PM Modi in Social Media: ಸಾಮಾಜಿಕ ಮಾಧ್ಯಮಗಳಲ್ಲಿ ಮೋದಿಗಿಲ್ಲ ಸಾಟಿ; ಪ್ರಧಾನಿಯೇ ಕಿಂಗ್

| Updated By: Ganapathi Sharma

Updated on: Aug 08, 2023 | 9:27 PM

Modi Is The King of Social Media; ಯೂಟ್ಯೂಬ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿಡಿಯೋಗಳಿಗಿಂತಲೂ ರಾಹುಲ್ ಗಾಂಧಿ ಅವರ ವೀಡಿಯೊಗಳು ಹೆಚ್ಚು ವೀಕ್ಷಣೆಗಳನ್ನು ಪಡೆಯುತ್ತವೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಕಠೋರ ವಾಸ್ತವವೆಂದರೆ, ಗಾಂಧಿ ಅವರು ಯಾವುದೇ ರಂಗದಲ್ಲಿ ಮತ್ತು ಯಾವುದೇ ವೇದಿಕೆ, ಚುನಾವಣೆ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಧಾನಿಯವರಿಗೆ ಹೊಂದಿಕೆಯಾಗುವುದಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ರಾಹುಲ್ ಗಾಂಧಿಯವರ ವೈಭವೀಕರಿಸಲು ತಿರುಚಲ್ಪಟ್ಟ ದತ್ತಾಂಶವನ್ನು ಬಹಿರಂಗಪಡಿಸುವುದರ ಬದಲು, ಅವರನ್ನು ಪ್ರಧಾನಿಯೊಂದಿಗೆ ಹೋಲಿಸುವುದನ್ನು ನಿಲ್ಲಿಸಿದರೆ ಕಾಂಗ್ರೆಸ್​ಗೆ ಒಳಿತಾಗಲಿದೆ.

PM Modi in Social Media: ಸಾಮಾಜಿಕ ಮಾಧ್ಯಮಗಳಲ್ಲಿ ಮೋದಿಗಿಲ್ಲ ಸಾಟಿ; ಪ್ರಧಾನಿಯೇ ಕಿಂಗ್
ರಾಹುಲ್ ಗಾಂಧಿ & ನರೇಂದ್ರ ಮೋದಿ
Follow us on

ಒಂದು ಸರಳವಾದ ಪ್ರಶ್ನೆ, ಆದರೆ ಸರಿಯಾದ ಉತ್ತರಕ್ಕೆ ಬಹುಮಾನ ದೊರೆಯುವುದಿಲ್ಲ. ಅದೆಂದರೆ ಟ್ವಿಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಅಥವಾ ಯೂಟ್ಯೂಬ್‌ನಲ್ಲಿ ಯಾವ ಭಾರತೀಯ ರಾಜಕಾರಣಿ ಅತಿ ಹೆಚ್ಚು ಫಾಲೋವರ್ಸ್​​ ಅನ್ನು ಹೊಂದಿದ್ದಾರೆ? ಇದಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಉತ್ತರ. ಅವರು ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಅತ್ಯಂತ ಜನಪ್ರಿಯ ವಿಶ್ವ ನಾಯಕರಾಗಿ ಹೊರಹೊಮ್ಮಿದ್ದಾರೆ. ಪ್ರಸ್ತುತ, ವಿವಿಧ ರಾಷ್ಟ್ರಗಳ ಮುಖ್ಯಸ್ಥರು ಅಥವಾ ಸರ್ಕಾರದ ಮುಖ್ಯಸ್ಥರ ಪೈಕಿ ನರೇಂದ್ರ ಮೋದಿ ವಿಶ್ವದಲ್ಲೇ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ನಾವು ಟ್ವಿಟರ್ ಅಥವಾ ಎಕ್ಸ್‌ನ ಉದಾಹರಣೆಯನ್ನು ತೆಗೆದುಕೊಳ್ಳೋಣ. 9.8 ಕೋಟಿಗೂ ಹೆಚ್ಚು ಫಾಲೋವರ್ಸ್​​ ಹೊಂದಿರುವ ಭಾರತದ ಪ್ರಧಾನಿ ಕೇವಲ 3.7 ಕೋಟಿ ಫಾಲೋವರ್ಸ್ ಹೊಂದಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್​​ಗಿಂತ ತುಂಬಾ ಮುಂದಿದ್ದಾರೆ.

