ಅವಳಿ ಗೋಪುರ ನೆಲಸಮ; ನ. 28ರೊಳಗೆ ಅವಶೇಷಗಳನ್ನು ಸ್ವಚ್ಛಗೊಳಿಸಲು ಅಧಿಕಾರಿಗಳಿಗೆ ನೊಯ್ಡಾ ಪ್ರಾಧಿಕಾರ ಸೂಚನೆ

| Updated By: ಸುಷ್ಮಾ ಚಕ್ರೆ

Updated on: Sep 29, 2022 | 8:09 AM

ಆಗಸ್ಟ್ 28ರಂದು ನೊಯ್ಡಾದ ಗಗನಚುಂಬಿ ಅವಳಿ ಗೋಪುರಗಳನ್ನು ಕೆಡವಲಾಗಿತ್ತು. ಈ ಅವಳಿ ಗೋಪುರಗಳ ಅವಶೇಷಗಳನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಇಂದಿನಿಂದ ಪ್ರಾರಂಭಿಸಬೇಕು ಎಂದು ನೊಯ್ಡಾ ಪ್ರಾಧಿಕಾರ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಅವಳಿ ಗೋಪುರ ನೆಲಸಮ; ನ. 28ರೊಳಗೆ ಅವಶೇಷಗಳನ್ನು ಸ್ವಚ್ಛಗೊಳಿಸಲು ಅಧಿಕಾರಿಗಳಿಗೆ ನೊಯ್ಡಾ ಪ್ರಾಧಿಕಾರ ಸೂಚನೆ
ಅವಳಿ ಗೋಪುರ ನೆಲಸಮ
Follow us on

ನೊಯ್ಡಾ: ಉತ್ತರ ಪ್ರದೇಶದ ನೊಯ್ಡಾದಲ್ಲಿ (Noida) ಸೂಪರ್‌ಟೆಕ್‌ನ ಅವಳಿ ಕಟ್ಟಡಗಳನ್ನು (Twin Towers) ನೆಲಸಮಗೊಳಿಸಿ 1 ತಿಂಗಳಾಗಿದೆ. ನೊಯ್ಡಾದ ಸೆಕ್ಟರ್ 93Aನಲ್ಲಿರುವ 40 ಅಂತಸ್ತಿನ ಎರಡು ಗಗನಚುಂಬಿ ಕಟ್ಟಡಗಳು (ಅಪೆಕ್ಸ್ ಮತ್ತು ಸೆಯಾನೆ) ದೆಹಲಿಯ ಐಕಾನಿಕ್ ಕಟ್ಟಡವಾದ ಕುತುಬ್ ಮಿನಾರ್‌ಗಿಂತ ಎತ್ತರವಾಗಿದ್ದವು. ಇವುಗಳನ್ನು ಅಕ್ರಮವಾಗಿ ಕಟ್ಟಿದ ಹಿನ್ನೆಲೆಯಲ್ಲಿ ಈ ಕಟ್ಟಡಗಳನ್ನು ಪತನಗೊಳಿಸಲಾಗಿತ್ತು. ಈ ಸೂಪರ್‌ಟೆಕ್‌ನ ಅವಳಿ ಗೋಪುರಗಳ ಅವಶೇಷಗಳನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಇಂದಿನಿಂದ (ಗುರುವಾರ) ಪ್ರಾರಂಭಿಸಬೇಕು ಮತ್ತು ನವೆಂಬರ್ 28ರೊಳಗೆ ಆ ಜಾಗ ಸಂಪೂರ್ಣವಾಗಿ ಖಾಲಿಯಾಗಬೇಕು ಎಂದು ನೊಯ್ಡಾ ಪ್ರಾಧಿಕಾರ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಆಗಸ್ಟ್ 28ರಂದು ನೊಯ್ಡಾದ ಗಗನಚುಂಬಿ ಅವಳಿ ಗೋಪುರಗಳನ್ನು ಕೆಡವಲಾಗಿತ್ತು. ಈ ಸಮಯದಲ್ಲಿ ಹಾನಿಗೊಳಗಾದ ಎಟಿಎಸ್ ವಿಲೇಜ್ ಸೊಸೈಟಿಯ ಕಾಂಪೌಂಡ್​ ಅನ್ನು ಮರುನಿರ್ಮಾಣ ಮಾಡಲು ಅವಳಿ ಗೋಪುರಗಳನ್ನು ಕೆಡವಲು ಗುತ್ತಿಗೆ ಪಡೆದ ಕಂಪನಿ ಎಡಿಫೈಸ್ ಇಂಜಿನಿಯರಿಂಗ್‌ಗೆ ನೊಯ್ಡಾ ಪ್ರಾಧಿಕಾರ ನಿರ್ದೇಶನ ನೀಡಿದೆ.

