಎದುರಾಗಿದ್ಯಾ ಉಗ್ರಗಾಮಿಗಳ ಆತಂಕ?
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ: ವಿದೇಶಾಂಗ ವ್ಯವಹಾರಗಳ ಇಲಾಖೆ ಆತಂಕ