ಈಗ ಸರಿಯಾದ ಉತ್ತರ ನೀಡಿದ್ದಕ್ಕೆ ಬಹುಮಾನ ನೀಡೋಣ. ಪ್ರಧಾನಿ ಮೋದಿಯವರ ನಂತರ ಟ್ವಿಟರ್‌ನಲ್ಲಿ ಎರಡನೇ ಅತಿ ಹೆಚ್ಚು ಫಾಲೋವರ್ಸ್​ ಹೊಂದಿರುವ ಭಾರತೀಯ ರಾಜಕಾರಣಿ ಯಾರು? ರಾಹುಲ್ ಗಾಂಧಿ ಅಲ್ಲ. ಸರಿಯಾದ ಉತ್ತರ ಅಮಿತ್ ಶಾ (3.3 ಕೋಟಿ ಫಾಲೋವರ್ಸ್). ನಂತರದ ಸ್ಥಾನಗಳಲ್ಲಿ ಅರವಿಂದ ಕೇಜ್ರಿವಾಲ್ (2.7 ಕೋಟಿ), ಯೋಗಿ ಆದಿತ್ಯನಾಥ (2.5 ಕೋಟಿ) ಇದ್ದಾರೆ. ನಂತರ ರಾಹುಲ್ ಗಾಂಧಿ ಅವರಿದ್ದಾರೆ. ಅವರ ಫಾಲೋವರ್ಸ್​ ಸಂಖ್ಯೆ 2.4 ಕೋಟಿ. ಇವರು ಐದನೇ ಸ್ಥಾನದಲ್ಲಿದ್ದಾರೆ.

ಮೋದಿ ಮತ್ತು ರಾಹುಲ್ ಗಾಂಧಿ ನಡುವಣ ಟ್ವಿಟರ್ ಫಾಲೋವರ್ಸ್ ಅಂತರವೇ 7.4 ಕೋಟಿ. ಈಗ ಅವರ ಯೂಟ್ಯೂಬ್ ಚಾನಲ್‌ಗಳ ನಡುವಿನ ವ್ಯತ್ಯಾಸವನ್ನು ಗಮನಿಸೋಣ. ಪ್ರಧಾನಿ ಮೋದಿ 1.6 ಕೋಟಿ ಫಾಲೋವರ್ಸ್ ಹೊಂದಿದ್ದರೆ, ಗಾಂಧಿ 26 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಧಾನಿ ಮೋದಿ 7.7 ಕೋಟಿ ಫಾಲೋವರ್ಸ್ ಹೊಂದಿದ್ದರೆ, ಗಾಂಧಿ 40 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ. ಫೇಸ್‌ಬುಕ್‌ನಲ್ಲಿ ಪ್ರಧಾನಿ ಮೋದಿ 4.8 ಕೋಟಿ, ಗಾಂಧಿ 66 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ.

ನಿಜವಾದ ಹೋಲಿಕೆ ಇಲ್ಲಿದೆ

ಸ್ಪರ್ಧೆಯು ಏಕಪಕ್ಷೀಯವಾಗಿದ್ದು, ಉತ್ತರ ಪ್ರದೇಶದ ಗ್ರಾಮೀಣ ಪ್ರದೇಶದ ನಾಣ್ನುಡಿಯೊಂದನ್ನು ಇಲ್ಲಿ ನೆನಪಿಸಬಹುದು. ಅದೆಂದರೆ, ಕ್ಯೋಂ ಪಡೇ ಹೋ ಚಕ್ಕರ್ ಮೇ, ಕೋಯೀ ನಹೀಂ ಟಕ್ಕರ್ ಮೇ (ಸ್ಪರ್ಧೆಯಲ್ಲಿ ಯಾರೂ ಇಲ್ಲ, ನೀವೇಕೆ ಅದರ ಬಗ್ಗೆ ಗೊಂದಲಕ್ಕೊಳಗಾಗುತ್ತಿದ್ದೀರಿ). ರಾಹುಲ್ ಗಾಂಧಿ ಅಥವಾ ಅವರ ತಂಡ ಇದರ ಬಗ್ಗೆ ಎಂದಾದರೂ ಕೇಳಿದ್ದೀರಾ?

