- TV9 Kannada Photo gallery Cricket photos Trisha Jolly, Gayatri Gopichand Win Historic Bronze at 2026 World Badminton Championships
BWF World C’ships: ಕಂಚಿಗೆ ಮುತ್ತಿಕ್ಕಿದ ತ್ರಿಶಾ- ಗಾಯತ್ರಿ ಜೋಡಿ
World Badminton Championships 2026: ದೆಹಲಿಯಲ್ಲಿ ನಡೆದ 2026ರ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ತ್ರಿಷಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಕಂಚಿನ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಸೆಮಿಫೈನಲ್‌ನಲ್ಲಿ ವಿಶ್ವದ ನಂ.1 ಚೀನೀ ಜೋಡಿಗೆ ಸೋತರೂ, ಅವರು ಭಾರತದ ಮಹಿಳಾ ಡಬಲ್ಸ್ ತಂಡಕ್ಕೆ 15 ವರ್ಷಗಳ ನಂತರ ವಿಶ್ವ ಚಾಂಪಿಯನ್‌ಶಿಪ್ ಪದಕವನ್ನು ತಂದರು. ಇದು ಭಾರತೀಯ ಬ್ಯಾಡ್ಮಿಂಟನ್‌ಗೆ ಮಹತ್ವದ ಕ್ಷಣವಾಗಿದೆ.
Updated on: Aug 22, 2026 | 8:31 PM

ದೆಹಲಿಯ ಇಂದಿರಾ ಗಾಂಧಿ ಅರೆನಾದಲ್ಲಿ ನಡೆದ 2026 ರ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಚೀನಾದ ವಿಶ್ವದ ನಂ.1 ಶ್ರೇಯಾಂಕಿತ ಜೋಡಿ ಲಿಯು ಶೆಂಗ್ ಶು ಮತ್ತು ಟ್ಯಾನ್ ನಿಂಗ್ ವಿರುದ್ಧ ಸೋಲನುಭವಿಸಿದ ಭಾರತದ ತ್ರಿಶಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಜೋಡಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದೆ.

ತ್ರಿಶಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಚೀನಾದ ಜೋಡಿಗೆ ಪ್ರಬಲ ಪೈಪೋಟಿ ನೀಡಿ 21-18 ರಿಂದ ಮೊದಲ ಗೇಮ್ ಗೆದ್ದಿತು. ಆದರೆ ಅಗ್ರ ಶ್ರೇಯಾಂಕಿತ ಚೀನೀ ಜೋಡಿ ಮುಂದಿನ ಎರಡು ಗೇಮ್‌ಗಳನ್ನು 21-13 ಮತ್ತು 21-8 ರಿಂದ ಗೆದ್ದುಕೊಳ್ಳುವ ಮೂಲಕ ಫೈನಲ್ ಸುತ್ತಿಗೆ ಅರ್ಹತೆ ಪಡೆದುಕೊಂಡಿತು.

ಈ ಸೋಲಿನ ಹೊರತಾಗಿಯೂ, ತ್ರಿಶಾ ಮತ್ತು ಗಾಯತ್ರಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮಹಿಳಾ ಡಬಲ್ಸ್ ಪದಕಕ್ಕಾಗಿನ 15 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿದರು. ಇದಕ್ಕೂ ಮೊದಲು, ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ 2011 ರಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟಿದ್ದರು. ಇದೀಗ ತ್ರಿಶಾ ಮತ್ತು ಗಾಯತ್ರಿ ಕಂಚಿನ ಪದಕ ಗೆಲ್ಲುವ ಮೂಲಕ ಪದಕದ ಬರವನ್ನು ನೀಗಿಸಿದ್ದಾರೆ.

2026 ರ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಈ ಜೋಡಿ 64 ರ ಸುತ್ತಿನಲ್ಲಿ ಸ್ಪೇನ್‌ನ ಪೌಲಾ ಲೋಪೆಜ್ ಮತ್ತು ಲೂಸಿಯಾ ರೊಡ್ರಿಗಸ್ ವಿರುದ್ಧ 21-9, 21-13 ಅಂತರದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ತಮ್ಮ ಅಭಿಯಾನವನ್ನು ಪ್ರಾರಂಭಿಸಿತು. ನಂತರ 32 ರ ಸುತ್ತಿನಲ್ಲಿ 16 ನೇ ಶ್ರೇಯಾಂಕದ ಲಾರೆನ್ ಲ್ಯಾಮ್ ಮತ್ತು ಅಮೆರಿಕದ ಅಲಿಸನ್ ಲೀ ಅವರನ್ನು 21-15, 21-12 ಅಂತರದಲ್ಲಿ ಮಣಿಸಿತು.

ನಂತರ ನಡೆದ 16 ರ ಸುತ್ತಿನಲ್ಲಿ ಏಳನೇ ಶ್ರೇಯಾಂಕದ ಜಪಾನ್‌ನ ರಿನ್ ಇವಾನಾಗಾ ಮತ್ತು ಕೀ ನಕಾನಿಶಿ ಅವರನ್ನು 21-16, 21-12 ಅಂತರದಲ್ಲಿ ಮಣಿಸಿ ಕ್ವಾರ್ಟರ್ ಫೈನಲ್ ತಲುಪಿತು. ನಂತರ ಕ್ವಾರ್ಟರ್ ಫೈನಲ್‌ನಲ್ಲಿ ನಾಲ್ಕನೇ ಶ್ರೇಯಾಂಕದ ಚೀನಾದ ಜಿಯಾ ಯಿ ಫ್ಯಾನ್ ಮತ್ತು ಜಾಂಗ್ ಶು ಕ್ಸಿಯಾನ್ ಅವರನ್ನು 16-21, 21-15, 21-13 ಅಂತರದ ಅದ್ಭುತ ಗೆಲುವಿನೊಂದಿಗೆ ಸೆಮಿಫೈನಲ್ಗೆ ಅರ್ಹತೆ ಪಡೆದುಕೊಂಡಿತ್ತು.




