ದೆಹಲಿ ಚಲೋ: ಇಂದು ರೈತ ನಾಯಕರು-ಕೇಂದ್ರ ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಸಭೆ
ಕೇಂದ್ರ ಸರ್ಕಾರ ಮತ್ತು ಪಂಜಾಬ್ ರೈತರ ನಡುವೆ ಇಂದು ಇನ್ನೊಂದು ಸುತ್ತಿನ ಮಾತುಕತೆ ನಡೆಯಲಿದೆ. ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಸಹ ಇಂದಿನ ಮಾತುಕತೆಯಲ್ಲಿ ಭಾಗವಹಿಸಲಿದ್ದಾರೆ.
ದೆಹಲಿ: ಇಂದು ಮಧ್ಯಾಹ್ನ ಎರಡು ಘಂಟೆಗೆ ರೈತ ಒಕ್ಕೂಟಗಳ ನಾಯಕರು ಮತ್ತು ಕೇಂದ್ರ ಸರ್ಕಾರದ ನಡುವೆ 5ನೇ ಸುತ್ತಿನ ಮಾತುಕತೆ ನಡೆಯಲಿದೆ. ರೈತ ಒಕ್ಕೂಟಗಳು ಡಿಸೆಂಬರ್ 8ಕ್ಕೆ ಭಾರತ್ ಬಂದ್ಗೆ ಕರೆ ಕೊಟ್ಟಿವೆ. ಅದಕ್ಕೂ ಮೊದಲು ಇಂದು ಇನ್ನೊಂದು ಸುತ್ತಿನ ಮಾತುಕತೆಗೆ ಪಂಜಾಬ್ ರೈತರು ಒಪ್ಪಿಗೆ ಸೂಚಿಸಿದ್ದಾರೆ.
ಕ್ಯಾಪ್ಟನ್ ಅಮರೀಂದರ್ ಸಿಂಗ್ ಭಾಗಿ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಸಹ ಇಂದಿನ ಮಾತುಕತೆಯಲ್ಲಿ ಭಾಗಿಯಾಗಲಿದ್ದಾರೆ. ಈಗಾಗಲೇ ಗೃಹ ಸಚಿವರನ್ನು ಭೇಟಿ ಮಾಡಿ ಒಮ್ಮತದ ನಿರ್ಧಾರಕ್ಕೆ ಬರುವಂತೆ ಮನವಿ ಮಾಡಿದ್ದ ಪಂಜಾಬ್ ಸಿಎಂ, ಇಂದಿನ ಸಭೆಯಲ್ಲಿ ಭಾಗವಹಿಸಲಿರುವುದು ಕುತೂಹಲ ಮೂಡಿಸಿದೆ. ರೈತರ ಮತ್ತು ಸರ್ಕಾರದ ನಡುವಿನ ಸೇತುವೆಯಾಗಿ ಒಮ್ಮತ ಮೂಡಿಸಲು ಅವರು ನೆರವಾಗುವರೇ ಎಂಬುದನ್ನು ಕಾದು ನೋಡಬೇಕಿದೆ.
ಪಕ್ಷಕ್ಕೆ ಘಾಸಿಯಾಗಲು ಬಿಡಲ್ಲ ಎಂದ ಕಾಂಗ್ರೆಸ್ ಪಂಜಾಬ್ ಸಿಎಂ, ಪಕ್ಷದ ಮುಖಂಡ ಅಮರೀಂದರ್ ನಿರ್ಧಾರಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಕಾಂಗ್ರೆಸ್, ಅಮರೀಂದರ್ ನಿರ್ಧಾರಗಳಿಂದ ಪಕ್ಷಕ್ಕೆ ಘಾಸಿಯಾಗದಂತೆ ಎಚ್ಚರಿಕೆ ವಹಿಸುತ್ತಿದೆ. ಅಮಿತ್ ಶಾ ಜೊತೆಗಿನ ಮಾತುಕತೆಯಲ್ಲಿ ಕೃಷಿ ಕಾನೂನುಗಳನ್ನು ಮರು ಪರಿಶೀಲಿಸುವಂತೆ ಅವರು ಮನವಿ ಮಾಡಿದ್ದರು.
