Draupadi Murmu: ಕಾಯಕವೇ ಕೈಲಾಸ ವಚನ ನುಡಿದ ದ್ರೌಪದಿ ಮುರ್ಮು; ರಾಷ್ಟ್ರಪತಿ ಭಾಷಣದ ಹೈಲೈಟ್ಸ್
Basavanna's Vachana Quoted by The President of India: ತಮ್ಮ ಭಾಷಣದಲ್ಲಿ ದ್ರೌಪದಿ ಮುರ್ಮು ತಮ್ಮ ಸರ್ಕಾರದ ಕಾರ್ಯನಿರ್ವಹಣೆಯ ರೀತಿಯನ್ನು ಬಣ್ಣಿಸಲು ಬಸವಣ್ಣ ವಿರಚಿತ ಕಾಯಕವೇ ಕೈಲಾಸ ವಚನವನ್ನು ಉಲ್ಲೇಖಿಸಿದರು. ಬಸವೇಶ್ವರರ ಕಾಯಕವೇ ಕೈಲಾಸ ಮಾತಿನಂತೆ ನನ್ನ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.

ನವದಹಲಿ: ಇಂದು ಸಂಸತ್ನಲ್ಲಿ ಬಜೆಟ್ ಅಧಿವೇಶನ (Budget Session) ಆರಂಭಗೊಂಡಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಜಂಟಿ ಸಭೆಯನ್ನು (Joint Session) ಉದ್ದೇಶಿಸಿ ಮಾತನಾಡಿದರು. ಇಡೀ ವಿಶ್ವವೇ ಇಂದು ಭಾರತದತ್ತ ತಿರುಗಿ ನೋಡುತ್ತಿದೆ. ವಿಶ್ವ ದೇಶಗಳು ಭಾರತದಿಂದ ನೆರವು ನಿರೀಕ್ಷಿಸುವ ಹಂತಕ್ಕೆ ಪರಿವರ್ತನೆ ಆಗಿದೆ ಎಂದು ರಾಷ್ಟ್ರಪತಿಗಳು ತಿಳಿಸಿದರು.
ತಮ್ಮ ಭಾಷಣದಲ್ಲಿ ದ್ರೌಪದಿ ಮುರ್ಮು ತಮ್ಮ ಸರ್ಕಾರದ ಕಾರ್ಯನಿರ್ವಹಣೆಯ ರೀತಿಯನ್ನು ಬಣ್ಣಿಸಲು ಬಸವಣ್ಣ ವಿರಚಿತ ಕಾಯಕವೇ ಕೈಲಾಸ ವಚನವನ್ನು ಉಲ್ಲೇಖಿಸಿದರು. ಬಸವೇಶ್ವರರ ಕಾಯಕವೇ ಕೈಲಾಸ ಮಾತಿನಂತೆ ನನ್ನ ಸರ್ಕಾರ ಕೆಲಸ ಮಾಡುತ್ತಿದೆ. ಭಾರತದಲ್ಲಿ ಬಡವರ ಅಭಿವೃದ್ಧಿಗೆ ಕೆಲಸಗಳು ನಡೆಯುತ್ತಿವೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಚಿಂತನೆಯಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ಹೇಳಿದರು. ದ್ರೌಪದಿ ಮುರ್ಮು ಅವರು ಸಂಸತ್ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾಡಿರುವ ಮೊದಲ ಭಾಷಣ ಇದಾಗಿರುವುದು ವಿಶೇಷ.
