ತಿರುಪ್ಪರಂಕುಂಡ್ರಂ: ಕಾರ್ತಿಕ ದೀಪ ಹಚ್ಚುವ ಅವಕಾಶಕ್ಕೆ ಒತ್ತಾಯಿಸಿ ಸ್ಥಳೀಯರಿಂದ ಉಪವಾಸ ಸತ್ಯಾಗ್ರಹ
Madurai Thiruparankundram Kartika deepam controversy: ತಮಿಳುನಾಡಿನ ತಿರುಪ್ಪರಂಕುಂಡ್ರಂನಲ್ಲಿ ಕಾರ್ತೀಕ ದೀಪ ಹಚ್ಚಿಸಲು ಹಿಂದೂಗಳಿಗೆ ಕೋರ್ಟ್ ಅವಕಾಶ ಕೊಟ್ಟಿದೆ. ಆದರೆ, ಸರ್ಕಾರ ಮತ್ತು ಪೊಲೀಸರು ಅನುಮತಿ ಕೊಟ್ಟಿಲ್ಲ. ಸ್ಥಳೀಯ ಜನರು ದೀಪ ಹಚ್ಚುವ ಅವಕಾಶ ಕೋರಿ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಜಾತ್ಯತೀತತೆ ಬಗ್ಗೆ ಮಾತನಾಡುವ ಡಿಎಂಕೆ ಪಕ್ಷ ಹಿಂದೂಗಳ ವಿಚಾರದಲ್ಲಿ ತಾರತಮ್ಯ ಮಾಡುತ್ತಿದೆ ಎನ್ನುವ ಆರೋಪ ಇದೆ.

ಮದುರೈ, ಡಿಸೆಂಬರ್ 14: ತಮಿಳುನಾಡಿನ ಮದುರೈನ ತಿರುಪ್ಪರಂಕುಂಡ್ರಂನ (Thirupparankundram) ಬೆಟ್ಟದ ಮೇಲಿನ ಸ್ತಂಭದಲ್ಲಿ ದೀಪ ಹಚ್ಚಿಸಲು ಅವಕಾಶ ಕೊಡಬೇಕು ಒತ್ತಾಯಿಸಿ, ಸ್ಥಳೀಯ ಜನರು ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಮದ್ರಾಸ್ ಹೈಕೋರ್ಟ್ನ ಮದುರೈ ಪೀಠ ಹಾಕಿರುವ ಷರುತ್ತುಗಳ ಪ್ರಕಾರ ಸ್ಥಳೀಯ ಜನರು ಪ್ರತಿಭಟನೆ ನಡೆಸಿದ್ದಾರೆ. ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಮಾತ್ರ ಉಪವಾಸ ಸತ್ಯಾಗ್ರಹ ನಡೆಸಲು ಕೋರ್ಟ್ ಅನಮತಿ ಇದೆ. ಅದರ ಪ್ರಕಾರ ಮಾಡುತ್ತಿರುವ ಪ್ರತಿಭಟನೆಗೂ ಪೊಲೀಸರು ಅವಕಾಶ ನೀಡಿಲ್ಲ ಎಂಬುದು ಗೊತ್ತಾಗಿದೆ. ಇನ್ನೊಂದೆಡೆ ತಮಿಳುನಾಡು ಸರ್ಕಾರ ಹಾಗೂ ಪೊಲೀಸರು ಹಿಂದೂಗಳ ಧಾರ್ಮಿಕ ಆಚರಣೆಗೆ ಅವಕಾಶ ಕೊಡಬಾರದೆಂದು ಪಟ್ಟು ಹಿಡಿದಿರುವಂತಿದೆ. ಮದ್ರಾಸ್ ಹೈಕೋರ್ಟ್ನ ತೀರ್ಪು ಪ್ರಶ್ನಿಸಿ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಅಲ್ಲಿಂದಲೂ ತೀರ್ಪು ಬರುವವರೆಗೆ ಕಾರ್ತಿಕ ದೀಪ ಹಚ್ಚಲು ತಮಿಳುನಾಡು ಸರ್ಕಾರ ತಡೆಯುವ ಪ್ರಯತ್ನ ಮಾಡಬಹುದು. ಸರ್ಕಾರದ ಈ ಧೋರಣೆಯು ಸಾರ್ವಜನಿಕರಲ್ಲಿ ಅಸಮಾಧಾನ ತಂದಿದೆ.
