ಎಲ್‌ಪಿಜಿ ಸಿಲಿಂಡರ್ ಹೊತ್ತ ಟ್ರಕ್ ಪಲ್ಟಿ; ಒಂದಾದ ಮೇಲೊಂದು ಸಿಲಿಂಡರ್ ಸ್ಫೋಟ
ಸ್ಥಳೀಯ ಜನರ ಪ್ರಕಾರ, ಎಲ್‌ಪಿಜಿ ಸಿಲಿಂಡರ್‌ಗಳು ಒಂದೊಂದಾಗಿ ಸ್ಫೋಟಿಸುತ್ತಲೇ ಇದ್ದು, ಬೆಂಕಿಯ ತೀವ್ರತೆಯೂ ಹೆಚ್ಚಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹೆದ್ದಾರಿಯಲ್ಲಿ ಎರಡೂ ಬದಿಗಳಿಂದ ವಾಹನಗಳ ನಿಲ್ಲಿಸಿದ್ದಾರೆ.
ಜೈಪುರ: ರಾಜಸ್ಥಾನದ ರಾಜಧಾನಿ ಜೈಪುರದ ಬಳಿ ಎಲ್‌ಪಿಜಿ ಸಿಲಿಂಡರ್ಗಳನ್ನು ಹೊತ್ತು ಸಾಗುತ್ತಿದ್ದ ಟ್ರಕ್ ಪಲ್ಟಿಯಾಗಿ ಅನಾಹುತ ಸಂಭವಿಸಿದೆ. ಜೈಪುರ-ಅಜ್ಮೀರ್ ಹೆದ್ದಾರಿಯಲ್ಲಿ ಶನಿವಾರ ರಾತ್ರಿ ಈ ಅವಘಡ ಉಂಟಾಗಿದ್ದು, NH-48 ರಲ್ಲಿ LPG ಸಿಲಿಂಡರ್ ತುಂಬಿದ್ದ ಟ್ರಕ್ ಪಲ್ಟಿಯಾಗಿ ಬೆಂಕಿ ಹೊತ್ತಿ ಉರಿದಿದೆ. ಟ್ರಕ್ ನೆಲಕ್ಕೆ ಉರುಳುತ್ತಿದ್ದಂತೆಯೇ ಅಪಘಾತದ ರಭಸಕ್ಕೆ ಬೆಂಕಿ ತಗುಲಿದ್ದು ಸಿಲಿಂಡರ್‌ಗಳು ಸ್ಫೋಟಿಸಲಾರಂಭಿಸಿವೆ. ಕಾಣಿಸಿಕೊಂಡ ತಕ್ಷಣ ಇಡೀ ಪ್ರದೇಶದಲ್ಲಿ ಸಂಚಲನ ಉಂಟಾಯಿತು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಸಿಲಿಂಡರ್ ಒಂದರ ನಂತರ ಒಂದರಂತೆ ಸಿಡಿಯತೊಡಗಿತು. ಇದರಿಂದಾಗಿ ಹೆದ್ದಾರಿಯಲ್ಲಿ ಗೊಂದಲದ ವಾತಾವರಣ ಉಂಟಾಯಿತು. ಪ್ರಸ್ತುತ, ಘಟನೆಯ ಮಾಹಿತಿ ತಲುಪಿದ ಪೊಲೀಸ್ ತಂಡ, ವಾಹನಗಳನ್ನು ಬೇರೆ ಮಾರ್ಗಗಳಿಂದ ಬೇರೆಡೆಗೆ ತಿರುಗಿಸಲು ಪ್ರಯತ್ನಿಸುತ್ತಿದೆ.
