ಜಮೀನು ವಿವಾದ: ಮಹಿಳೆಯನ್ನು ಜೀವಂತ ಸುಟ್ಟು ವಿಡಿಯೋ ಮಾಡಿದ ಪಾಪಿಗಳು
ಜಮೀನು ವಿಚಾರಕ್ಕೆ ಮಹಿಳೆಯನ್ನು ಜೀವಂತ ಸುಟ್ಟು, ವೀಡಿಯೋ ಮಾಡಿರುವ ಘಟನೆ ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ನಡೆದಿದೆ. 45 ವರ್ಷದ ಮಹಿಳೆಗೆ ಬೆಂಕಿ ಹಚ್ಚಿ ಸುಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ
ಜಮೀನು ವಿಚಾರಕ್ಕೆ ಮಹಿಳೆಯನ್ನು ಜೀವಂತ ಸುಟ್ಟು, ವಿಡಿಯೋ ಮಾಡಿರುವ ಘಟನೆ ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ನಡೆದಿದೆ. 45 ವರ್ಷದ ಮಹಿಳೆಗೆ ಬೆಂಕಿ ಹಚ್ಚಿ ಸುಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಭೋಪಾಲ್‌ನಿಂದ ಸುಮಾರು 200 ಕಿಮೀ ದೂರದಲ್ಲಿರುವ ಬಮೋರಿ ಪೊಲೀಸ್ ಠಾಣೆ ವ್ಯಾಪ್ತಿಯ ಧನೋರಿಯಾ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಗುಣಾ ಪೊಲೀಸ್ ವರಿಷ್ಠಾಧಿಕಾರಿ ಪಂಕಜ್ ಶ್ರೀವಾಸ್ತವ ತಿಳಿಸಿದ್ದಾರೆ.
ಈವರೆಗೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಮೂರನೇ ವ್ಯಕ್ತಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. ಆರೋಪಿಗಳು ಮಾಡಿರುವ ಘಟನೆಯ ವೀಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಮಹಿಳೆಯ ದೇಹವು ಹೊಲದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಇದರಿಂದ ಆಕೆಯ ಸುತ್ತಲೂ ಹೊಗೆ ಆವರಿಸಿತ್ತು.
ಈ ಮಹಿಳೆ ನೋವಿನಿಂದ ನರಳುತ್ತಿದ್ದು, ಈ ಮಹಿಳೆ ಬೆಂಕಿ ಹಚ್ಚಿಕೊಂಡಿದ್ದಾಳೆ, ನಾವು ವೀಡಿಯೋ ಮಾಡಿದ್ದಷ್ಟೇ ಎಂದು ಆರೋಪಿಗಳು ಹೇಳಿದ್ದಾರೆ. ಮಹಿಳೆಯ ಪತಿ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ತಮ್ಮ ಜಮೀನಿಗೆ ಬಂದಾಗ ಆಕೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು ಎಂದು ಆಕೆಯ ಪತಿ ಅರ್ಜುನ್ ಮಾಹಿತಿ ನೀಡಿದ್ದಾರೆ.
ಗ್ರಾಮದ ಪ್ರತಾಪ್, ಹನುಮಂತ್ ಮತ್ತು ಶ್ಯಾಮ್ ಕಿರಾರ್ ಆರೋಪಿಗಳಾಗಿದ್ದಾರೆ. ಸಂತ್ರಸ್ತ ಮಹಿಳೆಯ ಕುಟುಂಬವು ಈ ಆರೋಪಿಗಳೊಂದಿಗೆ ಜಮೀನು ಸಂಬಂಧಿತ ವಿವಾದವನ್ನು ಹೊಂದಿತ್ತು. ಈ ಮಹಿಳೆಯ ಕುಟುಂಬದ ಜಮೀನನ್ನು ಆರೋಪಿಗಳು ಒತ್ತುವರಿ ಮಾಡಿಕೊಂಡಿದ್ದು, ಮೇ ತಿಂಗಳಿನಲ್ಲಿಯೇ ತಹಸೀಲ್ದಾರ್ ಬಮೋರಿ ಅವರು ಜಮೀನನ್ನು ಈ ಮಹಿಳೆಯ ಕುಟುಂಬಕ್ಕೆ ಹಸ್ತಾಂತರಿಸಿದ್ದರು.
ಮಹಿಳೆ ಹೊಲಕ್ಕೆ ಹೋಗಿದ್ದಳು, ಆಗ ಆರೋಪಿಗಳ ಕಡೆಯವರು ಬಂದು ಅವಳನ್ನು ಜಮೀನಿನಲ್ಲಿ ಸುಟ್ಟು ಹಾಕಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಹಿಳೆಯ ಸ್ಥಿತಿ ಚಿಂತಾಜನಕವಾಗಿದ್ದು, ಆಕೆಯನ್ನು ಭೋಪಾಲ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
Published On - 12:32 pm, Mon, 4 July 22