ಇದನ್ನೂ ಓದಿ: Noida Twin Towers: ಯುದ್ಧಪೀಡಿತ ಭೂಮಿಯಂತೆ ಕಾಣುತ್ತಿದೆ ನೊಯ್ಡಾದ ಅವಳಿ ಕಟ್ಟಡ ಧ್ವಂಸವಾದ ಜಾಗ

ಸುಮಾರು 100 ಮೀಟರ್ ಎತ್ತರದ 2 ಟವರ್‌ಗಳನ್ನು ಎಮರಾಲ್ಡ್ ಕೋರ್ಟ್ ಸೊಸೈಟಿ ಮೈದಾನದಲ್ಲಿ ನಿರ್ಮಿಸುವುದು ಅಸಂವಿಧಾನಿಕ ಎಂಬ ಸುಪ್ರೀಂ ಕೋರ್ಟ್ ತೀರ್ಪಿಗೆ ಅನುಗುಣವಾಗಿ ಕಳೆದ ತಿಂಗಳ ಅಂತ್ಯದಲ್ಲಿ ಈ 2 ಕಟ್ಟಡಗಳನ್ನು ಕೆಡವಲಾಗಿತ್ತು. ನೊಯ್ಡಾದ ಸೂಪರ್‌ಟೆಕ್‌ನ ಅವಳಿ ಗೋಪುರಗಳನ್ನು ಭಾನುವಾರ ಸ್ಫೋಟದಿಂದ ಸುರಕ್ಷಿತವಾಗಿ ಕೆಡವಲಾಯಿತು. ಎಮರಾಲ್ಡ್ ಕೋರ್ಟ್ ಮತ್ತು ಎಟಿಎಸ್ ವಿಲೇಜ್ 2 ಹೌಸಿಂಗ್ ಸೊಸೈಟಿಗಳ 5,000 ನಿವಾಸಿಗಳನ್ನು ಬೇರೆಡೆ ಸ್ಥಳಾಂತರಿಸಲಾಗಿತ್ತು. ಸ್ಫೋಟದ ದೃಷ್ಟಿಯಿಂದ ಸೆಕ್ಟರ್ 93Aಯಲ್ಲಿನ 2 ಸೊಸೈಟಿಗಳಲ್ಲಿ ಅಡುಗೆ ಅನಿಲ ಮತ್ತು ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿತ್ತು. ನಿವಾಸಿಗಳು ಮಾತ್ರವಲ್ಲದೆ, ಅವರ ವಾಹನಗಳು ಮತ್ತು ಸಾಕುಪ್ರಾಣಿಗಳನ್ನು ಸಹ ಬೇರೆಡೆಗೆ ಸ್ಥಳಾಂತರಿಸಲಾಗಿತ್ತು.

ಇದನ್ನೂ ಓದಿ: ಸೂಪರ್‌ಟೆಕ್ ಅವಳಿ ಕಟ್ಟಡ ನೆಲಸಮ ಮಾಡಲು ಗುಂಡಿ ಒತ್ತಿದ್ದಇಂಜಿನಿಯರ್ ಕಣ್ಣಲ್ಲಿ ಆನಂದಭಾಷ್ಪ

2 ಬೃಹತ್ ಕಟ್ಟಡಗಳನ್ನು ಕೆಡವಿದ ನಂತರ ಆ ಸ್ಥಳದಲ್ಲಿ 80,000 ಟನ್‌ಗಳಷ್ಟು ಅವಶೇಷಗಳು ಉಳಿದುಕೊಂಡಿವೆ. ಎಟಿಎಸ್ ವಿಲೇಜ್‌ನ ಮುರಿದು ಬಿದ್ದಿರುವ ಗಡಿ ಗೋಡೆಯನ್ನು ಪುನರ್ ನಿರ್ಮಾಣ ಮಾಡುವ ಕಾರ್ಯವನ್ನು ಎಡಿಫೈಸ್ ಇಂಜಿನಿಯರಿಂಗ್ ಆರಂಭಿಸಿದೆ. ಕಾಂಪೌಂಡ್​ನ ವಿನ್ಯಾಸವು ಈ ಮೊದಲು ನಿರ್ಮಿಸಿದ ರೀತಿಯಲ್ಲಿಯೇ ಇರಬೇಕು ಎಂದು ಸೂಚನೆ ನೀಡಲಾಗಿದೆ.

ಅವಶೇಷಗಳನ್ನು ಒಡೆದಾಗ ಉಂಟಾಗುವ ಧೂಳಿನಿಂದ ನಿವಾಸಿಗಳನ್ನು ರಕ್ಷಿಸುವ ಸಲುವಾಗಿ 6 ಸ್ಮಾಗ್ ಗನ್‌ಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಆದರೆ, ಪ್ರಸ್ತುತ ಅವುಗಳನ್ನು ಬಳಸಲಾಗುತ್ತಿಲ್ಲ. ಸ್ಪ್ರಿಂಕ್ಲರ್‌ಗಳನ್ನು ಮಾತ್ರ ಬಳಸಲಾಗುತ್ತಿದೆ ಎಂದು ನೋಯ್ಡಾ ಪ್ರಾಧಿಕಾರ ತರಾಟೆಗೆ ತೆಗೆದುಕೊಂಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:07 am, Thu, 29 September 22