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಧಾನಿ ಮೋದಿ ಮತ್ತು ವಿರೋಧ ಪಕ್ಷದ ಪಾಳಯದಲ್ಲಿರುವ ಪ್ರಮುಖ ವ್ಯಕ್ತಿಯಾಗಿರುವ ರಾಹುಲ್ ಗಾಂಧಿ ಅವರ ಜನಪ್ರಿಯತೆಯಲ್ಲಿ ವ್ಯತ್ಯಾಸ ಎದ್ದು ಕಾಣುತ್ತಿದೆ. ಅವರ ಪೋಸ್ಟ್‌ಗಳು ಮತ್ತು ವೀಡಿಯೊಗಳು ಪಡೆಯುವ ವಿವ್ಸ್, ಕಮೆಂಟ್ಸ್, ಲೈಕ್​ಗಳು ಮತ್ತು ಮರುಟ್ವೀಟ್‌ಗಳ ಸಂಖ್ಯೆಯಲ್ಲಿ ವ್ಯತ್ಯಾಸವಿದೆ.

ಆದರೆ ಈ ವಾಸ್ತವಕ್ಕೆ ವ್ಯತಿರಿಕ್ತವಾಗಿ, ಯೂಟ್ಯೂಬ್‌ನಲ್ಲಿ ಪ್ರಧಾನಿ ಮೋದಿಯವರಿಗಿಂತ ರಾಹುಲ್ ಗಾಂಧಿ ಹೆಚ್ಚು ಆಕರ್ಷಣೆ ಹೊಂದಿದ್ದಾರೆ ಎಂದು ನಾವು ನಂಬಬೇಕೆಂದು ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ತಂಡ ಬಯಸುತ್ತದೆ. ಯೂಟ್ಯೂಬ್‌ನಲ್ಲಿ ಮೋದಿಗಿಂತ ಗಾಂಧಿ ಕಡಿಮೆ ಫಾಲೋವರ್ಸ್ ಹೊಂದಿದ್ದರೂ, ಅವರ ವೀಡಿಯೊಗಳು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿವೆ. ಮೋದಿಯವರ ವೀಡಿಯೊಗಳ ಸರಾಸರಿ ವಿವ್ಸ್​ಗಿಂತ ಹೆಚ್ಚಿನ ವಿವ್ಸ್ ಪಡೆಯುತ್ತಿವೆ ಎಂದು ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ತಂಡ ಪ್ರತಿಪಾದಿಸಿದ್ದಲ್ಲದೆ, ಆ ಕುರಿತು ರಾಷ್ಟ್ರಮಟ್ಟದ ಪತ್ರಿಕೆಯೊಂದರಲ್ಲಿ ಲೇಖನವನ್ನು ‘ಮಾರಾಟ ಮಾಡುವಲ್ಲಿ’ ಯಶಸ್ವಿಯಾಗಿದೆ. ಇದನ್ನು ಯಾರು ನಂಬುತ್ತಾರೆ? ಕಾಂಗ್ರೆಸ್ ಹೇಳಿಕೆಗಳ ಪ್ರಕಾರ, ಮೋದಿಯವರ ವಿಡಿಯೋಗಳ ಸರಾಸರಿ ವೀಕ್ಷಣೆ 56,000 ಕ್ಕೆ ಹೋಲಿಸಿದರೆ ಗಾಂಧಿಯವರ ವೀಡಿಯೊಗಳು ಸರಾಸರಿ 3.43 ಲಕ್ಷ ವೀಕ್ಷಣೆಗಳನ್ನು ಪಡೆಯುತ್ತವೆ. ಗಾಂಧಿಯವರ ವೀಡಿಯೊ ಸರಾಸರಿ 1700 ಕಾಮೆಂಟ್‌ಗಳನ್ನು ಆಕರ್ಷಿಸಿದರೆ, ಮೋದಿ ಅವರ ವೀಡಿಯೊ ಸರಾಸರಿ 150 ಕ್ಕಿಂತ ಕಡಿಮೆ ಕಾಮೆಂಟ್‌ಗಳನ್ನು ಪಡೆದುಕೊಂಡಿದೆ ಎಂದು ಅದು ಹೇಳಿದೆ.

