ಕುಟುಂಬದ ಒಪ್ಪಿಗೆ ಇದ್ದರೂ ಅಂತರ್ಧರ್ಮೀಯ ವಿವಾಹಕ್ಕೆ ಪೊಲೀಸರ ತಡೆ
ಹಿಂದೂ ಯುವ ವಾಹಿನಿಯ ಪ್ರತಿನಿಧಿಗಳು ಮದುವೆಗೆ ಆಕ್ಷೇಪ ವ್ಯಕ್ತಪಡಿಸಿದ ಕಾರಣ ಮದುವೆ ನಿಲ್ಲಿಸಿದ್ದೇವೆ. ಹೊಸ ಮತಾಂತರ ಕಾನೂನಿನ ಪ್ರಕಾರ, ಜಿಲ್ಲಾಧಿಕಾರಿಗೆ ಅನುಮತಿ ಅಗತ್ಯ.
ಲಖನೌ: ಎರಡೂ ಕುಟುಂಬಗಳ ಒಪ್ಪಿಗೆಯಿಂದ ನಡೆಯುತ್ತಿದ್ದ ಅಂತರ್ಧರ್ಮೀಯ ವಿವಾಹವನ್ನು ಉತ್ತರ ಪ್ರದೇಶ ಪೊಲೀಸರು ತಡೆದಿದ್ದಾರೆ. ನೂತನ ಮತಾಂತರ ನಿಷೇಧ ಕಾನೂನಿನ ಅನ್ವಯ ಇಂಥ ಮದುವೆಗಳಿಗೆ ಜಿಲ್ಲಾಧಿಕಾರಿ ಅನುಮತಿ ಅಗತ್ಯ ಎಂದು ಹೇಳಿದ್ದಾರೆ.
ಈ ಮದುವೆಯ ವಧು ಹಿಂದೂ ಧರ್ಮಕ್ಕೆ ಸೇರಿದವರು, ವರ ಮುಸ್ಲಿಂ ಧರ್ಮೀಯ. ಯಾರ ಒತ್ತಡವೂ ಇಲ್ಲದೆ, ಹಿಂದೂ ಸಂಪ್ರದಾಯದಂತೆ ಮದುವೆ ನಡೆಯುತ್ತಿತ್ತು ಎಂದು ಕುಟುಂಬಗಳ ಸದಸ್ಯರು ಪೊಲೀಸರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿದರು.
ವಿವಾಹವು ಲಖನೌ ನಗರದ ದುಡಾ ಕಾಲೋನಿಯಲ್ಲಿ ಬುಧವಾರ ನಡೆಯಬೇಕಿತ್ತು. ಮದುವೆಯ ಅಂತಿಮ ಸಿದ್ಧತೆಗಳು ನಡೆಯುತ್ತಿದ್ದಂತೆ ಪ್ಯಾರಾ ಪೊಲೀಸ್ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ, ಹೊಸದಾಗಿ ಜಾರಿಯಾಗಿರುವ ಕಾನೂನಿನ ಬಗ್ಗೆ ಮಾಹಿತಿ ನೀಡಿದರು. ಇಂಥ ಮದುವೆಗಳಿಗೆ ಜಿಲ್ಲಾಧಿಕಾರಿ ಅನುಮತಿ ಅಗತ್ಯ ಎಂದು ಪೊಲೀಸರು ವಧು-ವರರ ಕುಟುಂಬಗಳಿಗೆ ತಿಳಿಹೇಳಿದರು. ಎರಡೂ ಕುಟುಂಬಗಳು ಜಿಲ್ಲಾಧಿಕಾರಿ ಅನುಮತಿ ಪಡೆದ ನಂತರವೇ ವಿವಾಹ ವಿಧಿವಿಧಾನ ಪೂರ್ಣಗೊಳಿಸಲು ಒಪ್ಪಿಕೊಂಡರು.
ಪರಸ್ಪರ ಪ್ರೀತಿಸುತ್ತಿದ್ದ ಯುವಕ-ಯುವತಿ ಯಾರ ಬಲವಂತವೂ ಇಲ್ಲದೆ ಮದುವೆಯಾಗುತ್ತಿದ್ದರು. ಹಿಂದೂ ಯುವ ವಾಹಿನಿಯ ಪ್ರತಿನಿಧಿಗಳು ಮದುವೆಗೆ ಆಕ್ಷೇಪ ವ್ಯಕ್ತಪಡಿಸಿದ ಕಾರಣ ಮದುವೆ ನಿಲ್ಲಿಸಿದ್ದೇವೆ. ಹೊಸ ಮತಾಂತರ ಕಾನೂನಿನ ಪ್ರಕಾರ, ಜಿಲ್ಲಾಧಿಕಾರಿಗೆ ಅನುಮತಿ ನೀಡಿದರೆ ಮಾತ್ರ ಅಂತರಧರ್ಮೀಯ ವಿವಾಹಕ್ಕೆ ಅವಕಾಶ ಸಿಗುತ್ತದೆ ಪೊಲೀಸ್ ಅಧಿಕಾರಿ ತ್ರಿಲೋಕಿ ಸಿಂಗ್ ಹೇಳಿದರು.
ವಧು-ವರರ ಕುಟುಂಬಗಳಿಗೆ ಮತಾಂತರ ನಿಷೇಧ ಸುಗ್ರಿವಾಜ್ಞೆಯ ಪ್ರತಿಯನ್ನು ಹಸ್ತಾಂತರಿಸಲಾಗಿದೆ. ಜಿಲ್ಲಾಧಿಕಾರಿಗಳ ಅನುಮತಿ ಪಡೆಯುವವರೆಗೆ ಅವರು ಮದುವೆಯಾಗಲು ಸಾಧ್ಯವಿಲ್ಲ. ಎರಡೂ ಕುಟುಂಬಗಳಿಗೆ ಅವರ ವಕೀಲರ ಸಮ್ಮುಖದಲ್ಲಿ ನಿಬಂಧನೆಗಳ ಬಗ್ಗೆ ತಿಳಿ ಹೇಳಲಾಗಿದೆ. ಜಿಲ್ಲಾಧಿಕಾರಿಯಿಂದ ಅನುಮತಿ ಪಡೆದು ನಂತರವೇ ಮದುವೆ ಮಾಡುವ ಬಗ್ಗೆ ಅವರಿಂದ ಪತ್ರ ಪಡೆದುಕೊಳ್ಳಲಾಗಿದೆ ಎಂದು ಲಖನೌ ಡಿಸಿಪಿ ರವಿಕುಮಾರ್ ಹೇಳಿದರು.