UP Panchayat Election Results 2021: ಉತ್ತರಪ್ರದೇಶ ಪಂಚಾಯತ್ ಚುನಾವಣೆ ಮತ ಎಣಿಕೆ; ಪ್ರಿಯಾಂಕಾ ಗಾಂಧಿ ತೀವ್ರ ಅಸಮಾಧಾನ
ಕೊವಿಡ್ 19 ಬಿಕ್ಕಟ್ಟಿನ ನಡುವೆ ಉತ್ತರ ಪ್ರದೇಶದ 7.32 ಲಕ್ಷಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ವಾರ್ಡ್ಗಳು, 58,176 ಗ್ರಾಮ ಪಂಚಾಯಿತಿಗಳು, 75,852 ಕ್ಷೇತ್ರ ಪಂಚಾಯಿತಿಗಳು, 3050 ಜಿಲ್ಲಾ ಪಂಚಾಯಿತಿಗಳಿಗೆ ಒಟ್ಟು ನಾಲ್ಕು ಹಂತದಲ್ಲಿ ಮತದಾನ ನಡೆದಿತ್ತು.
ಲಖನೌ: ಚುನಾವಣಾ ಪ್ರಕ್ರಿಯೆಗಳಿಗೆ ತಡೆ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದ್ದರಿಂದ ಉತ್ತರ ಪ್ರದೇಶ ಪಂಚಾಯಿತಿ ಚುನಾವಣೆಯ ಮತ ಎಣಿಕೆಯೂ ಕೂಡ ಇಂದು ಬೆಳಗ್ಗೆಯಿಂದಲೇ ಪ್ರಾರಂಭವಾಗಿದೆ. ಈ ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಮತ ಎಣಿಕೆ ನಡೆಸಲು ಅವಕಾಶ ನೀಡಬಾರದು ಎಂದು ಸಚಿನ್ ಯಾದವ್ ಸುಪ್ರೀಂಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಆದರೆ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಲು ನಿರಾಕರಿಸಿತ್ತು. ಹಾಗೇ, ಕೊವಿಡ್ 19 ನಿಯಂತ್ರಣಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಮತ ಎಣಿಕೆ ನಡೆಸಬಹುದು ಎಂದು ಹೇಳಿತ್ತು.
ಅದರಂತೆ ಇಂದು ಬೆಳಗ್ಗೆಯಿಂದ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ವಿಶೇಷವೆಂದರೆ ಈ ಚುನಾವಣೆ ಕಣದಲ್ಲಿ ಕೇವಲ ಕಾಂಗ್ರೆಸ್, ಬಿಜೆಪಿ, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಾರ್ಟಿ (ಬಿಎಸ್ಪಿ) ಅಭ್ಯರ್ಥಿಗಳಷ್ಟೇ ಅಲ್ಲದೆ, ಅಸಾದುದ್ದೀನ್ ಒವೈಸಿ ಮತ್ತು ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ (ಆಪ್)ಗಳೂ ಕೂಡ ಕಣದಲ್ಲಿವೆ. ಹಾಗಾಗಿ ಈ ಚುನಾವಣೆ ಫಲಿತಾಂಶ ಕೂಡ ಕುತೂಹಲಕ್ಕೆ ಕಾರಣವಾಗಿದೆ.
ಕೊವಿಡ್ 19 ಬಿಕ್ಕಟ್ಟಿನ ನಡುವೆ ಉತ್ತರ ಪ್ರದೇಶದ 7.32 ಲಕ್ಷಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ವಾರ್ಡ್ಗಳು, 58,176 ಗ್ರಾಮ ಪಂಚಾಯಿತಿಗಳು, 75,852 ಕ್ಷೇತ್ರ ಪಂಚಾಯಿತಿಗಳು, 3050 ಜಿಲ್ಲಾ ಪಂಚಾಯಿತಿಗಳಿಗೆ ಒಟ್ಟು ನಾಲ್ಕು ಹಂತದಲ್ಲಿ ಮತದಾನ ನಡೆದಿತ್ತು. ಎಲ್ಲ ಹಂತದಲ್ಲೂ ಶೇ.70ರಷ್ಟು ವೋಟಿಂಗ್ ನಡೆದಿತ್ತು. ಇಂದು ಮತ ಎಣಿಕೆ ನಿಮಿತ್ತ ಎಲ್ಲ ಕೇಂದ್ರಗಳಲ್ಲೂ ಕೊವಿಡ್ 19 ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ವೈದ್ಯರು, ನರ್ಸ್ಗಳು ಇದ್ದಾರೆ. ಜನರು ಗುಂಪುಗೂಡಲು ಅವಕಾಶ ನೀಡುತ್ತಿಲ್ಲ. ಸುಪ್ರೀಂಕೋರ್ಟ್ ಸೂಚನೆಯಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಮತ ಎಣಿಕೆ ನಡೆಯುತ್ತಿದೆ.
ಪ್ರಿಯಾಂಕಾ ಗಾಂಧಿ ಅಸಮಾಧಾನ ಇನ್ನು ಪಂಚಾಯಿತಿ ಚುನಾವಣೆಗೆ ಹಾಜರಾಗಿದ್ದ 700ಕ್ಕೂ ಹೆಚ್ಚು ಶಿಕ್ಷಕರು ಕೊವಿಡ್ 19 ನಿಂದ ಮೃತಪಟ್ಟ ಬೆನ್ನಲ್ಲೇ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ರಾಜ್ಯ ಚುನಾವಣಾ ಆಯೋಗದ ವಿರುದ್ಧ ಕಿಡಿ ಕಾರಿದ್ದಾರೆ. ಒಬ್ಬ ಗರ್ಭಿಣಿ ಶಿಕ್ಷಕಿ ಸೇರಿ 700ಕ್ಕೂ ಹೆಚ್ಚು ಶಿಕ್ಷಕರ ಜೀವವೇ ಹೋದರೂ ತಲೆಕೆಡಿಸಿಕೊಂಡಿಲ್ಲ. ಕೊವಿಡ್ 19 ಭೀಕರತೆ ಗೊತ್ತಿದ್ದರೂ ಚುನಾವಣೆಗಳನ್ನು ಆಯೋಜಿಸಲಾಗಿತ್ತು. ಇದು ಅಪರಾಧ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸರ್ಕಾರದ ಹೊಸ ಮಾರ್ಗಸೂಚಿಗೆ ತರಕಾರಿ ಮಾರಾಟ ಮಹಿಳೆಯರ ಕಣ್ಣೀರು
ಹಸಿವು ತಾಳಲಾರದೆ ಕಸದ ರಾಶಿಯಲ್ಲಿ ಊಟಕ್ಕೆ ಹುಡುಕಾಟ, ಹಾಸನದಲ್ಲಿ ಮನಕಲಕುವ ಘಟನೆ