ಇದೇ ವೇಳೆ, ಕೆಸಿಆರ್ ನೇತೃತ್ವದ ಬಿಆರ್ಎಸ್ ಮತ್ತು ಆಮ್ ಆದ್ಮಿ ಪಕ್ಷಗಳು ರಾಷ್ಟ್ರಪತಿ ಭಾಷಣವನ್ನು ಬಹಿಷ್ಕರಿಸಿವೆ. ಪ್ರಮುಖ ವಿಪಕ್ಷ ಕಾಂಗ್ರೆಸ್ ಕೂಡ ರಾಷ್ಟ್ರಪತಿ ಭಾಷಣದಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿತು. ಹಲವು ಕಾಂಗ್ರೆಸ್ ಸಂಸದರು ರಾಷ್ಟ್ರಪತಿ ಭಾಷಣದ ವೇಳೆ ಸಭೆಯಲ್ಲಿ ಗೈರಾಗಿದ್ದರು. ಇವರ ಪೈಕಿ ಮಲ್ಲಿಕಾರ್ಜುನ ಖರ್ಗೆ ಜಮ್ಮು ಕಾಶ್ಮೀರದಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ವಿಮಾನದಲ್ಲಿ ದೆಹಲಿಗೆ ಬರುವುದು ತಡವಾಗಿದೆ ಎನ್ನಲಾಗಿದೆ. ಆದರೆ, ಬೇರೆ ಹಲವು ಕಾಂಗ್ರೆಸ್ ಸಂಸದರು ಬರದೇ ಹೋಗಿದ್ದು, ಆಡಳಿತ ಪಕ್ಷವನ್ನು ಕೆರಳಿಸಿದೆ. ವಿಪಕ್ಷಗಳ ಈ ವರ್ತನೆಯನ್ನು ಬಿಜೆಪಿ ವಕ್ತಾರರು ಬಲವಾಗಿ ಖಂಡಿಸಿದ್ದಾರೆ.
ಇನ್ನು ರಾಷ್ಟ್ರಪತಿ ಭಾಷಣಕ್ಕೆ ಮುನ್ನ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತದಲ್ಲಿ ನಾರಿಶಕ್ತಿಯ ಅನಾವರಣ ಆಗುತ್ತಿದೆ ಎಂದರು. ರಾಷ್ಟ್ರಪತಿಗಳು ಮಹಿಳೆಯಾಗಿದ್ದಾರೆ. ನಾಳೆ ಬಜೆಟ್ ಮಂಡಿಸುವ ಹಣಕಾಸು ಸಚಿವರೂ ಮಹಿಳೆಯೇ. ಇದರ ಜೊತೆಗೆ ಭಾರತದ ಬಜೆಟ್ ಮೇಲೆ ಜಗತ್ತಿನ ಚಿತ್ತ ನೆಟ್ಟಿದೆ. ಭಾರತದ ಬಗ್ಗೆ ಜಾಗತಿಕವಾಗಿ ಬಹಳ ನಿರೀಕ್ಷೆಗಳಿವೆ. ನಿರ್ಮಲ್ಜಿ ಅವರು ಈ ನಿರೀಕ್ಷೆಗಳನ್ನು ಈಡೇರಿಸಲು ಯತ್ನಿಸಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ರಾಷ್ಟ್ರಪತಿ ಭಾಷಣದ ಪ್ರಮುಖ ಅಂಶಗಳು
* ನಾವು ಆತ್ಮನಿರ್ಭರ್ (ಸ್ವಾವಲಂಬಿ) ಆಗಿರುವ ಭಾರತವನ್ನು ಕಟ್ಟಬೇಕಿದೆ. 2047ರೊಳಗೆ ನಮ್ಮ ಪ್ರಾಚೀನ ಪರಂಪರೆ ಬಗ್ಗೆ ಹೆಮ್ಮೆ ಇರುವ ಮತ್ತು ಆಧುನಿಕತೆಯ ಎಲ್ಲಾ ಮಹತ್ವವನ್ನೂ ಹೊಂದಿರುವ ದೇಶ ನಮ್ಮದಾಗಬೇಕಿದೆ.
* ಬಸವೇಶ್ವರರ ಕಾಯಕವೇ ಕೈಲಾಸ ಎಂಬ ಮಾತಿನಂತೆ ಸರ್ಕಾರ ಕರ್ತವ್ಯ ನಿಭಾಯಿಸುತ್ತಿದೆ.
* ಭ್ರಷ್ಟಾಚಾರವು ನಮ್ಮ ಪ್ರಜಾತಂತ್ರ ಮತ್ತು ಸಾಮಾಜಿಕ ನ್ಯಾಯದ ಅತಿದೊಡ್ಡ ಶತ್ರು ಎಂಬುದು ನನ್ನ ಸರ್ಕಾರದ ಸ್ಪಷ್ಟ ಅಭಿಪ್ರಾಯ. ಕಳೆದ ಕೆಲ ವರ್ಷಗಳಿಂದ ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಟ ನಡೆಯುತ್ತಿದೆ. ಪ್ರಾಮಾಣಿಕರಿಗೆ ನಮ್ಮ ವ್ಯವಸ್ಥೆಯಲ್ಲಿ ಗೌರವ ಸಿಗುವುದನ್ನು ಖಾತ್ರಿಪಡಿಸುತ್ತಿದ್ದೇವೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ತಮ್ಮ ಭಾಷಣದಲ್ಲಿ ಹೇಳಿದರು.
