“ಈ ಮುಲ್ಲಾ ಒಬ್ಬ ಭಯೋತ್ಪಾದಕ” ಲೋಕಸಭೆಯಲ್ಲಿ ಮುಸ್ಲಿಂ ಸಂಸದನ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಎಂಪಿ
ಚಂದ್ರಯಾನ-3 ಯಶಸ್ವಿನ ಮೇಲೆ ನಡೆಯುತ್ತಿದ್ದ ಚರ್ಚೆಯ ಸಂದರ್ಭದಲ್ಲಿ ಬಿಜೆಪಿ ಸಂಸದ ರಮೇಶ್ ಬಿಧುರಿ ಅವರು ಬಿಎಸ್‌ಪಿ ಪಕ್ಷದ ಸಂಸದ ಡ್ಯಾನಿಶ್ ಅಲಿಯನ್ನು ಭಯೋತ್ಪಾದಕ ಎಂದು ಕರೆದಿದ್ದಾರೆ. ಇನ್ನು ಬಿಜೆಪಿ ಸಂಸದರ ಈ ಹೇಳಿಕೆಯು Xನಲ್ಲಿ (ಹಿಂದಿನ ಟ್ವಿಟರ್) ವೈರಲ್ ಆಗಿದೆ.
ದೆಹಲಿ, ಸೆ.22: ಸಂಸತ್ ವಿಶೇಷ ಅಧಿವೇಶನ (Special session of Parliament) 4ನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಅನೇಕ ವಿಚಾರಗಳ ಬಗ್ಗೆ ಚರ್ಚೆಗಳ ನಡೆದಿದೆ. ಈ ಸಮಯದಲ್ಲಿ ಬಿಜೆಪಿಯ ಸಂಸದರೊಬ್ಬರು ಎಡವಟ್ಟು ಮಾಡಿಕೊಂಡಿದ್ದಾರೆ. ಮಾತಿನ ಭರದಲ್ಲಿ ಕೋಮು ದೂಷಣೆಯನ್ನು ಮಾಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಸಂಸತ್ತಿನಲ್ಲಿ ಆಡಳಿತ ಪಕ್ಷದ ಸಂಸದರೊಬ್ಬರು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಸ್ಲಿಂ ಸಂಸದ ಕುನ್ವರ್ ಡ್ಯಾನಿಶ್ ಅಲಿ (Kunwar Danish Ali) ವಿರುದ್ಧ ಗುಡುಗಿದ್ದು, ಕುನ್ವರ್ ಡ್ಯಾನಿಶ್ ಅಲಿ ಅವರನ್ನು ಭಯೋತ್ಪಾದಕ ಎಂದು ಕರೆದಿದ್ದಾರೆ. ಚಂದ್ರಯಾನ-3 (Chandrayaan-3) ಯಶಸ್ವಿನ ಮೇಲೆ ನಡೆಯುತ್ತಿದ್ದ ಚರ್ಚೆಯ ಸಂದರ್ಭದಲ್ಲಿ ಬಿಜೆಪಿ ಸಂಸದ ರಮೇಶ್ ಬಿಧುರಿ (Ramesh Bidhuri) ಅವರು ಡ್ಯಾನಿಶ್ ಅಲಿಯನ್ನು ಭಯೋತ್ಪಾದಕ ಎಂದು ಕರೆದಿದ್ದಾರೆ. ಇನ್ನು ಬಿಜೆಪಿ ಸಂಸದರ ಈ ಹೇಳಿಕೆಯು Xನಲ್ಲಿ (ಹಿಂದಿನ ಟ್ವಿಟರ್) ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಬಿಎಸ್‌ಪಿ ಸಂಸದರು, ರಮೇಶ್ ಬಿಧುರಿ ವಿರುದ್ಧ ಕೂಗುವುದನ್ನು ಕಾಣಬಹುದು. ಆದರೆ ಈ ಯಾವುದಕ್ಕೂ ತಲೆಕೆಡಿಸಿಕೊಳ್ಳದ ರಮೇಶ್ ಬಿಧುರಿ ಬಿಎಸ್‌ಪಿ ಸಂಸದರ ವಿರುದ್ಧ ಮಾತು ಮುಂದುವರಿಸಿದ್ದಾರೆ. ಇನ್ನು ರಮೇಶ್ ಬಿಧುರಿ ಹಿಂದೆ ಕುಳಿತುಕೊಂಡಿದ್ದ ಅವರದೇ ಪಕ್ಷದ ಸಂಸದರಿಬ್ಬರು ಮತ್ತು ಮಾಜಿ ಸಚಿವರಾದ ರವಿಶಂಕರ್ ಪ್ರಸಾದ್ ಮತ್ತು ಹರ್ಷವರ್ಧನ್ ನಗುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ವಿಡಿಯೋದಲ್ಲಿ “ಈ ‘ಮುಲ್ಲಾ’ ನ್ನು ಹೊರಗೆ ಎಸೆಯಿರಿ. “ಈ ಮುಲ್ಲಾ ಒಬ್ಬ ಭಯೋತ್ಪಾದಕ” ಎಂದು ಸಂಸದರು ವಿವಾದಾತ್ಮಕ ಹೇಳಿಕೆ ನೀಡಿರುವುದನ್ನು ಕಾಣಬಹುದು. ಈ ಸಂದರ್ಭದಲ್ಲಿ ರಮೇಶ್ ಬಿಧುರಿ ಅವರನ್ನು ಕುಳಿತುಕೊಳ್ಳುವಂತೆ ಸಭಾಧ್ಯಕ್ಷರ ಸ್ಥಾನದಲ್ಲಿ ಕುಳಿತುಕೊಂಡಿದ್ದ, ಕಾಂಗ್ರೆಸ್ ಪಕ್ಷದ ಸಂಸದ ಕೋಡಿಕುನ್ನಿಲ್ ಸುರೇಶ್ ಅವರು ಹೇಳುತ್ತಾರೆ. ಅದರೂ ರಮೇಶ್ ಬಿಧುರಿ ತಮ್ಮ ಮಾತು ನಿಲ್ಲಿಸದೆ ಸಂಸದ ಕುನ್ವರ್ ಡ್ಯಾನಿಶ್ ಅಲಿ ವಿರುದ್ಧ ವಾಗ್ದಾಳಿ ಮುಂದುವರಿಸುತ್ತಾರೆ.
