
ಗ್ವಾಲಿಯರ್, ಅಕ್ಟೋಬರ್ 18: ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ಭಕ್ತರ ಮೇಲೆ ಹರಿದ ಪರಿಣಾಮ ಕನಿಷ್ಠ 14 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿರುವ ಘಟನೆ ಶನಿವಾರ ತಡರಾತ್ರಿ ಗ್ವಾಲಿಯರ್‌ನ ಶೀತಲಾ ಮಾತಾ ದೇವಸ್ಥಾನದ ಬಳಿ ನಡೆದಿದೆ. ಪೊಲೀಸ್ ಬ್ಯಾರಿಕೇಡ್‌ಗಳನ್ನು ಮುರಿದು ಟ್ರಕ್ ಮುನ್ನುಗ್ಗಿದ ಪರಿಣಾಮ ದೇವಸ್ಥಾನದ ಗೇಟ್ ಹಾಗೂ ಹೊರಗೋಡೆಗೆ ಡಿಕ್ಕಿಯಾಗಿದೆ. ಬೆಳಗಿನ ಜಾವ ಸುಮಾರು 1.30ರ ವೇಳೆಗೆ ಈ ಘಟನೆ ಸಂಭವಿಸಿದ್ದು, ಭತ್ತ ತುಂಬಿಕೊಂಡು ಛಿನೋರ್ ಕಡೆಯಿಂದ ಬರುತ್ತಿದ್ದ ಟ್ರಕ್ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧವಿರುವ ಕಡಿದಾದ ಇಳಿಜಾರಿನಲ್ಲಿ ನಿಯಂತ್ರಣ ಕಳೆದುಕೊಂಡು ಅಪಘಾತ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಪಘಾತದ ಒಟ್ಟು 39 ಮಂದಿ ಗಾಯಗೊಂಡಿದ್ದರು. ಆ ಪೈಕಿ 14 ಜನ ಮೃತಪಟ್ಟಿದ್ದರೆ ಉಳಿದವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಐದರಿಂದ ಆರು ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಅವರಲ್ಲಿ ಕೆಲವರಿಗೆ ಮೂಳೆ ಮುರಿತವಾಗಿದೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಘಟನಾ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಯೂ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗ್ವಾಲಿಯರ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಧರ್ಮವೀರ್ ಸಿಂಗ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕೊಲ್ಕತ್ತಾದ ಕಾಲ್ತುಳಿತದಲ್ಲಿ 17 ಭಕ್ತರು ಸಾವು; ಪ್ರಧಾನಿ ಮೋದಿಯಿಂದ ಮೃತರ ಕುಟುಂಬಕ್ಕೆ 2 ಲಕ್ಷ ರೂ ಪರಿಹಾಣ ಘೋಷಣೆ
ಅಪಘಾತದ ಸುದ್ದಿ ತಿಳಿದ ತಕ್ಷಣ ಆಂಬ್ಯುಲೆನ್ಸ್‌ಗಳು ಹಾಗೂ ಇತರ ವಾಹನಗಳನ್ನು ಪರಿಹಾರ ಕಾರ್ಯಾಚರಣೆಗಾಗಿ ಕಳುಹಿಸಲಾಗಿರುವ ಕಾರಣ ಹೆಚ್ಚಿನ ಸಾವು ನೋವು ತಪ್ಪಿದೆ. ನವರಾತ್ರಿ ಸಂದರ್ಭದಲ್ಲಿ ರಸ್ತೆಯಲ್ಲಿ ಬ್ಯಾರಿಕೇಡ್ ಹಾಗೂ ಪೊಲೀಸ್ ತಪಾಸಣಾ ಕೇಂದ್ರವನ್ನು ಸ್ಥಾಪಿಸಲಾಗಿತ್ತು. ಆದರೂ ಟ್ರಕ್ ಅಲ್ಲಿಗೆ ಹೇಗೆ ಪ್ರವೇಶಿಸಿತು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಗ್ವಾಲಿಯರ್ ಜಿಲ್ಲಾಧಿಕಾರಿ ರುಚಿಕಾ ಚೌಹಾಣ್ ತಿಳಿಸಿದ್ದಾರೆ.
