10, 12 ನೇ ತರಗತಿಯ ಆಫ್‌ಲೈನ್ ಪರೀಕ್ಷೆ ರದ್ದುಗೊಳಿಸಲು ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

10, 12 ನೇ ತರಗತಿಯ ಆಫ್‌ಲೈನ್ ಪರೀಕ್ಷೆ ರದ್ದುಗೊಳಿಸಲು ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್
ಪ್ರಾತಿನಿಧಿಕ ಚಿತ್ರ

ನ್ಯಾಯಮೂರ್ತಿ ಎಎಂ ಖಾನ್ವಿಲ್ಕರ್ ನೇತೃತ್ವದ ಪೀಠವು 10 ಮತ್ತು 12 ನೇ ತರಗತಿಯ ಆಫ್‌ಲೈನ್ ಬೋರ್ಡ್ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಸಲ್ಲಿಸಿದ ಮನವಿಯನ್ನು ವಜಾಗೊಳಿಸಿತು.

TV9kannada Web Team

| Edited By: Rashmi Kallakatta

Feb 23, 2022 | 3:47 PM

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE), ಕೌನ್ಸಿಲ್ ಫಾರ್ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (CISCE) ಅವಧಿ 2 ಮತ್ತು ಇತರ ಬೋರ್ಡ್ ಪರೀಕ್ಷೆಗಳನ್ನು ಆಫ್‌ಲೈನ್ ಮೋಡ್‌ನಲ್ಲಿ ನಡೆಸುವುದನ್ನು ರದ್ದುಗೊಳಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಇಂದು (ಬುಧವಾರ ಫೆಬ್ರವರಿ 23ರಂದು ) ಸುಪ್ರೀಂಕೋರ್ಟ್ ಈ ಅರ್ಜಿ ವಿಚಾರಣೆ ನಡೆಸಿದೆ. ನ್ಯಾಯಮೂರ್ತಿ ಎಎಂ ಖಾನ್ವಿಲ್ಕರ್ ನೇತೃತ್ವದ ಪೀಠವು 10 ಮತ್ತು 12 ನೇ ತರಗತಿಯ ಆಫ್‌ಲೈನ್ ಬೋರ್ಡ್ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಸಲ್ಲಿಸಿದ ಮನವಿಯನ್ನು ವಜಾಗೊಳಿಸಿತು. “ಇದು ರೂಢಿಯಾಗಲು ಸಾಧ್ಯವಿಲ್ಲ. ಅಂತಹ ಅರ್ಜಿಗಳನ್ನು ಪರಿಗಣಿಸುವುದರಿಂದ ವ್ಯವಸ್ಥೆಯಲ್ಲಿ ಹೆಚ್ಚಿನ ಗೊಂದಲ ಉಂಟಾಗುತ್ತದೆ” ಎಂದು ನ್ಯಾಯಮೂರ್ತಿ ಹೇಳಿದರು. “ಅಧಿಕಾರಿಗಳು ಈಗಾಗಲೇ ದಿನಾಂಕಗಳು ಮತ್ತು ಇತರ ವ್ಯವಸ್ಥೆಗಳನ್ನು ಅಂತಿಮಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಅವುಗಳನ್ನು ಅಂತಿಮಗೊಳಿಸಿದ ನಂತರ ಯಾವುದೇ ಸಮಸ್ಯೆಯಿದ್ದರೆ, ನೊಂದವರು ಅಧಿಕಾರಿಗಳನ್ನು ಸಂಪರ್ಕಿಸಬಹುದು” ಎಂದು ಪೀಠ ಹೇಳಿದೆ. ಸುಪ್ರೀಂಕೋರ್ಟ್ ಪೀಠವು ಈ ರೀತಿಯ ಅರ್ಜಿಗಳು ತಪ್ಪುದಾರಿಗೆಳೆಯುವ ಮತ್ತು ವಿದ್ಯಾರ್ಥಿಗಳಿಗೆ ಸುಳ್ಳು ಭರವಸೆಯನ್ನು ನೀಡುತ್ತಿವೆ ಎಂದು ಅಭಿಪ್ರಾಯಪಟ್ಟಿದೆ. ಇದು ಕೇವಲ ಸುಳ್ಳು ಭರವಸೆಗಳನ್ನು ಸೃಷ್ಟಿಸುತ್ತದೆ, ಇದು ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಗೊಂದಲವನ್ನು ಉಂಟುಮಾಡುತ್ತದೆ ಎಂದು ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ ಮತ್ತು ಸಿ ಟಿ ರವಿಕುಮಾರ್ ಅವರನ್ನು ಒಳಗೊಂಡ ಪೀಠ ಹೇಳಿದೆ.