ಅಂಕಿಅಂಶಗಳ ತಿರುಚುವಿಕೆ, ಕಾಂಗ್ರೆಸ್​​ ಕಂಡುಕೊಂಡ ಮಾರ್ಗ

ಮೋದಿಯವರ ಜನಪ್ರಿಯತೆ ಮತ್ತು ಅವರ ಫಾಲೋವರ್ಸ್ ಪರಿಗಣಿಸಿದರೆ ಇದು ಹೇಗೆ ಸಾಧ್ಯ? ನಿರೂಪಣೆಗೆ ತಕ್ಕಂತೆ ಅಂಕಿಅಂಶಗಳನ್ನು ಸುಲಭವಾಗಿ ಕುಶಲತೆಯಿಂದ ನಿರ್ವಹಿಸಬಹುದು ಎಂದು ಯಾರೋ ಒಬ್ಬರು ಸರಿಯಾಗಿ ಹೇಳಿದ್ದಾರೆ. ಕಾಂಗ್ರೆಸ್ ಖಂಡಿತವಾಗಿಯೂ ಮೆಟ್ರಿಕ್ ‘ಅವರೇಜ್ ವಿವ್ಸ್ ಪರ್ ವಿಡಿಯೋ’ ಬಳಸಿ ಅದನ್ನು ಮಾಡಿದೆ. ಸಾಮಾಜಿಕ ಮಾಧ್ಯಮದ ಕೆಲಸದ ಬಗ್ಗೆ ತಿಳಿದಿರುವ ಜನರ ಪ್ರಕಾರ, ಇದು ಅಧಿಕೃತ ಲೆಕ್ಕಾಚಾರವಾಗದು. ಏಕೆಂದರೆ ಸರಾಸರಿಯು ಚಾನಲ್ ಒಂದು ಅಪ್‌ಲೋಡ್ ಮಾಡುವ ವೀಡಿಯೊಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ. ಸಾರ್ವಜನಿಕ ಡೊಮೇನ್‌ನಲ್ಲಿ ಲಭ್ಯವಾಗುವ ಕಠಿಣ ವಾಸ್ತವ ಸಂಗತಿಯೆಂದರೆ, ಪ್ರಧಾನಿ ಒಟ್ಟು 3 ಬಿಲಿಯನ್ ವೀಕ್ಷಣೆಗಳನ್ನು ಹೊಂದಿದ್ದರೆ, ರಾಹುಲ್ ಗಾಂಧಿ ಕೇವಲ 400 ಮಿಲಿಯನ್ ವಿವ್ಸ್ ಹೊಂದಿದ್ದಾರೆ.

ಯೂಟ್ಯೂಬ್‌ನಲ್ಲಿ ರಾಹುಲ್ ಗಾಂಧಿಯವರ ವಿಡಿಯೋಗಳ ಕೇವಲ 25 ಕೋಟಿ ವೀಕ್ಷಣೆಗಳಿಗೆ ಹೋಲಿಸಿದರೆ ಈ ವರ್ಷ, ಮೋದಿ ಅವರ ಯೂಟ್ಯೂಬ್ ಚಾನೆಲ್ 76 ಕೋಟಿ ವಿವ್ಸ್ ಪಡೆದುಕೊಂಡಿದೆ. ಈ ಒಂದು ಅಂಶದಿಂದ ಈ ವೇದಿಕೆಯಲ್ಲಿ ಪ್ರಧಾನಿ ಮೋದಿಯವರ ಜನಪ್ರಿಯತೆಯನ್ನು ಅಳೆಯಬಹುದಾಗಿದೆ. ಇದರಲ್ಲಿ ಕಂಡುಬರುವ ವ್ಯತ್ಯಾಸ ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನದ್ದಾಗಿದೆ. ಅಷ್ಟಾಗಿಯೂ ರಾಹುಲ್ ಗಾಂಧಿಯವರದ್ದೇ ಮುನ್ನಡೆ ಎಂದು ಕಾಂಗ್ರೆಸ್ ತಂಡವು ಹೇಳಿಕೊಳ್ಳುತ್ತಿದೆ. ಕಟುವಾದ ಸತ್ಯವೆಂದರೆ ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್ ಎಂದಿಗೂ ಪ್ರಧಾನಿ ಮೋದಿಯವರ ಜನಪ್ರಿಯತೆಯನ್ನು ಚುನಾವಣಾ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಸರಿಗಟ್ಟಲು ಸಾಧ್ಯವಾಗಲೇ ಇಲ್ಲ. ಚುನಾವಣೆಯ ಸೋಲಿಗೆ ಇವಿಎಂಗಳು ಕಾರಣ ಎಂಬ ನಿರೂಪಣೆಯನ್ನು ಕಾಂಗ್ರೆಸ್ ಹರಡುತ್ತಿರುವುದರ ಜತೆಗೆ, ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಅದು ಆಗಾಗ್ಗೆ ತನ್ನ ವಿರುದ್ಧ ಪಕ್ಷಪಾತದ ಧೋರಣೆ ಅನುಸರಿಸುತ್ತಿವೆ ಎಂದು ಆರೋಪಿಸಿದೆ.