ವಿವಾದಾತ್ಮಕ ಹೇಳಿಕೆ ವಿಡಿಯೋ ಇಲ್ಲಿದೆ:
A BJP MP @rameshbidhuri can be heard calling MP Danish Ali a “Bharwa (pimp), “Katwa” (circumcised), “Mullah” “Atankwadi” (Terrorist) & “Ugrawadi” (militant) ON RECORD in Lok Sabha while RaviShankar Prasad & Harsh Vardhan sitting next to him are laughing.pic.twitter.com/yMfWgtcUhU
— Mohammed Zubair (@zoo_bear) September 22, 2023
ಹಿಮಾಚಲ ಪ್ರದೇಶದಲ್ಲಿ ಭೂಕುಸಿತಗಳು ಮತ್ತು ಮೇಘಸ್ಫೋಟ ನಡೆಯಲು ಮಾಂಸಾಹಾರ ಸೇವನೆಯೇ ಕಾರಣ ಎಂಬ ಐಐಟಿ-ಮಂಡಿ ನಿರ್ದೇಶಕ ಲಕ್ಷ್ಮೀಧರ್ ಬೆಹೆರಾ ಅವರು ಹೇಳಿಕೆಯನ್ನು ಸಂಸತ್ನಲ್ಲಿ ಕುನ್ವರ್ ಡ್ಯಾನಿಶ್ ಅಲಿ ಅವರು ಉಲ್ಲೇಖಿಸಿದ್ದಾರೆ. ಇದರಿಂದ ಕೋಪಗೊಂಡ ರಮೇಶ್ ಬಿಧುರಿ ಅವರು ಕುನ್ವರ್ ಡ್ಯಾನಿಶ್ ಅಲಿ ಒಬ್ಬ ಭಯೋತ್ಪಾದಕ ಎಂದು ಹೇಳಿಕೆ ನೀಡಿದ್ದಾರೆ. ಇನ್ನು ಈ ವಿಡಿಯೋವನ್ನು ಹಂಚಿಕೊಂಡ ಶಿವಂ ಕುಮಾರ್ ಎಂಬ ಪತ್ರಕರ್ತ, ಈ ಹೇಳಿಕೆಯ ಬಗ್ಗೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ರಮೇಶ್ ಬಿಧುರಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಒಂದು ವೇಳೆ ಸ್ಪೀಕರ್ ಈ ಬಗ್ಗೆ ಕ್ರಮ ತೆಗೆದುಕೊಳ್ಳದಿದ್ದರೆ ನಿಮ್ಮ ಸ್ಥಾನದ ಘನತೆಗೆ ಕುಂದು ತರುತ್ತಾದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರೈಲ್ವೆ ಪ್ಲಾಟ್ಫಾರ್ಮ್ನಲ್ಲಿ ಮಲಗುವ ಮಗು ಸಂಸತ್ ತಲುಪುತ್ತೆ ಎಂದರೆ ಇದೇ ಭಾರತದ ಪ್ರಜಾಪ್ರಭುತ್ವದ ಶಕ್ತಿ: ಮೋದಿ
ಸಂಸದರ ಹೇಳಿಕೆ ಬಗ್ಗೆ ಪರಿಶೀಲನೆ ನಡೆಸಿದ ಸ್ಪೀಕರ್ ಓಂ ಬಿರ್ಲಾ ಅವರು ರಮೇಶ್ ಬಿಧುರಿ ಮಾಡಿದ ಕೆಲವು ಆಕ್ಷೇಪಾರ್ಹ ಹೇಳಿಕೆಗಳನ್ನು ಗಂಭೀರವಾಗಿ ಗಮನಿಸಿ. ಮುಂದೆ ಇಂತಹ ಘಟನೆಗಳು ನಡೆಯಬಾರದು ಎಂಬ ಎಚ್ಚರಿಕೆ ನೀಡಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಬಗ್ಗೆ ಪ್ರಕ್ರಿಯೆ ನೀಡಿದ್ದು, ರಮೇಶ್ ಬಿಧುರಿ ಅವರ ಹೇಳಿಕೆ ಖಂಡನೀಯ ಎಂದು ಹೇಳಿದ್ದಾರೆ. ಲೋಕಸಭೆಯಲ್ಲಿ ಬಿಜೆಪಿ ಸಂಸದ ರಮೇಶ್ ಬಿಧುರಿ ಅವರ ಹೇಳಿಕೆಗೆ ಕಾಂಗ್ರೆಸ್ ಶುಕ್ರವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಅವರನ್ನು ಸದನದಿಂದ ಅಮಾನತುಗೊಳಿಸುವಂತೆ ಒತ್ತಾಯಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:03 pm, Fri, 22 September 23