ಜೈಪುರ್-ಅಜ್ಮೀರ್ ಹೆದ್ದಾರಿಯ ದುಡು ಪೊಲೀಸ್ ಠಾಣೆ ವ್ಯಾಪ್ತಿಯ ದಂತರಿ ಗ್ರಾಮದ ಬಳಿ ಸದರಿ ಅಪಘಾತ ಸಂಭವಿಸಿದ್ದು, ಪೊಲೀಸ್ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳಿಂದ ತುಂಬಿದ ಟ್ರಕ್ ಹೆದ್ದಾರಿಯಲ್ಲಿ ಆಯತಪ್ಪಿ ಉರುಳಿದಾಗ ಬೆಂಕಿ ಕಾಣಿಸಿಕೊಂಡಿದೆ. ಆ ವೇಳೆ ಸ್ಫೋಟ ಉಂಟಾಗಿದ್ದು, ಆ ಶಬ್ದವು ಹಲವಾರು ಕಿಲೋಮೀಟರ್‌ಗಳವರೆಗೆ ಕೇಳಿಸಿದೆ. ಅಂತೆಯೇ, ಸ್ಥಳೀಯ ಜನರ ಪ್ರಕಾರ, ಎಲ್‌ಪಿಜಿ ಸಿಲಿಂಡರ್‌ಗಳು ಒಂದೊಂದಾಗಿ ಸ್ಫೋಟಿಸುತ್ತಲೇ ಇದ್ದು, ಬೆಂಕಿಯ ತೀವ್ರತೆಯೂ ಹೆಚ್ಚಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹೆದ್ದಾರಿಯಲ್ಲಿ ಎರಡೂ ಬದಿಗಳಿಂದ ವಾಹನಗಳ ನಿಲ್ಲಿಸಿದ್ದು, ಏಕಾಏಕಿ ಸಂಚಾರ ನಿರ್ಬಂಧಿಸಿದ ಕಾರಣ ಸುಮಾರು 5 ಕಿಲೋಮೀಟರ್‌ಗಳಿಗೂ ಹೆಚ್ಚು ದೂರ ವಾಹನ ದಟ್ಟಣೆ ಉಂಟಾಗಿದೆ. ಅಗ್ನಿಶಾಮಕ ದಳದ ತಂಡವೂ ಸ್ಥಳಕ್ಕೆ ತಲುಪಿದ್ದು, ಸದ್ಯ ವಾಹನಗಳಿಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.
ಇದೇ ವಿಚಾರವಾಗಿ ದುಡು ಪೊಲೀಸ್ ಠಾಣೆಯ ಅಧಿಕಾರಿಗಳು ತನಿಖೆ ಕೈಗೊಂಡಿದ್ದು, ಅಪಘಾತಕ್ಕೆ ಕಾರಣ ಹುಡುಕುತ್ತಿದ್ದಾರೆ. ಸ್ಫೋಟ ಅನೇಕ ಕಿಲೋಮೀಟರ್ ತನಕ ಕೇಳಿದ್ದರಿಂದ ಸುತ್ತಮುತ್ತಲ ಊರಿನ ಜನರೂ ಗಾಬರಿಯಾಗಿದ್ದು, ಇದೀಗ ಎಲ್ಲರಿಗೂ ವಿಷಯ ತಲುಪಿದೆ. ಅಗ್ನಿ ಅವಘಡ ದೊಡ್ಡದಾಗಿ ಸಂಭವಿಸಿದ್ದರೂ ಅದೃಷ್ಟವಶಾತ್ ಯಾವುದೇ ಸಾವು, ನೋವು ಘಟಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಕೊಪ್ಪಳದಲ್ಲಿ ಎರಡು ಲಾರಿಗಳ ನಡುವೆ ಅಪಘಾತ; ಲಾರಿಗಳ ನಡುವಲ್ಲಿ ಸಿಕ್ಕಿಕೊಂಡ ನಾಲ್ವರು
LPG Cylinder Explosion: ಅಹ್ಮದಾಬಾದ್ನಲ್ಲಿ ಎಲ್‌ಪಿಜಿ ಸಿಲಿಂಡರ್ ಲೀಕೇಜ್ನಿಂದ ಸ್ಫೋಟ; 7 ಮಂದಿ ಸಾವು
(Truck filled with LPG Gas Cylinder overturned Cylinder bursting due to explosion cause traffic Jam in Rajasthan)