Tirupati Temple: ತಿರುಪತಿ ತಿರುಮಲ ವೆಂಕಟೇಶ್ವರ ದೇವಸ್ಥಾನದಲ್ಲಿ ಕಾಲ್ತುಳಿತ; ಮೂವರಿಗೆ ಗಾಯ

TTD: ತಿರುಮಲ ತಿರುಪತಿ ದೇವಸ್ಥಾನದಲ್ಲಿ (ಟಿಟಿಡಿ) ದೇಗುಲಕ್ಕೆ ಬರುವ ಎಲ್ಲಾ ಭಕ್ತರಿಗೆ 'ದರ್ಶನ'ಕ್ಕಾಗಿ ಉಚಿತ ಟೋಕನ್‌ಗಳನ್ನು ನೀಡಲಾಗುತ್ತದೆ. ಆದರೆ, ಟಿಟಿಡಿ ಆಡಳಿತ ಮಂಡಳಿ ಅಧಿಕಾರಿಗಳು ಕಳೆದೆರಡು ದಿನಗಳಿಂದ ದರ್ಶನಕ್ಕೆ ಉಚಿತ ಟೋಕನ್ ನೀಡುವುದನ್ನು ನಿಲ್ಲಿಸಿದ್ದರಿಂದಾಗಿ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು.

Tirupati Temple: ತಿರುಪತಿ ತಿರುಮಲ ವೆಂಕಟೇಶ್ವರ ದೇವಸ್ಥಾನದಲ್ಲಿ ಕಾಲ್ತುಳಿತ; ಮೂವರಿಗೆ ಗಾಯ
ತಿರುಪತಿ ದೇವಸ್ಥಾನ
Updated By: ಸುಷ್ಮಾ ಚಕ್ರೆ

Updated on: Apr 12, 2022 | 3:52 PM

ತಿರುಪತಿ: ಆಂಧ್ರಪ್ರದೇಶದ ತಿರುಪತಿಯ ತಿರುಮಲ ವೆಂಕಟೇಶ್ವರ (Tirupati Tirumala Temple) ದೇವಸ್ಥಾನದಲ್ಲಿ ಇಂದು ಕಾಲ್ತುಳಿತ ಉಂಟಾಗಿದ್ದು, ಮೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮಾಧ್ಯಮಗಳ ವರದಿ ಪ್ರಕಾರ, ಸರ್ವದರ್ಶನ ಟಿಕೆಟ್‌ಗಳನ್ನು ಪಡೆಯಲು ಟಿಕೆಟ್ ಕೌಂಟರ್‌ನಲ್ಲಿ ಹೆಚ್ಚಿನ ಸಂಖ್ಯೆಯ ಯಾತ್ರಾರ್ಥಿಗಳು ಜಮಾಯಿಸಿದ್ದರು. ಈ ವೇಳೆ ನೂಕುನುಗ್ಗಲಿನಿಂದ ಕಾಲ್ತುಳಿತ ಉಂಟಾಗಿದೆ. ಆದರೆ, ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ. ಶ್ರೀ ವೆಂಕಟೇಶ್ವರ ಸ್ವಾಮಿ ವಾರಿ ದೇವಸ್ಥಾನ, ತಿರುಪತಿ ಬಾಲಾಜಿ ದೇವಸ್ಥಾನ ಎಂದು ಪ್ರಸಿದ್ಧವಾಗಿದೆ. ಇದು ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ತಿರುಪತಿಯಲ್ಲಿರುವ ತಿರುಮಲ ಬೆಟ್ಟದ ಪಟ್ಟಣದಲ್ಲಿರುವ ಹಿಂದೂ ದೇವಾಲಯವಾಗಿದೆ. ಹಿಂದೂಗಳಿಗೆ ಅತ್ಯಂತ ಪವಿತ್ರವಾದ ಸ್ಥಳಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಈ ದೇವಾಲಯಕ್ಕೆ ಪ್ರತಿದಿನ ಸಾವಿರಾರು ಭಕ್ತರು ಆಗಮಿಸುತ್ತಾರೆ.