* ನನ್ನ ಸರ್ಕಾರಕ್ಕೆ ದೇಶದ ಹಿತಾಸಕ್ತಿಯೇ ಎಲ್ಲಕ್ಕಿಂತ ಹೆಚ್ಚು. ಅದಕ್ಕಾಗಿ ಸರ್ಕಾರ ನೀತಿ ಮತ್ತು ಕಾರ್ಯತಂತ್ರವನ್ನು ಸಂಪೂರ್ಣವಾಗಿ ಬದಲಾವಣೆ ಕೂಡ ಮಾಡಿದೆ. ಜನ್ ಧನ್ ಖಾತೆಯಿಂದ ಹಿಡಿದು ಒನ್ ನೇಶನ್ ಒನ್ ರೇಷನ್ ಕಾರ್ಡ್ ಯೋಜನೆವರೆಗೂ ಸರ್ಕಾರ ಭಾರೀ ಮಟ್ಟದಲ್ಲಿ ಖಾಯಂ ಸುಧಾರಣೆ ತಂದಿದೆ. ಡಿಬಿಟಿ ಮೂಲಕ ಭಾರತ ಪಾರದರ್ಶಕ ವ್ಯವಸ್ಥೆಯನ್ನು ಸಿದ್ಧಪಡಿಸಿದೆ ಎಂದು ರಾಷ್ಟ್ರಪತಿಗಳು ತಿಳಿಸಿದರು.
* ಆಯುಷ್ಮಾನ್ ಭಾರತ್ ಯೋಜನೆ ಬಹಳಷ್ಟು ಬಡಬಗ್ಗರನ್ನು ಸಂಕಷ್ಟದಿಂದ ಪಾರು ಮಾಡಿದೆ. ಆರೋಗ್ಯ ಪಾಲನೆಗೆ ಅವರು ವ್ಯಯಿಸುತ್ತಿದ್ದ ಸಾವಿರಾರು ಕೋಟಿ ರೂ ಉಳಿತಾಯವಾಗಲು ಸಾಧ್ಯವಾಗಿದೆ.
* ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಮೂರು ವರ್ಷದಲ್ಲಿ 11 ಕೋಟಿ ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕ ಕೊಡಲಾಗಿದೆ. ಬಡವರೇ ಇದರ ಪ್ರಯೋಜನ ಹೆಚ್ಚು ಪಡೆಯುತ್ತಿರುವುದು.
* ನನ್ನ ಸರ್ಕಾರ ಸಮಾಜದ ಪ್ರತಿಯೊಂದು ವರ್ಗಕ್ಕೂ ಯಾವುದೇ ಭೇದವಿಲ್ಲದೇ ಕೆಲಸ ಮಾಡಿದೆ. ಇದರ ಪರಿಣಾಮವಾಗಿ ಮೂಲ ಸೌಕರ್ಗಳು ಬಹುತೇಕ ಎಲ್ಲಾ ಜನರನ್ನೂ ತಲುಪುವಲ್ಲಿ ಯಶಸ್ವಿಯಾಗಿದೆ
* ಸರ್ಕಾರವು ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಈಗಿನ ಸಂದರ್ಭಗಳಿಗೆ ತಕ್ಕಂತೆ ಮುಂದುವರಿಸಲು ನಿರ್ಧರಿಸಿದೆ. ಇದು ಬಡವರ ಬಗ್ಗೆ ನನ್ನ ಸರ್ಕಾರಕ್ಕಿರುವ ಕಾಳಜಿಯನ್ನು ತೋರಿಸುತ್ತದೆ ಎಂದು ದ್ರೌಪದಿ ಮುರ್ಮು ತಮ್ಮ ಭಾಷಣದಲ್ಲಿ ಹೇಳಿದರು.
ಇನ್ನಷ್ಟು ಮಾಹಿತಿ ನಿರೀಕ್ಷಿಸಿ….
Published On - 11:35 am, Tue, 31 January 23




