ರೈತರ ಕೃಷಿಭೂಮಿ ಬಲಿಕೊಟ್ಟು ವಿಮಾನ ನಿಲ್ದಾಣ ಕಟ್ಟಲ್ಲ: ಪರಂದೂರು ಪ್ರಾಜೆಕ್ಟ್ ರದ್ದುಗೊಳಿಸಿ, 3 ಉಚಿತ ಗ್ಯಾಸ್ ಸಿಲಿಂಡರ್ ಘೋಷಿಸಿದ ಸಿಎಂ ವಿಜಯ್

ಪರಂದೂರು ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಯೋಜನೆಯನ್ನು ಟಿವಿ ರಾಜೇಂದ್ರ (TVK) ಸರ್ಕಾರ ರದ್ದುಪಡಿಸಿದೆ. ರೈತರ ಕೃಷಿಭೂಮಿ ರಕ್ಷಿಸುವ ನಿಟ್ಟಿನಲ್ಲಿ ಸಿಎಂ ವಿಜಯ್ ಈ ನಿರ್ಧಾರ ಪ್ರಕಟಿಸಿದ್ದಾರೆ. ಬಡ ಕುಟುಂಬಗಳಿಗೆ 3 ಉಚಿತ ಎಲ್‌ಪಿಜಿ ಸಿಲಿಂಡರ್‌ಗಳು ಮತ್ತು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ವಿಸ್ತರಣೆಯಂತಹ ಜನಪರ ಯೋಜನೆಗಳನ್ನು ಘೋಷಿಸಲಾಗಿದೆ. ಈ ನಿರ್ಧಾರವು ಗ್ರಾಮೀಣ ಮತದಾರರನ್ನು ತಲುಪಿದರೂ, ಕೈಗಾರಿಕೆಗಳ ಭವಿಷ್ಯದ ಬಗ್ಗೆ ಆತಂಕ ಮೂಡಿಸಿದೆ.

ರೈತರ ಕೃಷಿಭೂಮಿ ಬಲಿಕೊಟ್ಟು ವಿಮಾನ ನಿಲ್ದಾಣ ಕಟ್ಟಲ್ಲ: ಪರಂದೂರು ಪ್ರಾಜೆಕ್ಟ್ ರದ್ದುಗೊಳಿಸಿ, 3 ಉಚಿತ ಗ್ಯಾಸ್ ಸಿಲಿಂಡರ್ ಘೋಷಿಸಿದ ಸಿಎಂ ವಿಜಯ್
ವಿಜಯ್

Updated on: Aug 24, 2026 | 12:07 PM

ಚೆನ್ನೈ, ಆಗಸ್ಟ್ 24: ತಮಿಳುನಾಡು ರಾಜಧಾನಿ ಚೆನ್ನೈನ ಹೊರವಲಯದಲ್ಲಿರುವ ಪರಂದೂರಿನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ ವಿವಾದಿತ ‘ಎರಡನೇ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಯೋಜನೆ’ಯನ್ನು ಸಂಪೂರ್ಣವಾಗಿ ಕೈಬಿಡಲು ತಮಿಳುನಾಡು(Tamil Nadu) ಸರ್ಕಾರ ನಿರ್ಧರಿಸಿದೆ. ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ವಿಧಾನಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್, ರೈತರ ಕೃಷಿಭೂಮಿ ಮತ್ತು ಜನರ ಜೀವನೋಪಾಯವನ್ನು ಕಸಿದುಕೊಂಡು ಯಾವುದೇ ಯೋಜನೆ ಜಾರಿಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ ರಾಜ್ಯದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ 3 ಉಚಿತ ಅಡುಗೆ ಅನಿಲ (LPG) ಸಿಲಿಂಡರ್ ಹಾಗೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ವಿಸ್ತರಣೆಯಂತಹ ಹಲವು ಜನಪರ ಯೋಜನೆಗಳನ್ನು ಪ್ರಕಟಿಸಿದರು.

ರೈತರು ದೇಶದ ಜೀವನಾಡಿ, ಪರಂದೂರು ಮತ್ತು ಸುತ್ತಮುತ್ತಲಿನ 12 ಹಳ್ಳಿಗಳ ರೈತರು ತಮ್ಮ ಫಲವತ್ತಾದ ಕೃಷಿ ಭೂಮಿಯನ್ನು ಉಳಿಸಿಕೊಳ್ಳಲು ನಡೆಸುತ್ತಿರುವ ಹೋರಾಟದೊಂದಿಗೆ ನನ್ನ ತಮಿಳಗ ವೆಟ್ರಿ ಕಳಗಂ (TVK) ಸರ್ಕಾರ ಸದಾ ದೃಢವಾಗಿ ನಿಲ್ಲುತ್ತದೆ ಎಂದು ಮುಖ್ಯಮಂತ್ರಿ ವಿಜಯ್ ಹೇಳಿದರು.