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಈಗಿನ ಸವಾಲು ದಾಟುತ್ತಾರಾ? ಭಾರತದ ಭವಿಷ್ಯ ಏನು? ಇಲ್ಲಿದೆ ಜ್ಯೋತಿಷ್ಯ ವಿಶ್ಲೇಷಣೆ

ಗಾಂಧಿಯವರ ಕೆಲವು ವೀಡಿಯೊಗಳನ್ನು ‘ಅಲ್ಗಾರಿದಮಿಕ್‌ನಲ್ಲಿ ನಿಗ್ರಹಿಸಲಾಗಿದೆ’ ಮತ್ತು ಇತರ ವೀಡಿಯೊಗಳಂತೆಯೇ ಬಳಕೆದಾರರು ತೊಡಗಿಸಿಕೊಂಡಿದ್ದರೂ ಅಷ್ಟೇ ವಿವ್ಸ್ ಪಡೆಯುತ್ತಿಲ್ಲ ಎಂದು ಆರೋಪಿಸಿ ಯೂಟ್ಯೂಬ್​​ಗೆ ಈ ವರ್ಷದ ಮಾರ್ಚ್‌ನಲ್ಲಿ ಕಾಂಗ್ರೆಸ್ ಪತ್ರ ಬರೆದಿದೆ. 2019 ರ ಸಾರ್ವತ್ರಿಕ ಚುನಾವಣೆಗಳಿಗೆ ಮುಂಚೆಯೇ, ಕಳೆದ ಕೆಲವು ತಿಂಗಳುಗಳಿಂದ ಗಾಂಧಿಯವರ ಹ್ಯಾಂಡಲ್‌ಗೆ ಸರಾಸರಿ ಹೊಸ ಫಾಲೋವರ್ಸ್ ಸಿಗುತ್ತಿಲ್ಲ ಎಂದು ಆಪಾದಿಸಿದಾಗ ಕಾಂಗ್ರೆಸ್ ಟ್ವಿಟರ್‌ನಲ್ಲಿ ಇದೇ ರೀತಿಯ ಆಕ್ಷೇಪಗಳನ್ನು ವ್ಯಕ್ತಪಡಿಸಿತ್ತು.

ಸಾಮಾಜಿಕ ಮಾಧ್ಯಮದ ರಾಜಕೀಯ ಪ್ರವರ್ತಕನಾಗಿ ಬಿಜೆಪಿ

ಬಿಜೆಪಿ ಯಾವಾಗಲೂ ಸಾಮಾಜಿಕ ಮಾಧ್ಯಮಗಳಲ್ಲಿ ಇತರರಿಗಿಂತ ಮುಂದಿದೆ ಮತ್ತು 2014 ರ ಸಾರ್ವತ್ರಿಕ ಚುನಾವಣೆಗೂ ಮೊದಲು ಅವುಗಳ ಮಹತ್ವವನ್ನು ಅರಿತುಕೊಂಡ ಮೊದಲ ಪಕ್ಷವಾಗಿದೆ. 2014 ರಲ್ಲಿ ಪ್ರಮುಖ ಮಾಧ್ಯಮಗಳು ಮೋದಿ ವಿರೋಧಿಯಾಗಿದ್ದ ಕಾರಣ ಬಿಜೆಪಿಯು ರಾಹುಲ್ ಗಾಂಧಿಯನ್ನು ಹಣಿಯಲು ಸಾಮಾಜಿಕ ಮಾಧ್ಯಮವನ್ನು ಸುಂದರವಾಗಿ ಬಳಸಿಕೊಂಡಿತು. ಮತ್ತು ಅದನ್ನು ಇನ್ನೂ ಬಿಟ್ಟುಕೊಟ್ಟಿಲ್ಲ. ಇಂದಿಗೂ, ಪಕ್ಷವು ಸಾಮಾಜಿಕ ಮಾಧ್ಯಮದ ಮೂಲಕ ಲಭ್ಯವಿರುವ ಅವಕಾಶಗಳ ಅತ್ಯುತ್ತಮ ಬಳಕೆಯನ್ನು ಮಾಡಲು ಪ್ರಯತ್ನಿಸುತ್ತಿದೆ. 2024 ರ ಚುನಾವಣೆಯ ಪೂರ್ವದಲ್ಲಿ, ಬಿಜೆಪಿ ಈಗ ಜಿಲ್ಲಾ ಮಟ್ಟದ ಪ್ರಭಾವಿಗಳನ್ನು ಸೆಳೆಯಲು ಉಪಕ್ರಮದಲ್ಲಿ ಕೆಲಸ ಮಾಡುತ್ತಿದೆ. ಕಾಮೆಡಿಯನ್​ಗಳು, ಭಜನಾ ಗಾಯಕರು, ಫುಡ್ ವ್ಲಾಗರ್‌ಗಳು, ಡ್ಯಾನ್ಸರ್‌ಗಳು ಇತ್ಯಾದಿ ಸ್ಥಳೀಯ ಖ್ಯಾತನಾಮರನ್ನು ಬಳಸಿಕೊಳ್ಳುತ್ತಿದೆ.