ತಿರುಪ್ಪರಂಕುಂಡ್ರಂ ಬೆಟ್ಟವು ಪ್ರಮುಖ ಧಾರ್ಮಿಕ ತಾಣಗಳನ್ನು ಹೊಂದಿದೆ. ಪವಿತ್ರ ಸುಬ್ರಮಣ್ಯ ಸ್ವಾಮಿ ದೇವಸ್ಥಾನ (ಮುರುಗನ್ ಆರು ನಿವಾಸಗಳಲ್ಲಿ ಒಂದು), ಪ್ರಾಚೀನ ಜೈನ ಗುಹೆಗಳು ಮತ್ತು ಮಧುರೈ (ಮಲಬಾರ್) ಸುಲ್ತಾನರ ಕೊನೆಯ ದೊರೆ ಸಿಕಂದರ್ ಬಾದುಷಾನ 14ನೇ ಶತಮಾನದ ದರ್ಗಾಗಳು ಇಲ್ಲಿವೆ.
ಇದನ್ನೂ ಓದಿ: ಜಲಂಧರ್: ಹರಿತವಾದ ಆಯುಧದಿಂದ ಇರಿದು ಬಿಜೆಪಿಯ ಮಾಜಿ ಶಾಸಕನ ಸೋದರಳಿಯನ ಬರ್ಬರ ಹತ್ಯೆ
ತಿರುಪ್ಪರಂಕುಂಡ್ರಂನಲ್ಲಿ ನಡೆದ ಕಾರ್ತಿಕ ದೀಪಂ ಘಟನೆಯು ಡಿಎಂಕೆಯ ನಿಜ ರೂಪವನ್ನು ಬಹಿರಂಗಪಡಿಸಿದೆ. ಶತಮಾನಗಳಿಂದ ಅನುಸರಿಸಿಕೊಂಡು ಬಂದ ಪವಿತ್ರ ಮುರುಗನ್ ಸಂಪ್ರದಾಯವನ್ನು ಡಿಎಂಕೆ ಸರ್ಕಾರವೇ ನಿಲ್ಲಿಸಿತು. ಹೈಕೋರ್ಟ್ ನ್ಯಾಯಾಧೀಶರು ದೀಪಂ ಬೆಳಗುವ ಹಕ್ಕನ್ನು ಮರು ಸ್ಥಾಪಿಸಿದಾಗ, ಸರ್ಕಾರವೂ ಏನೋ ಅಪರಾಧ ನಡೆಯುತ್ತಿದೆ ಎಂಬಂತೆ ವರ್ತಿಸಿತು. ಇದು ಆಡಳಿತವಲ್ಲ. ಆದರೆ, ಹಿಂದು ನಂಬಿಕೆ ಮತ್ತು ಮುಖ್ಯವಾಗಿ ನ್ಯಾಯಾಂಗದ ಕಡೆಗೆ ಸ್ಪಷ್ಟವಾದ ದ್ವೇಷ ಎಂದು ಹಿಂದೂ ಮುಖಂಡರು ಆರೋಪಿಸಿದ್ದಾರೆ.
ಸರಳ ದೀಪವನ್ನು ಬೆಳಗಿಸುವುದು `ಬೀದಿಗಳಲ್ಲಿ ರಕ್ತ’ಕ್ಕೆ ಕಾರಣವಾಗಬಹುದು ಎಂದು ಡಿಎಂಕೆ ಹೇಳಿಕೊಂಡಿದೆ. ಜಾತ್ಯತೀತತೆ ಬಗ್ಗೆ ಮಾತನಾಡುವ ಡಿಎಂಕೆ, ಹಿಂದುಗಳನ್ನು ಮಾತ್ರ ಗುರಿಯಾಗಿಸುತ್ತದೆ. ಅವರು ದರ್ಗಾ ಅಥವಾ ಅದಕ್ಕೆ ಸಂಬಂಧಿಸಿದ ಆಚರಣೆಗಳನ್ನು ಪ್ರಶ್ನಿಸಲ್ಲ. ಅವರು ಬೇರೆ ಯಾವುದೇ ಧಾರ್ಮಿಕ ಆಚರಣೆಯನ್ನು ವಿರೋಧಿಸಲ್ಲ. ಶತಮಾನಗಳಷ್ಟು ಹಳೆಯದಾದ ಮುರುಗನ್ ದೇವರ ಪ್ರಾಚೀನ ಆಚರಣೆಯನ್ನು ತಡೆಯಲು ಅವರು ನ್ಯಾಯಾಲಯದ ಮೊರೆ ಹೋದರು. ದೀಪ ಹಚ್ಚುವ ಹಕ್ಕಿಗಾಗಿ ನ್ಯಾಯಾಲಯಗಳಲ್ಲಿ ಬೇಡಿಕೊಳ್ಳಬೇಕಾದ ಪರಿಸ್ಥಿತಿ ಬರಲು ಹಿಂದೂಗಳು ಏನು ಮಾಡಿದ್ದಾರೆ ಎಂಬುದು ಇವರ ಪ್ರಶ್ನೆ.