“ವಿದ್ಯಾರ್ಥಿಗಳು ತಮ್ಮ ಕೆಲಸವನ್ನು ಮಾಡಲಿ ಮತ್ತು ಅಧಿಕಾರಿಗಳು ಅವರವರ ಕೆಲಸವನ್ನು ಮಾಡಲಿ” ಎಂದು ಪೀಠ ಹೇಳಿದೆ. ಕಾರ್ಯಕರ್ತೆ ಅನುಭಾ ಶ್ರೀವಾಸ್ತವ ಸಹಾಯ್ ಮತ್ತು ಇತರರು ಸಲ್ಲಿಸಿದ ಮನವಿಯನ್ನು ತುರ್ತು ವಿಚಾರಣೆಗಾಗಿ ಸುಪ್ರೀಂಕೋರ್ಟ್ ಕೈಗೆತ್ತಿಕೊಂಡಿತ್ತು.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, 2020 ಮತ್ತು 2021ರಲ್ಲಿ 10 ಮತ್ತು 12ನೇ ತರಗತಿಗಳ ಬೋರ್ಡ್ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಆದೇಶ ಹೊರಡಿಸಿದ್ದು, ಈ ವರ್ಷವೂ ಅದೇ ಸಮಸ್ಯೆ ಎದುರಾಗಿದೆ ಎಂದು ಸುಪ್ರೀಂಕೋರ್ಟ್ ಪೀಠಕ್ಕೆ ತಿಳಿಸಿದರು.

10 ಮತ್ತು 12 ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ಆಫ್‌ಲೈನ್ ಮೋಡ್‌ನಲ್ಲಿ ನಡೆಸಲು ಪ್ರಸ್ತಾಪಿಸಿರುವ ಸಿಬಿಎಸ್ಇ ಮತ್ತು ಇತರ ಶಿಕ್ಷಣ ಮಂಡಳಿಗಳಿಗೆ ಇತರ ಮೌಲ್ಯಮಾಪನ ವಿಧಾನಗಳನ್ನು ರೂಪಿಸಲು ನಿರ್ದೇಶನಗಳನ್ನು ಮನವಿ ಕೇಳಿದೆ. 15 ಕ್ಕೂ ಹೆಚ್ಚು ರಾಜ್ಯಗಳ 10 ಮತ್ತು 12 ನೇ ತರಗತಿ ವಿದ್ಯಾರ್ಥಿಗಳು ಸಲ್ಲಿಸಿದ ಮನವಿಯು ಮುಂಬರುವ ಬೋರ್ಡ್ ಪರೀಕ್ಷೆಗಳಿಗೆ ಪರ್ಯಾಯ ಮೌಲ್ಯಮಾಪನ ವಿಧಾನವನ್ನು ಕೋರಿದೆ.

ಕಳೆದ ವರ್ಷ ಸಿಬಿಎಸ್ಇ ಮತ್ತು ಸಿಐಎಸ್​​ಸಿಇ ಸೇರಿದಂತೆ ಬಹುತೇಕ ಎಲ್ಲಾ ರಾಜ್ಯ ಮತ್ತು ಕೇಂದ್ರ ಶಿಕ್ಷಣ ಮಂಡಳಿಗಳು ಕೊವಿಡ್-19 ಎರಡನೇ ತರಂಗದಿಂದಾಗಿ 10 ಮತ್ತು 12 ನೇ ತರಗತಿಯ ಅಂತಿಮ ಪರೀಕ್ಷೆಗಳನ್ನು ರದ್ದುಗೊಳಿಸಬೇಕಾಗಿತ್ತು. ಅದೇ ವೇಳೆ ಮೌಲ್ಯಮಾಪನದ ಪರ್ಯಾಯ ವಿಧಾನಗಳನ್ನು ಅನುಸರಿಸಬೇಕಾಗಿತ್ತು. ಆದಾಗ್ಯೂ, ಸಿಬಿಎಸ್ಇ ಮತ್ತು ಸಿಐಎಸ್​​ಸಿಇ ಮತ್ತು ಇತರ ಕೆಲವು ರಾಜ್ಯ ಮಂಡಳಿಗಳು 2021-22 ಕ್ಕೆ ಎರಡು ಅವಧಿಯ ಬೋರ್ಡ್ ಪರೀಕ್ಷಾ ವ್ಯವಸ್ಥೆಯೊಂದಿಗೆ ಹೋಗಲು ನಿರ್ಧರಿಸಿವೆ.

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್10 ಮತ್ತು 12 ನೇ ತರಗತಿಯ 2 ನೇ ಅವಧಿಯ ಪರೀಕ್ಷೆಗಳ ದಿನಾಂಕಗಳನ್ನು ಪ್ರಕಟಿಸಿದೆ. ಅವಧಿ 2 ಪರೀಕ್ಷೆಗಳು ಏಪ್ರಿಲ್ 26 ರಿಂದ ನಡೆಯಲಿದೆ. ಏತನ್ಮಧ್ಯೆ, ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ ಐಸಿಎಸ್ಇ 10 ನೇ ತರಗತಿ ಮತ್ತು ಐಎಸ್ಸಿ12 ನೇ ತರಗತಿ ಪರೀಕ್ಷೆಯನ್ನು ಏಪ್ರಿಲ್ ಕೊನೆಯ ವಾರದಲ್ಲಿ ನಡೆಸುವ ಸಾಧ್ಯತೆಯಿದೆ. ವಿವರವಾದ ವೇಳಾಪಟ್ಟಿ, ಸಿಐಎಸ್‌ಸಿಇ ಹೇಳಿಕೆಯಲ್ಲಿ ತಿಳಿಸಿದ್ದು, ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು.

ಇದನ್ನೂ ಓದಿ: Karnataka Hijab Hearing Live: ಹಿಜಾಬ್ ವಿವಾದ; ಕೋರ್ಟ್ ವಿಚಾರಣೆ ಆರಂಭ

Follow us on

Related Stories

Most Read Stories

Click on your DTH Provider to Add TV9 Kannada