ರೈತ ನಾಯಕರಿಗೂ ಒಮ್ಮತದ ನಿರ್ಧಾರ ತಳೆಯಲು ಕೋರಿದ್ದರು. ಇವೆಲ್ಲವೂ, ಬಿಜೆಪಿಯ ರಾಜಕೀಯ ಚದುರಂಗದ ಆಟ ಆಗಿರಬಹುದು ಎಂಬ ಅಭಿಪ್ರಾಯ ಕಾಂಗ್ರೆಸ್ ವಲಯದಲ್ಲಿ ಕೇಳಿಬಂದಿದೆ. ಇಂದಿನ ಸಭೆಯಲ್ಲಿ ಏನೇ ತೀರ್ಮಾನ ಹೊರಬಿದ್ದರೂ ಪಕ್ಷಕ್ಕೆ ಯಾವುದೇ ಹಾನಿ ಉಂಟಾಗದಿರುವಂತೆ ಕಾಂಗ್ರೆಸ್ ಮುನ್ನೆಚ್ಚರಿಕೆ ವಹಿಸಲಿದೆ.
ಅಮರೀಂದರ್ ಸಿಂಗ್ ಮೇಲೆ ಹರಿಹಾಯ್ದ ಶಿರೋಮಣಿ ಅಕಾಲಿದಳ ರೈತರ ಪ್ರತಿಭಟನೆಯನ್ನು ವಿಫಲಗೊಳಿಸಲು ಅಮರೀಂದರ್ ಸಿಂಗ್ ಪ್ರಯತ್ನಿಸುತ್ತಿದ್ದಾರೆ ಎಂದು ಸಿಖ್ಖರ ಸಾಂಪ್ರದಾಯಿಕ ಪಕ್ಷ ಶಿರೋಮಣಿ ಅಕಾಲಿದಳ ಹರಿಹಾಯ್ದಿದೆ. ರೈತರ ಪ್ರತಿಭಟನೆ ದೇಶದ ಭದ್ರತೆಗೂ ಆಪತ್ತು ತರಬಹುದು ಎಂದು ಹೇಳಿಕೆ ನೀಡಿದ್ದ ಅಮರೀಂದರ್ ಸಿಂಗ್ರನ್ನು ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಟೀಕಿಸಿದ್ದಾರೆ. ಅಮರಿಂದರ್ ಸಿಂಗ್ ಯಾರದ್ದೋ ತಾಳಕ್ಕೆ ಕುಣಿಯುತ್ತಿದ್ದಾರೆ. ಗೃಹ ಸಚಿವ ಅಮಿತ್ ಶಾ ಜೊತೆ ಭೇಟಿ ನಂತರ ಅವರು ದೇಶದ ಭದ್ರತೆಗೆ ಧಕ್ಕೆ ತರುವ ಪ್ರಸ್ತಾಪ ಎತ್ತಿರುವುದು ಇದಕ್ಕೆ ಸಾಕ್ಷಿ ಎಂದಿದ್ದಾರೆ.
ಅಮರೀಂದರ್ ಸಿಂಗ್ ತಿರುಗೇಟು ಶಿರೋಮಣಿ ಅಕಾಲಿದಳದ ಟೀಕೆಗೆ ತಿರುಗೇಟು ನೀಡಿರುವ ಪಂಜಾಬ್ ಸಿಎಂ, ‘ವಿಪಕ್ಷಗಳು ರೈತರ ಪ್ರತಿಭಟನೆಯನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸುತ್ತಿವೆ’ ಎಂದು ಹೇಳಿದ್ದಾರೆ.
Breaking News: ಡಿಸೆಂಬರ್ 8ಕ್ಕೆ ಭಾರತ್ ಬಂದ್! ರೈತ ಒಕ್ಕೂಟಗಳ ಘೋಷಣೆ
Published On - 11:05 am, Sat, 5 December 20