ಇದನ್ನೂ ಓದಿ: ಸ್ವಿಟ್ಜರ್ಲೆಂಡ್ನಲ್ಲಿ ಮಾಡೆಲ್ ಕ್ರಿಸ್ಟಿನಾ ಬರ್ಬರ ಹತ್ಯೆ ಕೇಸ್, ಆಕೆಯ ದೇಹದಿಂದ ಗರ್ಭಕೋಶ ಹೊರ ತೆಗೆದಿದ್ದ ಪತಿ
ಇದೇ ವೇಳೆ, ಕಾರ್ತೀಕ ದೀಪ ಹಚ್ಚಿಸಲು ಹಿಂದೂಗಳಿಗೆ ಅವಕಾಶ ನೀಡಿದ ಹೈಕೋರ್ಟ್ ಪೀಠದ ತೀರ್ಪನ್ನು ಪ್ರಶ್ನಿಸಿ ಡಿಎಂಕೆ ನೇತೃತ್ವದ ಸರ್ಕಾರ ಸುಪ್ರೀಂಕೋರ್ಟ ಮೆಟ್ಟಿಲೇರಿದೆ. ಹಾಗೆಯೇ, ತೀರ್ಪು ನೀಡಿದ ನ್ಯಾ| ಜಿ.ಆರ್. ಸ್ವಾಮಿನಾಥನ್ ವಿರುದ್ಧ ಡಿಎಂಕೆ ಸಂಸದರು ದೋಷಾರೋಪಣೆ ನಿರ್ಣಯಕ್ಕೆ ಯೋಜಿಸುತ್ತಿದ್ದಾರೆ.
ಈ ಹಿಂದೆ, ರಾಮಜನ್ಮಭೂಮಿ ಮಂದಿರದ ಪರವಾಗಿ ತೀರ್ಪು ನೀಡಿದ ಸುಪ್ರೀಂಕೋರ್ಟ್ನ ನ್ಯಾ| ರಂಜನ್ ಗೊಗೋಯ್ ಅವರ ರಾಜ್ಯಸಭಾ ಪ್ರಮಾಣವಚನವನ್ನು ಐಎನ್ಡಿಎ ಮೈತ್ರಿಕೂಟ ಪಕ್ಷಗಳು ಬಹಿಷ್ಕರಿಸಿದ್ದವು. ದಶಕಗಳ ಹಿಂದೆ ಇಂಥದ್ದೊಂದು ಟ್ರೆಂಡ್ ಇತ್ತು ಎಂದು ಹೇಳಲಾಗುತ್ತದೆ. 1973ರಲ್ಲಿ ಸರ್ಕಾರದ ವಿರುದ್ಧ ತೀರ್ಪು ನೀಡಿದ ಹಿರಿಯ ನ್ಯಾಯಮೂರ್ತಿಗಳನ್ನು ನಿರ್ಲಕ್ಷಿಸಿ, ಬೇರೊಬ್ಬರನ್ನು ಸಿಜೆಐ ಆಗಿ ಇಂದಿರಾ ಗಾಂಧಿ ಸರ್ಕಾರ ನೇಮಕ ಮಾಡಿತ್ತು. ಅಂಥದ್ದೇ ಮನಸ್ಥಿತಿಯೂ ಈಗ ಕಾಣುತ್ತಿದೆ ಎಂದು ಹಿಂದೂ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