ನವರಾತ್ರಿ ಸಂದರ್ಭವಾಗಿರುವ ಕಾರಣ ಆ ರಸ್ತೆಯಲ್ಲಿ ತಡೆಗೋಡೆ ಮತ್ತು ಪೊಲೀಸ್ ತಪಾಸಣಾ ಕೇಂದ್ರವಿತ್ತು. ಹೀಗಿದ್ದರೂ ವಾಹನ ಒಳಗೆ ಪ್ರವೇಶಿಸಿದ್ದು ಹೇಗೆ ಎಂಬುದು ತನಿಖೆಯಿಂದ ತಿಳಿಯಬೇಕಿದೆ. ಟ್ರಕ್‌ನಲ್ಲಿ ಏನಾದರೂ ತಾಂತ್ರಿಕ ದೋಷ ಉಂಟಾಗಿತ್ತೇ ಮತ್ತು ಅದು ಎಡಕ್ಕೆ ತಿರುಗಲು ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಪ್ರಾದೇಶಿಕ ಸಾರಿಗೆ ಕಚೇರಿಯ (RTO) ತಂಡವನ್ನು ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಘಟನೆಯನ್ನು ಕಣ್ಣಾರೆ ಕಂಡ ಗಾಯಾಳುವೊಬ್ಬರ ಸಹೋದರನ ಪ್ರಕಾರ, ಟ್ರಕ್‌ನಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಭತ್ತವನ್ನು ತುಂಬಲಾಗಿತ್ತು. ಟ್ರಕ್ ಏಕಾಏಕಿ ಬಂದು ನಿಯಂತ್ರಣ ಕಳೆದುಕೊಂಡು ಜನರು ಮತ್ತು ಅಂಗಡಿಗಳ ಮೇಲೆ ಹರಿದಿದೆ ಎನ್ನಲಾಗಿದೆ.
ಗ್ವಾಲಿಯರ್‌ನಲ್ಲಿ ಟ್ರಕ್ ಅಪಘಾತದಲ್ಲಿ ಭಕ್ತರು ಮೃತಪಟ್ಟಿರುವ ಸುದ್ದಿ ಅತ್ಯಂತ ಹೃದಯವಿದ್ರಾವಕವಾಗಿದೆ. ಈ ದುಃಖದ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಸಂತ್ರಸ್ತ ಕುಟುಂಬಗಳೊಂದಿಗೆ ನಿಂತಿದೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು ಎಂದು ಮಧ್ಯಪ್ರದೇಶ ಸಿಎಂ ಡಾ. ಮೋಹನ್ ಯಾದವ್ ಹೇಳಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ, ಗಂಭೀರವಾಗಿ ಗಾಯಗೊಂಡವರಿಗೆ ತಲಾ 2 ಲಕ್ಷ ರೂಪಾಯಿ ಹಾಗೂ ಇತರ ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಆರ್ಥಿಕ ನೆರವು ನೀಡುವಂತೆ ರಾಜ್ಯ ಆಡಳಿತದ ಪರವಾಗಿ ಸೂಚನೆ ನೀಡಲಾಗಿದೆ. ಗಾಯಾಳುಗಳಿಗೆ ಉಚಿತ ಚಿಕಿತ್ಸೆ ಒದಗಿಸಲಾಗುವುದು. ಸಂತ್ರಸ್ತ ಕುಟುಂಬಗಳು ಗ್ವಾಲಿಯರ್, ಶಿವಪುರಿ ಮತ್ತು ಶಿಯೋಪುರ ಜಿಲ್ಲೆಗಳಿಗೆ ಸೇರಿದವರಾಗಿದ್ದಾರೆ. ಸಚಿವರಾದ ಐದಲ್ ಸಿಂಗ್ ಕಂಸಾನಾ ಮತ್ತು ರಾಕೇಶ್ ಶುಕ್ಲಾ ಅವರು ಗ್ವಾಲಿಯರ್‌ಗೆ ತೆರಳುವಂತೆಯೂ ಸೂಚನೆ ನೀಡಲಾಗಿದೆ. ದುಃಖತಪ್ತ ಕುಟುಂಬಗಳಿಗೆ ಈ ಅಪಾರ ನೋವನ್ನು ಸಹಿಸುವ ಶಕ್ತಿ ದೊರೆಯಲಿ ಹಾಗೂ ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದವರು ಎಕ್ಸ್ ಪೋಸ್ಟ್ ಮಾಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:06 am, Sun, 18 October 26