ಹಾಲಿ ಇರುವ ಮೀನಂಬಕ್ಕಂ ವಿಮಾನ ನಿಲ್ದಾಣವು ವಾರ್ಷಿಕ 30 ಮಿಲಿಯನ್ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದ್ದು, ನಗರದ ಬೆಳವಣಿಗೆಗೆ ಹೊಸ ವಿಮಾನ ನಿಲ್ದಾಣ ಅಗತ್ಯವಿದೆ ಎಂಬುದನ್ನು ಒಪ್ಪಿಕೊಂಡ ಸಿಎಂ, ಕೃಷಿ ಭೂಮಿಗೆ ಧಕ್ಕೆಯಾಗದಂತೆ ಪರ್ಯಾಯ ಜಾಗವನ್ನು ಶೋಧಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮತ್ತಷ್ಟು ಓದಿ: ತಮಿಳುನಾಡು ಶಾಸಕರಿಗೆ ಸರ್ಕಾರಿ ಕಾರು, 1 ಲಕ್ಷ ರೂ. ಭತ್ಯೆ: ಆರೋಗ್ಯ ವಿಮೆ 25 ಲಕ್ಷ ರೂ.ಗೆ ಹೆಚ್ಚಳ: ಸಿಎಂ ವಿಜಯ್ ಘೋಷಣೆ

ಸರ್ಕಾರದ ಈ ತೀರ್ಮಾನವನ್ನು ಮಾಜಿ ಸಚಿವ ಹಾಗೂ ಡಿಎಂಕೆ ಹಿರಿಯ ನಾಯಕ ತಂಗಮ್ ತೆನ್ನರಸು ಕಟುವಾಗಿ ಟೀಕಿಸಿದ್ದಾರೆ. ಹಿಂದಿನ ಡಿಎಂಕೆ ಸರ್ಕಾರವು ಹಲವು ವರ್ಷಗಳ ತಾಂತ್ರಿಕ ಅಧ್ಯಯನ ಮತ್ತು ಕೇಂದ್ರ ಸರ್ಕಾರದ ಅನುಮೋದನೆ ಪಡೆದು ಪರಂದೂರನ್ನು ಆಯ್ಕೆ ಮಾಡಿತ್ತು. ರಾಜಕೀಯ ಲಾಭಕ್ಕಾಗಿ ಈ ಯೋಜನೆ ರದ್ದುಗೊಳಿಸಿದರೆ ಶ್ರೀಪೆರಂಬುದೂರ್ ಸುತ್ತಮುತ್ತಲಿನ ಜಾಗತಿಕ ಕೈಗಾರಿಕೆಗಳು ಆಂಧ್ರಪ್ರದೇಶದ ಕಡೆಗೆ ವಲಸೆ ಹೋಗಲಿವೆ ಎಂದು ಡಿಎಂಕೆ ಎಚ್ಚರಿಸಿದೆ.

ಮುಂಬರುವ ಪೊಂಗಲ್ ಹಬ್ಬದಿಂದ ಜಾರಿಗೆ ಬರುವಂತೆ, ವಾರ್ಷಿಕ 2.5 ಲಕ್ಷಕ್ಕಿಂತ ಕಡಿಮೆ ಆದಾಯವಿರುವ ಬಡ ಕುಟುಂಬಗಳು, ಸಣ್ಣ-ಅತಿಸಣ್ಣ ರೈತರು ಮತ್ತು ವಿಕಲಚೇತನರ ಕುಟುಂಬಗಳಿಗೆ ವರ್ಷಕ್ಕೆ 3 ಎಲ್‌ಪಿಜಿ ಸಿಲಿಂಡರ್‌ಗಳ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ಇದಕ್ಕಾಗಿ4 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ.

ಮಹಿಳೆಯರ ಉಚಿತ ಬಸ್ ಪ್ರಯಾಣ ಯೋಜನೆಯನ್ನು ನಗರ ಎಕ್ಸ್‌ಪ್ರೆಸ್, ಎಲ್‌ಎಸ್‌ಎಸ್ ಹಾಗೂ ಡಿಲಕ್ಸ್ ಬಸ್‌ಗಳಿಗೂ ವಿಸ್ತರಿಸಲಾಗಿದ್ದು, ಗಾಂಧಿ ಜಯಂತಿಯಿಂದ ಇದು ಜಾರಿಗೆ ಬರಲಿದೆ. ಈ ಸೌಲಭ್ಯವು ತೃತೀಯಲಿಂಗಿಗಳಿಗೂ ಅನ್ವಯವಾಗಲಿದೆ.

ಚೆನ್ನೈನ ವಿಮಾನಯಾನ ಸವಾಲು: ದಕ್ಷಿಣ ಭಾರತದ ಪ್ರಮುಖ ವಾಯುಯಾನ ಹಬ್ ಆಗಿದ್ದ ಚೆನ್ನೈ ವಿಮಾನ ನಿಲ್ದಾಣವು ಸಾಮರ್ಥ್ಯ ಮಿತಿ ತಲುಪುತ್ತಿದ್ದು, ಬೆಂಗಳೂರು ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳಿಗೆ ತೀವ್ರ ಪೈಪೋಟಿ ನೀಡಲು ಹೊಸ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣವು ಅತ್ಯಂತ ನಿರ್ಣಾಯಕವಾಗಿದೆ.

ರೈತರ ಹೋರಾಟಕ್ಕೆ ಸ್ಪಂದಿಸಿ ಯೋಜನೆ ರದ್ದುಗೊಳಿಸಿರುವುದು ಗ್ರಾಮೀಣ ಮತದಾರರ ಮೆಚ್ಚುಗೆಗೆ ಪಾತ್ರವಾಗಿದ್ದರೂ, ತಮಿಳುನಾಡಿನ ಆಟೋಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್ ಹಾರ್ಡ್‌ವೇರ್ ಹೂಡಿಕೆದಾರರಿಗೆ ಲಾಜಿಸ್ಟಿಕ್ಸ್ ಕೊರತೆಯ ಆತಂಕವನ್ನು ತಂದಿಟ್ಟಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:56 am, Mon, 24 August 26

Loading...
Unable to load recommendations.
Follow Us