ಪಕ್ಷವು ತನ್ನ ಡಿಜಿಟಲ್ ಸೈನ್ಯವನ್ನು ಹೆಚ್ಚಿಸಲು ಪ್ರತಿ ಜಿಲ್ಲೆಗೆ ಕನಿಷ್ಠ 100 ಸ್ಥಳೀಯ (ದೇಸಿ) ಪ್ರಭಾವಿಗಳನ್ನು ಆಯ್ಕೆ ಮಾಡುವ ಗುರಿಯನ್ನು ಹೊಂದಿದೆ.

ರಾಜಕೀಯದಲ್ಲಿ ನಾಯಕನ ನಿಜವಾದ ಶಕ್ತಿ ಎಂದರೆ ಆತ ಗಳಿಸುವ ಮತ. ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿಯನ್ನು ಹೋಲಿಸುವ ವಿಚಾರವಾಗಿ ಯಾವುದೇ ವಿವಾದವಿಲ್ಲ. ಆದರೆ ಯಾವುದೇ ರಂಗದಲ್ಲಿ ಮತ್ತು ಯಾವುದೇ ವೇದಿಕೆಯಲ್ಲಿ, ಅದು ಚುನಾವಣೆಗಳು ಇರಬಹುದು ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಇರಬಹುದು, ಪ್ರಧಾನಿ ಮೋದಿಯವರಿಗೆ ಗಾಂಧಿ ಸರಿಸಾಟಿಯಿಲ್ಲ ಎಂಬುದು ಕಾಂಗ್ರೆಸ್ಸಿನ ಪಾಲಿಗೆ ಕಟುವಾದ ವಾಸ್ತವ.

ಇದನ್ನೂ ಓದಿ: ವಿಪಕ್ಷಗಳ ಮೈತ್ರಿಕೂಟವನ್ನು ಇಂಡಿಯಾ ಎನ್ನಬೇಡಿ ‘ಘಮಂಡಿಯಾ‘ ಎಂದು ಕರೆಯಿರಿ: ನರೇಂದ್ರ ಮೋದಿ

ಕಾಂಗ್ರೆಸ್‌ಗೆ ಏಕೆ ಈ ಪರಿಯ ಬೆಂಬಲ ಸಿಗುತ್ತಿಲ್ಲ? ಕಾಂಗ್ರೆಸ್ ಪಕ್ಷವು ರಾಹುಲ್ ಗಾಂಧಿ ಅವರನ್ನು ವೈಭವೀಕರಿಸುವ, ಅವರನ್ನು ಪ್ರಧಾನಿ ಮೋದಿಯೊಂದಿಗೆ ಹೋಲಿಸುವ ಮತ್ತು ಸುಳ್ಳುಗಳನ್ನು ಹೇಳುವ ಬದಲು ತನ್ನ ನಾಯಕ ಜನರ ಆಕಾಂಕ್ಷೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವಂತೆ ಮಾಡಲಿ. ಆ ವಿಷಯಗಳ ಬಗ್ಗೆ ಕಾಂಗ್ರೆಸ್ ಗಮನಹರಿಸಲಿ. ಹಾಗೆ ಮಾಡಿದರೆ ಆ ಪಕ್ಷವು ಹೆಚ್ಚು ಉತ್ತಮವಾಗಿ ಕಾರ್ಯನಿರ್ವಹಿಸಬಹುದು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:20 pm, Tue, 8 August 23