ಈ ದೇವಾಲಯವು ವಿಷ್ಣುವಿನ ರೂಪವಾದ ವೆಂಕಟೇಶ್ವರನಿಗೆ ಸಮರ್ಪಿತವಾಗಿದೆ. ತಿರುಮಲ ಬೆಟ್ಟಗಳು ಶೇಷಾಚಲಂ ಬೆಟ್ಟಗಳ ಶ್ರೇಣಿಯ ಭಾಗವಾಗಿದೆ. ಇಲ್ಲಿ ‘ಸರ್ವದರ್ಶನಂ’ ಎಂದರೆ ‘ಎಲ್ಲರಿಗೂ ದರ್ಶನ’ ಎಂದರ್ಥ. ತಿರುಮಲ ತಿರುಪತಿ ದೇವಸ್ಥಾನದಲ್ಲಿ (ಟಿಟಿಡಿ) ದೇಗುಲಕ್ಕೆ ಬರುವ ಎಲ್ಲಾ ಭಕ್ತರಿಗೆ ‘ದರ್ಶನ’ಕ್ಕಾಗಿ ಉಚಿತ ಟೋಕನ್‌ಗಳನ್ನು ನೀಡಲಾಗುತ್ತದೆ. ಆದರೆ, ಟಿಟಿಡಿ ಆಡಳಿತ ಮಂಡಳಿ ಅಧಿಕಾರಿಗಳು ಕಳೆದೆರಡು ದಿನಗಳಿಂದ ದರ್ಶನಕ್ಕೆ ಉಚಿತ ಟೋಕನ್ ನೀಡುವುದನ್ನು ನಿಲ್ಲಿಸಿದ್ದರು. ಇದರಿಂದಾಗಿ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ತಿರುಮಲದಲ್ಲಿ ತಂಗಿದ್ದರು.

ಇಂದು ಬೆಳಗ್ಗೆ ದೇವಸ್ಥಾನಕ್ಕೆ ಹಾಕಲಾಗಿದ್ದ ಕಬ್ಬಿಣದ ಬೇಲಿ ಹಾರಿ ಭಕ್ತರು ದೇವಸ್ಥಾನ ಪ್ರವೇಶಿಸಲು ಯತ್ನಿಸಿದ್ದಾರೆ. ಇದರಿಂದ ತಿರುಮಲ ದೇವಸ್ಥಾನದಲ್ಲಿ ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಟಿಟಿಡಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಲ್ತುಳಿತ ಸಂಭವಿಸಿದೆ ಎಂದು ಭಕ್ತರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೊರೊನಾವೈರಸ್ ಸಾಂಕ್ರಾಮಿಕ ಸಮಯದಲ್ಲಿ ತಿರುಮಲ ವೆಂಕಟೇಶ್ವರ ದೇವಸ್ಥಾನವನ್ನು ಸಹ ಭಕ್ತರಿಗೆ ಮುಚ್ಚಲಾಗಿತ್ತು. ಆದರೆ, ಈ ವರ್ಷ ಮಾರ್ಚ್ 14ರಂದು ಕೊವಿಡ್-19 ನಿರ್ಬಂಧಗಳನ್ನು ತೆಗೆದ ಬಳಿಕ ತಿರುಪತಿಯಲ್ಲಿ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

ಇದನ್ನೂ ಓದಿ: Tirupati Temple: ತಿರುಪತಿ ತಿಮ್ಮಪ್ಪನಿಗೆ 9.2 ಕೋಟಿ ರೂ. ಆಸ್ತಿ ದಾನವಾಗಿ ನೀಡಿದ ವೃದ್ಧೆ

TTD Online Ticket Booking: ತಿರುಪತಿ ದೇವಸ್ಥಾನದ ವಿಶೇಷ ದರ್ಶನಕ್ಕೆ ಇಂದಿನಿಂದ ಆನ್ಲೈನ್​ ಟಿಕೇಟ್​ ಬುಕಿಂಗ್​ ಆರಂಭ

Published On - 3:51 pm, Tue, 12 April 22